ADVERTISEMENT

ಅತಿ ವೇಗದ ಸರದಾರ ಬ್ಲಡ್‌ಹೌಂಡ್!

ನೇಸರ ಕಾಡನಕುಪ್ಪೆ
Published 10 ಜುಲೈ 2013, 19:59 IST
Last Updated 10 ಜುಲೈ 2013, 19:59 IST

ಅತಿ ವೇಗದ ಕಾರ್‌ಗಳನ್ನು ತಯಾರಿಸುವ ಖಯಾಲಿ ಪಾಶ್ಚಿಮಾತ್ಯ ವಾಹನ ಎಂಜಿನಿಯರ್‌ಗಳಿಗೆ ಹೆಚ್ಚು. ಅಮೆರಿಕ ಹಾಗೂ ಯೂರೋಪ್‌ನ ಅನೇಕ ರಾಷ್ಟ್ರಗಳಲ್ಲಿ ಅತಿವೇಗದ ಕಾರ್‌ಗಳನ್ನು ತಯಾರಿಸಿ ದಾಖಲೆಗಳನ್ನು ಮುರಿಯುವ ಸಂಪ್ರದಾಯ ಸುಮಾರು 2 ದಶಕಗಳನ್ನೂ ಮೀರಿ ಬೆಳೆದುಬಂದಿದೆ.

ಇಂಗ್ಲೆಂಡ್‌ನ ವಾಹನ ತಂತ್ರಜ್ಞ, ಅತಿವೇಗದ ಸರದಾರ ಎಂದೇ ಪ್ರಸಿದ್ಧನಾಗಿರುವ ರಿಚರ್ಡ್ ನೊಬೆಲ್ ಸುಮಾರು 28 ವರ್ಷಗಳಿಂದ ಅತಿ ವೇಗದ ಕಾರ್‌ಗಳನ್ನು ತಯಾರಿಸಿ ದಾಖಲೆ ನಿರ್ಮಿಸುವುದರಲ್ಲೇ ಸಿದ್ಧಹಸ್ತ. 1983ರಲ್ಲಿ ನೆವಾಡಾ ಮರುಭೂಮಿಯಲ್ಲಿ ಥರ್ಸ್ಟ್ 2 ಎಂಬ ಕಾರನ್ನು ತಯಾರಿಸಿ ಅದರಲ್ಲಿ ಗಂಟೆಗೆ 1019 ಕಿಲೋಮೀಟರ್ ವೇಗವನ್ನು ಮುಟ್ಟಿ ದಾಖಲೆ ನಿರ್ಮಿಸಿದ್ದ. ಆ ಕಾರ್‌ನಲ್ಲಿ ವಿಮಾನಗಳಲ್ಲಿ ಬಳಸಲಾಗುವ ಜೆಟ್ ಎಂಜಿನ್ ಒಂದನ್ನು ಅಳವಡಿಸಲಾಗಿತ್ತು.

ನೆವಾಡಾದ ಮರುಭೂಮಿಯಲ್ಲಿ ಈ ವೇಗದಲ್ಲಿ ಕಾರ್ ಚಲಿಸಿದಾಗ ಅಕ್ಷರಶಃ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಹೌಹಾರಿ, ಬಿಟ್ಟ ಬಾಯಿ ಬಿಟ್ಟಂತೆ ನಿಂತಿದ್ದರಂತೆ. ಇದಕ್ಕೂ ಮುಂಚೇ ರಿಚರ್ಡ್ ಥರ್ಸ್ಟ್ ಎಂಬ ಮತ್ತೊಂದು ಕಾರ್ ಅನ್ನು ತಯಾರಿಸಿ ಉತ್ತಮ ವೇಗವನ್ನೇ ಪಡೆದಿದ್ದ. ನಂತರ 1997ರಲ್ಲಿ ಥರ್ಸ್ಟ್ ಎಸ್‌ಎಸ್‌ಸಿ ಎಂಬ ಮತ್ತೊಂದು ಜೆಟ್ ಎಂಜಿನ್ ಕಾರ್ ನಿರ್ಮಿಸಿ ಆಂಡೀ ಗ್ರೀನ್ ಎಂಬ ಪೈಲಟ್ ಸಹಾಯದಿಂದ 1228 ಕಿಲೋಮೀಟರ್ ವೇಗದ ದಾಖಲೆ ನಿರ್ಮಿಸಿದ್ದ.

ಈಗ ಈವರೆಗೂ ಯಾರೂ ನಿರ್ಮಿಸಲು ಬರೋಬ್ಬರಿ 1609 ಕಿಲೋಮೀಟರ್ ವೇಗ ಗಳಿಸುವ ಕಾರ್ ಅನ್ನು ರಿಚರ್ಡ್ ನಿರ್ಮಿಸಿದ್ದಾನೆ. ಈ ಕಾರ್ ನಿಂತಲ್ಲಿಂದ 42 ಸೆಕೆಂಡ್‌ಗಳಲ್ಲಿ 1609 ಕಿಲೋಮೀಟರ್ ವೇಗ ಗಳಿಸುತ್ತದೆ. ಈ ವೇಗದಲ್ಲಿ ಕಾರ್‌ನ ಚಾಲಕ ತನ್ನ ದೇಹದ ತೂಕಕ್ಕಿಂತ ಎರಡೂವರೆ ಪಟ್ಟು ತೂಕವನ್ನು ಅನುಭವಿಸುತ್ತಾನೆ. ಕಾರ್‌ನ ವೇಗ ಎಷ್ಟಿರುತ್ತದೆ ಎಂದರೆ ದೇಹದ ಎಲ್ಲ ರಕ್ತವೂ ಒಮ್ಮೆಗೇ ತಲೆಗೆ ನುಗ್ಗುತ್ತದಂತೆ. ಅದನ್ನು ತಡೆದುಕೊಳ್ಳುವ ಯುದ್ಧ ವಿಮಾನ ಚಾಲಕ ಮಾತ್ರ ಈ ಕಾರ್ ಚಾಲನೆ ಮಾಡಲು ಅರ್ಹ! ಅದಕ್ಕಾಗೇ ಇದಕ್ಕೆ ಬ್ಲಡ್‌ಹೌಂಡ್ ಎಸ್‌ಎಸ್‌ಸಿ ಎಂದು ಹೆಸರಿಡಲಾಗಿದೆ.

ಲಂಡನ್‌ನ ವಿಜ್ಞಾನ ಸಂಗ್ರಹಾಲಯ ಈ ವೇಗದ ಕಾರ್ ನಿರ್ಮಿಸುವ ಯೋಜನೆಯನ್ನು ಹುಟ್ಟುಹಾಕಿದ್ದು. ಇಂಗ್ಲೆಂಡ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಾಜಿ ಸಚಿವ ಲಾರ್ಡ್ ಡ್ರೇಯ್ಸನ್ ಇದನ್ನು ರೂಪಿಸಿದ್ದು. 2006ರಿಂದ ಸತತವಾಗಿ ರಿಚರ್ಡ್ ನೊಬೆಲ್ ಹಾಗೂ ಆಂಡಿ ಗ್ರೀನ್ ಒಟ್ಟಿಗೆ ಈ ಕಾರ್ ಅನ್ನು ಅಭಿವೃದ್ಧಿಪಡಿಸಿ, ಈಗ ಪ್ರಾಯೋಗಿಕ ಚಾಲನೆಯಲ್ಲಿ ಯಶಸ್ಸು ಕಂಡಿದ್ದಾರೆ.

ಬರೋಬ್ಬರಿ ಶಕ್ತಿ
ಈ ಕಾರ್‌ನ ಬರೋಬ್ಬರಿ ಶಕ್ತಿಯನ್ನು ಹೀಗೆ ಕಲ್ಪಿಸಿಕೊಳ್ಳಬಹುದು. ಸುಮಾರು 160 ಫಾರ್ಮುಲಾ ಒನ್ ಕಾರ್‌ಗಳ ಎಂಜಿನ್ ಅನ್ನು ಒಂದೆಡೆ ಇಟ್ಟು ಒಟ್ಟಿಗೆ ಚಲಾಯಿಸಿದರೂ, ಬ್ಲಡ್‌ಹೌಂಡ್‌ಗೆ ಸರಿಸಾಟಿಯಾಗುವುದಿಲ್ಲ. ಇದಕ್ಕೆ ಬಳಕೆಯಾಗಿರುವುದು ಎರಡು ಎಂಜಿನ್, ಒಂದು ಜೆಟ್ ಹಾಗೂ ಒಂದು ರಾಕೆಟ್! ಯೂರೋಜೆಟ್ ಇಜೆ200 ಎಂಬ ವಿಮಾನದ ಜೆಟ್ ಎಂಜಿನ್ ಅನ್ನು ಕೂರಿಸಲಾಗಿದೆ.

ಇದು ಕಾರ್‌ಗೆ ಪ್ರಾಥಮಿಕ 480 ಕಿಲೋಮೀಟರ್ ವೇಗ ನೀಡುತ್ತದೆ. ನಂತರ ಒಂದು ಹೈಬ್ರಿಡ್ ರಾಕೆಟ್ 1609 ಕಿಲೋಮೀಟರ್ ವೇಗಕ್ಕೆ ತಂದು ನಿಲ್ಲಿಸುತ್ತದೆ. ಅದಲ್ಲದೇ ಒಂದು 2.4 ಲೀಟರ್ ಸಾಮರ್ಥ್ಯದ ಕಾಸ್‌ವರ್ತ್ ಫಾರ್ಮುಲಾ 1 ವಿ8 ಎಂಜಿನ್ ಇದೆ. ಸಾಮಾನ್ಯ ರಸ್ತೆಗಳಲ್ಲಿ ಕಾರ್ ಅನ್ನು ಚಲಿಸಲು ಇದು ಸಹಾಯ ಮಾಡುತ್ತದೆ. ಜೆಟ್ ಎಂಜಿನ್ 9 ಟನ್ ಶಕ್ತಿಯನ್ನು ಕಾರ್‌ಗೆ ನೀಡಿದರೆ, ರಾಕೆಟ್ ಹೆಚ್ಚುವರಿ 12 ಟನ್ ಶಕ್ತಿಯನ್ನು ನೀಡಿ ಈ ಮಹತ್ ವೇಗವನ್ನು ಕಾರ್‌ಗೆ ನೀಡುತ್ತದೆ.

36 ಇಂಚ್‌ಗಳ ಚಕ್ರಗಳು ಈ ಕಾರ್‌ನಲ್ಲಿವೆ. ನಿಮಿಷಕ್ಕೆ 10200 ತಿರುವುಗಳನ್ನು ಈ ಚಕ್ರಗಳು ಹಾಕುತ್ತವೆ. ಇದೂ ಒಂದು ದಾಖಲೆಯೇ. ಇಷ್ಟೊಂದು ವೇಗ ಹಿಂದೆದೂ ಸಿಕ್ಕಿರಲಿಲ್ಲ. ದೂರದಿಂದ ನೋಡಲು ಫಾರ್ಮುಲಾ 1 ಕಾರ್‌ಗಳಂತೆಯೇ ರಚನೆ ಇದೆ. ಕಾರ್‌ನ ಮೇಲೆ ಗಾಳಿ ಒಳಹೋಗುವ ತೆರದ ಕಿಂಡಿ ಇದೆ. ರಾಕೆಟ್‌ನಂತೆ ಕೊಳವೆ ಆಕಾರದ ದೇಹ ಗಾಳಿಯನ್ನು ಸೀಳಿ ಮುಂದುವರೆಯಲು ಅನುಕೂಲಕಾರಿಯಾಗಿವೆ. ಆದಷ್ಟೂ ಗಾಳಿಯ ಹೊಡೆತವನ್ನು ತಪ್ಪಿಸಿ, ವೇಗ ಹೆಚ್ಚಿಸುವುದು ಈ ತಂತ್ರಜ್ಞರ ಪ್ರಯತ್ನವಾಗಿತ್ತು. ಸತತ 28 ವರ್ಷಗಳಲ್ಲಿ ಈ ಸಾಧನೆ ಮಾಡಿರುವ ರಿಚರ್ಡ್ ನೊಬೆಲ್ ಈಗ ವಿಶ್ವದ ಅತಿ ವೇಗದ ಸರದಾರರಲ್ಲಿ ಒಬ್ಬನಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.