ADVERTISEMENT

ಫೋನ್ ಅಲ್ಲ, ಫೋನ್‌ನಂಥ ಪುಸ್ತಕ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 19:30 IST
Last Updated 18 ಏಪ್ರಿಲ್ 2018, 19:30 IST
ಫೋನ್ ಅಲ್ಲ, ಫೋನ್‌ನಂಥ ಪುಸ್ತಕ
ಫೋನ್ ಅಲ್ಲ, ಫೋನ್‌ನಂಥ ಪುಸ್ತಕ   

ಫೋನ್‌ಗೂ ನಮಗೂ ಬಿಡಲಾರದ ನಂಟು. ಅದರೊಂದಿಗೆ ನಾವು ಒಡನಾಡುತ್ತೇವೆ, ಅವುಗಳೊಂದಿಗೇ ನಮ್ಮ ಬಹು ಸಮಯ ಕಳೆಯುತ್ತೇವೆ. ಇದಕ್ಕೆ ಇಂಬು ನೀಡುವಂತೆ, ಒಬ್ಬ ವ್ಯಕ್ತಿ ದಿನಕ್ಕೆ ಕಡಿಮೆ ಎಂದರೂ 85 ಬಾರಿ ಮೊಬೈಲ್ ನೋಡುತ್ತಾನೆ ಎಂದಿದೆ ಸಂಶೋಧನೆಯೊಂದು. ಆದರೆ ಯಾವುದೇ ಸಂಬಂಧಗಳಂತೆಯೇ, ಇದರಲ್ಲೂ ಸಮತೋಲನ ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಇಲ್ಲದಿದ್ದರೆ ಅದರಿಂದ ತೊಂದರೆ ಪಡಬೇಕಾದದ್ದೂ ನಾವೇ.

ಅದಕ್ಕಾಗಿ ಸ್ಕೂಲ್ ಆಫ್ ಲೈಫ್ ಡಿಸೈನ್ ಸಂಸ್ಥೆ, ಒಂದು ಉಪಾಯ ಹೂಡಿದೆ. ಥೇಟ್ ಫೋನ್‌ನಂತೆಯೇ ಕಾಣುವ, ಫೋನ್‌ನಷ್ಟೇ ಅಳತೆಯದ್ದಾಗಿರುವ, ಆದರೆ ಫೋನ್‌ನಿಂದ ಮನಸ್ಸನ್ನು ದೂರವುಳಿಸುವ ಒಂದು ಪುಟ್ಟ ಪುಸ್ತಕವನ್ನು ಹೊರತಂದಿದೆ. ಅದಕ್ಕೆ ‘ಫೋನ್ ಡಿಟಾಕ್ಸ್’ ಎಂದು ಹೆಸರಿಟ್ಟಿದೆ.

ಪುಸ್ತಕವನ್ನು ಅಂಗೈಯಲ್ಲಿ ಆರಾಮವಾಗಿಟ್ಟುಕೊಳ್ಳಬಹುದು. ಇದರಲ್ಲಿ ಉತ್ತಮ ಆಲೋಚನೆಗಳನ್ನು ಹಾಗೂ ನಮ್ಮನ್ನು ಧನಾತ್ಮಕವಾಗಿಸುವ ಕೆಲವು ಅಂಶಗಳನ್ನು ನೀಡಲಾಗಿರುತ್ತದೆ. ಫೋನಿನ ಮೇಲಿನ ಅವಲಂಬನೆಯನ್ನು ತಡೆಯುವ ಸಣ್ಣ ಪ್ರಯತ್ನವಂತೆ ಇದು.

ADVERTISEMENT

ಫೋನ್ ಅಷ್ಟೇ ಅಲ್ಲ, ‌ಸಾಮಾಜಿಕ ಜಾಲತಾಣಗಳ ಬಗೆಗಿನ ಅತಿಯಾದ ಅವಲಂಬನೆಯನ್ನೂ ತಪ್ಪಿಸಲು ನೆರವಾಗುವುದಂತೆ. ಅಡಿಕ್ಷನ್, ಪ್ರಕೃತಿ, ಕಾವ್ಯ, ಆದರ್ಶ, ಸಾವು ಹೀಗೆ ನಮ್ಮೊಳಗನ್ನು ಬೆಳಗುವ ಹಲವು ಅಂಶಗಳನ್ನು, ಆಲೋಚನೆಗೆ ಪ್ರೇರೇಪಿಸುವ ಅಂಶಗಳನ್ನು ನೀಡಲಾಗಿರುತ್ತದೆ.

‘ಈ ಫೋನ್ ಡಿಟಾಕ್ಸ್‌ ಅನ್ನು ನಾವೆಷ್ಟು ಫೋನ್‌ಗಳನ್ನು ಪ್ರೀತಿಸುತ್ತೇವೆ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ತಯಾರು ಮಾಡಿರುವುದು. ಫೋನ್‌ಗಳನ್ನು ಬಿಡಿ ಎಂದು ಅದು ಹೇಳುವುದಿಲ್ಲ. ಆದರೆ ಗ್ಯಾಜೆಟ್‌ಗಳ ಕುರಿತು ಜಾಗೃತವಾಗಿರುವಂತೆ ಮನಸ್ಸನ್ನು ಪ್ರೇರೇಪಿ ಸುತ್ತದೆ. ತಂತ್ರಜ್ಞಾನದೊಂದಿಗಿನ ಅತಿಯಾದ ನಂಟನ್ನು ಬಿಡಿಸಲು ಅನುಕೂಲ ಮಾಡುತ್ತದೆ‌. ವಾರಕ್ಕೊಮ್ಮೆ ಮೊಬೈಲ್ ಬಿಟ್ಟು ಅದರ ಜಾಗದಲ್ಲಿ ಈ ಪುಸ್ತಕ ಇಟ್ಟುಕೊಂಡರೆ, ಅದರಿಂದಾದ ಬದಲಾವಣೆ ನಿಮಗೇ ಗೋಚರಿಸೀತು’ ಎಂದು ಹೇಳಿಕೊಂಡಿದೆ ಸಂಸ್ಥೆ. ಇದರ ಬೆಲೆ ಅಂದಾಜು ₹ 780.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.