ADVERTISEMENT

ಮಸೂದೆಗೆ ಒಪ್ಪಿಗೆಯ ವಿಶ್ವಾಸವಿದೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST
ಮಸೂದೆಗೆ ಒಪ್ಪಿಗೆಯ ವಿಶ್ವಾಸವಿದೆ
ಮಸೂದೆಗೆ ಒಪ್ಪಿಗೆಯ ವಿಶ್ವಾಸವಿದೆ   

ಸಂದರ್ಶನ:

ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ನೂತನ ಕ್ರೀಡಾ ಮಸೂದೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಬಿ.ಎಸ್. ಅರುಣ್ ಜತೆ ಹೀಗೆ ಹಂಚಿಕೊಂಡಿದ್ದಾರೆ:

- ಈ ಮಸೂದೆ ಏಕೆ?
ಕ್ರೀಡಾ ಫೆಡರೇಷನ್‌ಗಳಲ್ಲಿ ಉತ್ತರದಾಯಿತ್ವ ಕಂಡುಬರಬೇಕಾದರೆ, ಅವುಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ  (ಆರ್‌ಟಿಐ) ತರುವುದು ಅಗತ್ಯ. ಈ ಫೆಡರೇಷನ್‌ಗಳು ವಿದೇಶಗಳಲ್ಲಿ ನಡೆಯುವ ಕ್ರೀಡಾ ಕೂಟಗಳಿಗೆ ರಾಷ್ಟ್ರೀಯ ತಂಡವನ್ನು ಕಳುಹಿಸುತ್ತದೆ. ಇದರಿಂದ ಫೆಡರೇಷನ್‌ಗಳು ಎಲ್ಲ ಭಾರತೀಯರಿಗೆ ಉತ್ತರದಾಯಿಯಾಗಿರಬೇಕು. ಮಾತ್ರವಲ್ಲ ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಅನಿವಾರ್ಯ.

-ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಮಸೂದೆಯ ವ್ಯಾಪ್ತಿಯೊಳಗೆ ಬರಬೇಕು ಎಂಬ ವಿಚಾರ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ನಾವು ಸರ್ಕಾರದ ಆರ್ಥಿಕ ನೆರವು ಪಡೆಯುತ್ತಿಲ್ಲ, ಈ ಕಾರಣ ನಮ್ಮ ಮೇಲೆ ನಿಯಂತ್ರಣ ಹೇರುವುದು ಸರಿಯಲ್ಲ ಎಂದು ಬಿಸಿಸಿಐ ಹೇಳುತ್ತಿದೆ...ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಕ್ರೀಡಾ ಫೆಡರೇಷನ್‌ಗಳಲ್ಲಿ ಪಾರದರ್ಶಕತೆ ತರುವುದು ಉದ್ದೇಶಿತ ಮಸೂದೆಯ ಗುರಿ. ಅದರ ಬದಲು ಅವುಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶ ಹೊಂದಿಲ್ಲ. ಕೇಂದ್ರ ಸರ್ಕಾರವು ಬಿಸಿಸಿಐಗೆ ತೆರಿಗೆ ವಿನಾಯಿತಿ ನೀಡಿದೆ. ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಸರ್ಕಾರ ತನ್ನ ಭೂಮಿ ನೀಡಿದೆ. ಈ ಕಾರಣ ಬಿಸಿಸಿಐ ದೇಶದ ಸಾಮಾನ್ಯ ಜನರ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು. 

ಬಿಸಿಸಿಐ ಮನರಂಜನಾ ತೆರಿಗೆಯಿಂದ ಮುಕ್ತವಾಗಿದ್ದು, ಕ್ರಿಕೆಟ್ ಪಂದ್ಯಗಳ ವೇಳೆ ಉಚಿತವಾಗಿ ಭದ್ರತಾ ವ್ಯವಸ್ಥೆ ಪಡೆಯುತ್ತದೆ. ಆದ್ದರಿಂದ ಮಂಡಳಿಯ ಒಳಗೆ ಏನು ನಡೆಯುತ್ತಿದೆ ಎಂಬುದನ್ನು ತಿಳಿಯುವ ಹಕ್ಕು ಜನರಿಗಿದೆ.

ನಾವು ಯಾವುದೇ ನಿಯಮವನ್ನು ಬಲವಂತವಾಗಿ ಹೇರುತ್ತಿಲ್ಲ. ಮಸೂದೆಯಲ್ಲಿ ಅಂತಹ ನಿಯಮಗಳಿದ್ದರೆ ತೋರಿಸಲಿ, ನಾವು ಕೈಬಿಡುವೆವು. ಏನೇ ಆಗಲಿ, ಬಿಸಿಸಿಐನ ಹಣಕಾಸಿನ ವ್ಯವಹಾರ ಆರ್‌ಟಿಐ ವ್ಯಾಪ್ತಿಯೊಳಗೆ ಬರಲೇಬೇಕು.

-ಈ ಮಸೂದೆಯ ಮೂಲಕ ಸರ್ಕಾರ ಪರೋಕ್ಷವಾಗಿ ಕ್ರೀಡಾ ಫೆಡರೇಷನ್‌ಗಳ ಮೇಲೆ ನಿಯಂತ್ರಣ ಸಾಧಿಸಿದಂತಾಗುವುದಿಲ್ಲವೇ?

ಇಲ್ಲ. ಅಂತಹ ಪ್ರಶ್ನೆಯೇ ಎದುರಾಗುವುದಿಲ್ಲ. ಯಾವುದೇ ಫೆಡರೇಷನ್‌ಗಳ ಆಡಳಿತ ಮಂಡಳಿಯಲ್ಲಿ ನಮ್ಮ ಪ್ರತಿನಿಧಿಗಳು ಇರಬೇಕೆಂದು ಬಯಸುವುದಿಲ್ಲ. ಅವರಿಗೆ ಆದೇಶಗಳನ್ನು ನೀಡಬೇಕೆಂಬ ಬಯಕೆಯೂ ಇಲ್ಲ.

-ಇಂತಹ ಮಸೂದೆ ಇದ್ದಿದ್ದರೆ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಳೆ ನಡೆದ ಹಗರಣಗಳನ್ನು ತಡೆಯಲು ಸಾಧ್ಯವಾಗುತ್ತಿತ್ತೇ?

ಕಾಮನ್‌ವೆಲ್ತ್ ಕೂಟದ ವೇಳೆ ನಡೆದಂತಹ ಹಗರಣಗಳನ್ನು ತಡೆಗಟ್ಟಬೇಕೆಂಬುದೇ ನನ್ನ ಪ್ರಯತ್ನ. ಕಾಮನ್‌ವೆಲ್ತ್ ಕೂಟಕ್ಕೆ ಮುನ್ನ ಈ ಮಸೂದೆ ಜಾರಿಯಾಗಿದ್ದಲ್ಲಿ, ನಮಗೆ ಇಷ್ಟೆಲ್ಲಾ ಮುಜುಗರ ಎದುರಿಸುವುದು ತಪ್ಪಿಹೋಗುತ್ತಿತ್ತು.

-ಭಾರತದ ಕ್ರೀಡೆಗೆ ಕಾರ್ಪೊರೇಟ್ ವಲಯದಿಂದ ಹೆಚ್ಚಿನ ಹಣ ಹರಿದುಬರುತ್ತದೆ ಎಂಬುದನ್ನು ಈ ಮಸೂದೆಯಿಂದ ಖಚಿತಪಡಿಸಬಹುದೇ?

ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆ ಇದೆ ಎಂಬುದು ಖಚಿತವಾದರೆ, ಕ್ರೀಡಾ ಫೆಡರೇಷನ್‌ಗಳಿಗೆ ಆರ್ಥಿಕ ನೆರವು ನೀಡಲು ಕಾರ್ಪೊರೇಟ್ ವಲಯ ಸಜ್ಜಾಗಿದೆ. ಈಗ ತಾವು ಹಣ ಹೂಡಿದರೆ ಅದು ಕ್ರೀಡಾಪಟು ಅಥವಾ ಸಂಬಂಧಪಟ್ಟ ಅಧಿಕಾರಿಗೆ ಲಭಿಸುತ್ತದೆ ಎಂಬುದರ ಬಗ್ಗೆ ಯಾವುದೇ ಖಾತರಿ ಇಲ್ಲ. ಆದ್ದರಿಂದ ಕಾರ್ಪೊರೇಟ್ ವಲಯದ ಮಂದಿ ಹಣ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣ ಫೆಡರೇಷನ್‌ಗಳ ಆಡಳಿತದಲ್ಲಿ ಪಾರದರ್ಶಕತೆ ಅಗತ್ಯ.

-ನಿಮ್ಮ ಮುಂದಿನ ನಡೆ ಏನು?

ಸಚಿವರ ಜೊತೆ ಸಮಾಲೋಚನೆ ನಡೆಸಿ ಮಸೂದೆಯ ಕುರಿತು ಎದ್ದಿರುವ ವಿವಾದಗಳನ್ನು ಬಗೆಹರಿಸಬೇಕು. ನೂತನ ಕ್ರೀಡಾ ಮಸೂದೆ ಸದ್ಯದಲ್ಲೇ ಜಾರಿಯಾಗುವ ವಿಶ್ವಾಸ ನನ್ನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT