ADVERTISEMENT

ದುಪಟ್ಟಾ ಬಗೆಬಗೆ ವೈಭವ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST
ಭುಜದಿಂದ ಸೊಂಟದವರೆಗೆ
ಭುಜದಿಂದ ಸೊಂಟದವರೆಗೆ   

‘ಲಾಲ್‌ ದುಪ್ಪಟ್ಟಾ ಉಡ್‌ಗಯಾ ರೇ’, ‘ಆ ರಂಗ್‌ ದೇ ದುಪ್ಪಟ್ಟಾ ಮೇರಾ’, ‘ದುಲೆ ಕಿ ಸಾಲಿಯೋ ಓ ಹರೇ ದುಪ್ಪಟ್ಟಾವಾಲಿಯೋ’.... ಹೀಗೆ ದುಪ್ಪಟ್ಟಾದ ಕುರಿತೇ ಹಲವು ಹಾಡುಗಳು ಹೆಣೆಯಲ್ಪಟ್ಟಿವೆ.  ಭಾರತೀಯ ಸಾಂಪ್ರದಾಯಿಕ ಉಡುಗೆಗಳಲ್ಲಿ ಒಂದು ಭಾಗವಾದ ದುಪ್ಪಟ್ಟಾ ಬಹಳ ವರ್ಷಗಳಿಂದ ಮಹತ್ವ ಕಾಯ್ದುಕೊಂಡು ಬಂದಿದೆ.

ಚೂಡಿದಾರವಿರಲಿ, ಲೆಹಂಗಾವೇ ಇರಲಿ ಅದರೊಂದಿಗೆ ದುಪಟ್ಟಾ ಇದ್ದರೇನೇ ಚಂದ. ಉಡುಪುಗಳು ಸರಳವಾಗಿದ್ದರೂ ದುಪ್ಪಟ್ಟ ಅದರ ಚೆಲುವು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಮೇಲು ಹೊದಿಕೆ ಎಂದು ಕರೆಸಿಕೊಳ್ಳುವ ಈ ದುಪ್ಪಟ್ಟಾ ಬಿರುಬಿಸಿಲಿನಲ್ಲಿ ನಡೆದಾಡುವಾಗ ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳಲು, ಚಳಿಗಾಳಿಯಿಂದ ದೇಹವನ್ನು ಕಾಪಾಡಿಕೊಳ್ಳಲು, ದೂಳಿನಿಂದ ತಲೆ-ಮುಖವನ್ನು ರಕ್ಷಿಸಲು ನೆರವಾಗುತ್ತದೆ. ಅಲ್ಲದೆ ಹೊರಗಡೆ ಓಡಾಡುವಾಗ ಮಹಿಳೆಯರು ಕತ್ತಿನ ಸುತ್ತ ದುಪ್ಪಟ್ಟಾ ಹೊದ್ದುಕೊಳ್ಳುವುದರಿಂದ ಸರಗಳ್ಳರಿಂದ ರಕ್ಷಣೆಯನ್ನೂ ಪಡೆಯಬಹುದು.  ಹೀಗೆ ನಾನಾ ಬಳಕೆಗೆ ನೆರವಾಗುವ ದುಪ್ಪಟ್ಟಾವನ್ನು ನಾನಾ ಬಗೆಗಳಲ್ಲೂ ಧರಿಸಬಹುದು. ಹೇಗೆ ಅಂತಿರಾ...


ಸಮಾರಂಭಗಳಿಗಾಗಿ

ADVERTISEMENT

* ಭುಜದಿಂದ ತೋಳಿನವರೆಗೆ: ಚೂಡಿದಾರ ಅಥವಾ ಲೆಹೆಂಗಾದ ನೆಕ್‌ಗೆ ವಿಶೇಷವಾದ ವಿನ್ಯಾಸ ಮಾಡಿಕೊಂಡಿದ್ದರೆ ವೇಲನ್ನು ಪೂರ್ತಿಯಾಗಿ ಹೊದ್ದುಕೊಳ್ಳುವುದರಿಂದ ಕುಸುರಿ ಕಲೆ ಮರೆಮಾಚುತ್ತದೆ. ಹಾಗಾಗಿ ಬಲ ಬದಿ ಭುಜಕ್ಕೆ ದುಪ್ಪಟ್ಟವನ್ನು ಪಿನ್‌ ಮಾಡಿ. ಎಡಕೈಯಯಲ್ಲಿ ಅದನ್ನು ಹಿಡಿದುಕೊಳ್ಳಬೇಕು. ಹೀಗೆ ವೇಲ್‌ ಹಾಕಿಕೊಳ್ಳುವುದರಿಂದ ಉಡುಪಿನ ವಿನ್ಯಾಸ ಕಾಣುತ್ತದೆ.

* ಮುಂದಕ್ಕೆ ಇಳಿಬಿಡಿ: ಕೆಲವೊಂದು ವೇಲ್‌ಗಳು ಪಿನ್‌ ಹಾಕದಿದ್ದರೆ ಮಾತೇ ಕೇಳುವುದಿಲ್ಲ. ಹೇಗೆ ಹಾಕಿಕೊಂಡರೂ ಜಾರಿ ಬಿಡುತ್ತದೆ. ಅದಕ್ಕಾಗಿ ಹಲವರು ಅದನ್ನು ಮುಂದಕ್ಕೆ ಇಳಿಬಿಡುತ್ತಾರೆ. ಇದೊಂದು ಫ್ಯಾಷನ್‌ ಕೂಡ ಹೌದು. ಕಾಟನ್‌, ತೆಳುವಾದ ವೇಲ್‌ಗಳನ್ನು ಈ ರೀತಿ ಬಳಸಿದರೆ ಚಂದ ಕಾಣುತ್ತದೆ.

* ಕುತ್ತಿಗೆ ಸುತ್ತ ಸುತ್ತಿಕೊಳ್ಳಿ: ಹೆಚ್ಚು ಪ್ರಚಲಿತದಲ್ಲಿರುವ ಟ್ರೆಂಡ್‌ ಇದು. ಶರ್ಟ್‌, ಕುರ್ತಾಗಳಿಗೂ ಹೀಗೆ ಧರಿಸುವುದು ಟ್ರೆಂಡ್‌ ಆಗಿದೆ. ಕುತ್ತಿಗೆಗೆ ಸುತ್ತಿ, ಎರಡು ಬದಿಯಿಂದ ಇಳಿ ಬಿಡುವುದು ಕ್ಯಾಶುವಲ್‌ ನೋಟ ನೀಡುತ್ತದೆ.

* ಭುಜದಿಂದ ಸೊಂಟದವರೆಗೆ: ಈ ಶೈಲಿಯಲ್ಲಿ ಡುಪಟ್ಟಾದ ಮೊದಲ ತುದಿಯನ್ನು ಸೊಂಟಕ್ಕೆ ಪಿನ್‌ ಮಾಡಬೇಕು. ಇನ್ನೊಂದು ಬದಿಯನ್ನು ಭುಜದಿಂದ ಹಾಗೆಯೇ ಇಳಿಬಿಡಬೇಕು. ಭುಜದ ಮೇಲೆ ಪಿನ್ ಮಾಡಿದೆ ನಿರ್ವಹಣೆ ಸುಲಭ.


ಕೇಪ್‌ ವಿನ್ಯಾಸ

* ಸೆರಗಿನ ಸೊಬಗು: ಲೆಹೆಂಗಾ ತೊಟ್ಟಿದ್ದರೆ ಅದರ ದುಪ್ಪಟ್ಟಾ ಒಂದು ತುದಿಯನ್ನು ಲೆಹೆಂಗಾದ ಲಂಗಕ್ಕೆ ಒಂದು ಸುತ್ತು ಸುತ್ತಿ. ಮತ್ತೊಂದು ತುದಿಯನ್ನು ಸೀರೆಯ ಸೆರಿಗೆಯ ರೀತಿಯಲ್ಲಿ ಹಾಕಿಕೊಳ್ಳಿ. ಒಂದೇ ಲೆಹೆಂಗಾವನ್ನು ಹಲವು ಸಲ ಬಳಸುವಾಗ ದುಪ್ಪಟ್ಟಾವನ್ನು ಬಗೆಬಗೆಯಾಗಿ ಬಳಸುವುದರಿಂದ ಅದರ ನೋಟವೂ ಬದಲಾಗುತ್ತದೆ.

* ಕೇಪ್‌ ವಿನ್ಯಾಸ: ಇತ್ತೀಚೆಗಷ್ಟೇ ಮನೀಶ್‌ ಮಲ್ಹೋತ್ರ ಅವರ ಶೋನಲ್ಲಿ ಈ ರೀತಿ ಶಾಲ್‌ ಹೊದ್ದ ಲೆಹೆಂಗಾ ಮೆಚ್ಚುಗೆ ಗಳಿಸಿತು. 2018ರ ಫ್ಯಾಷನ್‌ ಟ್ರೆಂಡ್‌ನಲ್ಲಿ ಇದು ಜನಪ್ರಿಯತೆ ಪಡೆದಿದೆ. ಭುಜದ ಅಗಲಕ್ಕೂ ಇದು ಆವರಿಸಿಕೊಳ್ಳುತ್ತದೆ. ಭುಜದಿಂದ ದುಪ್ಪಟ್ಟಾವನ್ನು ಮುಂದಕ್ಕೆ ಇಳಿಬಿಡಲಾಗುತ್ತದೆ.

* ಸಮಾರಂಭಗಳಿಗಾಗಿ:  ಅದ್ದೂರಿ ಸಮಾರಂಭಗಳಲ್ಲಿ ಹೀಗೆ ಹಾಕಿಕೊಳ್ಳಬಹುದು. ದುಪ್ಪಟ್ಟಾ ಅದ್ದೂರಿಯಾಗಿದ್ದರೆ ಚೆನ್ನಾಗಿ ಕಾಣುತ್ತದೆ. ಸೀರೆಯ ಸೆರಗಿನ ರೀತಿ ಒಂದು ಬದಿಯ ಶಾಲನ್ನು ಹಾಗೆಯೇ ಬಿಡಬೇಕು. ಮತ್ತೊಂದು ಬದಿಯನ್ನು ಲೆಹೆಂಗಾ ಲಂಗದ ಹಿಂದೆ ಸಿಕ್ಕಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.