ADVERTISEMENT

‘ಫೈಟ್ ಮಾಡುವಾಸೆ’

ಪ್ರಜಾವಾಣಿ ವಿಶೇಷ
Published 25 ಏಪ್ರಿಲ್ 2018, 4:57 IST
Last Updated 25 ಏಪ್ರಿಲ್ 2018, 4:57 IST
ಸಂಗೀತಾ ಭಟ್
ಸಂಗೀತಾ ಭಟ್   

ಪ್ರೇಕ್ಷಕರು ನಿಮ್ಮನ್ನು ಮರೆತಿರುವರೆ?

ನನಗೇನೂ ಹಾಗೆ ಅನಿಸಲ್ಲ. ಈ ಹಿಂದೆ ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಆದರೆ, ನಾನೀಗ ಮಾಗಿದ ನಟಿ. ಹಾಗಾಗಿ, ವರ್ಷದಲ್ಲಿ ನನ್ನ ಎಷ್ಟು ಸಿನಿಮಾಗಳು ಬಿಡುಗಡೆಯಾಗುತ್ತವೆ ಎಂಬ ಬಗ್ಗೆ ಲೆಕ್ಕ ಹಾಕವುದಿಲ್ಲ.  ವರ್ಷಕ್ಕೆ ಒಂದೇ ಒಂದು ಸಿನಿಮಾದಲ್ಲಿ ನಟಿಸಿದರೂ ಅದು ಚೆನ್ನಾಗಿರಬೇಕು ಎಂದು ಬಯಸುತ್ತೇನೆ.

ನಿಮ್ಮ ಕೈಯಲ್ಲೀಗ ಎಷ್ಟು ಸಿನಿಮಾಗಳಿವೆ?

ADVERTISEMENT

ಈಗಷ್ಟೇ ಅಶ್ವತ್ಥ್‌ ಸ್ಯಾಮುಯೆಲ್ ಅವರ ‘ಅನುಕ್ತ’ ಸಿನಿಮಾ ಮುಗಿಸಿದ್ದೇನೆ. ವೇಣುಗೋಪಾಲ್ ಅವರ ಇನ್ನೂ ಹೆಸರಿಡದ ಚಿತ್ರ ಹಾಗೂ ವಿಜಯ್ ರಾಘವೇಂದ್ರ ಅವರೊಂದಿಗೆ ‘ಕಿಸ್ಮತ್’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ‘ಅಳಿದು ಉಳಿದವರು’  ಸಿನಿಮಾದಲ್ಲಿ ಗಾಯಕ ಅರವಿಂದ ಶಾಸ್ತ್ರಿ ಹಾಡಿರುವ ಹಾಡು ಇನ್ನೂ ಚಿತ್ರೀಕರಣವಾಗಬೇಕಿದೆ. ಒಟ್ಟಾರೆ ನನ್ನ ಕೈಲಿ ನಾಲ್ಕು ಸಿನಿಮಾಗಳಿವೆ.

ನಿಮ್ಮ ಸಿನಿಮಾಗಳ ಬಗ್ಗೆ ಹೇಳಿ...

‘ಅನುಕ್ತ’ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಅದರಲ್ಲಿ ನಾನು ಪೊಲೀಸ್ ಅಧಿಕಾರಿಯ ಪತ್ನಿ ಪಾತ್ರದಲ್ಲಿ ನಟಿಸಿದ್ದೇನೆ. ಖಿನ್ನತೆಯಿಂದ ಬಳಲುತ್ತಿರುವ ಪತ್ನಿ ಪಾತ್ರ ನನ್ನದು. ‘ಅಳಿದು ಉಳಿದವರು’ ಕೂಡಾ ಸಸ್ಪೆನ್ಸ್–ಥ್ರಿಲ್ಲರ್ ಸಿನಿಮಾ. ಇನ್ನೂ ಹೆಸರಿಡದ ಸಿನಿಮಾ ಕೊಲೆ ರಹಸ್ಯ ಭೇದಿಸುವ ಕಥೆಯನ್ನೊಳಗೊಂಡಿದೆ. ‘ಕಿಸ್ಮತ್’ ಮಲಯಾಳಂನ ‘ನೇರಂ’ ಸಿನಿಮಾದ ರಿಮೇಕ್.

ಇಷ್ಟೊಂದು ಥ್ರಿಲ್ಲರ್ ಸಿನಿಮಾಗಳಲ್ಲಿ ನಟಿಸುತ್ತೀದ್ದೀರಿ. ನೀವು ಒಂದೇ ರೀತಿಯ ಪಾತ್ರಗಳಿಗೆ ಸೀಮಿತವಾಗುತ್ತಿದ್ದೀರಿ ಅನಿಸ್ತಾ ಇಲ್ವಾ?

ಹಾಗೇನಿಲ್ಲ. ನಾಲ್ಕೂ ಸಿನಿಮಾಗಳೂ ಒಂದೇ ಶೈಲಿಯಾಗಿರಬಹುದು. ಆದರೆ, ಪ್ರತಿ ಸಿನಿಮಾದಲ್ಲೂ ನನ್ನದು ಭಿನ್ನ ಬಗೆಯ ಪಾತ್ರ. ಅಂತೆಯೇ ಪ್ರತಿ ಸಿನಿಮಾವೂ ಭಿನ್ನ ಶೈಲಿಯ ನಿರೂಪಣೆ ಹೊಂದಿದೆ. ಭಿನ್ನ ಪಾತ್ರಗಳಿಂದಾಗಿ ನನ್ನ ಅಭಿನಯದಲ್ಲಿ ವಿವಿಧ ಆಯಾಮ ತೋರಿಸಲು ಸಾಧ್ಯವಾಗಿದೆ ಅನ್ನೋದು ನನ್ನ ಅಭಿಪ್ರಾಯ.

ಸಿನಿರಂಗದಲ್ಲಿ ಹೊಸಬರ ಪ್ರವೇಶದಿಂದ ನಿಮಗೆ ಅವಕಾಶಗಳು ಕೈ ತಪ್ಪುತ್ತಿವೆಯೆಂಬ ಭಯವೇ?

ಖಂಡಿತಾ ಇಲ್ಲ. ಪ್ರತಿ ನಟ–ನಟಿಗೂ ವಿಶಿಷ್ಟ ಪಾತ್ರ ಮಾಡಲು ಅವಕಾಶಗಳು ಖಂಡಿತಾ ಇದ್ದೇ ಇರುತ್ತವೆ. ಈಗಂತೂ  ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಎಲ್ಲರಿಗೂ ಅವಕಾಶವಿದ್ದೇ ಇದೆ. ಈ ಹಿಂದೆ ನನಗೆ ನಾಯಕಿ ಪ್ರಧಾನ ಪಾತ್ರಗಳು ಸಿಗುತ್ತಿರಲಿಲ್ಲ. ಆದರೀಗ ಬದಲಾಗಿದೆ. ನನ್ನ ಪ್ರಕಾರ ಚಂದನವನದಲ್ಲಿ ಎಲ್ಲ ರೀತಿಯ ಪ್ರತಿಭೆಗಳಿಗೆ ಅವಕಾಶವಿದೆ.

ನಟಿಯಾಗಿ ನೀವು ಎದುರುಸಿದ ಸವಾಲೇನು?

ಸಿನಿಮಾ ರಂಗದಲ್ಲಿನ ತೀವ್ರ ಸ್ಪರ್ಧೆಯ ನಡುವೆಯೂ ನನಗೆ ನಾನೇ ಪ್ರತಿಸ್ಪರ್ಧಿ ಅಂತ ಭಾವಿಸುತ್ತೇನೆ. ಕಲಾವಿದರಿಗೆ ಕಲಿಯುವ ಹಂಬಲವಿರಬೇಕು ಹಾಗೆಯೇ ತಪ್ಪುಗಳನ್ನು ತಿದ್ದಿಕೊಳ್ಳುವ ವಿನಯವಂತಿಕೆಯೂ ಇರಬೇಕು. ಅಂತೆಯೇ ನಟ ಅಥವಾ ನಟಿಗೆ ಹೊಸತನಕ್ಕೆ ತೆರೆದುಕೊಳ್ಳುವ ಮನಸ್ಥಿತಿ ಇರಬೇಕು. ಹೊಸ ನಟ–ನಟಿಯರು ಮತ್ತು ನಿರ್ದೇಶಕರೊಂದಿಗೆ ಕೆಲಸ ಮಾಡುವುದು ಸವಾಲು ನನಗೆ ಸವಾಲಿನ ವಿಷಯ. ಆದರೆ, ನಟಿಯಾಗಿ ಇದನ್ನು ನಾನು ರೂಢಿ ಮಾಡಿಕೊಳ್ಳಬೇಕು.

ಎಂಥ ಸಿನಿಮಾಗಳಲ್ಲಿ ನಟಿಸಬೇಕು ಅನ್ನುವ ಆಸೆ?

ನನಗೆ ಆ್ಯಕ್ಷನ್ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆ. ಅದರಲ್ಲೂ ಪೊಲೀಸ್ ಅಧಿಕಾರಿಯ ಪಾತ್ರ ಮಾಡುವಾಸೆ. ‘ಅಳಿದು ಉಳಿದವರು’ ಸಿನಿಮಾದ ಸ್ವೀಕ್ವೆನ್ಸ್‌ನಲ್ಲಿ ಹೊಡೆದಾಟದ ದೃಶ್ಯವೊಂದರಲ್ಲಿ ನಟಿಸಿದೆ. ಆಗ ನನಗೆ ನನ್ನ ಸಾಮರ್ಥ್ಯ ಏನೆಂದು ತಿಳಿಯಿತು. ಆಗಿನಿಂದ ಆ್ಯಕ್ಷನ್ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಮೊಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.