ADVERTISEMENT

ತುಟಿಗೂ ಕಣ್ರೆಪ್ಪೆಗೂ ಚಿತ್ತಾರ ಬರೆದು...

ಹರವು ಸ್ಫೂರ್ತಿ
Published 16 ಜುಲೈ 2017, 19:30 IST
Last Updated 16 ಜುಲೈ 2017, 19:30 IST
ತುಟಿಗೂ ಕಣ್ರೆಪ್ಪೆಗೂ ಚಿತ್ತಾರ ಬರೆದು...
ತುಟಿಗೂ ಕಣ್ರೆಪ್ಪೆಗೂ ಚಿತ್ತಾರ ಬರೆದು...   

ನಮ್ಮ ಫ್ಯಾಷನ್ ಲೋಕದಲ್ಲಿ ಪಾಶ್ಚಿಮಾತ್ಯದ ಪ್ರಭಾವ ಹಚ್ಚು. ಐ ಶ್ಯಾಡೊ, ಲಿಪ್‌ಸ್ಟಿಕ್‌ನಲ್ಲಿ ಆಗುತ್ತಿರುವ ಹೊಸ ಬಗೆಯ ಟ್ರೆಂಡ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿ ಅದನ್ನು ಕನ್ನಡದ ನೆಲದಲ್ಲಿ ಪ್ರಯೋಗ ಮಾಡುತ್ತಾ ಬಂದಿದ್ದಾರೆ ಬೆಂಗಳೂರು ಮೂಲದ ಉಪನ್ಯಾಸಕಿ ಚಿತ್ರಶ್ರೀ ಹರ್ಷ.

ತುಟಿ, ಕಣ್ಣ ರಪ್ಪೆಗೆ ಬಣ್ಣ ಹಚ್ಚುವ ವಿಧಾನದಲ್ಲಿ ಬದಲಾಗುತ್ತಿರುವ ಟ್ರೆಂಡ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಗಮನಿಸುತ್ತಿದ್ದ ಚಿತ್ರಶ್ರೀ, ಈ ಎಲ್ಲಾ ಕ್ರಿಯಾಶೀಲ ಕಲೆಯನ್ನು ಮಾಡಬೇಕು ಎನಿಸಿ, ಒಂದು ವರ್ಷದಿಂದ ಲಿಪ್ ಆರ್ಟ್‌ ಮತ್ತು ಐಶ್ಯಾಡೊ ಆರ್ಟ್‌ ಮಾಡುತ್ತಿದ್ದಾರೆ.

ಕಪ್ಪು ಬಣ್ಣವೇ ಮೋಹಕ:

ADVERTISEMENT

ಹವಳದಂಥ ತುಟಿಗಳಿರಬೇಕು ಎಂದು ಆಸೆಪಡುವುದು ಸಹಜ. ಆದರೆ ಇಂದು ಕಂದು ಬಣ್ಣ, ಕಪ್ಪು ತುಟಿಗಳು ಮೋಹಕ ಎನ್ನುತ್ತಿದ್ದಾರೆ ಫ್ಯಾಷನ್‌ ಪರಿಣಿತರು.

ಹಲವು ಮಾಡೆಲ್‌ಗಳು ತುಟಿಗಳನ್ನು ಕಂದುಬಣ್ಣಕ್ಕೆ ತರುವ ಕ್ರೀಂಗಳನ್ನು ಬಳಸುತ್ತಾರಂತೆ. ಡೀಪ್ ಬ್ರೌನ್, ಕಪ್ಪು ಬಣ್ಣಗಳನ್ನು ಬಳಸಿ ವಿವಿಧ ಶೇಡ್‌ಗಳನ್ನು ತುಟಿಯ ಮೇಲೆ ಮೂಡಿಸುಚ ಮೂಲಕ ಚಿತ್ರಶ್ರೀ ಹೊಸ ಪ್ರಯೋಗ ಮಾಡುತ್ತಿದ್ದಾರೆ. ತುಟಿಯ ಅಂಚುಗಳಿಗೆ ಕಪ್ಪು ಬಣ್ಣ ಹಚ್ಚಿ ಮಧ್ಯೆ ಕಂದು ಬಣ್ಣ ತುಂಬಿ ಶೇಡ್‌ಗಳನ್ನು ಮೂಡಿಸುತ್ತಾರೆ. ಇದು ನಿತ್ಯ ಬಳಕೆಗೆ ಹೊಂದದಿದ್ದರೂ ಪಾರ್ಟಿಗಳಿಗೆ, ಫ್ಯಾಷನ್‌ ಷೋಗಳಿಗೆ ವಿಭಿನ್ನವಾಗಿ ಕಾಣುತ್ತದೆ.

ಕಣ್ಣುಗಳಿಗೂ ‘ಸ್ಮೋಕಿ ಐ’ ವಿನ್ಯಾಸ ಟ್ರೆಂಡ್‌ನಲ್ಲಿದ್ದು, ಗಾಢವಾದ ಕಾಡಿಗೆ, ಐ ಲೈನರ್‌ ಹಚ್ಚಿ, ಕಣ್ಣಿನ ಸುತ್ತಾ ಕಪ್ಪು ಬಣ್ಣದ ಶೇಡ್‌ ಮಾಡಲಾಗುತ್ತದೆ. ಇದು ಈ ನಡುವೆ ಹೆಚ್ಚು ಜನಪ್ರಿಯವಾಗಿದ್ದು, ಎಲ್ಲರ ನೆಚ್ಚಿನ ವಿನ್ಯಾಸವಾಗಿದೆ.

ಮ್ಯಾಟ್ರಿಕ್ಸ್‌ ಕಲೆ:

ಇದು ಎಳೆ ರಂಗೋಲಿ ಬಿಟ್ಟಂತೆ. ರೇಖೆಗಳ ಮೂಲಕ ಕಲಾತ್ಮಕವಾಗಿ ಕಣ್ಣು, ತುಟಿಯನ್ನು ಅಲಂಕಾರ ಮಾಡುವುದು ಮ್ಯಾಟ್ರಿಕ್ಸ್‌ ಕಲೆ. ಕಾಲೇಜು ಯುವತಿಯರ ನೆಚ್ಚಿನ ವಿನ್ಯಾಸ. ಹೆಚ್ಚು ಬಣ್ಣವಿಲ್ಲದೆ, ಸಣ್ಣ ರೇಖಾ ವಿನ್ಯಾಸದ ಮೂಲಕ ಕಣ್ಣು– ತುಟಿ ಮುದ್ದಾಗಿ ಕಾಣುವಂತೆ ಮಾಡುತ್ತದೆ. ಐ ಲೈನರ್‌ನಿಂದ ರೇಖೆ ಬಿಡಿಸಿದ ನಂತರ ಅಂಚಿನಲ್ಲಿ ಹೃದಯದಾಕಾರ, ಪಕ್ಷಿ, ದುಂಬಿ ಹೀಗೆ ಚಿತ್ರ ಬಿಡಿಸುತ್ತಾರೆ ಚಿತ್ರಶ್ರೀ.

ತುಟಿ, ಕಣ್ಣಿನ ವಿನ್ಯಾಸ ಮಾಡುವವರಿಗೆ ಸಲಹೆ:

* ಫೇಸ್‌ ಪೇಂಟ್‌, ಬಣ್ಣದ ಐ ಲೈನರ್‌, ಲಿಪ್‌ಸ್ಟಿಕ್‌ ಶೃಂಗಾರ್ ಕುಂಕುಮ, ಹೀಗೆ ಚರ್ಮಕ್ಕೆ ಹಾನಿಯಲ್ಲದ ಬಣ್ಣಗಳನ್ನು ಬಳಸಬೇಕು.

* ಮಕ್ಕಳ ತುಟಿಗೆ ಬಣ್ಣ ಹಚ್ಚುವ ಮುನ್ನ ಹೆಚ್ಚಿನ ಕಾಳಜಿ ಅವಶ್ಯಕ, ತಿನ್ನುವಾಗ, ಕುಡಿಯುವಾಗ ತುಟಿ ಬಣ್ಣವೂ ಹೊಟ್ಟೆ ಸೇರಬಹುದು. ಎಡಿಬಲ್ ಬಣ್ಣಗಳು ಲಭ್ಯವಿದ್ದು ಅವುಗಳನ್ನು ಬಳಸಬಹುದು.

* ಚರ್ಮದ ಮೇಲೆ ಬಳಸಬಹುದಾದ ಗ್ಲಿಟರ್‌ಗಳನ್ನು ಬಳಕೆ ಮಾಡಿದರೆ ಕಣ್ಣಿನ ಅಂಚಿನಿಂದ ಸ್ವಲ್ಪ ದೂರ ಹಚ್ಚಿಕೊಳ್ಳಬೇಕು.

* ಫ್ಲೋರಲ್‌ ಆರ್ಟ್‌, ರೈನ್‌ ಬೋ ಆರ್ಟ್‌ ಮಾಡುವಾಗ ಹೆಚ್ಚಿನ ಬಣ್ಣಗಳ ಬಳಕೆ ಮಾಡುತ್ತೇವೆ, ಹಾಗಾಗಿ ಇದು ದೊಡ್ಡದಿರಬೇಕಾಗಿಲ್ಲ. ಸಣ್ಣದಾಗಿ ಚಿತ್ತಾರ ಮಾಡಿದರೆ ಚೆನ್ನ.

***

ಮಳೆಗಾಲದ ಟ್ರೆಂಡ್

ಮಳೆಗಾಲದ ಟ್ರೆಂಡ್‌ ಎಂದರೆ ನೀಲಿ ಬಣ್ಣದ ವಿನ್ಯಾಸ. ಅದರಲ್ಲೂ ತುಟಿ ಅಂಚಿಗೆ ನೀಲಿ ಲಿಪ್‌ಲೈನರ್‌ ಬರೆದು, ಒಳಗೆ ಪಿಂಕ್ ಬಣ್ಣ ತುಂಬಿ ಎರಡು ಬಣ್ಣವನ್ನೂ ಬೆರೆಸಿ ಶೇಡ್‌ ಸೃಷ್ಟಿಸಬೇಕು. ಇದು ಮಳೆಗಾಲಕ್ಕೆ ಬ್ರೈಟ್‌ ಲುಕ್‌ ನೀಡುತ್ತದೆ. ಕಣ್ಣಿಗೂ ನೀಲಿ ಬಣ್ಣದ ಅಲಂಕಾರ ಮಾಡಿಕೊಂಡರೆ ಲಿಪ್‌ಸ್ಟಿಕ್‌ನೊಂದಿಗೆ ಹೊಂದುತ್ತದೆ. ಐಶ್ಯಾಡೊ ಹಾಕಿಕೊಳ್ಳುವಾಗ ಕಣ್ಣಿನ ಅಂಚಿಗೆ ಗಾಢ ನೀಲಿಯ ಲೈನರ್‌ ಬರೆದು, ರೆಪ್ಪೆ ಮೇಲೆ ಆಕಾಶ ನೀಲಿಯ ಶ್ಯಾಡೊ ಹಾಕಿ, ಅಂಚಿಗೆ ಕಪ್ಪು ಬಣ್ಣದ ಶೇಡ್‌ ಮಾಡಿದರೆ ಸೂಕ್ತವಾಗಿ ಹೊಂದುತ್ತದೆ. ಇದು ಮಳೆಗಾಲದ ಕ್ಲಾಸಿಕ್ ಲುಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.