ADVERTISEMENT

ಆಟೊಟೆಕ್

ಪ್ರಜಾವಾಣಿ ವಿಶೇಷ
Published 5 ಡಿಸೆಂಬರ್ 2012, 19:39 IST
Last Updated 5 ಡಿಸೆಂಬರ್ 2012, 19:39 IST

ವಾಹನಗಳಲ್ಲಿ ಎರಡು ಬಗೆ. 2 ಸ್ಟ್ರೋಕ್ ಹಾಗೂ 4 ಸ್ಟ್ರೋಕ್. ಎಂಜಿನ್‌ನ ವಿಧದಿಂದ ಈ ವ್ಯತ್ಯಾಸವನ್ನು ಗುರುತಿಸಬಹುದೇ ಹೊರತು, ಮಿಕ್ಕೆಲ್ಲ ಆಯಾಮಗಳಲ್ಲಿ ವಾಹನ ಒಂದೇ ಆಗಿರುತ್ತದೆ. ಆದರೆ ವಾಹನದ ಆತ್ಮ ಎಂಜಿನ್ ಆಗಿರುವುದರಿಂದ 2 ಸ್ಟ್ರೋಕ್, 4 ಸ್ಟ್ರೋಕ್ ಎಂಬ ವಿಭಜನೆ ಮುಖ್ಯವೂ ಹೌದು, ಅನಿವಾರ್ಯವೂ ಹೌದು. ಈಗಿನ ಸಾರಿಗೆ ನಿಯಮಗಳ ಅನುಸಾರ 2 ಸ್ಟ್ರೋಕ್ ಎಂಜಿನ್ ತಯಾರಿಕೆಗೆ ಅವಕಾಶವೇ ಇಲ್ಲವಾದ ಕಾರಣ, ಕೇವಲ 4 ಸ್ಟ್ರೋಕ್ ಎಂಜಿನ್‌ಗಳುಳ್ಳ ವಾಹನಗಳು ಮಾತ್ರ ಉತ್ಪಾದನೆ ಆಗುತ್ತಿವೆ.

ಯಾವುದೇ ಎಂಜಿನ್ ಇರಲಿ, ಅದಕ್ಕೆ ಎಂಜಿನ್ ಆಯಿಲ್ ಬಳಸಲೇಬೇಕು. ಕೇವಲ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಳ್ಳುತ್ತಿದ್ದರೆ ಸಾಲದು. ಎಂಜಿನ್ ಒಳಗಿನ ವಿವಿಧ ಭಾಗಗಳು ಸವೆಯದೇ ಇರಲು ಈ ಎಂಜಿನ್ ಆಯಿಲ್ ಸಹಕಾರಿ. ಇದನ್ನು ಬಳಸುತ್ತಿದ್ದರೆ, ಎಂಜಿನ್‌ನ ಆಯಸ್ಸೂ ಹೆಚ್ಚು. ಆಯಿಲ್ ಬಳಕೆ ಉತ್ತಮವಾಗಿದ್ದರೆ, ಒಳಭಾಗಗಳು ಕಾಲ ಕ್ರಮೇಣ ಸವೆದಂತೆ ಬದಲಿಸಿಕೊಳ್ಳಬೇಕೇ ವಿನಃ ಎಂಜಿನ್ ಅನ್ನೇ ಸಾರಾಸಗಟಾಗಿ ಬದಲಿಸಬೇಕಾದ ಪ್ರಮೇಯ ಬರುವುದಿಲ್ಲ.

ಆಯಿಲ್ ಫಿಲ್ಟರ್
ಆದರೆ ಎಂಜಿನ್ ಆಯಿಲ್‌ನಲ್ಲೂ ಒಂದು ಸಮಸ್ಯೆಯಿದೆ. ಏನೆಂದರೆ, ಅತಿ ಸೂಕ್ಷ್ಮವಾದ ಕಸ ಅದರಲ್ಲಿ ಸೇರಿರಬಹುದು. ಸಾಮಾನ್ಯವಾದ ಸೋಸು ಸಾಧನಗಳಲ್ಲಿ ಅದು ಸಿಗುವುದೇ ಇಲ್ಲ. ಅಲ್ಲದೇ, 4 ಸ್ಟ್ರೋಕ್ ಎಂಜಿನ್‌ಗಳಲ್ಲಿ ಎಂಜಿನ್ ಆಯಿಲ್ ಅನ್ನು ಪೆಟ್ರೋಲ್ ಜತೆ ಮಿಶ್ರ ಮಾಡಿ ಹಾಕದೇ ಇರುವ ಕಾರಣ, ನೇರವಾಗಿ ಎಂಜಿನ್‌ನಲ್ಲೇ ಅಡಕವಾಗಿ ಬಿಟ್ಟಿರುತ್ತದೆ.

ಹಾಗಾಗಿ ಎಂಜಿನ್ ಆಯಿಲ್ ಫಿಲ್ಟರ್ ಬೇಕೇ ಬೇಕು. ಇದು ಎಂಜಿನ್‌ನೊಳಗೇ ಕೂರುವ ಪುಟ್ಟ ಸಾಧನ. ವೃತ್ತಾಕಾರದ ಈ ಸಾಧನ, ಹೊರಭಾಗದಲ್ಲಿ ತಗಡಿನಿಂದಲೂ, ಒಳಗೆ ಪೇಪರ್‌ನಿಂದಲೂ ಮಾಡಲ್ಪಟ್ಟಿರುತ್ತದೆ. ಎಂಜಿನ್ ಒಳಗೆ ಪೆಟ್ರೋಲ್ ಆಯಿಲ್ ಜತೆಗೆ ಬೆರೆತು, ಈ ಫಿಲ್ಟರ್ ಮೂಲಕ ಸಾಗಿ ಬಂದಾಗ ಏನೇ ಕಸವಿದ್ದರೂ ಅದು ಸೋಸಿ ಹೋಗುತ್ತದೆ.

ADVERTISEMENT

ಕೂಲಿಂಗ್ ಫ್ಯಾನ್
ದೊಡ್ಡ ಸಾಮರ್ಥ್ಯದ ಎಂಜಿನ್‌ಗಳು ಬಹುಬೇಗ ಬಿಸಿಯಾಗುತ್ತವೆ. ಏಕೆಂದರೆ ಅವುಗಳಲ್ಲಿ ಬಳಕೆಯಾಗುವ ಇಂಧನ ಪ್ರಮಾಣ ಹೆಚ್ಚು. ಅದರಂತೆ ಬಿಡುಗಡೆ ಆಗುವ ಶಾಖವೂ ಹೆಚ್ಚು. ಹಾಗಾಗಿ ಸಾಮಾನ್ಯವಾಗಿ ದೊಡ್ಡ ಎಂಜಿನ್‌ಗಳನ್ನು ತಂಪಾಗಿಸಲು ರೇಡಿಯೇಟರ್ ಎಂಬ ಸಾಧನ ಬಳಸಲಾಗುತ್ತದೆ. ಹಿಂದಿನ ಕಾಲದಲ್ಲಿ ಈ ರೇಡಿಯೇಟರ್‌ನಲ್ಲಿ ನೀರು ತುಂಬಲಾಗುತ್ತಿತ್ತು. ಈಗ ನೀರಿನ ಬದಲಿಗೆ ಎಂಜಿನ್ ಕೂಲೆಂಟ್ ಎಂಬ ರಾಸಾಯನಿಕ ಬಳಸಲಾಗುತ್ತದೆ.

ಇದರ ಜತೆಗೆ ಕೂಲಿಂಗ್ ಫ್ಯಾನ್ ಎಂಬ ಹೆಚ್ಚುವರಿ ಸಾಧನ ಇರುತ್ತದೆ. ಇದು ರೇಡಿಯೇಟರ್‌ನ ಹೊರಗಿದ್ದು, ಆಗಾಗ ಚಾಲನೆಗೊಳಗಾಗಿ ಹೊರಗಿನ ತಂಪಾದ ಗಾಳಿಯನ್ನು ರೇಡಿಯೇಟರ್ ಮೂಲಕ ಒಳ ಕಳುಹಿಸುತ್ತದೆ. ಸಾಮಾನ್ಯವಾಗಿ ಅಲ್ಯೂಮಿನಿಯಂನಿಂದ ಇದನ್ನು ತಯಾರಿಸಲಾಗಿರುತ್ತದೆ. ಏಕೆಂದರೆ ಎಷ್ಟು ಬೇಗ ಇದು ಬಿಸಿಯಾಗುವುದೋ, ಅಷ್ಟೇ ಬೇಗ ತಣ್ಣಗಾಗಲಿ ಎಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.