ADVERTISEMENT

ಮುಂಬೈಯಲ್ಲಿ ‘ಪಿಂಕ್ ಗ್ಯಾಂಗ್’

​ಪ್ರಜಾವಾಣಿ ವಾರ್ತೆ
Published 25 ಜನವರಿ 2016, 19:30 IST
Last Updated 25 ಜನವರಿ 2016, 19:30 IST
ಮುಂಬೈಯಲ್ಲಿ ‘ಪಿಂಕ್ ಗ್ಯಾಂಗ್’
ಮುಂಬೈಯಲ್ಲಿ ‘ಪಿಂಕ್ ಗ್ಯಾಂಗ್’   

ಮಹಿಳಾ ಮೀಸಲಾತಿ ಎನ್ನುವುದು ಈಗ ಬಹುತೇಕ ಎಲ್ಲ ಕ್ಷೇತ್ರಕ್ಕೂ ಕಾಲಿಟ್ಟುಬಿಟ್ಟಿದೆ. ಹಾಗಿದ್ದ ಮೇಲೆ ಆಟೊ ಚಾಲನಾ ಕ್ಷೇತ್ರದಲ್ಲಿ ಯಾಕಿಲ್ಲ ಎಂದು ಪ್ರಶ್ನಿಸಿಕೊಂಡ ಮಹಾರಾಷ್ಟ್ರ ಸರ್ಕಾರ ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಆಟೊ ಚಾಲನೆಗೆ ಶೇ 5ರಷ್ಟು ಮೀಸಲಾತಿ ನಿಗದಿ ಪಡಿಸಿದ್ದು, 548 ಮಹಿಳೆಯರಿಗೆ ಆಟೊ ಚಾಲನಾ ಪರವಾನಗಿ ನೀಡಿದೆ.

ಈ ಪೈಕಿ 465 ಮಹಿಳೆಯರು ಮುಂಬೈ ಮಹಾನಗರದವರಾಗಿದ್ದರೆ 83 ಮಂದಿ ಬೇರೆ ರಾಜ್ಯದ ವಾಸಿಗಳು. ಇನ್ನೂ 1,316 ಪರವಾನಗಿ ಮಹಿಳೆಯರಿಗೆಂದೇ ಇದ್ದು, ಇನ್ನಷ್ಟು ಅರ್ಜಿಗಳನ್ನು ಸಲ್ಲಿಸಿ ಎಂದು ಸರ್ಕಾರ ಕೇಳಿಕೊಳ್ಳುತ್ತಿದೆ. ಮಹಿಳೆಯರ ಆಟೊ ಚಾಲನೆ ಮಾಡಿದ ಮೇಲೆ ಅಲ್ಲೊಂದಿಷ್ಟು ಭಿನ್ನತೆ ಇರಲೇಬೇಕಲ್ಲವೇ? ಅದಕ್ಕಾಗಿಯೇ ಮಹಾರಾಷ್ಟ್ರ ಸರ್ಕಾರ ಈ ಆಟೊಗಳಿಗೆ ಕಪ್ಪು– ಹಳದಿ ಬಣ್ಣದ ಬದಲಾಗಿ ಗುಲಾಬಿ ಬಣ್ಣದ ಪೇಂಟ್‌ ಮಾಡಿಸಿದೆ. ಆಟೊ ಬಣ್ಣದ ವ್ಯತ್ಯಾಸ ಮಾಡಿರುವುದಕ್ಕೆ ಮಹಿಳಾ ಸುರಕ್ಷತೆಯೂ ಒಂದು ಕಾರಣ ಎಂದು ಸರ್ಕಾರ ಹೇಳಿಕೊಂಡಿದೆ.

ಮಹಿಳೆಯರು ಆಟೊಗಳಲ್ಲಿ, ಅದರಲ್ಲೂ ರಾತ್ರಿ ವೇಳೆ ಪ್ರಯಾಣ ಬೆಳೆಸುವುದಕ್ಕೆ ಹೆದರುವುದು ಸಾಮಾನ್ಯ. ತಾವು ಸುರಕ್ಷಿತರಲ್ಲ ಎನ್ನುವ ಭಯ ಕಾಡುತ್ತದೆ. ಆದ್ದರಿಂದ ಗುಲಾಬಿ ಬಣ್ಣದ ಆಟೊ ಬಂದರೆ, ಅದನ್ನು ನೋಡಿದ ತಕ್ಷಣ ಇದು ಮಹಿಳಾ ಚಾಲಕರು ಇರುವ ಆಟೊ ಎಂದು ಸುಲಭದಲ್ಲಿ ಗುರುತಿಸಿ ಅದರಲ್ಲಿ ಪಯಣಿಸಬಹುದು ಎಂಬುದು ಈ ಬಣ್ಣದ ಗುಟ್ಟು. ಆಟೊರಿಕ್ಷಾ ಚಾಲನೆಗೆ ಇರುವ ಸಾಮಾನ್ಯ ಷರತ್ತುಗಳನ್ನು ಮಹಿಳೆಯರಿಗೆ ವಿಧಿಸಲಾಗಿದ್ದರೂ ಕೆಲವೊಂದರಲ್ಲಿ ಸಡಿಲಿಕೆ ನೀಡಲಾಗಿದೆ.

ಕನಿಷ್ಠ 15 ವರ್ಷ ಮಹಾರಾಷ್ಟ್ರದಲ್ಲಿಯೇ ವಾಸವಾಗಿರಬೇಕು, ಮರಾಠಿ ಚೆನ್ನಾಗಿ ಮಾತನಾಡಲು ಬರಬೇಕು ಎಂಬ ಷರತ್ತು ಇದ್ದರೂ ಶೈಕ್ಷಣಿಕ ಅರ್ಹತೆ ಇರಲೇಬೇಕೆಂಬ ನಿಯಮವಿಲ್ಲ. 2012ರ ದೆಹಲಿ ಗ್ಯಾಂಗ್‌ರೇಪ್‌ ಪ್ರಕರಣದ ನಂತರ ರಾಂಚಿಯಲ್ಲಿ ಕೂಡ ಗುಲಾಬಿ ಬಣ್ಣದ ಮಹಿಳಾ ಆಟೊರಿಕ್ಷಾಗಳನ್ನು ಶುರು ಮಾಡಲಾಗಿತ್ತು. ಈ ಆಟೊ ರಿಕ್ಷಾಗಳಿಗೆ ಜಿಪಿಎಸ್ ತಂತ್ರಜ್ಞಾನ ಹಾಗೂ ಪ್ಯಾನಿಕ್ ಬಟನ್ (ಅಲರ್ಟ್ ಸ್ವಿಚ್) ಅಳವಡಿಸಲಾಗಿತ್ತು.

ಮಹಿಳೆಯರು ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದಲ್ಲಿ ಪ್ಯಾನಿಕ್ ಬಟನ್ ಒತ್ತಿದರೆ ರಿಕ್ಷಾದಲ್ಲಿ ಅಳವಡಿಸಲಾಗಿರುವ ಜಿಪಿಎಸ್ ಸಿಸ್ಟಂ ಮುಖಾಂತರ ರಿಕ್ಷಾವನ್ನು ತಕ್ಷಣ ಪತ್ತೆ ಹಚ್ಚಲು ಅಧಿಕಾರಿಗಳಿಗೆ ನೆರವಾಗುವ ತಂತ್ರಜ್ಞಾನ ಇದಾಗಿತ್ತು. ಆದರೆ ಅದ್ಯಾಕೋ ಅಲ್ಲಿ ಹೆಚ್ಚಿಗೆ ಯಶಸ್ಸು ಕಾಣಿಸಲೇ ಇಲ್ಲ. ಆದ್ದರಿಂದ ಕಳೆದ ವರ್ಷ ಈ ಸೇವೆ ನಿಲ್ಲಿಸಲಾಗಿದೆ. ಈಗ ಮುಂಬೈನ ‘ಗುಲಾಬಿ ಮಹಿಳಾ ಮಣಿ’ಯರು ಹೇಗೆ ಇದಕ್ಕೆ ಸ್ಪಂದಿಸುತ್ತಾರೆ ಎಂದು ಕಾದುನೋಡಬೇಕಿದೆ. ಅಲ್ಲಿ ಸಂಪೂರ್ಣ ಯಶಸ್ವಿಯಾದರೆ ನಮ್ಮಲ್ಲೂ ಈ ‘ಗುಲಾಬಿ ಗ್ಯಾಂಗ್’ ಬಂದರೂ ಬರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.