ADVERTISEMENT

ಹೀಲ್ಸ್‌ ಚಪ್ಪಲಿ ನೋವು ತಪ್ಪಲಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ಚಿತ್ರಕೃಪೆ: ಪಾಪ್‌ಸುಗರ್‌
ಚಿತ್ರಕೃಪೆ: ಪಾಪ್‌ಸುಗರ್‌   

ದಿನವಿಡೀ ಹೈಹೀಲ್ಡ್‌ ಚಪ್ಪಲಿ ಧರಿಸಿ ಓಡಾಡಿದರೆ ಕಾಲಿನಿಂದ ಕತ್ತಿನವರೆಗೂ ಸ್ನಾಯುಗಳ ಸೆಳೆತ ಕಾಡುವುದು ಸಹಜ. ಈ ಚಪ್ಪಲಿ/ಶೂಗಳ ಮುಂಭಾಗ ಚೂಪಾಗಿರುತ್ತದೆ. ಎರಡೋ ಮೂರೋ ಬೆರಳು ಕೂರಬಹುದಾದಷ್ಟು ಜಾಗದಲ್ಲಿ ಐದೂ ಬೆರಳುಗಳುನ್ನು ತುರುಕಿದಂತಾಗಿರುತ್ತದೆ. ಚಪ್ಪಲಿಯ ಹಿಮ್ಮಡಿಯ ಎತ್ತರ ಅವೈಜ್ಞಾನಿಕವಾಗಿರುತ್ತದೆ. ಎತ್ತರ ಹೆಚ್ಚಿದಷ್ಟೂ ಒಟ್ಟು ಪಾದ ನೇರವಾಗಿ ಕೂರುತ್ತಾ ಹೋಗುತ್ತದೆ. ‌ಈ ಇಕ್ಕಟ್ಟು ಮತ್ತು ಒತ್ತಡ ನೆತ್ತಿಯ ನರಮಂಡಲದವರೆಗೂ ಅಡ್ಡಪರಿಣಾಮ ಬೀರುತ್ತದೆ. ಹೈಹೀಲ್ಸ್‌ ಚಪ್ಪಲಿ ಧರಿಸಿದಾಗ ಇಡೀ ದೇಹದ ಭಾರವನ್ನು ಪಾದದ ಮುಂಭಾಗಕ್ಕೆ ತಳ್ಳಿದಂತಾಗಿರುತ್ತದೆ.

ಎತ್ತರದ ಹಿಮ್ಮಡಿ ಚಪ್ಪಲಿಯ ಕಾರಣ ದೇಹ ಕೃತಕ ಭಂಗಿಯಲ್ಲಿರುತ್ತದೆ. ಕಾಲು, ಕಿಬ್ಬೊಟ್ಟೆ, ಸೊಂಟದ ಮೇಲೆ ಕೃತಕ ಒತ್ತಡ ಬೀಳುತ್ತದೆ. ಕುಳಿತರೂ, ನಿಂತರೂ, ನಡೆದರೂ ಕೃತಕ ಭಂಗಿಯಿಂದಾಗಿ ದೇಹದ ಮಾಂಸಖಂಡ ಮತ್ತು ಸ್ನಾಯುಗಳು ಬಳಲುತ್ತವೆ. ಅಂತಹ ಚಪ್ಪಲಿ/ಶೂ ಧರಿಸಿದ್ದರಿಂದ ಉಂಟಾಗುವ ನೋವಿಗೆ ಕೆಲವು ವ್ಯಾಯಾಮಗಳ ಮೂಲಕ ಉಪಶಮನ ಕಂಡುಕೊಳ್ಳಬಹುದು.

**

ADVERTISEMENT

ಹೀಗೆ ಮಾಡಿ

ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಹೈಹೀಲ್ಡ್‌ ಚಪ್ಪಲಿ ಧರಿಸಿ

ಪ್ರತಿ 2 ಗಂಟೆಗೊಮ್ಮೆ ಚಪ್ಪಲಿ ತೆಗೆದಿಟ್ಟು ಪಾದದಿಂದ ಮಂಡಿವರೆಗೂ ಕೈಯಲ್ಲಿ ಮೃದುವಾಗಿ ಒತ್ತುತ್ತಾ ಮಸಾಜ್‌ ಮಾಡಿ. ಇದರಿಂದ ರಕ್ತ ಸಂಚಲನ ಸರಾಗವಾಗಿ, ಒತ್ತಡದಿಂದ ಕಂಗಾಲಾಗಿರುವ ನರ ಮತ್ತು ಸ್ನಾಯುಗಳಿಗೆ ಹೊಸ ಚೈತನ್ಯ ಸಿಕ್ಕಿದಂತಾಗುತ್ತದೆ

ವಾರದಲ್ಲಿ 2–3 ದಿನ ಸಮತಟ್ಟಾಗಿರುವ ಕ್ಯಾನ್ವಾಸ್‌ ಶೂ, ಚಪ್ಪಲಿ ಧರಿಸಿ.

ನಿಮ್ಮ ಕಚೇರಿಯ ವಸ್ತ್ರಸಂಹಿತೆಯಂತೆ ಹೈಹೀಲ್ಸ್‌ ಚಪ್ಪಲಿ ಕಡ್ಡಾಯವಾದರೆ ಹೀಲ್ಸ್‌ 2 ಇಂಚು ದಾಟದಿರಲಿ

ಹೈಹೀಲ್ಡ್‌ ಚಪ್ಪಲಿ ಧರಿಸಿದ ದಿನ ರಾತ್ರಿ ಕಾಲಿಗೆ ಎಣ್ಣೆ ಹಚ್ಚಿ ನಿಧಾನಕ್ಕೆ ಮಸಾಜ್‌ ಮಾಡಿ. ಕಾಲಿನ ಮಣಿಕಟ್ಟಿಗೆ ಆರಾಮ ನೀಡುವಂತಹ ವ್ಯಾಯಾಮ ಮಾಡಿ

ತೀರಾ ಚಪ್ಪಟೆ ಚಪ್ಪಲಿಯ ಬದಲು ಅರ್ಧ ಇಂಚು ದಪ್ಪದ್ದಿರಲಿ. ಇದರಿಂದ ದೇಹದ ತೂಕ ಇಡೀ ಪಾದಕ್ಕೆ ಸಮನಾಗಿ ಹಂಚಿಕೆಯಾಗುತ್ತದೆ.

(ಭಜು ಮತ್ತು ಮೀನಖಂಡ ನಿರಾಳವಾಗಿಸುವ ಕಸರತ್ತು)

ಈ ವ್ಯಾಯಾಮ ಮಾಡಿ

ಕಾಲಿನ ಒಂದೊಂದೇ ಬೆರಳಿನ ತುದಿಯನ್ನು ಕೈಯಿಂದ ಮೃದುವಾಗಿ ಒತ್ತುತ್ತಾ ಆಕ್ಯುಪ್ರೆಶರ್‌ ಚಿಕಿತ್ಸೆ ಮಾಡುವುದು.

ರೋಲರ್‌ ಇಲ್ಲದಿದ್ದರೆ ಫ್ರೀಜರ್‌ನಲ್ಲಿ ತಂಪಾಗಿರುವ ನೀರಿನ ಬಾಟಲಿಯನ್ನು ಬಳಸಬಹುದು.

ಒಂದೊಂದೇ ಬೆರಳನ್ನು ಪ್ರದಕ್ಷಿಣೆ ಮತ್ತು ಅಪ್ರದಕ್ಷಿಣಾಕಾರವಾಗಿ ನಿಧಾನವಾಗಿ ತಿರುಗಿಸುವುದು

ಹಿಮ್ಮಡಿಗಳನ್ನೆತ್ತಿ ತುದಿ ಕಾಲಿನಲ್ಲಿ ಒಂದೆರಡು ನಿಮಿಷ ನಿಂತು ಮತ್ತೆ ಪಾದವೂರಿ ನಿಲ್ಲುವುದು

ಆಕ್ಯುಪ್ರೆಶರ್‌ ರೋಲರ್‌ನ್ನು ಪಾದದಡಿಯಲ್ಲಿ ಇಟ್ಟುಕೊಂಡು ರೋಲ್‌ ಮಾಡುವುದು

ಹುಲ್ಲಿನ ಮೇಲೆ ಕೈತೋಟದಲ್ಲಿ ಸಣ್ಣ ಸಣ್ಣ ಆಲಂಕಾರಿಕ ಕಲ್ಲುಗಳಿದ್ದರೆ ಅವುಗಳ ಮೇಲೆ ಬರಿಗಾಲಲ್ಲಿ ನಡೆಯುವುದು.

ಕಾಲಿನ ಮೀನಖಂಡಗಳ ಸ್ನಾಯು ಸೆಳೆತಕ್ಕೆ ತುದಿಗಾಲನ್ನು ನೆಲಕ್ಕೊತ್ತಿ ನಿಲ್ಲುವ ವ್ಯಾಯಾಮ ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.