ADVERTISEMENT

ಆಟೊ ಟೆಕ್

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2012, 19:30 IST
Last Updated 29 ಫೆಬ್ರುವರಿ 2012, 19:30 IST
ಆಟೊ ಟೆಕ್
ಆಟೊ ಟೆಕ್   

ಚಕ್ರದ ಅನ್ವೇಷಣೆಯ ಕಾಲದಿಂದಲೂ ಮಾನವನಿಗೆ ವಾಹನದಲ್ಲಿಸಂಚರಿಸಬೇಕು ಎಂಬ ಆಸೆ ಇದ್ದೇ ಇತ್ತು. ಆರಂಭದಲ್ಲಿ ರಥಗಳನ್ನು ತಯಾರಿಸಿ, ಆ ನಂತರ ಬೈಸಿಕಲ್ ಅನ್ನು ತಯಾರಿಸಿದ ಮೇಲೆ, ನಡಿಗೆಯ ಸಹಾಯವಿಲ್ಲದೇ ವಾಹನವೇರಿ ಸಂಚರಿಸಬಹುದಾದ ಅದ್ಭುತ ಸಾಧ್ಯತೆಯನ್ನು ಮಾನವ ಕಂಡುಕೊಂಡನು. ನಂತರ ತ್ರಿಚಕ್ರ, ನಾಲ್ಕು ಚಕ್ರದ ವಾಹನಗಳ ಅನ್ವೇಷಣೆಯೂ ಆಯಿತು.
 
ಆದರೆ ಮನುಷ್ಯ ಮತ್ತಷ್ಟು, ಮಗದಷ್ಟು ಆರಾಮವನ್ನು ನಿರೀಕ್ಷಿಸುತ್ತಾನೆ. ದಿನ ಕಳೆದಂತೆ ವಾಹನಗಳ ಕುಲುಕಾಟದ ಸವಾರಿ ಕಷ್ಟವಾಯಿತು. ಬೆನ್ನು ನೋವು ಮುಂತಾದ ದೈಹಿಕ ಸಮಸ್ಯೆಗಳೂ ಎದುರಾದವು. ಕೆಟ್ಟ ರಸ್ತೆಗಳಲ್ಲಿ ಸಂಚರಿಸುವುದು ನಿಜಕ್ಕೂ ಕಷ್ಟವಾಯಿತು. ಜತೆಗೆ ವಾಹನ ಚಾಸಿಸ್ (ಅಡಿಕಟ್ಟು) ಕುಲುಕಾಟದಿಂದಾಗಿ ನಿಧಾನವಾಗಿ ಬಿರುಕು ಬಿಡುತ್ತ ಹಾಳಾಗಲು ಪ್ರಾರಂಭವಾಯಿತು. ಆಗ ಅನ್ವೇಷಣೆಗೊಂಡಿದ್ದೇ ಸಸ್ಪೆನ್ಷನ್.

ಕುದುರೆ ಗಾಡಿಗಳಲ್ಲಿ ನೋಡಿರಬಹುದು. ಒಂದರ ಮೇಲೊಂದರಂತೆ ಕಬ್ಬಿಣದ ಪಟ್ಟಿಗಳನ್ನು ಚಕ್ರದ ಮೇಲೆ ಜೋಡಿಸಿರುತ್ತಾರೆ. ಇದನ್ನು ಬ್ಲೇಡ್ ಸಸ್ಪೆನ್ಷನ್ ಎನ್ನುತ್ತಾರೆ. ಇದೇ ಸಸ್ಪೆನ್ಷನ್‌ನ ಮೊದಲ ಅವತರಣಿಕೆ. ಈಗ ತರಾವರಿ ಸಸ್ಪೆನ್ಷನ್ ಸಿಸ್ಟಂಗಳು ಅಭಿವದ್ಧಿಗೊಂಡಿವೆ. ಆಟೋಟೆಕ್‌ನಲ್ಲಿದೆ ಅವುಗಳ ಕಿರುಪರಿಚಯ-

ಕಾಯಿಲ್ ಸ್ಪ್ರಿಂಗ್ ಸಸ್ಪೆನ್ಷನ್
ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಲ್ಲಿ ಅತಿ ಹೆಚ್ಚು ಪ್ರಸಿದ್ಧಗೊಂಡ, ಇಂದಿಗೂ ಬಳಕೆಯಲ್ಲಿರುವ ತಂತ್ರಜ್ಞಾನವಿದು. ಅತಿ ಹೆಚ್ಚು ಸಾಂದ್ರತೆಯುಳ್ಳ ಉಕ್ಕಿನ ಸರಳನ್ನು ಸುರುಳಿಯಾಗಿ ಸುತ್ತಿದಾಗ ಸ್ಪ್ರಿಂಗ್ ರೂಪು ಗೊಳ್ಳುತ್ತದೆ. ಇದರ ವಿಶೇಷತೆ ಒತ್ತಡವನ್ನು ಪ್ರತಿಫಲಿಸುವುದು. ಎಷ್ಟು ಒತ್ತಡ ಹೇರಿದರೂ, ಅದನ್ನು ಮರಳಿ ವಾಪಸು ಕಳುಹಿಸುವ ಶಕ್ತಿ ಸ್ಪ್ರಿಂಗ್‌ಗೆ ಇರುತ್ತದೆ. ಹಾಗಾಗೇ ಸ್ಪ್ರಿಂಗ್ ಅನ್ನು ವಾಹನದ ಸಸ್ಪೆನ್ಷನ್‌ನಲ್ಲಿ ಬಳಸಿಕೊಳ್ಳಲಾಯಿತು.
 
ಇಲ್ಲಿ ಕೇವಲ ಸ್ಪ್ರಿಂಗ್ ಇದ್ದರೆ ಸಾಲದು. ಸ್ಪ್ರಿಂಗ್ ಅನ್ನು ನೇರ ಆಕಾರದಲ್ಲಿ ಇರಿಸಿಕೊಳ್ಳಬಹುದಾದ ಬಲವಾದ ಒಂದರೊಳಗೊಂದು ಆಡುವ ಕೊಳವೆಗಳಿರುತ್ತವೆ. ವಾಹನ ಚಲಿಸುತ್ತ ಹಳ್ಳ ಕೊಳ್ಳಗಳಿಗೆ ಇಳಿದಂತೆ, ಚಕ್ರದ ಮೂಲಕ ಕುಲುಕಾಟವನ್ನು ದೇಹಕ್ಕೆ ತಲುಪಿಸದಂತೆ ಅದನ್ನು ವಾಪಸ್ಸು ಪ್ರತಿಫಲಿಸುವುದೇ ಕಾಯಿಲ್ ಸ್ಪ್ರಿಂಗ್ ಸಸ್ಪೆನ್ಷನ್‌ನ ಕೆಲಸ. ವಾಹನದ ತೂಕ, ಎಂಜಿನ್ ಸಾಮರ್ಥ್ಯಕ್ಕೆ ತಕ್ಕಂತೆ ಸ್ಪ್ರಿಂಗ್‌ನ ಶಕ್ತಿಯನ್ನು ನಿಗದಿಪಡಿಸಲಾಗಿರುತ್ತದೆ. ಸಾಮಾನ್ಯವಾಗಿ ಹಿಂಬದಿಯ ಚಕ್ರಗಳಿಗೆ ಇದರ ಬಳಕೆ ಆಗುತ್ತದೆ.

ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್
ಸಸ್ಪೆನ್ಷನ್‌ನಲ್ಲೆೀ ಸುಧಾರಿತ ತಂತ್ರಜ್ಞಾನವಿದು.  ವಾಸ್ತವದಲ್ಲಿ ಇದರಲ್ಲೂ ಸ್ಪ್ರಿಂಗ್‌ನ ಬಳಕೆ ಇರುತ್ತದೆ. ಆದರೆ ಮೇಲ್ನೋಟಕ್ಕೆ ಕಾಣದು. ಕೇವಲ ಮುಂದಿನ ಚಕ್ರಗಳಿಗೆ ಮಾತ್ರ ಜೋಡಿಸಲ್ಪಡುವ ಇದು, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಲ್ಲಿ ಬಳಕೆಯಾಗುತ್ತದೆ. ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್‌ನ ಮುಖ್ಯ ಲಕ್ಷಣ, ಅದು ಅತಿ ಕ್ಷಿಪ್ರವಾಗಿ ಕುಲುಕಾಟಕ್ಕೆ ಸ್ಪಂದಿಸುವುದು. ಉಕ್ಕಿನ ಗಡುಸಾದ ಕೊಳವೆಯ ಒಳಗೆ ಅದರೊಳಗೆ ತೂರುವಂತಹ ಇನ್ನೊಂದು ಕೊಳವೆಯನ್ನು ಜೋಡಿಸಿರಲಾಗುತ್ತದೆ. ಅದರೊಳಗೆ ಸ್ಪ್ರಿಂಗ್ ಇರುತ್ತದೆ.
 
ಫೋರ್ಕ್ ಆಯಿಲ್ ಎಂಬ ವಿಶೇಷ ಎಣ್ಣೆ ನಯವಾದ ಚಲನೆಯನ್ನು ನೀಡುತ್ತದೆ. ರಸ್ತೆಯಲ್ಲಿನ ಸೂಕ್ಷ್ಮ ಏರಿಳಿತಗಳಿಗೂ ಸ್ಪಂದಿಸುವ ಈ ಸಾಧನ, ಅತಿ ಚುರುಕಾಗಿ ಪ್ರತಿಕ್ರಿಸುತ್ತ ಕುಲುಕಾಟವನ್ನು ನಿಯಂತ್ರಿಸುತ್ತದೆ. ಆದರೆ ಇದಕ್ಕೆ ಅತಿ ಹೆಚ್ಚು ಭಾರವನ್ನು ಹೊರುವ ಶಕ್ತಿ ಇರುವುದಿಲ್ಲ. ಹಾಗಾಗಿ ಮುಂದಿನ ಚಕ್ರಕ್ಕೆ ಮಾತ್ರ ಇದರ ಬಳಕೆ.                

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.