ADVERTISEMENT

ಚರಂಡಿ ಬಿಟ್ಟರೆ ಬೇರೇನಿಲ್ಲ...

ಆನಂದತೀರ್ಥ ಪ್ಯಾಟಿ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ಅಂದಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಖುದ್ದಾಗಿ ಬಂದು ಶ್ರೀನಿವಾಸ ಸರಡಗಿ ಗ್ರಾಮದಲ್ಲಿ `ಸುವರ್ಣ ಗ್ರಾಮೋದಯ~ ಯೋಜನೆಗೆ ಚಾಲನೆ (ಫೆ. 25, 2007) ನೀಡಿದಾಗ, ತಮ್ಮೂರಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಚರಂಡಿ ಸೇರಿದಂತೆ ಎಲ್ಲ ಸೌಲಭ್ಯಗಳೂ ಸಿಗಬಹುದೆಂಬ ನಿರೀಕ್ಷೆ ಗ್ರಾಮಸ್ಥರದ್ದಾಗಿತ್ತು.

ಐದೂವರೆ ವರ್ಷಗಳ ಬಳಿಕ ನೋಡಿದಾಗ ಗ್ರಾಮದ ಅರ್ಧ ಭಾಗಕ್ಕೆ ರಸ್ತೆ- ಚರಂಡಿ, ಸಮುದಾಯ ಭವನ ಹಾಗೂ ಪ್ರೌಢಶಾಲೆ ಕಟ್ಟಡ ಹೊರತುಪಡಿಸಿದರೆ ಬೇರೇನೂ ಸಿಕ್ಕಿಲ್ಲ.

ಗುಲ್ಬರ್ಗ ಜಿಲ್ಲೆಯಲ್ಲಿ ನಾಲ್ಕು ಹಂತಗಳಲ್ಲಿ ಒಟ್ಟು 237 ಗ್ರಾಮಗಳು ಆಯ್ಕೆಯಾಗಿದ್ದು, ತರುವಾಯ ಈಗ ಐದನೇ ಹಂತದ `ಸುವರ್ಣ ಗ್ರಾಮೋದಯ~ ಯೋಜನೆಗೆ ನಕ್ಷೆ ಸಿದ್ಧಗೊಂಡಿದೆ. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಗ್ರಾಮದ ಸಮಗ್ರ ಪ್ರಗತಿಗಾಗಿ ರೂಪಿಸಿರುವ ಯೋಜನೆಯ ಉದ್ದೇಶ ಈಡೇರಿದೆಯೇ?

ಎಂದು ಕೇಳಿದರೆ, `ಖಂಡಿತ ಇಲ್ಲ~ ಎಂಬ ಉತ್ತರ ಸಿಗುತ್ತದೆ. ಆಯ್ಕೆಯಾದ ಬಹುತೇಕ ಗ್ರಾಮಗಳಲ್ಲಿ ಗುಣಮಟ್ಟದ ಕಾಮಗಾರಿ ನಡೆಯದಿರುವುದು ಒಂದೆಡೆಯಾದರೆ, ಈ ಯೋಜನೆಯಲ್ಲಿ ಸೇರಿಸಬೇಕಾದ ಇತರ ಸೌಕರ್ಯಗಳು ಇನ್ನೂ ದೂರ ಉಳಿದಿವೆ.

ಗುಲ್ಬರ್ಗ ತಾಲ್ಲೂಕಿನ ಶ್ರೀನಿವಾಸ ಸರಡಗಿ ಗ್ರಾಮವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಮಂಜೂರಾದ 90.56 ಲಕ್ಷ ರೂಪಾಯಿ ವೆಚ್ಚದಲ್ಲಿ ಊರಿನ ಅರ್ಧ ಭಾಗದ ರಸ್ತೆಗಳು ಉತ್ತಮ ಗುಣಮಟ್ಟದ ಸಿಮೆಂಟ್ ಕಾಂಕ್ರಿಟ್ ರಸ್ತೆಗಳಾಗಿವೆ.
 
ಹಣದ ಕೊರತೆಯಿಂದಾಗಿ ಎಷ್ಟೋ ಕಡೆ ಇನ್ನೂ ಕೊಳಚೆಗುಂಡಿಗಳು ಕಾಣುತ್ತವೆ. ನಿರ್ಮಿಸಲಾದ ರಸ್ತೆಗಳ ಬದಿಯಲ್ಲಿ ಚರಂಡಿ ನಿರ್ಮಿಸಲಾಗಿದ್ದರೂ ಅವು ನಿಗದಿತ ದೂರದವರೆಗೆ ಸಾಗಿಲ್ಲ. ಹೀಗಾಗಿ ಅಲ್ಲಲ್ಲೇ ಕೊಳಚೆ ಸಂಗ್ರಹವಾಗುತ್ತಿದೆ. “ಸುವರ್ಣ ಗ್ರಾಮದ ಹೆಗ್ಗಳಿಕೆ ಪಡೆದ ನಮ್ಮೂರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಬರಲಿದೆ ಅಂತ ಕಾಯುತ್ತ ಕುಳಿತೆವು. ಅದು ಆಗಲೇ ಇಲ್ಲ” ಎಂದು ವಿಷಾದಿಸುತ್ತಾರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸಂತೋಷ ಆಡೆ.

ಹಲವು ಗ್ರಾಮಗಳಲ್ಲಿ ಸುವರ್ಣ ಗ್ರಾಮೋದಯ ಯೋಜನೆ ವಿಫಲವಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಅಧಿಕಾರಿಗಳ ಮೇಲುಸ್ತುವಾರಿ ಇಲ್ಲದಿರುವುದು ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆ ಕೊರತೆ. ರಸ್ತೆ, ಚರಂಡಿ, ಕಟ್ಟಡ ನಿರ್ಮಾಣದಲ್ಲಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಲು ಅತ್ತ ಅಧಿಕಾರಿಗಳೂ ಇತ್ತ ಗ್ರಾಮಸ್ಥರೂ ನಿಗಾ ಇಡಬೇಕು.
`ನಮ್ಮೂರಾಗ ರಸ್ತೆ ಮಾಡೋವಾಗ ನಾವು ಹಗಲೆಲ್ಲ ನೋಡಿಕೋತ ಇರ‌್ತಿದ್ವಿ. ಹೆಚ್ಚು-ಕಡಿಮಿಯಾದ್ರ ಸರಿ ಮಾಡ್ರಿ ಅಂತ ಹೇಳ್ತಿದ್ವಿ. ಹಂಗಾಗಿ ನೋಡ್ರಿ ಈ ರೋಡ್ ಹೆಂಗ ಗಟ್ಟಿಮುಟ್ಟಾಗ್ಯಾವ!~ ಎಂದು ಬಣ್ಣಿಸಿದ್ದು ಶ್ರೀನಿವಾಸ ಸರಡಗಿ ಗ್ರಾಮದ ವೃದ್ಧ ಹನುಂತರಾವ್.
 
ಇದಕ್ಕೆ ವ್ಯತಿರಿಕ್ತ ಎಂಬಂತೆ, ರಸ್ತೆ ನಿರ್ಮಿಸುವಾಗ ಚರಂಡಿ ತಮ್ಮ ಮನೆ ಕಡೆ ಬರುವುದು ಬೇಡ ಎಂಬ ಎರಡೂ ಕಡೆಯ ಜನರ ಆಗ್ರಹದಿಂದಾಗಿ ಕೊನೆಗೆ ರಸ್ತೆ ಮಧ್ಯೆಯೇ ಚರಂಡಿ ನಿರ್ಮಿಸಿದ ಘಟನೆ ಚಿಂಚೋಳಿ ತಾಲ್ಲೂಕು ಚಂದನಕೇರಾದಲ್ಲಿ ನಡೆದಿದೆ!

ಸುವರ್ಣ ಗ್ರಾಮ ಎಂದರೆ ಬರೀ ರಸ್ತೆ- ಚರಂಡಿ ಎಂದಷ್ಟೇ ತಿಳಿದಿರುವ ಜನತೆಗೆ, ಯೋಜನೆಯಡಿ ಇನ್ನೂ ಏನೇನು ಸಿಗಲಿದೆ ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಜಲಾನಯನ, ಮಹಿಳಾ ಮತ್ತು ಕಲ್ಯಾಣ ಸೇರಿದಂತೆ ಹಲವು ಇಲಾಖೆಗಳಿಗೂ ಇದರಲ್ಲಿ ಜವಾಬ್ದಾರಿಗಳಿವೆ. ಸಮುದಾಯ ಭವನ, ಚೆಕ್‌ಡ್ಯಾಂ ನಿರ್ಮಾಣ, ಮನೆಗಳಿಗೆ ವಿದ್ಯುತ್ ಸಂಪರ್ಕ, ಸಮುದಾಯ ಶೌಚಾಲಯ, ಅಂಗನವಾಡಿ ಕಟ್ಟಡ ನಿರ್ಮಾಣ, ನಿರುದ್ಯೋಗ ಪದವೀಧರರಿಗೆ ತರಬೇತಿ ಕೂಡ ಯೋಜನೆಯಲ್ಲಿ ಅಡಕವಾಗಿದೆ. ಆದರೆ ಜಾರಿಯಾಗಿದ್ದು ತೀರಾ ಕಡಿಮೆ.

`ಹಳ್ಳಿಯೊಂದನ್ನು ಆಯ್ಕೆ ಮಾಡಿ, ಅದರ ಸಮಗ್ರ ಅಭಿವೃದ್ಧಿ ಗುರಿ ಹೊತ್ತ ಸುವರ್ಣ ಗ್ರಾಮೋದಯ ಯೋಜನೆಯ ಮೂಲ ಆಶಯ ಈಡೇರಿಲ್ಲ~ ಎಂಬುದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಸ್ವತಂತ್ರ ತಂಡದಿಂದ ಕಾಮಗಾರಿಗಳ ಪರಿಶೀಲನೆ, ಅಧಿಕಾರಿಗಳ ಕಟ್ಟುನಿಟ್ಟಾದ ಮೇಲುಸ್ತುವಾರಿ ಇದ್ದರೆ ಮಾತ್ರ ಯೋಜನೆ ಉದ್ದೇಶ ಈಡೇರೀತು ಎಂಬುದು ಅವರ ಅಭಿಮತ.

ಪರಿಸ್ಥಿತಿ ಹೀಗಿದ್ದರೂ, 5ನೇ ಹಂತದ ಯೋಜನೆಗೆ ಜಿಲ್ಲೆಯಲ್ಲಿ 120 ಗ್ರಾಮಗಳ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಹಳ್ಳಿಯೊಂದರ ಸಮಗ್ರ ಅಭಿವೃದ್ಧಿಗೆ ನೆರವಾಗಬೇಕಿದ್ದ `ಸುವರ್ಣ ಗ್ರಾಮೋದಯ~ ಯೋಜನೆಯು, ರಾಜಕಾರಣಿಗಳು ಪದೇ ಪದೇ ತಮ್ಮ ಭಾಷಣದಲ್ಲಿ `ನಿಮ್ಮ ಗ್ರಾಮ ಯೋಜನೆಗೆ ಆಯ್ಕೆಯಾಗಿದೆ~ ಎಂದೋ, `ಯೋಜನೆಯಲ್ಲಿ ನಿಮ್ಮೂರನ್ನೂ ಸೇರಿಸುವೆ~ ಎಂದೋ ಹೇಳಲು ಮಾತ್ರ ಬಳಕೆಯಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.