ADVERTISEMENT

ಖರ್ಚು ಕೋಟಿ,­ ಕೋಟಿ ಲೆಕ್ಕ ಮಾತ್ರ ಕೆಲವೇ ಲಕ್ಷ!

ಪ್ರವೀಣ ಕುಲಕರ್ಣಿ
Published 16 ಮಾರ್ಚ್ 2014, 10:17 IST
Last Updated 16 ಮಾರ್ಚ್ 2014, 10:17 IST

ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು ಈಗ ರೂ. 70 ಲಕ್ಷಕ್ಕೆ (ಸಣ್ಣ ರಾಜ್ಯಗಳಲ್ಲಿ ರೂ. 54 ಲಕ್ಷ) ಏರಿಕೆ

ಮಾಡಲಾಗಿದೆ. ಆದರೆ, 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಲೆಕ್ಕಪತ್ರಗಳ ಪ್ರಕಾರ, ಅವರಿಗೆ ಆಗ ಇದ್ದ ಮಿತಿಯಷ್ಟೂ (ರೂ. 25 ಲಕ್ಷ) ಖರ್ಚು ಮಾಡಲು ಸಾಧ್ಯವಾಗಿಲ್ಲ. ಸಂಸದರಾಗಿ ಆಯ್ಕೆಯಾದ 129 ಅಭ್ಯರ್ಥಿ­ಗಳಂತೂ ವೆಚ್ಚ ಮಿತಿಯ ಶೇ 59ರಷ್ಟು ಹಣವನ್ನಷ್ಟೇ ವ್ಯಯ ಮಾಡಿದ್ದಾರೆ. ವಾಸ್ತವ ಸಂಗತಿ ಹೀಗಿರುವಾಗ ವೆಚ್ಚದ ಮಿತಿಯನ್ನು ಹಿಗ್ಗಿಸುವ ಅಗತ್ಯ ಏನಿತ್ತು ಎನ್ನುವ ಪ್ರಶ್ನೆ ಏಳುತ್ತದೆ. ಅದಕ್ಕೆ ‘ಅರ್ಥ’ಗರ್ಭಿತ ನಗುವೇ ಈಗ ಪುನಃ ಪ್ರಚಾರಕ್ಕೆ ಹೊರಟ ಅಭ್ಯರ್ಥಿಗಳ ಬಳಿ ಇರುವ ಉತ್ತರವಾಗಿದೆ.

ಚುನಾವಣಾ ವೆಚ್ಚದಲ್ಲಿ ‘ರಾಮನ ಲೆಕ್ಕ, ಕೃಷ್ಣನ ಲೆಕ್ಕ’ಗಳು ಹೇಗೆ ಸೇರ್ಪಡೆ ಆಗಿರುತ್ತವೆ ಎಂಬ ಸಂಗತಿ ಮೇಲೆ ಬಿಜೆಪಿ ಮುಖಂಡ ಗೋಪಿನಾಥ್‌ ಮುಂಡೆ ಅವರ ಹೇಳಿಕೆ ಬೆಳಕು ಚೆಲ್ಲಿದೆ. ‘ಚುನಾವಣೆಗೆ ನಾನು ಖರ್ಚು ಮಾಡಿದ್ದು ರೂ. 8 ಕೋಟಿ’ ಎಂದಿರುವ ಅವರು, ಆಯೋಗಕ್ಕೆ ಕೊಟ್ಟಿರುವ ಲೆಕ್ಕ ಮಾತ್ರ ರೂ. 19.50 ಲಕ್ಷದ್ದು! ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿ ಸರಾಸರಿ ರೂ. 3ರಿಂದ 15 ಕೋಟಿ ಖರ್ಚು ಮಾಡುತ್ತಾನೆ ಎನ್ನುವುದು ಬಹಿರಂಗ ಗುಟ್ಟು. ಆದರೆ, ಚುನಾವಣಾ ಆಯೋಗ ಚಿಲ್ಲರೆ ಲಕ್ಷಗಳಿಗೆ ಮಿತಿ ಹಾಕುತ್ತದೆ. ಅಭ್ಯರ್ಥಿಗಳೂ ಆ ಮಿತಿಯಲ್ಲೇ ಲೆಕ್ಕ ಕೊಡುತ್ತಾರೆ.

ಭಾರತದ ಸಾರ್ವತ್ರಿಕ ಚುನಾವಣೆ ಎಂದರೆ ಕಪ್ಪು ಹಣದ ಭರ್ತಿ ‘ಮಳೆಗಾಲ’ (ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ಸುರಿಯುವುದು) ಎಂಬ ಕುಖ್ಯಾತಿ ಇದೆ. ಅದರಲ್ಲೂ ದಕ್ಷಿಣದ ರಾಜ್ಯಗಳಲ್ಲಿ ಈ ‘ಮಲಯ ಮಾರುತ’ಗಳು ಮಾಡುವ ಮೋಡಿ ಬಲು ದೊಡ್ಡದು ಎನ್ನುವ ಮಾತಿದೆ. ವರ್ಷಗಳ ಕಾಲ ಸಾರ್ವಜನಿಕರ ಹಣವನ್ನು ‘ಆವಿ’ಯಾಗಿಸಿ ಹರಳುಗಟ್ಟಿದ ‘ಕಪ್ಪು’ ಮೋಡಗಳು ಫಲ ನೀಡುವ ಪ್ರದೇಶವನ್ನು ಸರಿಯಾಗಿ ಗುರುತಿಸಿ ಅಲ್ಲಿಯೇ ‘ಮಳೆ’ ಸುರಿಸುತ್ತವೆ. ನಾಯಕರ ಸುತ್ತಾಟಕ್ಕೆ ಅಗತ್ಯವಾದ ಹಾರಾಡುವ ಹೆಲಿಕಾಪ್ಟರ್‌ಗಳಿಂದ ಹಿಡಿದು ಕತ್ತಲ ರಾತ್ರಿಯಲ್ಲಿ ಒಂದೊಂದು ಮತಕ್ಕೂ ಬಟವಾಡೆಯಾಗುವ ಕಾಣಿಕೆವರೆಗೆ ಗುಪ್ತಗಾಮಿನಿಯಾಗಿ ಹರಿಯುವ ಕಪ್ಪು ಹಣಕ್ಕೆ ಲೆಕ್ಕವೇ ಇಲ್ಲ. ಅದಕ್ಕೆ ತಡೆಯೊಡ್ಡುವ ಕೌಶಲ ಆಯೋಗಕ್ಕೆ ಇದುವರೆಗೂ ಸಿದ್ಧಿಸಿಲ್ಲ.

ಅಭ್ಯರ್ಥಿಗಳು ಮಾಡುವ ಖರ್ಚಿನಲ್ಲಿ ಶೇ 75ರಷ್ಟು ಹಣದ ಮೂಲ ಯಾವುದು ಎನ್ನುವುದು ಯಾರಿಗೂ ತಿಳಿದಿಲ್ಲ. ರಾಜ್ಯದ ನಿಷ್ಠುರ ರಾಜಕಾರಣಿಗಳಲ್ಲಿ ಒಬ್ಬರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನನ್ನ ಚುನಾವಣೆ ಖರ್ಚಿಗೆ ಬರುವ ಹಣದ ಮೂಲ ಯಾವುದೆಂಬುದು ನನಗೆ ತಿಳಿದಿಲ್ಲ. ಅಷ್ಟರಮಟ್ಟಿಗೆ ನಾನೂ ಅಪ್ರಾಮಾಣಿಕ’ ಎಂದು ಬಹಿರಂಗವಾಗಿಯೇ ಹೇಳಿದ್ದರು.

20.97 ಲಕ್ಷ ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದ ವಿಶಾಲವಾದ ದೇಶ ಭಾರತ. ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಪ್ರಚಾರಕ್ಕಾಗಿ ಓಡಾಡುವ ನಾಯಕರು ಸಾಮಾನ್ಯವಾಗಿ ವಿಶೇಷ ವಿಮಾನಗಳನ್ನೋ ಹೆಲಿಕಾಪ್ಟರ್‌ಗಳನ್ನೋ ಬಳಕೆ ಮಾಡು­ತ್ತಾರೆ. ಪ್ರತಿ ಗಂಟೆಗೆ ಅವುಗಳ ಬಾಡಿಗೆ ರೂ. 75 ಸಾವಿರದಿಂದ ರೂ. 1.5 ಲಕ್ಷದವರೆಗೆ ಇದೆ ಎಂದು ಹೇಳುತ್ತಾರೆ ಏರ್‌ಚಾರ್ಟರ್‌್ಸ ಇಂಡಿಯಾ ಎಂಬ ಖಾಸಗಿ ಸಂಸ್ಥೆಯ ಮುಖ್ಯಸ್ಥರು. ಬಿಜೆಪಿಯ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ನ ರಾಹುಲ್‌ ಗಾಂಧಿ ವರ್ಷದ ಆರಂಭದಿಂದಲೂ ಪ್ರಚಾರ ಯಾತ್ರೆಗಳನ್ನು ನಡೆಸುತ್ತಲೇ ಇದ್ದಾರೆ. ಖರ್ಚಾದ ಕೋಟಿಗಳಿಗೆ ಲೆಕ್ಕವಿಲ್ಲ. ಆಯೋಗಕ್ಕೆ ಮಾತ್ರ ಚಿಲ್ಲರೆ ಲಕ್ಷಗಳ ಪ್ರಮಾಣ ಪತ್ರ ಸಲ್ಲಿಸಲಾಗುತ್ತದೆ.

ರಾಜ್ಯದ ವಿಷಯವನ್ನೇ ತುಲನೆ ಮಾಡಿ ನೋಡುವುದಾದರೆ, 2009ರಲ್ಲಿ ನಮ್ಮ ಲೋಕಸಭಾ ಅಭ್ಯರ್ಥಿಗಳು ಕೊಟ್ಟಿರುವ ಲೆಕ್ಕಾಚಾರದ ಪ್ರಕಾರ ಅವರು ಸರಾಸರಿ ರೂ. 15 ಲಕ್ಷದಷ್ಟೂ ವೆಚ್ಚ ಮಾಡಿಲ್ಲ. ನಾವು ಒಂದು ಸರಳ ಲೆಕ್ಕ ಹಾಕೋಣ. ಒಬ್ಬೊಬ್ಬ ಅಭ್ಯರ್ಥಿ ನೂರಕ್ಕೂ ಅಧಿಕ ವಾಹನಗಳನ್ನು ಪ್ರಚಾರಕ್ಕಾಗಿ ಬಳಸಿಕೊಂಡ ಅಂದಾಜಿದೆ. ನಮ್ಮ ಸುಲಭ ಲೆಕ್ಕಾಚಾರಕ್ಕಾಗಿ 20 ವಾಹನ ಬಳಸಲಾಗಿದೆ ಎಂದೇ ಇಟ್ಟುಕೊಳ್ಳೋಣ. ಒಂದೊಂದು ವಾಹನ ನಿತ್ಯ ಸರಾಸರಿ 200 ಕಿ.ಮೀ. ಓಡಾಡಿದೆ. ಪ್ರತಿ ಲೀಟರ್‌ಗೆ ಅದು ಎಂಟು ಕಿ.ಮೀ. ಪ್ರಯಾಣ ಮಾಡಿದೆ ಎಂದುಕೊಂಡರೆ ನಿತ್ಯ ರೂ. 35 ಸಾವಿರ ಖರ್ಚಾಗಿದೆ. ಅದನ್ನು 45 ದಿನಕ್ಕೆ ಲೆಕ್ಕ ಹಾಕಿದಾಗ ರೂ. 15.75 ಲಕ್ಷವಾಗುತ್ತದೆ.

ಅಂದರೆ ನಮ್ಮ ಅಭ್ಯರ್ಥಿಗಳೆಲ್ಲ ವಾಹನಗಳಿಗೆ ಮಾತ್ರ ದುಡ್ಡು ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಸಾರ್ವಜನಿಕ ಸಭೆಗಳು, ಮೆರವಣಿಗೆಗಳು, ಜಾಹೀರಾತುಗಳು, ಪ್ರಚಾರ ಸಾಮಗ್ರಿಗಳು ಮತ್ತು ಕಾರ್ಯಕರ್ತರಿಗೆ ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ. ಮತದಾರರಿಗೆ ಕಾಣಿಕೆ ಕೊಡುವ ಗೊಡವೆಗಂತೂ ಹೋಗಿಯೇ ಇಲ್ಲ!

ಕಳೆದ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರ ಪರ ಕೆಲಸ ಮಾಡಿದ (ಅವರು ಹಣಕಾಸಿನ ಉಸ್ತುವಾರಿಯನ್ನೂ ಹೊತ್ತಿದ್ದರು) ಸಾಮಾಜಿಕ ಕಾರ್ಯಕರ್ತರೊಬ್ಬರು ಹೀಗೆ ಹೇಳುತ್ತಾರೆ: ‘ಸುಮಾರು 200 ಜನ ಕಾರ್ಯಕರ್ತರಿಗೆ ನಿತ್ಯ ಊಟ–ತಿಂಡಿ ವ್ಯವಸ್ಥೆ ಮಾಡುತ್ತಿದ್ದೆವು. ವೆಚ್ಚ ತೋರಿಸುತ್ತಿದ್ದುದು ಮಾತ್ರ 20 ಮಂದಿಗೆ. ಅದೂ ತಿಂಡಿ ಖರ್ಚು ರೂ. 130 ಎಂದು!’ ಖರ್ಚಿನ ಲೆಕ್ಕಾಚಾರ ಹೀಗೇ ಸಾಗಿದಾಗ ಅದು ವೆಚ್ಚದ ಮಿತಿಯನ್ನು ದಾಟುವುದು ಸಾಧ್ಯವೇ?

‘ವೆಚ್ಚದ ಮಿತಿಯನ್ನು ಏರಿಸಿದ್ದರಿಂದ ನೈಜ ಸಮಸ್ಯೆಗೆ ಯಾವ ಪರಿಹಾರವೂ ದೊರೆತಿಲ್ಲ. ಚುನಾವಣೆಗಾಗಿ ಮಾಡುವ ವೆಚ್ಚ ಮತ್ತು ಆ ವೆಚ್ಚವನ್ನು ಮಾಡಲು ಬರುವ ಹಣದ ಮೂಲ ಎರಡೂ ಪಾರದರ್ಶಕ ಆಗಿರಬೇಕು. ಚುನಾವಣೆಯಲ್ಲಿ ಕಪ್ಪು ಹಣದ ಹೊಳೆಯೇ ಹರಿಯುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಸಮಸ್ಯೆ ಹಾಗೇ ಉಳಿದಿದೆ’ ಎನ್ನುತ್ತಾರೆ ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ಎಡಿಆರ್‌) ಸ್ಥಾಪಕ ಪ್ರೊ. ತ್ರಿಲೋಚನ ಶಾಸ್ತ್ರಿ. ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿಶೇಷ ಅಧ್ಯಯನ ನಡೆಸಿರುವ ಎಡಿಆರ್‌ ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ (ಎನ್‌ಇಡಬ್ಲ್ಯು) ಹೊರಹಾಕುತ್ತಿರುವ ಸಂಗತಿಗಳು ಆತಂಕ ಹುಟ್ಟಿಸಿವೆ.

ಚುನಾವಣೆಯಲ್ಲಿ ಹಣಬಲದ ಆಟ ನಡೆಯದಂತೆ ನೋಡಿಕೊಳ್ಳುವುದು ತನ್ನ ಮಹತ್ವದ ಹೊಣೆಯಾಗಿದೆ ಎಂದು ಆಯೋಗ ಅತ್ಯಂತ ಸ್ಪಷ್ಟವಾಗಿ ಹೇಳಿದೆ. ಹಣಬಲಕ್ಕೆ ತಡೆಯೊಡ್ಡಲು ವೆಚ್ಚ ವೀಕ್ಷಣಾ ತಂಡ, ವೀಡಿಯೊ ವಿಚಕ್ಷಣಾ ಪಡೆ, ಲೆಕ್ಕಾಧಿಕಾರಿಗಳ ತಂಡ, ಕಾಸಿಗಾಗಿ ಸುದ್ದಿಗಳ ಮೇಲೆ ಕಣ್ಗಾವಲು ಪಡೆ, ಅಂಕಿ–ಸಂಖ್ಯೆ ತಪಾಸಣಾ ತಂಡ... ಏನೇನೋ ದಳಗಳ ರಚನೆಯಾಗಿದೆ.

ಪ್ರತಿಯೊಂದು ವ್ಯವಹಾರಕ್ಕೂ ಬ್ಯಾಂಕ್‌ ಖಾತೆಗಳ ಮೂಲಕವೇ ಹಣ ವರ್ಗಾವಣೆ ಆಗಬೇಕು ಎಂಬ ಸೂಚನೆಯನ್ನು ಅಭ್ಯರ್ಥಿಗಳಿಗೆ ನೀಡಲಾಗಿದೆ. ಹೀಗಿದ್ದೂ ರಂಗೋಲಿ ಕೆಳಗೆ ನುಸುಳುವ ಕೌಶಲ ರಾಜಕಾರಣಿಗಳಿಗೆ ಸಿದ್ಧಿಸಿದೆ. ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದು ಕಂಡುಬಂದರೆ ಸದಸ್ಯತ್ವವನ್ನು ರದ್ದುಗೊಳಿಸುವ ಹಕ್ಕು ಅದಕ್ಕಿದೆ. ವೆಚ್ಚದ ವಿಷಯದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಇದುವರೆಗೆ ಯಾವೊಬ್ಬ ಸಂಸದನ ಸದಸ್ಯತ್ವವನ್ನೂ ರದ್ದುಗೊಳಿಸಿದ ಉದಾಹರಣೆ ಇಲ್ಲ.

‘ಅಕ್ರಮ ಮೂಲದಿಂದ ಹಣ ವೆಚ್ಚಮಾಡಿ ಸಂಸತ್ತು ಪ್ರವೇಶಿಸುವವರಿಂದ ಅದೆಂತಹ ಪ್ರಾಮಾಣಿಕತೆ ನಿರೀಕ್ಷೆ ಮಾಡಲು ಸಾಧ್ಯವಾದೀತು’ ಎಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಒಮ್ಮೆ ಪ್ರಶ್ನಿಸಿದ್ದರು. ಆ ಪ್ರಶ್ನೆ ಈಗ ಹಿಂದೆಂದಿಗಿಂತ ಹೆಚ್ಚು ಪ್ರಸ್ತುತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT