ADVERTISEMENT

‘ಅಗತ್ಯ ಬಿದ್ದರೆ ಬಿಕಿನಿಯೂ ಓಕೆ’

ರಮೇಶ ಕೆ
Published 13 ಜೂನ್ 2017, 19:30 IST
Last Updated 13 ಜೂನ್ 2017, 19:30 IST
‘ಅಗತ್ಯ ಬಿದ್ದರೆ ಬಿಕಿನಿಯೂ ಓಕೆ’
‘ಅಗತ್ಯ ಬಿದ್ದರೆ ಬಿಕಿನಿಯೂ ಓಕೆ’   

ಹಾಸನ ಮೂಲದ ರೂಪದರ್ಶಿ ಕಾವ್ಯಾ ಸೋನು ಇತ್ತೀಚೆಗೆ ನಡೆದ ಮಿಸ್‌ ಇಂಡಿಯಾ ಸೌತ್‌ ಫ್ಯಾಷನ್‌ ಷೋನಲ್ಲಿ ‘ಮಿಸ್‌ ಕೇರಳ’ ಪ್ರಶಸ್ತಿ ಮುಡಿಗೇರಿಸಿಕೊಂಡವರು. ಯಾವುದಾದರೂ ಪ್ರಾಜೆಕ್ಟ್‌ಗೆ ಅಗತ್ಯ ಬಿದ್ದರೆ ಬಿಕಿನಿ ಧರಿಸಲೂ ಹಿಂದೇಟು ಹಾಕುವುದಿಲ್ಲ ಎಂಬುದು ಅವರ ದಿಟ್ಟ ನುಡಿ.

5.7 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿರುವ ಸೋನು ಮಾಡೆಲಿಂಗ್‌ ವೃತ್ತಿಗೆ ಬಂದು ಎರಡು ವರ್ಷಗಳಷ್ಟೇ ಆಗಿವೆ. ಮೊದಲ ಬಾರಿಗೆ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ‘ಮಿಸ್‌ ಸೌತ್‌ ಇಂಡಿಯಾ’ ಸ್ಪರ್ಧೆಯಲ್ಲೇ ‘ಬೆಸ್ಟ್‌ ಮಾಡೆಲ್‌’ ಪ್ರಶಸ್ತಿಯನ್ನು ಪಡೆದದ್ದು ಸೋನು ಆತ್ಮವಿಶ್ವಾಸಕ್ಕೆ ಸಾಕ್ಷಿ.

‘ಬಿಬಿಎಂ ಪದವಿ ಮುಗಿಸಿದ ಮೇಲೆ ಕೆಲಸಕ್ಕೆಂದು ಬೆಂಗಳೂರಿಗೆ ಬಂದೆ. ಸದ್ಯ ಇಂದಿರಾನಗರದಲ್ಲಿ ನೆಲೆಸಿದ್ದೇನೆ. ಸಿಲ್ವರ್‌ ಸ್ಟಾರ್‌ ಫ್ಯಾಷನ್‌ ಸ್ಕೂಲ್‌ ಸೇರಿ ಮೂರು ತಿಂಗಳು ಗ್ರೂಮಿಂಗ್‌ ತರಬೇತಿ ಪಡೆದೆ. ಮೊದಲ ಷೋನಲ್ಲಿಯೇ ಉತ್ತಮ ಪ್ರದರ್ಶನ ನೀಡಿದೆ’ ಎನ್ನುತ್ತಾರೆ ಕಾವ್ಯಾ.

ADVERTISEMENT

ಅಂತರರಾಷ್ಟ್ರೀಯ ಕಂಪೆನಿಗಳಿಗೆ ಮಾಡೆಲ್‌ ಆಗಿ ಮಿಂಚಿರುವುದು ಅವರ ಹೆಗ್ಗಳಿಕೆ. ಉಡುಪು ಕಂಪೆನಿಗಳ ಜಾಹೀರಾತಿಗಾಗಿ ಬಿಕಿನಿಯನ್ನೂ ಧರಿಸಿದ್ದಾರೆ. ವಿನ್ಯಾಸಕರು ಹೇಳಿದಂತೆ ಕೇಳುತ್ತೇನೆ ಎನ್ನುವ ಕಾವ್ಯಾ ಮಾಡೆಲಿಂಗ್‌ನಲ್ಲಿ ಹೇಗಿರಬೇಕು ಎಂಬ ಬಗ್ಗೆ ಹೇಳುವುದಿಷ್ಟು...

‘ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಮೇಲೆ ಇಂತಹುದೇ ಬಟ್ಟೆ ಹಾಕುವೆ, ಬಿಕಿನಿ ಒಲ್ಲೆ ಎಂದು ಹೇಳಬಾರದು. ಅಗತ್ಯವಿದ್ದರೆ ಟು ಪೀಸ್‌ ಹಾಕುವುದರಲ್ಲಿ ತಪ್ಪೇನು? ಇದಕ್ಕೆ ನಮ್ಮ ಮನೆಯಲ್ಲಿಯೂ ಇದಕ್ಕೆ ವಿರೋಧವಿಲ್ಲ. ವೃತ್ತಿಯನ್ನು ಗೌರವಿಸಬೇಕು ಅಷ್ಟೇ’.

ಆಗಸ್ಟ್‌ನಲ್ಲಿ ನಡೆಯಲಿರುವ ‘ಮಿಸ್‌ ಇಂಡಿಯಾ ಗಾರ್ಜಿಯಸ್‌’ ಸ್ಪರ್ಧೆಗೆ ತಯಾರಾಗುತ್ತಿರುವ ಕಾವ್ಯಾ, ಮಾಡೆಲಿಂಗ್‌ ಅನ್ನು ಪೂರ್ಣ ಪ್ರಮಾಣದ ವೃತ್ತಿಯನ್ನಾಗಿ ಸ್ವೀಕರಿಸಿದ್ದಾರೆ. ಜೊತೆಗೆ ಉತ್ತಮ ಅವಕಾಶ ಸಿಕ್ಕರೆ ಬೆಳ್ಳಿತೆರೆಯಲ್ಲೂ ಮಿಂಚುವ ಆಸೆ ಅವರಿಗಿದೆ.

‘ನನಗೆ ಇಷ್ಟವಾಗುವ ಕಥೆ ಸಿಕ್ಕರೆ ಸಿನಿಮಾದಲ್ಲಿ ಅಭಿನಯಿಸುತ್ತೇನೆ. ಪುನೀತ್ ರಾಜ್‌ಕುಮಾರ್‌ ನನ್ನಿಷ್ಟದ ಹೀರೊ. ಅವರೊಂದಿಗೆ ನಟಿಸುವ ಅವಕಾಶ ಸಿಕ್ಕರೆ ಇನ್ನೂ ಒಳ್ಳೆಯದು’ ಎಂದು ನಗುತ್ತಾರೆ.

‘ಒರಾಯನ್‌ ಮಾಲ್‌, ಫೀನಿಕ್ಸ್‌ ಮಾರ್ಕೆಟ್‌ಸಿಟಿ, ಯು.ಬಿ. ಸಿಟಿಯಲ್ಲಿ ಶಾಪಿಂಗ್‌ ಮಾಡುತ್ತೇನೆ. ಬಿಡುವಿನ ವೇಳೆಯಲ್ಲಿ ಟಿ.ವಿ. ನೋಡುತ್ತೇನೆ, ಸಂಗೀತ  ಆಲಿಸುತ್ತೇನೆ’ ಎಂದು ತಮ್ಮ ಹವ್ಯಾಸದ ಬಗ್ಗೆ ಹೇಳುತ್ತಾರೆ ಕಾವ್ಯಾ.

**

ಮೊದಲ ಸಲ ರ‍್ಯಾಂಪ್ ಮೇಲೆ ಹತ್ತಿದಾಗ ನರ್ವಸ್‌ ಆಗಲಿಲ್ಲ. ಗ್ರೂಮಿಂಗ್‌ ತರಬೇತಿ ಪಡೆದಿದ್ದೆ. ಅಲ್ಲದೆ ಆತ್ಮವಿಶ್ವಾಸದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡು ಯಶಸ್ವಿಯಾದೆ
–ಕಾವ್ಯಾ ಸೋನು,
ರೂಪದರ್ಶಿ

**

ಮೈಮಾಟಕ್ಕಾಗಿ...
* ಬೆಳಿಗ್ಗೆ ಒಂದು ಗಂಟೆ ಬಿರುಸಿನ ನಡಿಗೆ
* ಒಂದು ಗಂಟೆ ಯೋಗ, ಸಮಯ ಸಿಕ್ಕರೆ 45 ನಿಮಿಷ ಜಿಮ್‌ನಲ್ಲಿ ವರ್ಕೌಟ್‌
* ಮೋಸಂಬಿ, ಸೇಬು, ಕಿತ್ತಳೆ, ಸೌತೇಕಾಯಿ ಇಷ್ಟ
* ಬೆಳಿಗ್ಗೆ ಪ್ರೊಟೀನ್ ಶೇಕ್‌, ಚಪಾತಿ, ಮಧ್ಯಾಹ್ನ ಹಾಗೂ ರಾತ್ರಿ ಮುದ್ದೆ ಊಟ
* ಹೆಚ್ಚು ನೀರು ಸೇವನೆ
* ತೂಕ– 49 ಕೆ.ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.