ADVERTISEMENT

ಕೈಗಾ ಸುರಕ್ಷಿತ, ಆದರೆ...

ನಾಗೇಂದ್ರ ಖಾರ್ವಿ
Published 18 ಮಾರ್ಚ್ 2011, 19:30 IST
Last Updated 18 ಮಾರ್ಚ್ 2011, 19:30 IST

ಸಾಕಷ್ಟು ವಿರೋಧದ ನಡುವೆಯೂ ಅಣುವಿದ್ಯುತ್ ಸ್ಥಾವರದ ಒಂದು ಹಾಗೂ ಎರಡನೇ ಘಟಕಗಳ ಕಾಮಗಾರಿ 1986ರ ಹೊತ್ತಿಗೆ ಪ್ರಾರಂಭವಾಯಿತು. ಕಾಮಗಾರಿ ಜೂನ್ 1996ಕ್ಕೆ ಪೂರ್ಣಗೊಂಡು ವಿದ್ಯುತ್ ಉತ್ಪಾದನೆ ಪ್ರಾರಂಭ ಮಾಡಬೇಕಿತ್ತು.ಆದರೆ ಕಳಪೆ ಕಾಮಗಾರಿಯಿಂದಾಗಿ ಮೇ 13, 1994ರಲ್ಲಿ 1ನೇ ಘಟಕದ ಗುಮ್ಮಟ ಕುಸಿದು ಬಿತ್ತು. ಗುಮ್ಮಟದ ಒಳಭಾಗದ 75 ಮೀಟರ್ ಎತ್ತರದಿಂದ ಅಂದಾಜು 150 ಟನ್‌ನಷ್ಟು ಕಾಂಕ್ರೀಟ್ ಕುಸಿದು ಬಿದ್ದಿತ್ತು. ಆಗ ಕಾರ್ಮಿಕರು ಊಟಕ್ಕೆ ಹೋಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.

ಹೀಗೆ ಕೈಗಾ ಅಣುವಿದ್ಯುತ್ ಸ್ಥಾವರ ಒಂದಿಲ್ಲೊಂದು ವಿಷಯದಿಂದ ಸುದ್ದಿಯಾಗುತ್ತಲೇ ಇರುತ್ತದೆ. ಕೈಗಾ ಉದ್ಯೋಗಿ ರವಿ ಮೂಳೆ ಮಲ್ಲಾಪುರದ ಕೈಗಾ ವಸತಿ ಸಂಕೀರ್ಣ ‘ಸರಸ್ವತಿ-ಸಿ’ ಬ್ಲಾಕ್ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಸಾವಿನ ಪ್ರಕರಣ ಈಗಲೂ ರಹಸ್ಯವಾಗಿ ಉಳಿದಿದೆ. ರವಿ ಮೂಳೆ ಅವರ ಸಂಶಯಾಸ್ಪದ ಸಾವಿನ  ನಂತರ ವೈಜ್ಞಾನಿಕ ಅಧಿಕಾರಿ ಎಲ್. ಮಹಾಲಿಂಗಮ್ ಅವರು ಬೆಳಿಗ್ಗೆ ವಾಕಿಂಗ್‌ಗೆ ಹೋದವರು ನಾಪತ್ತೆಯಾಗಿ ಎರಡು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದರು. 2009ರ ನವೆಂಬರ್ 24ರಂದು ಕುಡಿಯುವ ನೀರಿನ ತೊಟ್ಟಿಯಲ್ಲಿ ಭಾರಜಲ ಮಿಶ್ರಣವಾಗಿ ತೊಟ್ಟಿಯ ನೀರು ಕುಡಿದ ಸ್ಥಾವರದ 55ಕ್ಕೂ ಉದ್ಯೋಗಿಗಳ ದೇಹದಲ್ಲಿ ವಿಕಿರಣದ ಅಂಶ ಕಂಡು ಬಂದಿತ್ತು. ನೀರಿನ ತೊಟ್ಟಿಯಲ್ಲಿ ಭಾರಜಲ ಮಿಶ್ರಣ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ತನಿಖೆ ಪ್ರಗತಿಯಲ್ಲಿದೆ.

ಭೂಕಂಪ ವಲಯ-3ರಲ್ಲಿ ಕೈಗಾ ಅಣುವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲಾಗಿದೆ. ಈ ವಲಯದಲ್ಲಿ ಭೂಕಂಪ ಸಂಭವಿಸಿದರೂ ಅದರ ತೀವ್ರತೆ 5 ದಾಟುವುದಿಲ್ಲ. ಒತ್ತಡವನ್ನು ತಡೆದುಕೊಳ್ಳುವ ಶಕ್ತಿಯುತವಾದ ಕಬ್ಬಿಣದ ರಾಡ್ ಹಾಗೂ ಸಿಮೆಂಟ್ ಬಳಸಿ ರಿಯಾಕ್ಟರ್ ಗುಮ್ಮಟ ನಿರ್ಮಿಸಲಾಗಿದೆಯಂತೆ. ಪ್ರಾಥಮಿಕ ರಕ್ಷಾ ಕವಚ ಹಾಗೂ ದ್ವಿತೀಯ ರಕ್ಷಾ ಕವಚ ಹೊಂದಿರುವ ರಿಯಾಕ್ಟರ್ ಕಟ್ಟಡದಲ್ಲಿ ಅತ್ಯಂತ ಸುರಕ್ಷಿತ ಹಾಗೂ ನಂಬಲರ್ಹ ಸ್ಥಿತಿಯಲ್ಲಿ ಅಣು ವಿದಳನ ಕ್ರಿಯೆ ನಡೆಯುತ್ತದೆ ಎನ್ನಲಾಗಿದೆ.

ಏನಾದರೂ ಅವಘಡ ಸಂಭವಿಸಿದ ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ಸ್ಥಾವರವನ್ನು ಸ್ಥಗಿತಗೊಳಿಸುವ ಪ್ರತ್ಯೇಕ ವ್ಯವಸ್ಥೆಯನ್ನು ಕೈಗಾ ಪರಮಾಣು ವಿದ್ಯುತ್ ಘಟಕಗಳು ಹೊಂದಿವೆ. ಮೆಕ್ಯಾನಿಕಲ್ ಶಟ್‌ಡೌನ್ ಸಿಸ್ಟಮ್ (ಯಾಂತ್ರಿಕವಾಗಿ ಸ್ಥಗಿತಗೊಳಿಸುವ ವ್ಯವಸ್ಥೆ), ಲಿಕ್ವಿಡ್ ಶಟ್‌ಡೌನ್ ಸಿಸ್ಟಮ್ (ದ್ರವರೂಪಿ ಸರಳುಗಳಿಂದ ಸ್ಥಗಿತಗೊಳಿಸುವ ವ್ಯವಸ್ಥೆ) ಮೂಲಕ ತುರ್ತು ಸಂದರ್ಭದಲ್ಲಿ ಸ್ಥಾವರನ್ನು ನಿಲ್ಲಿಸಲಾಗುತ್ತದೆ.

ಕೈಗಾ ಅಣುವಿದ್ಯುತ್ ಸ್ಥಾವರ ಅರಬ್ಬೀ ಸಮುದ್ರದಿಂದ 60 ಕಿಲೋ ಮೀಟರ್ ದೂರದಲ್ಲಿದ್ದು ಸಮುದ್ರದಲ್ಲಿ ಸುನಾಮಿ ಬಂದರೂ ಸ್ಥಾವರಗಳಿಗೆ ಯಾವುದೇ ರೀತಿಯ ಅಪಾಯವಿಲ್ಲ. ಆದರೆ ಸ್ಥಾವರದ ಮೇಲ್ಭಾಗದಲ್ಲಿರುವ ಸುಪಾ, ಬೊಮ್ಮನಹಳ್ಳಿ ಹಾಗೂ ಕೊಡಸಳ್ಳಿ ಜಲಾಶಯಗಳಿಗೆ ಅಪಾಯ ಎದುರಾದರೆ ವಿದ್ಯುತ್ ಸ್ಥಾವರಕ್ಕೆ ಹಾನಿ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಯೋಜನೆಯಿರುವ ಐದು ಕಿಲೋ ಮೀಟರ್ ವ್ಯಾಪ್ತಿಯ ಪ್ರದೇಶವನ್ನು ವಿಕಿರಣ ಪ್ರದೇಶ ಎಂದು ಘೋಷಿಸಿ ಅಲ್ಲಿ ಜನವಸತಿಯನ್ನು ನಿಷೇಧಿಸಲಾಗಿದೆ. ಮಲ್ಲಾಪುರ, ಕುಚೇಗಾರ, ಹರ್ಟುಗಾ, ಹರೂರ, ವಿರ್ಜೆ, ದೇವಕಾರ ಗ್ರಾಮಗಳು ಕೈಗಾ ಸುತ್ತಮುತ್ತಲಿದ್ದು ಇಲ್ಲಿಯವರೆಗೆ ಯಾವುದೇ ರೀತಿಯ ವಿಕಿರಣ ಅಪಾಯ ಕಂಡುಬಂದಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.