ಮೋಟಾರು ವಾಹನ ಕಾಯ್ದೆಗೆ ಸರ್ಕಾರ ತರಲು ಹೊರಟಿರುವ ತಿದ್ದುಪಡಿ ಪ್ರಕಾರ, ಕುಡಿದು ವಾಹನ ಚಲಾಯಿಸಿದರೆ ರೂ 50 ಸಾವಿರದವರೆಗೆ ದಂಡ ಹಾಗೂ ಚಾಲನಾ ಪರವಾನಗಿಯನ್ನು ಕಾಯಂ ರದ್ದುಗೊಳಿಸುವ ನಿರ್ಧಾರವೇನೋ ಸರಿ. ಆದರೆ ಚಾಲಕರು ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುತ್ತಿದ್ದಾರೆಯೇ, ಇಲ್ಲವೇ ಎಂದು ತೋರಿಸಬೇಕಾದ ಉಪಕರಣವೇ (ಆಲ್ಕೊಮೀಟರ್) ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ...?
ಸಂಚಾರ ದೀಪಗಳ ಸಂಕೇತಗಳನ್ನು ಮೂರು ಬಾರಿ ಉಲ್ಲಂಘಿಸಿದವರಿಗೆ (ಸಿಗ್ನಲ್ ಜಂಪ್) ರೂ 15 ಸಾವಿರದವರೆಗೆ ದಂಡ ಮತ್ತು ಒಂದು ತಿಂಗಳವರೆಗೆ ಪರವಾನಗಿ ರದ್ದು ಮಾಡುವುದನ್ನು ಒಪ್ಪಿಕೊಳ್ಳೋಣ, ಆದರೆ ಸಂಚಾರ ದೀಪಗಳೇ ಸರಿಯಿಲ್ಲದಿದ್ದರೆ...?
ಎರ್ರಾಬಿರ್ರಿ ಓಡಿಸಿ ಫುಟ್‌ಪಾತ್ ಮೇಲೋ, ಇನ್ನಾವುದರ ಮೇಲೋ ವಾಹನ ಚಲಾಯಿಸಿದರೆ ಆಗಲೂ ಚಾಲನಾ ಪರವಾನಗಿ ರದ್ದು ಮಾಡುವುದನ್ನು ಮೆಚ್ಚಿಕೊಳ್ಳೋಣ. ಆದರೆ ವಾಹನ ಸವಾರನಿಗೆ ಫುಟ್‌ಪಾತ್ ಯಾವುದು, ರಸ್ತೆ ಯಾವುದು ಎನ್ನುವ ವ್ಯತ್ಯಾಸವೇ ಗೊತ್ತಾಗದಂಥ ಗೊಂದಲದ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದ್ದರೆ...?
ಇದರರ್ಥ ಇಷ್ಟೇ. ಯೂರೋಪ್ ರಾಷ್ಟ್ರಗಳಲ್ಲಿರುವ ಸಂಚಾರ ನಿಯಮಗಳನ್ನು ನಮ್ಮ ದೇಶದಲ್ಲೂ ಜಾರಿಗೆ ತರುವ ಉದ್ದೇಶ ಬಹಳ ಒಳ್ಳೆಯದೇ. 1988ರಲ್ಲಿ ರೂಪಿಸಲಾದ ಮೋಟಾರು ವಾಹನ ಕಾಯ್ದೆ ಅನ್ವಯ ಈಗ ದಂಡ ವಿಧಿಸಲಾಗುತ್ತಿದೆ. ಅಂದರೆ ಈ ಕಾಯ್ದೆಗೆ ಸುಮಾರು ಮೂರು ದಶಕ ಸಂದಿದೆ. ಅದಕ್ಕೆ 2007ರಲ್ಲಿ ಚಿಕ್ಕಪುಟ್ಟ ತಿದ್ದುಪಡಿ ಮಾಡಲಾಗಿದೆಯೇ ವಿನಾ ಅಂಥಾದ್ದೇನೂ ಭಾರಿ ಬದಲಾವಣೆ ಆಗಿಲ್ಲ. ಆದ್ದರಿಂದ ಈಗ ತಿದ್ದುಪಡಿ ಮಾಡಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗುವಂತೆ ಮಾಡುವುದು ಒಳ್ಳೆಯ ಮಾತು. ಇದರ ಜೊತೆಗೆ, ರಸ್ತೆ ಅಪಘಾತಗಳಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆಯನ್ನು ಇನ್ನು ಐದು ವರ್ಷಗಳಲ್ಲಿ ೨ ಲಕ್ಷದಷ್ಟು ತಗ್ಗಿಸುವ ಈ ಮಸೂದೆಯ ಉದ್ದೇಶವೂ ಉತ್ತಮವಾದದ್ದೇ. ಇದರಿಂದ ಅಪರಾಧ ಪ್ರಕರಣಗಳು ತಗ್ಗುವುದು ಮಾತ್ರವಲ್ಲದೇ, ಸರ್ಕಾರದ ಬೊಕ್ಕಸವೂ ತುಂಬುತ್ತದೆ.
ನ್ಯಾಯಶಾಸ್ತ್ರದಲ್ಲಿ ಒಂದು ಮಾತಿದೆ. ಅದಕ್ಕೆ ನಿರೋಧಕ ಸಿದ್ಧಾಂತ (ಡಿಟರೆಂಟ್ ಥಿಯರಿ) ಎನ್ನುತ್ತಾರೆ. ಆಡುಭಾಷೆಯಲ್ಲಿ ಹೇಳುವುದಾದರೆ ಕಣ್ಣಿಗೆ ಕಣ್ಣು, ಕೈಯಿಗೆ ಕೈ ಎನ್ನುವ ಹಾಗೆ. ಒಬ್ಬರ ಕಣ್ಣು ತೆಗೆದರೆ, ಇವರು ಅವರ ಕಣ್ಣು ಕೀಳುವುದು, ಇವರು ಅವರ ಕೈ ಕತ್ತರಿಸಿದರೆ, ಅವರು ಇವರ ಕೈ ಕತ್ತರಿಸುವುದು. ಅದೇ ರೀತಿ, ಬೇಜವಾಬ್ದಾರಿಯಿಂದ ವಾಹನ ಚಲಿಸಿ ಸಾಯಿಸಿದರೆ, ಅವರನ್ನೂ ಅದೇ ರೀತಿ ಸಾಯಿಸುವುದು. ಇದು ಗಲ್ಫ್ ದೇಶಗಳಲ್ಲಿ ಚಾಲ್ತಿಯಲ್ಲಿದೆ. ಆದರೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಇಂಥ ಸಿದ್ಧಾಂತ ಇಲ್ಲಿ ಅನ್ವಯ ಆಗುವುದಿಲ್ಲ. ಆದ್ದರಿಂದ ಇಲ್ಲಿ ಏನಿದ್ದರೂ ‘ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆ ಪೆಟ್ಟು’ ಎನ್ನುವ ಸಿದ್ಧಾಂತ ಮಾತ್ರ ಅನ್ವಯ ಆಗುತ್ತದೆ. ಆದ್ದರಿಂದ ಭಾರಿ ದಂಡದ ಮೂಲಕವೇ ಶಿಕ್ಷೆ ವಿಧಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಈಗಿನ ಪ್ರಸ್ತಾವ ಸಮಂಜಸ. ಆದರೆ ಐರೋಪ್ಯ ರಾಷ್ಟ್ರಗಳ ಕಾನೂನನ್ನು ಇಲ್ಲಿ ಜಾರಿಗೆ ತರಲು ಹೊರಟಿರುವುದು ಎಷ್ಟು ಮುಖ್ಯವೋ, ಅದಕ್ಕಿಂತ ಹೆಚ್ಚಿನ ಆದ್ಯತೆಯನ್ನು ಅಲ್ಲಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದಕ್ಕೂ ನೀಡಬೇಕಿದೆ.
ಆಧುನಿಕ ತಾಂತ್ರಿಕ ಸಾಧನಗಳನ್ನು ಬಳಸಿಕೊಂಡೇ ಅಪರಾಧ ಪತ್ತೆ ಹಚ್ಚುವ ವಿಷಯವನ್ನು ಈಗ ಪ್ರಸ್ತಾಪಿಸಲಾಗಿದೆ. ಆದರೆ ಈ ಪ್ರಸ್ತಾವ ಕಾಗದದ ಮೇಲಕ್ಕಷ್ಟೇ ಸೀಮಿತಗೊಳ್ಳದೆ, ಮೊದಲು ಸಂಪೂರ್ಣವಾಗಿ ಚಾಲ್ತಿಗೆ ಬರಬೇಕು. ಅಪರಾಧ ಮಾಡುವವರು ತಪ್ಪಿಸಿಕೊಳ್ಳದಂತೆ, ನಿರಪರಾಧಿಗಳಿಗೆ ಶಿಕ್ಷೆಯಾಗದಂತೆ ತಂತ್ರಜ್ಞಾನದ ಅಳವಡಿಕೆ ಆಗಬೇಕು. ಆ ನಂತರವಷ್ಟೇ ‘ದಂಡ’ದ ಮಾತು.
‘ಒಮ್ಮೆ ಕಾಯ್ದೆ ಜಾರಿ ಮಾಡಿದ ನಂತರ ಉಳಿದದ್ದನ್ನು ನೋಡಿಕೊಂಡರಾಯಿತು’ ಎಂಬ ಮಾತು ಇಲ್ಲಿ ಬರಲೇಬಾರದು. ಇಲ್ಲದೇ ಹೋದರೆ ಮಾಡಿದ್ದೆಲ್ಲ ದಂಡವೇ! ಏಕೆಂದರೆ, ನಮ್ಮಲ್ಲಿ ಈಗಿರುವ ಪಾನಮತ್ತರನ್ನು ಕಂಡುಹಿಡಿಯುವ ‘ಆಲ್ಕೊ ಮೀಟರ್’ ಹೇಗಿದೆ ಎಂದರೆ, ಕುಡಿದವ ತಪ್ಪಿಸಿಕೊಳ್ಳುತ್ತಾನೆ, ಕುಡಿಯದವ ಸಿಕ್ಕಿಬೀಳುತ್ತಾನೆ. ಹಲವು ಬಾರಿ, ಆ ಮೀಟರ್ ಪ್ರಕಾರ ಕುಡಿಯದವನು ಕುಡಿದಿರುತ್ತಾನೆ, ಕುಡಿದವನು ಸಭ್ಯನಾಗಿರುತ್ತಾನೆ! ಬಹುತೇಕ ಸಂದರ್ಭಗಳಲ್ಲಿ, ಹಸಿರು ಸಂಚಾರ ದೀಪ (ಗ್ರೀನ್ ಸಿಗ್ನಲ್) ಬಂತೆಂದು ವಾಹನ ಆರಂಭಿಸುವಷ್ಟರಲ್ಲಿ ಕೆಂಪು ದೀಪ ಬಂದುಬಿಟ್ಟಿರುತ್ತದೆ. ಇಲ್ಲವೇ ವಾಹನ ನಿಲ್ಲಿಸುವ ಸೂಚನೆ ನೀಡಬೇಕಾದ ಹಳದಿ ದೀಪ ಏಕಾಏಕಿ ಕೆಟ್ಟು, ಅಲ್ಲಿ ಕೆಂಪು ದೀಪ ಬಂದು ಬಿಟ್ಟಿರುತ್ತದೆ, ಅಷ್ಟರಲ್ಲಿಯೇ ವಾಹನ ಚಾಲಕ ಸಿಗ್ನಲ್ ಜಂಪ್ ಮಾಡಿಯಾಗಿರುತ್ತದೆ!
ಇನ್ನು, ಫುಟ್‌ಪಾತ್ ಹಾಗೂ ರಸ್ತೆ ಕಥೆ ಕೇಳಬೇಕೇ? ಬೆಂಗಳೂರಿನಂತಹ ಮಹಾನಗರದಲ್ಲಿನ ರಸ್ತೆ, ಫುಟ್‌ಪಾತ್‌ಗಳೇ ಗಬ್ಬೆದ್ದು ಹೋಗಿವೆ, ಇನ್ನು ನಗರ, ಪಟ್ಟಣಗಳ ಮಾತಂತೂ ಹೇಳುವುದೇ ಬೇಡ. ಬೆಂಗಳೂರನ್ನೇ ತೆಗೆದುಕೊಳ್ಳಿ. ನಗರದ ಹೃದಯ ಭಾಗ ಎಂದೆನಿಸಿರುವ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಕೆ.ಜಿ. ರಸ್ತೆ, ರಾಜಭವನ ರಸ್ತೆ ಇತ್ಯಾದಿ ರಸ್ತೆಗಳಲ್ಲಿ ಒಮ್ಮೆ ಜೋರಾಗಿ ಮಳೆ ಬಂತೆಂದರೆ ವಾಹನ ಸವಾರರ ಜೀವ ಬಾಯಿಗೆ ಬಂದಿರುತ್ತದೆ. ಹೊಚ್ಚ ಹೊಸದಾಗಿ ಡಾಂಬರೀಕರಣ ಮಾಡಿದ್ದರೂ ಒಂದೇ ಮಳೆಗೆ ಅದು ದೂಳೀಪಟವಾಗಿರುತ್ತದೆ. ಫುಟ್ಪಾತ್ಗಳು ರಸ್ತೆ ಮೇಲೆ ಬಂದು ಮಲಗಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ವಾಹನ ಸವಾರರು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ದಂಡ ವಿಧಿಸುವುದು ಸರಿಯಾದ ಕ್ರಮ ಆಗಲಾರದು.
ಭ್ರಷ್ಟತೆಗೆ ಅವಕಾಶ: ವಿದೇಶಗಳಲ್ಲಿನ ತಂತ್ರಜ್ಞಾನವೇ ಇಲ್ಲೂ ಬಂತು ಎಂದಿಟ್ಟುಕೊಳ್ಳೋಣ. ನಂತರದ ಪ್ರಶ್ನೆ, ತಪ್ಪಿತಸ್ಥ ವಾಹನ ಸವಾರರು ದಂಡ ಕಟ್ಟುವುದು ಯಾರಿಗೆ ಎಂಬುದು. ಏಕೆಂದರೆ ಈಗಿರುವ ವ್ಯವಸ್ಥೆಯಲ್ಲಿ ಕುಡಿದು ವಾಹನ ಚಾಲನೆ ಮಾಡುವವರಿಗೆ ಹಾಕುವ ರೂ 2 ಸಾವಿರ ದಂಡವನ್ನು ಹೊರತುಪಡಿಸಿ ಉಳಿದ ತಪ್ಪುಗಳಿಗೆ (ಉದಾ: ಚಾಲನೆ ಮಾಡುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದರೆ ರೂ 300, ಸೀಟ್ ಬೆಲ್ಟ್ ಹಾಕದೇ ಕಾರಿನಲ್ಲಿ ವಾಹನ ಚಲಾಯಿಸಿದರೆ ರೂ 100ರಿಂದ ರೂ 300, ಚಾಲನಾ ಪರವಾನಗಿ ಇಲ್ಲದೇ ಗಾಡಿ ಓಡಿಸುತ್ತಿದ್ದರೆ ಗಾಡಿ ಓಡಿಸುತ್ತಿರುವವನಿಗೆ ರೂ 500 ಹಾಗೂ ಅದರ ಮಾಲೀಕನಿಗೆ ರೂ 1 ಸಾವಿರ ಇತ್ಯಾದಿ) ಸ್ಥಳದಲ್ಲೇ ಪೊಲೀಸರಿಗೆ ದಂಡ ನೀಡಬೇಕಾಗುತ್ತದೆ. ಇದೇ ಪರಿಸ್ಥಿತಿ ಹೊಸ ಪದ್ಧತಿ ಜಾರಿಗೆ ಬಂದ ಮೇಲೂ ಮುಂದುವರಿದರೆ ಅಲ್ಲಿ ಪೊಲೀಸರಿಗೆ ಅನಿಯಂತ್ರಿತ ಅಧಿಕಾರ ಕೊಟ್ಟಂತಾಗಿ, ಭ್ರಷ್ಟಾಚಾರಕ್ಕೆ ಎಡೆ ಆದಂತಾಗುತ್ತದೆ. ರೂ 25-ರಿಂದ ರೂ 50 ಸಾವಿರದವರೆಗೆ ದಂಡದ ಮೊತ್ತ ಇದ್ದ ಸಂದರ್ಭದಲ್ಲಿ ವಾಹನ ಚಾಲಕರು ಪೊಲೀಸರ ಜೊತೆ ‘ಅಡ್ಜಸ್ಟ್’ ಮಾಡಿಕೊಳ್ಳುವ ಎಲ್ಲ ಸಾಧ್ಯತೆಯೂ ಇರುತ್ತದೆ. ಅಷ್ಟು ಭಾರಿ ಪ್ರಮಾಣದ ಹಣವನ್ನು ದಂಡದ ರೂಪದಲ್ಲಿ ನೀಡುವ ಬದಲು ಹತ್ತೋ- ಇಪ್ಪತ್ತೋ ಸಾವಿರ ರೂಪಾಯಿಗಳನ್ನು ಪೊಲೀಸರ ಕೈಗಿತ್ತು ಸುಲಭದಲ್ಲಿ ತಪ್ಪಿಸಿಕೊಳ್ಳಬಹುದು.
ಇಂತಹ ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ನಿಯಮ ಜಾರಿಯಾಗಬೇಕಿದೆ. ಅದು ಸಾಧ್ಯವಾಗುವುದು ವಿದೇಶಗಳಲ್ಲಿನ ಭ್ರಷ್ಟಾಚಾರಮುಕ್ತ ಸಂಚಾರ ನಿಯಮವನ್ನು ಇಲ್ಲಿಯೂ ಜಾರಿ ಮಾಡುವುದರಿಂದ ಮಾತ್ರ.
ವಿದೇಶಗಳಲ್ಲಿ ದಂಡ ನೀಡುವ ಕ್ರಮ ಯಾವ ರೀತಿ ಇದೆಯೆಂದರೆ, ಅಲ್ಲಿ ಪ್ರತಿ ವಾಹನಕ್ಕೂ ‘ಕೋಡ್’ ನೀಡಲಾಗುತ್ತದೆ. ವಾಹನ ಸವಾರರು ಯಾವುದೇ ರೀತಿಯ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ರಸ್ತೆಗಳಲ್ಲಿ ಅಳವಡಿಸಿರುವ ಯಂತ್ರಗಳಿಗೆ ಅದು ತಾನಾಗಿಯೇ ಗೋಚರಿಸುತ್ತದೆ. ಮನೆಯ ಬಾಗಿಲಿಗೆ ದಂಡದ ರಸೀದಿ ಬಂದಿರುತ್ತದೆ. ನಿಗದಿತ ಅವಧಿಯೊಳಗೆ ದಂಡ ಕಟ್ಟದೇ ಹೋದರೆ ವಾಹನವನ್ನು ಜಪ್ತಿ ಮಾಡಿಕೊಂಡು ಹೋಗಲಾಗುತ್ತದೆ. ಆದರೆ ಇಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ಹಲವು ಸವಾರರು ದಂಡ ಕಟ್ಟದೇ ಆರಾಮಾಗಿ ಇರುತ್ತಾರೆ, ಪುನಃ ಪುನಃ ನಿಯಮ ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ. ನೋಟಿಸ್ ಬಂದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇದಕ್ಕೆ ಸಾಕ್ಷಿ ಎಂದರೆ, ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು. ಒಂದು ವೇಳೆ ನಿಯಮಾನುಸಾರ ಶಿಸ್ತು ಕ್ರಮ ತೆಗೆದುಕೊಂಡಿದ್ದೇ ಆಗಿದ್ದರೆ ಈ ಪರಿಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಆಗುತ್ತಿರಲಿಲ್ಲ.
ವಿಚಿತ್ರ ಕಾನೂನು!: ಈ ಅಪರಾಧ, ದಂಡ, ಪ್ರಸ್ತಾವ ಎಲ್ಲವನ್ನೂ ಬದಿಗಿಟ್ಟು ಯೋಚಿಸುವುದಾದರೆ, ನಮ್ಮ ಕಾನೂನಿನಲ್ಲಿರುವ ಕೆಲವು
ಅಂಶಗಳು ವಿಚಿತ್ರ ಎನಿಸುತ್ತವೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) 120 ಬಿ ಸಂಚಿನ ಬಗ್ಗೆ ವಿವರಿಸುತ್ತದೆ. ಇದರಲ್ಲಿ ನಮ್ಮ ಪ್ರದೇಶದಲ್ಲಿ ಗಲಭೆ, ದಂಗೆ ಆಗುವುದು ತಿಳಿದಿದ್ದೂ ಅದನ್ನು ಮುಚ್ಚಿಟ್ಟರೆ ಅದಕ್ಕೆ ರೂ 500 ದಂಡ. ಒಂದು ವೇಳೆ ದಂಗೆಯಿಂದ ಹತ್ತಾರು ಜೀವಗಳು ಹೋದರೂ ಪರವಾಗಿಲ್ಲ, ಅದಕ್ಕೆ ಇರುವುದು ಕೇವಲ ರೂ 500 ದಂಡ. ಅದೇ ರೀತಿ 171 ಎಚ್ ಕಲಮಿನ ಅಡಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಮತದಾರರಿಗೆ ಹಣದ ಆಮಿಷ ಒಡ್ಡಿದರೆ ಅಂಥವರಿಗೂ ರೂ 500 ದಂಡ. ಈ ರೀತಿ ಮೋಸದಿಂದ ಗೆದ್ದು ನಮ್ಮನ್ನು ಆಳುವ ಜನಪ್ರತಿನಿಧಿಗಳಿಗೆ ಇಷ್ಟು ಕಡಿಮೆ ಪ್ರಮಾಣದ ದಂಡ ಇರುವಾಗ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಅದಕ್ಕೆ ರೂ50 ಸಾವಿರದವರೆಗೂ ದಂಡ ವಿಧಿಸುವುದು ವಿಚಿತ್ರ ಎನಿಸುವುದಿಲ್ಲವೇ? ಇವೆಲ್ಲ ಅಪರಾಧಗಳಿಗಿಂತ ಸಂಚಾರ ನಿಯಮ ಉಲ್ಲಂಘ-ನೆಯೇ ಘೋರ ಅಪರಾಧವೇ ಎನ್ನುವ ಪ್ರಶ್ನೆ ಸಹ ಉದ್ಭವವಾಗುತ್ತದೆ.
ಇದನ್ನು ಇಲ್ಲಿ ಪ್ರಸ್ತಾಪ ಮಾಡುತ್ತಿರುವ ಉದ್ದೇಶವೆಂದರೆ, ಎಷ್ಟೋ ದಶಕಗಳ ಹಿಂದೆ ಮಾಡಿಟ್ಟ ನಮ್ಮ ಕಾನೂನುಗಳು ಕಾಲಕ್ಕೆ ತಕ್ಕಂತೆ ತಿದ್ದುಪಡಿಯಾಗುವುದೇ ಇಲ್ಲ. ಓಬಿರಾಯನ ಕಾಲದ ಕಾನೂನಿನ ಅಂಶಗಳಿಗೇ ಕಟ್ಟುಬೀಳಬೇಕಾದ ಸನ್ನಿವೇಶ ಇದೆ. ಹೀಗಾಗಿ ಈಗ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಮನಸ್ಸು ಮಾಡಿದಂತೆ ಉಳಿದ ಕಾಯ್ದೆಗಳಿಗೂ ತಂದರೆ ಒಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.