ADVERTISEMENT

ಅಟೊ ಟೆಕ್

ಪ್ರಜಾವಾಣಿ ವಿಶೇಷ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST
ಅಟೊ ಟೆಕ್
ಅಟೊ ಟೆಕ್   

ಚೈನ್, ಬೆಲ್ಟ್
ಸೈಕಲ್ ಬಳಸಿದವರೆಲ್ಲಾ ಚೈನ್ ಬಿಚ್ಚಿಕೊಳ್ಳುವ, ತುಂಡಾಗುವ  ತೊಂದರೆಯನ್ನು ಒಂದಲ್ಲಾ ಒಂದು ಸಮಯದಲ್ಲಿ ಅನುಭವಿಸಿಯೇ ಇರುತ್ತೇವೆ ಅಲ್ಲವೇ? ಚೈನ್ ಸರಿ ಇಲ್ಲದೇ ಇದ್ದರೆ ಸೈಕಲ್ ಮುಂದೆ ಹೋಗದೆ ನಿಂತೇ ಬಿಡುತ್ತದೆ. ಅಂದರೆ ಸ್ನಾಯು ಶಕ್ತಿ ಯಾಂತ್ರಿಕ ಶಕ್ತಿಯಾಗಿ ಪರಿವರ್ತಿತಗೊಳ್ಳಲು ಮಾಧ್ಯಮವೊಂದರ ಅಗತ್ಯ ಇದ್ದೇ ಇರುತ್ತದೆ. ಆ ಮಾಧ್ಯಮವೇ ವಾಹನದ ಚಲನೆಗೆ ಮೂಲ ಶಕ್ತಿ.

ತಂತ್ರಜ್ಞಾನ ಮುಂದುವರೆದಂತೆ ವಾಹನದ ಚಾಲನೆಗೆ ಸ್ನಾಯು ಶಕ್ತಿಯ ಬಳಕೆ ಇಲ್ಲವಾಗಿ ಯಾಂತ್ರಿಕ ಶಕ್ತಿಯೇ ಸಾಕಾಯಿತು. ಆದರೆ ಎಂಜಿನ್ ಎಂಬ ಶಕ್ತಿ ಕೇಂದ್ರದಿಂದ ಚಕ್ರಕ್ಕೆ ಶಕ್ತಿ ಸಾಗಬೇಕಾದರೆ ಮತ್ತೆ ಈ ಚೈನ್ ಎಂಬ ಮಾಧ್ಯಮ ಬೇಕೇ ಬೇಕಾಯಿತು. ಅದರಲ್ಲಿ ಕಾಲ ಕಳೆದಂತೆ ಅನೇಕ ಸುಧಾರಣೆಗಳಾಗಿ ಹೊಸ ಹೊಸ ರೂಪಗಳನ್ನು ಈ ಮಾಧ್ಯಮ ಪಡೆದಿದೆ. ಇಲ್ಲಿದೆ ಈ ಮಾಧ್ಯಮದ ಕಿರು ಪರಿಚಯ.
 

ಚೈನ್ ಡ್ರೈವ್
ಇದು ವಾಹನದ ಲೋಕದ ಅತ್ಯಂತ ಮೂಲಭೂತ ಹಾಗೂ ಹಳೆಯ ತಂತ್ರಜ್ಞಾನ. ವಾಹನ ಲೋಕಕ್ಕೂ ಮುಂಚೆ ಗಿರಣಿಗಳಲ್ಲಿ, ಕಾರ್ಖಾನೆಗಳಲ್ಲಿ ಸರಪಳಿಯನ್ನು ಬಳಸಿ ವಸ್ತುಗಳನ್ನು ಸಾಗಿಸುವ, ಎತ್ತುವ, ಇಳಿಸುವ ಕೆಲಸ ಮಾಡಲಾಗುತ್ತಿತ್ತು. ಅದನ್ನೇ ಆರಂಭದಲ್ಲಿ ಸೈಕಲ್‌ನಲ್ಲಿ ಬಳಸಿಕೊಂಡು, ಈಗಲೂ ಮೋಟಾರ್ ಸೈಕಲ್‌ಗಳಲ್ಲಿ ಚೈನ್‌ನ್ನು ಬಳಸಲಾಗುತ್ತಿದೆ.
 
ಹೆಚ್ಚು ಸಾಮರ್ಥ್ಯದ ಬೈಕ್‌ಗಳಲ್ಲಿ ಚೈನ್ ಡ್ರೈವ್ ಇರಲೇಬೇಕು. ಹೆಚ್ಚಿನ ವೇಗವನ್ನು ಬೈಕ್ ಗಳಿಸಿದಾಗ ಅದಕ್ಕೆ ಅಷ್ಟೇ ಸಮರ್ಥವಾಗಿ ಚಾಲನೆ ನೀಡುವ ಕೆಲಸವನ್ನು ಚೈನ್ ಮಾಡುತ್ತದೆ. ವಾಹನದ ಎಂಜಿನ್‌ನಲ್ಲಿನ ಪುಲ್ಲಿಯಲ್ಲಿ ಜೋಡಿಸಲಾದ ಹಲ್ಲಿನ ಚಕ್ರದಿಂದ, ವಾಹನದ ಹಿಂಬದಿಯ ಚಕ್ರದಲ್ಲಿರುವ ಹಲ್ಲಿನ ಚಕ್ರಕ್ಕೆ ಚೈನ್ ಬಂಧಿತವಾಗಿರುತ್ತದೆ.

ಎಂಜಿನ್ ಚಾಲೂ ಆದಂತೆ ಪುಲ್ಲಿ ತಿರುಗಿ, ಚೈನ್‌ನ ಮೂಲಕ ಚಕ್ರಕ್ಕೆ ಚಾಲನೆ ಸಿಗುತ್ತದೆ. ಚೈನ್ ಹಳೆಯದಾದಂತೆ ಸವೆಯುವ ಕಾರಣ ಬದಲಿಸಬೇಕು. ಇಲ್ಲವಾದಲ್ಲಿ ತುಂಡಾಗುತ್ತದೆ. ಅಲ್ಲದೇ ಆಗಾಗ ಚೈನ್ ಸಡಿಲವೂ ಆಗುತ್ತದೆ. ಆಗ ಬಿಗಿಗೊಳಿಸಿಕೊಂಡರೆ ಸಾಕು.

ಬೆಲ್ಟ್ ಡ್ರೈವ್
ಚೈನ್‌ಗಿಂತಲೂ ಕೊಂಚ ಸುಧಾರಿತ ತಂತ್ರಜ್ಞಾನ ಬೆಲ್ಟ್ ಡ್ರೈವ್. ಆದರೆ ಇದು ಕೇವಲ ಕಡಿಮೆ ಸಾಮರ್ಥ್ಯದ ಬೈಕ್‌ಗಳು ಹಾಗೂ ಸ್ಕೂಟರ್‌ಗಳಲ್ಲಿ ಬಳಕೆಯಾಗುತ್ತದೆ. ಅತಿ ಗಡುಸಾದ ರಬ್ಬರ್‌ನಿಂದ ತಯಾರಾದ ಹಲ್ಲಿನ ಚಕ್ರದ ಮೇಲೆ ಕೂರಬಹುದಾದ ಒಳ ರಚನೆಯಿರುವ ಈ ಬೆಲ್ಟ್, ಚೈನ್‌ನಂತೆಯೇ ಕೆಲಸ ಮಾಡುತ್ತದೆ.

ಕೊಂಚ ಹೆಚ್ಚು ಸಾಮರ್ಥ್ಯದ ವಾಹನಗಳಲ್ಲಿ ರಬ್ಬರ್ ಬೆಲ್ಟ್‌ಗೆ ಲೋಹದ ಪುಡಿಯ ಮಿಶ್ರಣವನ್ನು ಮಾಡಲಾಗಿರುತ್ತದೆ. ಬೆಲ್ಟ್ ತುಂಡಾಗದೇ ಇರಲಿ ಎಂದು ಈ ಮುನ್ನೆಚ್ಚರಿಕೆ. ಅಕ್ಕಿ ಬೀಸುವ ಗಿರಣಿಗಳಲ್ಲಿ ನಾವು ಬಟ್ಟೆ ಬೆಲ್ಟ್‌ಗಳನ್ನು ನೋಡಿರುತ್ತೇವೆ. ಇದೇ ತಂತ್ರಜ್ಞಾನ ಇಲ್ಲೂ ಬಳಕೆಯಾಗಿರುವುದು. ಬೆಲ್ಟ್ ಸವೆದಿದೆಯೇ ಎಂದು ಆಗಾಗ ಪರೀಕ್ಷಿಸಬೇಕು. ಇಲ್ಲವಾದಲ್ಲಿ ಪ್ರಯಾಣದ ಮಧ್ಯೆಯೇ ತುಂಡಾಗುವ ಸಾಧ್ಯತೆ ಇರುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.