ADVERTISEMENT

ನೀತಿಯ ಸುಳಿಯಲ್ಲಿ ಕ್ರೀಡೆ

ಡಿ.ಗರುಡ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST
ನೀತಿಯ ಸುಳಿಯಲ್ಲಿ ಕ್ರೀಡೆ
ನೀತಿಯ ಸುಳಿಯಲ್ಲಿ ಕ್ರೀಡೆ   

ಕೇಂದ್ರ ಸರ್ಕಾರ ರೂಪಿಸಿರುವ `ರಾಷ್ಟ್ರೀಯ ಕ್ರೆಡಾ (ಅಭಿವೃದ್ಧಿ) ಮಸೂದೆ ಈಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಕ್ರೆಡಾ ಸಂಸ್ಥೆಗಳ ಕಾರ‌್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರುವ ಜತೆಯಲ್ಲಿ ಅವುಗಳನ್ನು ಸಮಾಜಕ್ಕೆ ಉತ್ತರದಾಯಿಯನ್ನಾಗಿ ಮಾಡುವುದು ಮಸೂದೆಯ ಉದ್ದೇಶ ಎನ್ನುತ್ತಿದ್ದಾರೆ ಕೇಂದ್ರ ಕ್ರೀಡಾ ಸಚಿವರು.

ಇದಕ್ಕಾಗಿ ಕ್ರೀಡಾ ಸಂಸ್ಥೆಗಳನ್ನು ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಗೆ ಸೇರಿಸಲು ಅವರು ನಿರ್ಧರಿಸಿದ್ದಾರೆ. ಆದರೆ ಭಾರತೀಯ ಕ್ರಿಕೆಟ್ ಮಂಡಳಿ ಸೇರಿದಂತೆ ಹಲವಾರು ಕ್ರೀಡಾ ಸಂಸ್ಥೆಗಳು ಇದನ್ನು ವಿರೋಧಿಸುತ್ತಿವೆ.  ಇದು ಕ್ರೀಡಾ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸುವ ಹುನ್ನಾರ ಎನ್ನುವುದು ಅವುಗಳ ಆರೋಪ.

`ಸರ್ಕಾರದ ನೇರ ಹಸ್ತಕ್ಷೇಪದ ಹುನ್ನಾರ~ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಹಳೆ ತಂಬೂರಿಯ ತಂತಿ ಮೀಟಿದೆ. ಅದಕ್ಕೆ ನೂತನ ರಾಷ್ಟ್ರೀಯ ಕ್ರೀಡಾ ನೀತಿಯೆಂದರೆ ಸಿಡಿಮಿಡಿ. ಅದರಲ್ಲಿಯೂ ಸುದೀರ್ಘ ಕಾಲದಿಂದ ಕ್ರೀಡಾ ಆಡಳಿತದ ಚುಕ್ಕಾಣಿ ಹಿಡಿದಿರುವ ಅನೇಕರು ಇರುವಂಥ ಐಒಎ ತನ್ನ ಬುಡಕ್ಕೇ ಪೆಟ್ಟು ಬೀಳುತ್ತದೆಂದು ಚಡಪಡಿಸಿದೆ.
 
ಐಒಎ ಅಡಿಯಲ್ಲಿ ಬರುವ ಅನೇಕ ಕ್ರೀಡಾ ಫೆಡರೇಷನ್‌ಗಳ ಬೆಂಬಲದೊಂದಿಗೆ ಅದು ಸರ್ಕಾರದ ವಿರುದ್ಧ ಧ್ವನಿ ಎತ್ತಿದೆ. ಆಡಳಿತಗಾರರ ವಯಸ್ಸು ನಿಗದಿಯ ನಿಯಮವು ಒಂದೆಡೆ ಮುಳ್ಳಾಗಿ ಚುಚ್ಚುತ್ತಿದ್ದರೆ, ಇನ್ನೊಂದೆಡೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಫೆಡರೇಷನ್‌ಗಳು ಬರಬೇಕು ಎನ್ನುವ ನುಂಗಲಾಗದ ಬಿಸಿತುಪ್ಪ.

ಆರ್‌ಟಿಐ ಅಡಿಯಲ್ಲಿ ಕ್ರೀಡಾ ಫೆಡರೇಷನ್‌ಗಳನ್ನು ತರುವ ಮೂಲಕ ಸರ್ಕಾರವು ನೇರವಾಗಿ ಕ್ರೀಡಾ ಆಡಳಿತ ವ್ಯವಸ್ಥೆಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ತಂತ್ರದ ಬಲೆ ಬೀಸಿದೆ ಎಂದು ಕಿಡಿ ಕಾರಿದ್ದೂ ಆಗಿದೆ. ನ್ಯಾಯಾಲಯದ ಮೆಟ್ಟಿಲು ಹತ್ತಿ ಸರ್ಕಾರದ ನಿರ್ಧಾರಕ್ಕೆ ವಿರುದ್ಧ ಧ್ವನಿ ಎತ್ತಿದ್ದು ಪ್ರಯೋಜನವಂತೂ ಆಗಲಿಲ್ಲ.

ಆದ್ದರಿಂದ ಈಗ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ನಿಯಮಗಳನ್ನು ಮುಂದಿಟ್ಟುಕೊಂಡು ಹೋರಾಟವನ್ನು ಮುಂದುವರಿಸಿದೆ. ಆದರೆ ಪ್ರಯೋಜನವಾಗುವ ಲಕ್ಷಣವಂತೂ ಕಾಣಿಸುತ್ತಿಲ್ಲ.

ಏಕೆಂದರೆ, ಕೇಂದ್ರ ಸರ್ಕಾರವು ದೇಶದ ಕ್ರೀಡಾ ಆಡಳಿತ ವ್ಯವಸ್ಥೆಯನ್ನು ಶುದ್ಧಗೊಳಿಸುವ ಪಟ್ಟು ಹಿಡಿದಿದೆ. ಸರ್ಕಾರದೊಳಗೆ ಇರುವ ಕೆಲವರು ಕೂಡ ವಿವಿಧ ಕ್ರೀಡಾ ಸಂಘಟನೆಗಳ ಉನ್ನತ ಸ್ಥಾನದಲ್ಲಿದ್ದಾರೆ.
 
ಅವರ ವಿರೋಧ ಎದುರಿಸಿದ್ದರೂ ದಿಟ್ಟ ನಿರ್ಧಾರದ ಕಂಬವನ್ನು ಅಪ್ಪಿಕೊಂಡು ಗಟ್ಟಿಯಾಗಿಬಿಟ್ಟಿದೆ ಸರ್ಕಾರ. ಕ್ರೀಡಾ ನೀತಿ ಜಾರಿಯ ಜೊತೆಯಲ್ಲಿಯೇ ಪೂರಕ ಎನ್ನುವಂತೆ ಎಲ್ಲ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ ಮೇಲೆ ಮಾಹಿತಿ ಹಕ್ಕು ಎನ್ನುವ ತೂಗುಗತ್ತಿಯನ್ನು ಕಟ್ಟುತ್ತಿದೆ.

ಇದಕ್ಕೆ ಒಕ್ಕೊರಲಿನಿಂದ ಎಲ್ಲ ಕ್ರೀಡಾ ಫೆಡರೇಷನ್‌ಗಳು ಧ್ವನಿಗೂಡಿಸಿ `ಐಒಎ~ಯನ್ನು ಮುಂದಿಟ್ಟುಕೊಂಡು ಹೋರಾಡತೊಡಗಿವೆ. ಸ್ವಾಯತ್ತ ಸಂಸ್ಥೆಗಳಾದ ಕ್ರೀಡಾ ಸಂಘಟನೆಗಳನ್ನು ಆರ್‌ಟಿಐ ವ್ಯಾಪ್ತಿಗೆ ತರುವುದೇ ನ್ಯಾಯವಲ್ಲ ಎನ್ನುವುದು ಒಲಿಂಪಿಕ್ ಸಂಸ್ಥೆಯ ಗಟ್ಟಿ ವಾದ.

ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ ಆಡಳಿತದಲ್ಲಿ ಹೀಗೆ ಸರ್ಕಾರವು ಹಸ್ತಕ್ಷೇಪ ಮಾಡುವುದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಗೂ ಒಪ್ಪಿಗೆಯಾಗುವುದಿಲ್ಲ ಎನ್ನುವ ಸಬೂಬು ಕೂಡ ನೀಡಿರುವುದು ಗಮನ ಸೆಳೆಯುವಂಥದು.

ವಿಚಿತ್ರವೆಂದರೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಒಂದು ದೇಶದ ಆಂತರಿಕ ವಿಷಯಗಳಲ್ಲಿ ತನ್ನ ರೀತಿ-ನೀತಿಗಳಿಂದ ಹಸ್ತಕ್ಷೇಪ ಮಾಡುವುದು ಕೂಡ ಆಕ್ಷೇಪಾರ್ಹ ಎನ್ನುವುದನ್ನು ಮರೆಯಬಾರದು.

ಆದ್ದರಿಂದಲೇ ಸದ್ಯಕ್ಕೆ ಮಧ್ಯ ಪ್ರವೇಶ ಮಾಡುವ ಮೂಲಕ ಭಾರತ ಸರ್ಕಾರದ ಉದ್ದೇಶಿತ ನೂತನ ಕ್ರೀಡಾ ನೀತಿಯಲ್ಲಿನ ಕೆಲವು ಅಂಶಗಳನ್ನು ಕೈಬಿಡುವಂತೆ ಮಾಡುವ ಯೋಚನೆಯನ್ನು ಐಒಸಿ ಕೂಡ ಮಾಡಿಲ್ಲ. ಇದರಿಂದ ಅಸಹಾಯಕ ಸ್ಥಿತಿ ತಲುಪಿರುವ ಐಒಎ ತನ್ನ ಛತ್ರಛಾಯೆಯಲ್ಲಿ ಬರುವ ಫೆಡರೇಷನ್‌ಗಳ ಬಲದೊಂದಿಗೆ ಧ್ವನಿ ಎತ್ತಿದೆ.

`ಕ್ರೀಡಾ ಫೆಡರೇಷನ್‌ಗಳು ಆರ್‌ಟಿಐ ಅಡಿಯಲ್ಲಿ ಬರಬೇಕು ಎನ್ನುವುದಾದರೆ, ಬೇರೆ ಎಲ್ಲ ಸ್ವಾಯತ್ತ ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಘಟನೆಗಳನ್ನೂ ಇದೇ ಕಾಯ್ದೆಯ ವ್ಯಾಪ್ತಿಗೆ ತರಬೇಕು~ ಎಂದು ಅಡ್ಡಗಾಲಿಟ್ಟುಕೊಂಡು ನಿಂತಿದೆ ಐಒಎ. ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬಂದರೆ ಎದುರಾಗುವ ಸವಾಲುಗಳು ಏನು ಎನ್ನುವುದನ್ನು ಎಲ್ಲ ಕ್ರೀಡಾ ಫೆಡರೇಷನ್‌ಗಳು ಸ್ಪಷ್ಟವಾಗಿ ಅರಿತಿವೆ.

ಆದ್ದರಿಂದಲೇ ಐಒಎ ಮುಂಚೂಣಿಯಲ್ಲಿ ನಿಂತು ಸರ್ಕಾರದ ನೂತನ ರಾಷ್ಟ್ರೀಯ ಕ್ರೀಡಾ ನೀತಿ ಹಾಗೂ ಕ್ರೀಡಾ ಫೆಡರೇಷನ್‌ಗಳಿಗೂ ಆರ್‌ಟಿಐ ಎನ್ನುವ ತೀರ್ಮಾನದ ವಿರುದ್ಧ ಮಾತಿನ ಅಸ್ತ್ರದಿಂದ ಯುದ್ಧ ಆರಂಭಿಸಿದೆ. `ಕ್ರೀಡಾ ನೀತಿಯಿಂದ ಹಾಗೂ ಆರ್‌ಟಿಐ ವ್ಯಾಪ್ತಿಗೆ ತರುವುದರಿಂದ ಸ್ವಾಯತ್ತ ಸಂಸ್ಥೆಗಳಾದ ಕ್ರೀಡಾ ಫೆಡರೇಷನ್‌ಗಳ ಸ್ವಾತಂತ್ರ್ಯ ಹರಣವಾಗುತ್ತದೆ~ ಎನ್ನುವುದು ಮುಖ್ಯವಾದ ದೂರು.

`ಜನರಿಗೆ ಕ್ರೀಡಾ ಸಂಸ್ಥೆಗಳಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿಯುವ ಹಕ್ಕಿದೆ ಎಂದು ಹೇಳುತ್ತಿರುವುದು ಕೇವಲ ನೆಪಮಾತ್ರ. ಆರ್‌ಟಿಐ ಜಾರಿಗೊಳಿಸಿದರೆ ಸರ್ಕಾರವು ಯಾವುದೇ ಸಂದರ್ಭದಲ್ಲಿ ಕ್ರೀಡಾ ಫೆಡರೇಷನ್‌ಗಳ ಆಡಳಿತದ ಮೇಲೆ ಹಿಡಿತ ಬಿಗಿಯಾಗಿಸಿ, ಉಸಿರುಗಟ್ಟುವಂಥ ವಾತಾವರಣ ನಿರ್ಮಿಸಬಹುದು~ ಎಂದು ಐಒಎ ಉನ್ನತಾಧಿಕಾರಿಗಳ ಅಭಿಪ್ರಾಯ.

`ಕ್ರೀಡಾ ಆಡಳಿತಗಾರರಿಗೆ ವಯಸ್ಸಿನ ಮಿತಿ ಎನ್ನುವುದೇ ವಿಚಿತ್ರವೆನಿಸುತ್ತದೆ. ಆಡಳಿತ ಕ್ಷೇತ್ರದಲ್ಲಿ ಅನುಭವ ಹೆಚ್ಚು ಇದ್ದರೆ ಅದರಿಂದ ದೇಶದ ಕ್ರೀಡಾ ಕ್ಷೇತ್ರಕ್ಕೇ ಒಳಿತು. ಹೊಸ ಕ್ರೀಡಾ ನೀತಿಯು ಅನುಭವಿಗಳನ್ನು ಕ್ರೀಡಾ ಕ್ಷೇತ್ರದಿಂದ ದೂರವಾಗುವಂತೆ ಮಾಡುತ್ತದೆ.

ಆದ್ದರಿಂದ ಅಂಥದೊಂದು ಯೋಚನೆಯನ್ನು ಕೈಬಿಡುವುದೇ ಹೆಚ್ಚು ಸೂಕ್ತವೆನಿಸುತ್ತದೆ~ ಎಂದು ಹೇಳುವ ಒಲಿಂಪಿಕ್ ಸಂಸ್ಥೆಯ ಉನ್ನತಾಧಿಕಾರಿಗಳು ಸರ್ಕಾರದ ಮನವೊಲಿಸುವ ಸಾಹಸವನ್ನು ಇನ್ನೂ ಕೈಬಿಟ್ಟಿಲ್ಲ.

`ಆರ್‌ಟಿಐ ಅಡಿಯಲ್ಲಿ ಕ್ರೀಡಾ ಫೆಡರೇಷನ್‌ಗಳನ್ನು ತರುವ ಅಗತ್ಯವಾದರೂ ಏನಿದೆ? ಸರ್ಕಾರದಿಂದ ಆರ್ಥಿಕ ನೆರವು ಸಿಗುವುದು ಕ್ರೀಡಾ ಫೆಡರೇಷನ್‌ಗಳಿಗೆ ಎನ್ನುವ ಅಭಿಪ್ರಾಯ ಒಪ್ಪುವಂಥದೇ ಅಲ್ಲ. ಸರ್ಕಾರದಿಂದ ಬರುವ ಹಣವು ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾ ಕೂಟಗಳಿಗೆ. ಅದಕ್ಕಾಗಿ ಲೆಕ್ಕಪತ್ರಗಳನ್ನು ಕ್ರೀಡಾ ಫೆಡರೇಷನ್‌ಗಳು ಕ್ರೀಡಾ ಇಲಾಖೆಗೆ ನೀಡುತ್ತವೆ.
 
ಒಂದು ವೇಳೆ ಆರ್‌ಟಿಐ ಕಾಯ್ದೆಯನ್ನು ಒತ್ತಾಯದಿಂದ ಹೇರಿದರೆ, ಮೊದಲೇ ಸಂಕಷ್ಟದಲ್ಲಿರುವ ಕ್ರೀಡಾ ಫೆಡರೇಷನ್‌ಗಳು ಇನ್ನೊಂದು ಹೊರೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ~ ಎಂದು ಐಒಸಿ ಮನವರಿಕೆ ಮಾಡುತ್ತಿದೆ.
ಆದರೂ ಇದನ್ನು ಒಪ್ಪುವುದಕ್ಕೆ ಕ್ರೀಡಾ ಪ್ರೇಮಿಗಳು ಮಾತ್ರ ಸಿದ್ಧವಿಲ್ಲ.

ತಮ್ಮ ತೆರಿಗೆಯ ಹಣದಿಂದ ನೆರವು ಪಡೆಯುವ ಕ್ರೀಡಾ ಫೆಡರೇಷನ್‌ಗಳು ಪಾರದರ್ಶಕವಾಗಿ ಇರಬೇಕೆಂದು ಬಯಸುತ್ತಿದ್ದಾರೆ. ಆದ್ದರಿಂದ ಸರ್ಕಾರವು ಕ್ರೀಡಾ ಆಡಳಿತಗಾರರ ವಿರೋಧದ ನಡುವೆಯೂ ಆರ್‌ಟಿಐ ಕಾಯ್ದೆ ವ್ಯಾಪ್ತಿಗೆ ಎಲ್ಲ ಕ್ರೀಡಾ ಫೆಡರೇಷನ್‌ಗಳನ್ನು ತರುವ ಸಾಧ್ಯತೆಯೇ ಹೆಚ್ಚು.

ಮಾತನಾಡಲು ಕ್ರಿಕೆಟಿಗರ ನಿರಾಕರಣೆ

ADVERTISEMENT

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ನೂತನ ಕ್ರೀಡಾ ಮಸೂದೆ ಸಂಬಂಧ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಮಾತನಾಡಲು ನಿರಾಕರಿಸಿದ್ದಾರೆ. ಬಿಸಿಸಿಐ ಭಯ ಇದಕ್ಕೆ ಕಾರಣ. ಜೊತೆಗೆ ಬಿಸಿಸಿಐನಲ್ಲಿ ಯಾವುದೇ ಹುದ್ದೆ ಸಿಗದಿರಬಹುದು ಎಂಬ ಆತಂಕ!

ಮಾಜಿ ಹಾಕಿ ಒಲಿಂಪಿಯನ್ ಎಂ.ಪಿ.ಗಣೇಶ್ ಅವರೂ ಕೂಡ ಈ ಬಗ್ಗೆ ಮಾತನಾಡಲಿಲ್ಲ. ಇದಕ್ಕೆ ಕಾರಣ ಅವರೀಗ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯಲ್ಲಿ ಸಿಇಒ ಆಗಿ ಕಾರ್ಯ ನಿರ್ವಹಿಸು ತ್ತಿದ್ದಾರೆ.

`ನಾನು ಈ ಬಗ್ಗೆ ಮಾತನಾಡುವಂತಿಲ್ಲ. ನಾನಿರುವ ಸ್ಥಾನ ಅದಕ್ಕೆ ಅವಕಾಶ ನೀಡುವುದಿಲ್ಲ. ಮಸೂದೆ ಬಗ್ಗೆ ನನಗೆ ಗೊತ್ತೇ ಇಲ್ಲ~ ಎಂದು ದೂರವಾಣಿ ಸಂಭಾಷಣೆ ಕೊನೆಗೊಳಿಸಿಬಿಟ್ಟರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.