ADVERTISEMENT

ತೆಳ್ಳಗಾಗಬೇಕೇ? ಹಾಗಿದ್ದರೆ ಚೆನ್ನಾಗಿ ತಿನ್ನಿ!

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2018, 21:01 IST
Last Updated 22 ಏಪ್ರಿಲ್ 2018, 21:01 IST
ತೆಳ್ಳಗಾಗಬೇಕೇ? ಹಾಗಿದ್ದರೆ ಚೆನ್ನಾಗಿ ತಿನ್ನಿ!
ತೆಳ್ಳಗಾಗಬೇಕೇ? ಹಾಗಿದ್ದರೆ ಚೆನ್ನಾಗಿ ತಿನ್ನಿ!   

ದೇಹದ ತೂಕ ಕಡಿಮೆ ಮಾಡಿಕೊಂಡು ತೆಳ್ಳಗಾಗಬೇಕು ಎಂದು ಬಯಸುವವರು ಸಾಮಾನ್ಯವಾಗಿ ಕಡಿಮೆ ಆಹಾರ ಸೇವಿಸುವುದನ್ನು ರೂಢಿ ಮಾಡಿಕೊಳ್ಳುತ್ತಾರೆ ಇಲ್ಲವೇ ಕೆಲವು ಆಹಾರಗಳನ್ನು ವರ್ಜಿಸುತ್ತಾರೆ. ಆದರೆ, ತೆಳ್ಳಗಾಗಬೇಕು ಎಂದು ಬಯಸುವವರು ಚೆನ್ನಾಗಿ ತಿನ್ನಬೇಕು ಅಂತಾರೆ ಆಹಾರ ತಜ್ಞರು.

ಕಡಿಮೆ ಆಹಾರ ಸೇವಿಸುವುದು ಇಲ್ಲವೇ ಕೆಲ ಆಹಾರ ಪದಾರ್ಥಗಳನ್ನು ವರ್ಜಿಸುವುದರಿಂದ ಅಪೌಷ್ಟಿಕತೆ ಮತ್ತು ಬೊಜ್ಜು ಸಮಸ್ಯೆ ಉಂಟಾಗಬಹುದು. ಊಟ, ತಿಂಡಿ ಬಿಟ್ಟು ಬರೀ ಬಿಸ್ಕತ್, ಸ್ನ್ಯಾಕ್ಸ್‌ನಂಥ ಆಹಾರ ಸೇವಿಸಿದಾಗ ದೇಹದಲ್ಲಿ ಬೊಜ್ಜು ಸುಲಭವಾಗಿ ಶೇಖರವಾಗುತ್ತದೆ. ಹಾಗಾಗಿ, ತೆಳ್ಳಗಾಗ ಬಯಸುವವರು ಕಡಿಮೆ ಕ್ಯಾಲೊರಿಯ ಆಹಾರವನ್ನು ಹೊಟ್ಟೆತುಂಬಾ ತಿನ್ನಬೇಕು ಎಂದು ಪೆನ್ ಸ್ಟೇಟ್ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ. ವಿವಿಧ ಕ್ಯಾಲೊರಿಯುಕ್ತ ಆಹಾರ ಸೇವಿಸುವ 100 ಮಹಿಳೆಯರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಜನರು ತಮ್ಮ ತಟ್ಟೆಯಲ್ಲಿ ಜಾಸ್ತಿ ಆಹಾರವಿದ್ದಾಗ ಅದನ್ನು ಕಡಿಮೆ ಮಾಡುವ ಗೋಜಿಗೆ ಹೋಗದೇ ಅಷ್ಟೂ ಆಹಾರವನ್ನು ತಿನ್ನಲು ತೊಡಗುತ್ತಾರೆ. ಅದು ಕಡಿಮೆ ಕ್ಯಾಲೊರಿಯದ್ದೇ ಅಥವಾ ಹೆಚ್ಚು ಕ್ಯಾಲೊರಿಯುಳ್ಳ ಆಹಾರವೇ ಎಂಬುದನ್ನೂ ಯೋಚಿಸುವುದಿಲ್ಲ. ಹಾಗಾಗಿ, ತೆಳ್ಳಗಾಗಬೇಕು ಎಂದು ಬಯಸುವವರು ಕಡಿಮೆ ಕ್ಯಾಲೊರಿಯ ಆಹಾರವನ್ನು ಹೆಚ್ಚು ತಿನ್ನಬೇಕು. ಹೆಚ್ಚು ಕ್ಯಾಲೊರಿಯ ಆಹಾರವನ್ನು ಕಡಿಮೆ ತಿನ್ನಬೇಕು. ಆಗ ಅವರು ದಪ್ಪಗಾಗುವುದಿಲ್ಲ ಮತ್ತು ತೂಕವೂ ಹೆಚ್ಚುವುದಿಲ್ಲ. ಅಷ್ಟೇ ಅಲ್ಲ ಅವರಲ್ಲಿ ಅಪೌಷ್ಟಿಕತೆಯೂ ಕಾಣಿಸಿಕೊಳ್ಳುವುದಿಲ್ಲ. ಆಗ ಅವರ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಕೂಡಾ ಆರೋಗ್ಯಕರವಾಗಿರಬಲ್ಲದು.

ಹೀಗೆ ತಿನ್ನುವಾಗ ನಮ್ಮ ಮಿದುಳಿಗೆ ನಾವು ಹೆಚ್ಚು ತಿನ್ನುವುದಿಲ್ಲ ಎನ್ನುವ ಸಂದೇಶವನ್ನು ರವಾನಿಸಿದರೆ, ಮಿದುಳು ಹೆಚ್ಚು ಆಹಾರ ಸೇವಿಸದಂತೆ ನಮ್ಮನ್ನು ತಡೆಯುತ್ತದೆ ಎಂದು ಸಂಶೋಧಕರು ಅಧ್ಯಯನದಲ್ಲಿ ಪತ್ತೆ ಹಚ್ಚಿದ್ದಾರೆ.

ADVERTISEMENT

ಈ ಅಧ್ಯಯನವನ್ನು ಪ್ರತಿಪಾದಿಸಿರುವ ಮುಂಬೈನ ನಾನಾವತಿ ಆಸ್ಪತ್ರೆಯ ಪೌಷ್ಟಿಕ ವಿಭಾಗದ ತಜ್ಞರಾದ ಉಷಾಕಿರಣ್ ಸಿಸೊಡಿಯಾ, ಕರಿಷ್ಮಾ ಚಾವ್ಲಾ ಇದಕ್ಕಾಗಿ ಕೆಲ ಟಿಪ್ಸ್‌ಗಳನ್ನು ಕೂಡಾ ನೀಡಿದ್ದಾರೆ.

ಆಹಾರದಲ್ಲಿ ಮೊಸರಿನ ಬದಲು ಲಸ್ಸಿ ಬಳಸಿ

ಹೆಚ್ಚು ಕರಿದ ತರಕಾರಿಗಳಿಗಿಂತ ಹಬೆಯಲ್ಲಿ ಬೇಯಿಸಿದ ತರಕಾರಿಗಳನ್ನು ತಿನ್ನಿ

ಸಿಹಿ ತಿನ್ನಬೇಕು ಎನಿಸಿದಾಗ ಖರ್ಜೂರ ತಿನ್ನಿ

ಸಲಾಡ್‌ಗೆ ಮೊಸರು, ನಿಂಬೆ, ವಿನಿಗರ್ ಬೆರೆಸಿ ತಿನ್ನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.