ADVERTISEMENT

ಬೇಡದ ಕೂದಲು ನಿವಾರಣೆಗೆ...

​ಪ್ರಜಾವಾಣಿ ವಾರ್ತೆ
Published 26 ಜನವರಿ 2016, 19:30 IST
Last Updated 26 ಜನವರಿ 2016, 19:30 IST
ಬೇಡದ ಕೂದಲು ನಿವಾರಣೆಗೆ...
ಬೇಡದ ಕೂದಲು ನಿವಾರಣೆಗೆ...   

ಮಹಿಳೆಯರು ಮುಖದ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂಬ ಮಾತು ಆನಾದಿ ಕಾಲದಿಂದಲೂ ಹೇಳಲಾಗುತ್ತಿದ್ದರೂ, ಸತ್ಯವೂ ಹೌದು. ಆದರೆ ಸುಂದರ ಮುಖದಲ್ಲಿ ಬೇಡವಾದ ಕೂದಲು ಆಕೆಯ ಸೌಂದರ್ಯವನ್ನೇ ಹಾಳುಮಾಡಬಲ್ಲದು ಅಲ್ಲವೇ?, ಕೆಲವರಿಗಂತೂ ಗಂಡಸರಿಗೆ ಬರುವಂತೆ ಗಡ್ಡ ಮೀಸೆ ಬೆಳೆದಿರುತ್ತವೆ. ಸಭೆ, ಸಮಾರಂಭಗಳಿಗೆ, ಕಾಲೇಜಿಗೆ ಹೋಗಲು, ಸ್ನೇಹಿತರೊಂದಿಗೆ ಕಾಲ ಕಳೆಯಲು ಸಹ ಮುಜುಗರವಾಗುತ್ತದೆ.  ಬ್ಲೀಚಿಂಗ್‌, ಥ್ರೆಡ್ಡಿಂಗ್‌ ಅಥವಾ ವ್ಯಾಕ್ಸಿಂಗ್‌ ಮಾಡಿಸಿಕೊಂಡು ಸುಮ್ಮನಾಗಬಹುದು, ಇದರಿಂದ ಮತ್ತೆ ಕೂದಲು ಬೆಳೆಯುವುದು ತಪ್ಪುವುದಿಲ್ಲ ಜೊತೆಗೆ ಒರಟಾಗಿ ಬೆಳೆಯಲು ಆರಂಭಿಸುತ್ತವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹರ್ಬಲ್‌ ಥೆರಪಿ ಸಹಾಯ ಮಾಡುತ್ತದೆ ಎನ್ನುತ್ತಾರೆ ಬೆಂಗಳೂರಿನ ರಾಜಾಜಿನಗರದ ಶೋಭಾಸ್‌ ಹರ್ಬಲ್‌ ಕ್ಲಿನಿಕ್‌ನ ಸಿ.ವಿ. ಶೋಭಾ.

ಹೆಣ್ಣು ಮಕ್ಕಳಲ್ಲಿ ಬೇಡವಾದ ಕೂದಲು ಕೇವಲ ಮುಖ, ಕೆನ್ನೆಯ ಭಾಗದಲ್ಲಿ ಮಾತ್ರ ಬೆಳೆಯದೇ  ಕುತ್ತಿಗೆ, ಕೈ–ಕಾಲುಗಳಲ್ಲೂ ಬೆಳೆಯುತ್ತವೆ. ಈ ಸಮಸ್ಯೆಯನ್ನು ಮೂರು ವಿಧಗಳಲ್ಲಿ ಗುರ್ತಿಸಬಹುದು. ಚಿಗುರು ಕೂದಲು, ಒರಟು ಕೂದಲು ಹಾಗೂ ದೂರದಿಂದಲೇ ಕಾಣಿಸುವ ಹಾಗೆ ಬೆಳೆಯುವ ದಟ್ಟ ಕೂದಲು. 

ಕಾರಣಗಳು
ಪುರುಷರ ಹಾರ್ಮೋನ್‌ಗಳು ಮಹಿಳೆಯರಲ್ಲಿ ಹೆಚ್ಚಾದಾಗ ಇಂಥ ಸಮಸ್ಯೆ ಕಂಡು ಬರುತ್ತವೆ. ಅನಿಯಮಿತ ಮಾಸಿಕ ಋತುಸ್ರಾವ, ಹಾರ್ಮೋನ್‌ ಏರುಪೇರು, ಋತುಮತಿಯರಾದಾಗ, ಪಿಸಿಒಡಿ, ಥೈರಾಯ್ಡ್‌ ಸಮಸ್ಯೆ, ಆನುವಂಶೀಯ, ಬಂಜೆತನ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹೈಬ್ರಿಡ್‌ ಆಹಾರ ಸೇವಿಸುತ್ತಿರುವುದು ಬೇಡದ ಕೂದಲು ಬೆಳವಣಿಗೆಗೆ ಕಾರಣವಾಗುತ್ತಿದೆ. ಹಸುಗಳಿಗೆ ಹಾರ್ಮೋನ್‌ ಇಂಜೆಕ್ಷನ್ ಕೊಟ್ಟು ಹೆಚ್ಚು ಹಾಲು ಪಡೆಯುವುದು, ಶೀಘ್ರ ಬೆಳವಣಿಗೆಗಾಗಿ ಫಾರಂ ಕೋಳಿಗಳಿಗೂ ಹಾರ್ಮೋನ್‌ ಇಂಜೆಕ್ಷನ್‌ ಕೊಡಲಾಗುತ್ತದೆ. ಇದರಿಂದ ನಾವು ಸೇವಿಸುವ ಆಹಾರದಲ್ಲೂ ಆ ಅಂಶ ಸೇರಿ ಸಮಸ್ಯೆಗೆ ಕಾರಣವಾಗುತ್ತಿದೆ. ಇನ್ನು ಮಹಿಳೆಯರಲ್ಲಿ ಬೊಜ್ಜು ಹೆಚ್ಚಾಗುವುದರಿಂದಲೂ ಪುರುಷರ ಹಾರ್ಮೋನ್‌ಗಳಾಗಿ ಪರಿವರ್ತನೆಯಾಗಲು ಕಾರಣವಾಗುತ್ತಿವೆ. ಇದರಿಂದ ಬೇಡದ ಕೂದಲು ಬೆಳೆಯುತ್ತವೆ. ಕೆಲವರಿಗೆ ಋತುಸ್ರಾವ ನಿಲ್ಲುವ ಸಮಯದಲ್ಲೂ ಕಂಡು ಬರುವ ಸಾಧ್ಯತೆ ಇದೆ.

ಚಿಕಿತ್ಸಾ ವಿಧಾನ
‘ಆಧುನಿಕ ಚಿಕಿತ್ಸಾ ವಿಧಾನದಲ್ಲಿ ಎಲೆಕ್ಟ್ರೋಲಿಸಿಸ್‌ ಮತ್ತು ಲೇಸರ್‌ ಥೆರಪಿ ಇವೆ, ಇವು ದುಬಾರಿ ಹಾಗೂ ಚರ್ಮದ ಆರೋಗ್ಯಕ್ಕೆ ಗಮನ ನೀಡುವುದಿಲ್ಲ. ಹರ್ಬಲ್‌ ಥೆರಪಿಯಲ್ಲಿ ಯಾವುದೇ ಔಷಧವನ್ನು ನೀಡುವುದಿಲ್ಲ, ಬದಲಿಗೆ ಆಹಾರ ಪದ್ಧತಿಯನ್ನು ಬದಲಾಯಿಸಲಾಗುತ್ತದೆ. ಮೊದಲು ಮಹಿಳೆಯ ಸಮಸ್ಯೆಯನ್ನು ಪರೀಕ್ಷಿಸಿದ ಬಳಿಕ ಮುಖದ ಮೇಲಿನ ಕೂದಲನ್ನು ವ್ಯಾಕ್ಸ್‌  ಅಥವಾ ಥ್ರೆಡ್ಡಿಂಗ್‌ ಮೂಲಕ ತೆಗೆದು ಶುಭ್ರಗೊಳಿಸಲಾಗುತ್ತದೆ. ನಂತರ ಚರ್ಮದ ತೆರೆದ ರಂಧ್ರಗಳಿಗೆ ಸ್ಕಿನ್‌ಕೇರ್‌ ಲೇಪವನ್ನು ಹಾಕಿ ಚಿಕಿತ್ಸೆ ಆರಂಭಿಸಲಾಗುತ್ತದೆ. ಚಿಕಿತ್ಸೆಯ ಜೊತೆಗೆ ಕಷಾಯಗಳನ್ನು ನೀಡುತ್ತೇವೆ. ಇದರಿಂದ ರಕ್ತ ಶುದ್ಧಿಯಾಗುತ್ತದೆ. ಎಂಟು ದಿನಗಳಿಗೊಮ್ಮೆ ಬರುವ ಕೂದಲು 15 ದಿನಗಳಿಗೆ ಬೆಳೆಯುತ್ತವೆ. ಬೆಳವಣಿಗೆ ವೇಗ ಕಡಿಮೆಯಾಗುತ್ತದೆ. ಬರೀ ಕೂದಲು ತೆಗೆಯುವುದಷ್ಟೇ ಅಲ್ಲ, ಆ ಭಾಗದ ಚರ್ಮದ ಆರೋಗ್ಯಕ್ಕೂ ಗಮನ ನೀಡಲಾಗುತ್ತದೆ. ಅದಕ್ಕಾಗಿ ಲೇಪವನ್ನು ಹಾಕುತ್ತೇವೆ. ಕಲೆಯಾಗದಂತೆ ಬುಡಸಹಿತ ಕೂದಲು ಹೋಗುತ್ತವೆ. ಸಮಸ್ಯೆ ಯಾವ ಹಂತದಲ್ಲಿದೆ ಎಂಬುದರ ಆಧಾರದ ಮೇಲೆ ಚಿಕಿತ್ಸೆ ನೀಡಬೇಕಾಗುತ್ತದೆ. ಕೆಲವರಿಗೆ 2ರಿಂದ 3 ತಿಂಗಳಾದರೆ, ದಟ್ಟ ಕೂದಲು ಇರುವವರಿಗೆ ಆರು ತಿಂಗಳಿನಿಂದ ವರ್ಷದವರೆಗೂ ತೆಗೆದುಕೊಳ್ಳಬಹುದು. ಆಧುನಿಕ ಚಿಕಿತ್ಸಾ ವಿಧಾನಕ್ಕಿಂತ ಹರ್ಬಲ್‌ ಚಿಕಿತ್ಸೆ ವೆಚ್ಚ ಶೇ.50ರಷ್ಡು ಕಡಿಮೆ ಇರುತ್ತದೆ’ ಎನ್ನುತ್ತಾರೆ ಸಿ.ವಿ. ಶೋಭಾ.
ಮಾಹಿತಿಗೆ: 94483 15578

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.