ಆಸ್ಕರ್ ಪಿಸ್ಟೂರಿಯಸ್
ದಕ್ಷಿಣ ಆಫ್ರಿಕಾದ ಓಟಗಾರ ಆಸ್ಕರ್ ಲೆನಾರ್ಡ್ ಕಾರ್ಲ್ ಪಿಸ್ಟೂರಿಯಸ್ ಅವರಿಗಿರುವ ಸಮಸ್ಯೆ ಬೇರೆ ಯಾರಿಗಾದರೂ ಇದ್ದಿದ್ದರೆ ಬಹುಶಃ ನಮ್ಮ ಹಣೆಬರಹವೇ ಇಷ್ಟು ಎಂದು ವಿಧಿಗೆ ಶಾಪ ಹಾಕುತ್ತಿದ್ದರೋ ಏನೋ. ಆದರೆ, ಆಸ್ಕರ್ ಹಾಗೆ ಮಾಡಲಿಲ್ಲ. ಬದುಕಿನಲ್ಲಿ ಸವಾಲನ್ನು ಒಪ್ಪಿಕೊಳ್ಳದವರೇ ನಿಜವಾದ ಅಂಗವಿಕಲರು ಎಂದರು. ಸಾಧಕರಿಗೆ ಪ್ರೇರಕರಾದರು.
ಎರಡೂ ಕಾಲಿಲ್ಲದ ಈ ಓಟಗಾರ 2005ರ ಪ್ಯಾರಾಲಿಂಪಿಕ್ಸ್ ವಿಶ್ವ ಫೈನಲ್‌ನ 100ಮೀಟರ್ಸ್ ಮತ್ತು 200ಮೀ. ಓಟದಲ್ಲಿ `ಚಿನ್ನ~ದ ಅಥ್ಲೀಟ್ ಎನಿಸಿಕೊಂಡರು. ಓಡಲು ಶುರು ಮಾಡಿದರೆ, ಜೊತೆಯಲ್ಲಿರುವ ಸ್ಪರ್ಧಿಗಳಿಗೆ ಮನದಲ್ಲಿ ಭಯ. ಇದಕ್ಕೆ ಆಸ್ಕರ್ ಹೊಂದಿರುವ ವೇಗದ ಜೊತೆಗೆ ಆತ್ಮ ವಿಶ್ವಾಸ ಕೂಡಾ ಕಾರಣ.
ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕೆನ್ನುವುದು ಪ್ರತಿ ಕ್ರೀಡಾಪಟುವಿನ ಜೀವನದ ದೊಡ್ಡ ಕನಸು. ಪದಕ ಗೆಲ್ಲಲು ಈಡೀ ಜೀವನವನ್ನೇ ಮುಡಿಪಾಗಿಡಬೇಕಾಗುತ್ತದೆ. ಆಸ್ಕರ್ ಬದುಕಿನ ಕನಸು ಕೂಡಾ ಇದಾಗಿತ್ತು. ಈ ಓಟಗಾರನ ಪ್ರಯತ್ನಕ್ಕೆ 2004ರ ಅಥೆನ್ಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಫಲ ಸಿಕ್ಕಿತ್ತು. 100ಮೀ. ವಿಭಾಗದಲ್ಲಿ ಕಂಚು, 200ಮೀ.ನಲ್ಲಿ ಚಿನ್ನ ಜಯಿಸಿದರು. ನೂರು ಮೀಟರ್ಸ್ ಓಟವನ್ನು 10.91ಸೆಕೆಂಡ್‌ಗಳಲ್ಲಿ ಓಡಿ ಮುಗಿಸುವ ಈ `ಬ್ಲೇಡ್ ರನ್ನರ್~ ಖ್ಯಾತಿಯ ಓಟಗಾರ ಪ್ಯಾರಾಲಿಂಪಿಕ್ಸ್ ಕೈಬಿಟ್ಟು ಲಂಡನ್ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿದಿದ್ದರು.
2008ರ ಬೀಜಿಂಗ್ ಪ್ಯಾರಾಲಿಂಪಿಕ್ಸ್ ಕೂಟದಲ್ಲಿ 100ಮೀ. 200ಮೀ. ಮತ್ತು 400ಮೀ. ವಿಭಾಗದಲ್ಲಿ ಸ್ವರ್ಣ ಗೆದ್ದಿದ್ದಾರೆ. ಪ್ಯಾರಾಲಿಂಪಿಕ್ಸ್‌ನಿಂದ ಹಿಂದೆ ಸರಿದು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಸಾಕಷ್ಟು ಪ್ರಯತ್ನ ಮಾಡಿದ್ದ ಆಸ್ಕರ್‌ಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಿರಲಿಲ್ಲ. 400ಮೀ. ವಿಭಾಗದಲ್ಲಿ ಸ್ಪರ್ಧಿಸಿದ್ದ ಆಸ್ಕರ್ 46.25ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ್ದರು. ಅರ್ಹತೆ ಪಡೆಯಲು 45.55ಸೆ.ಗಳಲ್ಲಿ ಗುರಿ ಮುಟ್ಟಬೇಕಿತ್ತು. ಆದರೂ ಪ್ರಯತ್ನ ಕೈಬಿಡದೇ ಈ ಸಲದ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿರುವ ಆಸ್ಕರ್‌ಗೆ ಕೇವಲ 25 ವರ್ಷ ಎನ್ನುವುದು ಇನ್ನೊಂದು ಅಚ್ಚರಿಯ ವಿಷಯ.
ಜೀನ್ ಡ್ರಿಸ್ಕಾಲ್
1988, 1992, 1996 ಮತ್ತು 2000ರ ಪ್ಯಾರಾಲಿಂಪಿಕ್ಸ್ ಕೂಟಗಳಲ್ಲಿ ಸತತವಾಗಿ ಚಿನ್ನ. ಇದೆಲ್ಲವೂ ಸೇರಿದಂತೆ ಪ್ಯಾರಾಲಿಂಪಿಕ್ಸ್‌ನಲ್ಲಿ ಮೂರು ಬೆಳ್ಳಿ ಮತ್ತು ಎರಡು ಕಂಚು ಸೇರಿದಂತೆ 13 ಪದಕ. ಈ ಎಲ್ಲಾ ಸಾಧನೆ ಮೂಡಿ ಬಂದಿದ್ದು ವೀಲ್ ಚೇರ್ ಸ್ಪರ್ಧಿ ಅಮೆರಿಕದ ಜೀನ್ ಡ್ರಿಸ್ಕಾಲ್ ಅವರಿಂದ.
ಎರಡೂ ಕಾಲಿಲ್ಲದ ಡ್ರಿಸ್ಕಾಲ್ ಎಂಟು ಸಲ ಬೂಸ್ಟನ್ ಮ್ಯಾರಥಾನ್‌ನಲ್ಲಿ ಚಿನ್ನ ಜಯಿಸಿದ್ದಾರೆ. 1988ರ ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ಸಲ ಕಣಕ್ಕಿಳಿದಿದ್ದರು. ಅಚ್ಚರಿಯ ಸಂಗತಿಯೆಂದರೆ, ಮೊದಲ ಪ್ಯಾರಾಲಿಂಪಿಕ್ಸ್‌ನಲ್ಲಿಯೇ ಒಂದು ಚಿನ್ನ ಸೇರಿದಂತೆ ಒಟ್ಟು ನಾಲ್ಕು ಪದಕ ಜಯಿಸಿದ್ದರು. ಸಿಡ್ನಿಯಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲೂ ಅವರು ಪಾಲ್ಗೊಂಡಿದ್ದರು.
`ಸಪ್ತ ಪದಕದ ಈ ಸಾರಥಿ~ 1991ರ ಬೂಸ್ಟನ್ ಮ್ಯಾರಥಾನ್‌ನಲ್ಲೂ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಕೂಟದಲ್ಲಿ ಸತತ ಏಳು ಸಲ ಪದಕ ಗೆದ್ದುಕೊಂಡು ದಾಖಲೆ ಅವರದು.
ಎರಡೂ ಕಾಲಿಲ್ಲದವಳಾದ ನಿನ್ನಂದ ಏನನ್ನೂ ಮಾಡಲಾಗದು ಎಂದು ಜನ ಅನುಕಂಪದಿಂದ ನೋಡುತ್ತಿದ್ದರು. ಆದರೆ, ನನಗದು ಇಷ್ಟವಾಗುತ್ತಿರಲಿಲ್ಲ. ಸಾಧನೆಯ ಮೂಲಕವೇ ಉತ್ತರ ನೀಡಬೇಕು ಎನ್ನುವ ಹಂಬಲವಿತ್ತು ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು. ಸಾಕಷ್ಟು ಜನತೆಯ ಪಾಲಿಗೆ ಈಕೆಯ ಬದುಕಿನ ಸಾಧನೆಗಳೇ ಪ್ರೇರಣೆ.
ಆದ್ದರಿಂದ ಈಕೆಯನ್ನು ಭೇಟಿಯಾಗಲು ಹಪಾಹಪಿಸುತ್ತಾರೆ. ನೋವನ್ನು ತೋಡಿಕೊಳ್ಳಲು, ಸಲಹೆ ಪಡೆಯಲು ಇಚ್ಚಿಸುತ್ತಾರೆ. ನನ್ನ ಬದುಕು ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ ಎನ್ನುವ ಉದ್ದೇಶವನ್ನು ಡ್ರಿಸ್ಕಾಲ್ ಹೊಂದಿದ್ದಾರೆ. ಅದಕ್ಕಾಗಿಯೇ ಆಗಾಗ ವಿದ್ಯಾ ಸಂಸ್ಥೆಗಳಿಗೆ ತೆರಳಿ ಬದುಕಿನ ಅನುಭವದ ಬುತ್ತಿ ಬಿಚ್ಚಿಡುತ್ತಾರೆ.
ಫರ್ಮಾನ್ ಬಾಷಾ
`ಯಾವತ್ತಿಗೂ ಅಂಗವಿಕಲ ಎನ್ನುವ ಕೊರಗನ್ನು ಮನದಲ್ಲಿ ಬಿಟ್ಟುಕೊಳ್ಳಲಿಲ್ಲ. ಸಾಮಾನ್ಯರಂತೆ ಎಲ್ಲರೊಂದಿಗೆ ಬೆಳೆದೆ. ಅವರೊಂದಿಗಿದ್ದುಕೊಂಡೇ ಸಾಧನೆಯ ಹಾದಿ ತುಳಿದೆ. ಇದಕ್ಕೆ ಮನೆಯವರ ಬೆಂಬಲ ಹಾಗೂ ಸಾಧಿಸುವ ಹುಮ್ಮಸ್ಸು ಬಿಟ್ಟರೇ ಬೇರೆನೂ ಕಾರಣವಿಲ್ಲ...~
-ಹೀಗೆ `ಕಾಮನಬಿಲ್ಲು~ ಜೊತೆಗೆ ತಮ್ಮ ವರ್ಣಮಯ ಬದುಕಿನ ಗುಟ್ಟನ್ನು ಬಿಚ್ಚಿಟ್ಟವರು ಪವರ್ ಲಿಫ್ಟರ್ ಫರ್ಮಾನ್ ಬಾಷಾ. ಎರಡೂ ಕಾಲಿಲ್ಲದ ಬಾಷಾ ಈ ಸಲದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಆದರೂ ಬದುಕಿನ ಹುಮ್ಮಸ್ಸಿಗೇನೂ ಕೊರತೆಯಿಲ್ಲ.
ಗುವಾಂಗ್ ಜೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ 48 ಕೆ.ಜಿ. ವಿಭಾಗದಲ್ಲಿ ಕಂಚು ಜಯಿಸಿದ್ದರು. ಇದರಿಂದ ಈ ಸಲದ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಲಭಿಸಿತು.
ಈ ಸಲದ ಪ್ಯಾರಾಲಿಂಪಿಕ್ಸ್ ಬಾಷಾ ಪಾಲಿಗೆ `ಹ್ಯಾಟ್ರಿಕ್~. ಹಿಂದಿನ ಎರಡೂ ಪ್ಯಾರಾಲಿಂಪಿಕ್ಸ್‌ಗಳಲ್ಲಿ ಪದಕ ಜಯಿಸಿಲ್ಲವಾದರೂ, 2004ರ ಪ್ಯಾರಾಲಿಂಪಿಕ್ಸ್‌ನಲ್ಲಿ 10ನೇ ಸ್ಥಾನ, ಬೀಜಿಂಗ್ ಪ್ಯಾರಾಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದಿದ್ದರು. ಇದು ಈ ಸಲ ಪದಕ ಜಯಿಸಬಹುದು ಎನ್ನುವ ಭರವಸೆಯನ್ನು ಮೂಡಿಸಿದೆ.
ಶರತ್ ಗಾಯಕ್‌ವಾಡ್
ಅಂತರರಾಷ್ಟ್ರೀಯ ಮಟ್ಟದಲ್ಲಿ 30 ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 40 ಪದಕ. 2012ರ ಪ್ಯಾರಾಲಿಂಪಿಕ್ಸ್‌ನ ಈಜು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಏಕೈಕ ಈಜು ಪಟು.
-ಇದು ಬೆಂಗಳೂರಿನ ಪ್ರತಿಭಾನ್ವಿತ ಈಜು ಪಟು ಶರತ್ ಗಾಯಕ್‌ವಾಡ್ ಅವರ ಸಾಧನೆಯ ಕಿರು ಪ್ರವರ. ಎಡಗೈ ಊನವಾಗಿರುವ ಶರತ್ ಈಜುಕೊಳದಲ್ಲಿ ಬಿದ್ದರೆ ಮೀನಿನಂತೆ ಈಜುತ್ತಾರೆ. ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
2010ರಲ್ಲಿ ಚೀನಾದ ಗುವಾಂಗ್ ಜೌನಲ್ಲಿ ನಡೆದ ಏಷ್ಯನ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದಾರೆ.
ಶರತ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಉದ್ಯಾನನಗರಿಯಲ್ಲಿರುವ ಲಿಟಲ್ ಫ್ಲವರ್ ಪ್ರೌಢಶಾಲೆ ಮೊದಲ ವೇದಿಕೆಯಾಯಿತು. ಈ ಶಾಲೆಯಲ್ಲಿ ನಾಲ್ಕನೇ ತರಗತಿವರೆಗೆ ಈಜು ಕಲಿಯುವುದು ಕಡ್ಡಾಯ. ಇದೇ ಅವಕಾಶ ಬಳಸಿಕೊಂಡು ಶರತ್ ಭವಿಷ್ಯ ರೂಪಿಸಿಕೊಂಡರು. ಈಜುಕೊಳದಲ್ಲಿನ ಚುರುಕುತನ ಗುರುತಿಸಿದ ಶಾಲಾ ಸಿಬ್ಬಂದಿಗೆ ಶರತ್ ಬಗ್ಗೆ ವಿಶೇಷ ಒಲವು ಮೂಡಿತು. ಶರತ್ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಮೊದಲ ಈಜು ಸ್ಪರ್ಧಿ ಎನಿಸಿಕೊಂಡಿದ್ದಾರೆ. ಪ್ಯಾರಾಲಿಂಪಿಕ್ಸ್ ಆಗಸ್ಟ್ 29ರಿಂದ ಸೆಪ್ಟೆಂಬರ್ 9ರ ವರೆಗೆ ನಡೆಯಲಿದೆ.
ಸಾಧನೆಯ ಕ್ಷೇತ್ರ ಈಜು ಸ್ಪರ್ಧೆ ಎನ್ನುವುದು ಗೊತ್ತಾದ ಮೇಲೆ ಶರತ್ ಸಾಕಷ್ಟು ಕಷ್ಟಪಟ್ಟರು. ದಿನದ ಹೆಚ್ಚು ಸಮಯವನ್ನು ಈಜು ಕೊಳದಲ್ಲಿಯೇ ಕಳೆದರು. ಈತನ ಸಾಧನೆಗೆ ಕೋಚ್ ಜಾನ್ ಕ್ರಿಸ್ಟೋಫರ್ ನೆರವಾದರು. 2009ರ ಐವಾಸ್ ಕ್ರೀಡಾಕೂಟದಲ್ಲಿ ಎರಡು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಒಂದು ಕಂಚು ಜಯಿಸಿದರು. 100ಮೀ. ಹಾಗೂ 50ಮೀ. ಬೆಸ್ಟ್‌ಸ್ಟ್ರೋಕ್ ಮತ್ತು 50ಮೀ. ಬಟರ್ ಫ್ಲೈ ವಿಭಾಗದಲ್ಲಿ ಸ್ಪರ್ಧಿಸುವ ಶರತ್‌ಗೆ ವಿಶ್ವ ರ‌್ಯಾಂಕಿಂಗ್‌ನಲ್ಲಿ 13ನೇ ಸ್ಥಾನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.