ADVERTISEMENT

ಈಗ ರಜಾ ಕಾಲ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2011, 19:30 IST
Last Updated 15 ನವೆಂಬರ್ 2011, 19:30 IST
ಈಗ ರಜಾ ಕಾಲ ಸಂಭ್ರಮ
ಈಗ ರಜಾ ಕಾಲ ಸಂಭ್ರಮ   

ರಜೆ ಎಂದರೆ ವಿದ್ಯಾರ್ಥಿಗಳಿಗೆ ಮಜಾ ಮಾಡುವ ಕಾಲ. ಓದು, ಪ್ರಾಕ್ಟಿಕಲ್, ಪರೀಕ್ಷೆಗಳ ಜಂಜಾಟವಿಲ್ಲ. ಪರೀಕ್ಷೆ ಮುಗಿಯುವುದೇ ತಡ ವಿದ್ಯಾರ್ಥಿಗಳು ರಜೆಗಾಗಿ ಕಾಯುತ್ತಿರುತ್ತಾರೆ.

ಹಿಂದೆ, ರಜೆ ಎಂದರೆ, ಹಳ್ಳಿಯಲ್ಲಿರುವ ಅಜ್ಜಿ ಮನೆ ಮಕ್ಕಳ ಹಿಂಡು ಓಡುತ್ತಿತ್ತು. ಈಗಂತೂ ಹೆಚ್ಚಿನವರ ಅಜ್ಜಿ ಮನೆ ಪಟ್ಟಣವೇ ಆಗಿರುವುದರಿಂದ ಹಳ್ಳಿಗೆ ಹೋಗುವ ಪ್ರಮೇಯವೇ ಇಲ್ಲ.   ಪರೀಕ್ಷೆ ಮುಗಿಯುತ್ತಿದ್ದಂತೆ ದೂರದ ಊರುಗಳಿಗೆ ಪ್ರವಾಸ ಹೊರಡುವುದು ಈಗಿನ ಟ್ರೆಂಡ್. 

ಕೆಲವು ಕಾಲೇಜುಗಳ ವಿದ್ಯಾರ್ಥಿಗಳಿಗೀಗ ಪರೀಕ್ಷೆಯ ಸಮಯ. ಅದರಲ್ಲೂ ಮುಖ್ಯವಾಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯ. ಒಂದೆಡೆ ವಿದ್ಯಾರ್ಥಿಗಳು ರಜೆಯ ಮಜಾ ಮಾಡುತ್ತಿದ್ದರೆ ಮತ್ತೊಂದೆಡೆ ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿ ನಡೆಸುತ್ತಿದ್ದಾರೆ.

ಈಗ ಹಿಂದಿನಂತಲ್ಲ. ಮೊದಲು ವರ್ಷದ ಕೊನೆಯಲ್ಲಿಯೇ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ ಈಗ ಸೆಮಿಸ್ಟರ್ ಪದ್ಧತಿ. ಪ್ರತೀ ಆರು ತಿಂಗಳಿಗೊಮ್ಮೆ ಸೆಮಿಸ್ಟರ್ ಆರಂಭವಾಗುವುದರಿಂದ ಯಾವಾಗ ಪರೀಕ್ಷೆ ಆರಂಭವಾಗುತ್ತದೆ, ಯಾವಾಗ ಮುಗಿಯುತ್ತದೆ ಎಂದೇ ತಿಳಿಯುವುದಿಲ್ಲ.

ಮಾತ್ರವಲ್ಲ, ಸೆಮಿಸ್ಟರ್‌ಗಳ ನಡುವೆ ರಜೆಯ ಅವಧಿಯೂ ಕಡಿಮೆಯೇ. ಸಿಕ್ಕಿರುವ ರಜೆಯನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳು ಎಲ್ಲಾ ರೀತಿಯ ತಯಾರಿಯನ್ನು ನಡೆಸುತ್ತಿದ್ದಾರೆ.

ನಗರದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಈಗ ರಜಾ ಸಮಯ. ರಜಾ ದೊರೆತದ್ದೇ ತಡ, ನಗರದ ವೇಗದ, ಯಾಂತ್ರಿಕ ಬದುಕಿಗೆ ಬೇಸತ್ತ ವಿದ್ಯಾರ್ಥಿಗಳು ತಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿ ಒಂದೋ ಸಮೀಪದ ಗಿರಿಧಾಮಗಳಿಗೆ ಅಥವಾ ಕಡಲ ತೀರಕ್ಕೆ ಪ್ರವಾಸ ಹೊರಟಿದ್ದಾರೆ. ಕೆಲವರು ಟ್ರೆಕ್ಕಿಂಗ್‌ಗೆ ಹೋಗುತ್ತಿದ್ದರೆ, ಇನ್ನು ಕೆಲವರು ಪಾಂಡಿಚೇರಿ, ಗೋವಾ ಮತ್ತು ಕೇರಳಕ್ಕೆ ತೆರಳುತ್ತಿದ್ದಾರೆ.
 
ಇಂಥ ಸ್ಥಳಗಳಿಗೆ ಪ್ರವಾಸ ಹೋಗಲೆಂದೇ ಅವರು ತಮ್ಮ ಪಾಕೆಟ್ ಮನಿಯಲ್ಲಿ ಸ್ವಲ್ಪ ಉಳಿತಾಯ ಮಾಡಿಕೊಂಡಿದ್ದಾರೆ. ಮೆಟ್ರೊ ನಗರದ ವಿದ್ಯಾರ್ಥಿಗಳಿಗಂತೂ ಸಮುದ್ರ ತೀರಗಳು, ಘಟ್ಟ ಪ್ರದೇಶಗಳು ಹೆಚ್ಚು ಆಕರ್ಷಣೀಯ ತಾಣಗಳು. ಸ್ವಲ್ಪ ಮಟ್ಟಿನ ಸಾಹಸವನ್ನು ಇಷ್ಟಪಡುವವರು ಆರೇಳು ಜನರ ಗುಂಪು ಕಟ್ಟಿಕೊಂಡು ಟ್ರೆಕ್ಕಿಂಗ್ ಅಥವಾ ಚಾರಣಕ್ಕೆ ಹೊರಟು ಬಿಡುತ್ತಾರೆ.

ಈಗಂತೂ ಎಲ್ಲ ಕಾಲೇಜುಗಳಲ್ಲಿ  `ಎನ್‌ಎಸ್‌ಎಸ್~ ಮತ್ತು `ಎನ್‌ಸಿಸಿ `ತಂಡಗಳಿರುತ್ತವೆ. `ಎನ್‌ಎಸ್‌ಎಸ್~ ವಿದ್ಯಾರ್ಥಿಗಳಂತೂ ಸಮೀಪದ ಹಳ್ಳಿಗಳಲ್ಲಿ ಶ್ರಮದಾನಕ್ಕೆ ತೊಡಗುವ ಮೂಲಕ ರಜಾ ಕಾಲ ಕಳೆಯುತ್ತಾರೆ.

ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ಈ ಬಾರಿ ವಿದ್ಯಾರ್ಥಿಗಳಿಗಾಗಿ ಗೋವಾ ಮತ್ತು ಉತ್ತರ ಭಾರತದ ಪ್ರವಾಸವನ್ನು ಏರ್ಪಡಿಸಿತ್ತು. ಸುಮಾರು ಮೂವತ್ತು ವಿದ್ಯಾರ್ಥಿಗಳು ಈ ಪ್ರವಾಸಕ್ಕೆ ತೆರಳಿದ್ದು ಉಲ್ಲಸಿತರಾಗಿ ಹಿಂತಿರುಗಿದ್ದಾರೆ.

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ಈ ಪ್ರವಾಸದಿಂದಾಗಿದೆ. ಕಡಲತಡಿಯ ಊರಿನಲ್ಲಿ ಹುಟ್ಟಿ ಬೆಳೆದಿದ್ದರೂ ಕೆಲವರಿಗೆ ಗೋವಾದ ಬೀಚ್‌ಗಳಲ್ಲಿ ಸುತ್ತುವುದು ಬೇಸರ ತರಿಸುವ ವಿಷಯವಾಗಿರಲಿಲ್ಲ.
 
ಬೀಚ್‌ಗಳಲ್ಲಿ ಸುತ್ತುವುದರ ಜತೆಗೆ ಪ್ರತಿಯೊಂದು ರೆಸ್ಟೊರೆಂಟ್‌ಗಳ ಒಳಹೊಕ್ಕು ಅಲ್ಲಿನ ವಿಶೇಷ ಖಾದ್ಯಗಳ ಸವಿಯನ್ನು ಸವಿಯುವುದು ಕೆಲವರ ಹವ್ಯಾಸವಾಗಿರುವುದರಿಂದ ಇಂಥ ಪ್ರವಾಸಗಳನ್ನು ಅವರು ಇಷ್ಟಪಡುತ್ತಾರೆ.

ಆದರೆ ಇದೇ ವೇಳೆ ಕೆಲವು ವಿದ್ಯಾರ್ಥಿಗಳು ರಜೆ ಸಿಕ್ಕರೆ ಸಾಕು ಮನೆಮಂದಿ ಜತೆ ಕಾಲ ಕಳೆಯಲು ಬಯಸುತ್ತಾರೆ. ಇನ್ನು ಮನೆಮಂದಿಯಂತೂ ಮಕ್ಕಳು ಬರುವುದನ್ನೇ ಕಾಯುತ್ತಿರುತ್ತಾರೆ. ಕೆಲವು ಹೆತ್ತವರಂತೂ ಥಾಯ್ಲೆಂಡ್, ಸಿಂಗಾಪುರ ಮತ್ತು ಮಲೇಷ್ಯಾಕ್ಕೆ ಪ್ಯಾಕೇಜ್ ಟೂರ್‌ಗೆ ಹೆಸರು ನೋಂದಾಯಿಸಿ ಮಕ್ಕಳು ಬರುವುದನ್ನೇ ಕಾಯುತ್ತಿರುತ್ತಾರೆ.

  `ಈ ವರ್ಷ ಒದು ತಂಡ ದೆಹಲಿ, ಆಗ್ರಾ, ಜೈಪುರ ಮತ್ತು ಉದಯ್‌ಪುರಕ್ಕೆ ಪ್ರವಾಸ ಹೋದರೆ, ಇನ್ನೊಂದು ತಂಡ ಗೋವಾಕ್ಕೆ ತೆರಳಿದೆ. ಇವೆಲ್ಲವೂ ಶಿಕ್ಷಣ ಆಧಾರಿತ ಪ್ರವಾಸವಾಗಿದೆ. `ಎನ್‌ಎಸ್‌ಎಸ್~ ವಿದ್ಯಾರ್ಥಿಗಳು ಕೈಗಾರಿಕೆ ಆಧಾರಿತ ತರಬೇತಿಗಾಗಿ ಮಾರನಹಳ್ಳಿಗೆ ತೆರಳಿದ್ದು ಮತ್ತೊಂದು ತಂಡ ಬೇಗಲೂರು ಹಳ್ಳಿಗೆ ತೆರಳಿದೆ.
 
ಇನ್ನು ಕೆಲವು ವಿದ್ಯಾರ್ಥಿಗಳು ಬಿಳಿಗಿರಿರಂಗನ ಬೆಟ್ಟಕ್ಕೆ ಆದಿವಾಸಿಗಳ ಕುರಿತು ಅಧ್ಯಯನ ಮಾಡಲು ತೆರಳಿದೆ~ ಎನ್ನುತ್ತಾರೆ ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲರಾದ ಸಿ. ಆಲ್ಬಿನಾ.

ಮೌಂಟ್ ಕಾರ್ಮೆಲ್ ವಿದ್ಯಾರ್ಥಿಗಳು ರಜೆಯ ಮಜಾ ಸವಿಯುತ್ತಿದ್ದರೆ,  ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಬಿಸಿ ತಟ್ಟಿದೆ. ಅಲ್ಲಿನ ಮೂರರಿಂದ ಎಂಟನೇ ಸೆಮಿಸ್ಟರ್‌ವರೆಗಿನ ವಿದ್ಯಾರ್ಥಿಗಳಿಗೆ ಇದೀಗ ಲ್ಯಾಬ್ ಪರೀಕ್ಷೆಯ ಭೀತಿ ಆವರಿಸಿದೆ.
 
ವಿದ್ಯಾರ್ಥಿಗಳಿಗೆ ಮುಂದಿನ ವಾರದಿಂದ ಪರೀಕ್ಷೆಗೆ ಓದಲು ರಜೆ ಆರಂಭವಾಗುತ್ತದೆ. ಹಾಗಾಗಿ ಈಗ ಎಲ್ಲರೂ ಕೊನೆ ನಿಮಿಷದ ತಯಾರಿಯಲ್ಲಿ ತೊಡಗಿದ್ದಾರೆ.  ಅವರೀಗ ಸಾಮೂಹಿಕ ಅಧ್ಯಯನ, ಪ್ರಶ್ನೆಗಳಿಗೆ ಅಧ್ಯಾಪಕರಿಂದ ಸರಿಯಾದ ಉತ್ತರ ಪಡೆಯುವ ಆತುರದಲ್ಲಿದ್ದಾರೆ.

ಶೈಕ್ಷಣಿಕ ಪ್ರವಾಸವೇ ಆಗಿರಲಿ ಅಥವಾ ಮನೆಮಂದಿಯೊಂದಿಗಿನ ಪ್ರವಾಸವೇ ಆಗಿರಲಿ ರಜೆ ಬಂದಾಗ ವಿದ್ಯಾರ್ಥಿಗಳು ಓದಿಗೆ ವಿರಾಮ ನೀಡುತ್ತಾರೆ. ಈ ವಿರಾಮದಿಂದ ಹೊಸ ಹುಮ್ಮಸ್ಸು ಪಡೆದಾಗಲೇ ಮುಂದಿನ ಸೆಮಿಸ್ಟರ್‌ನ ಓದಿಗೆ ಖುಷಿಯ ವೇದಿಕೆ ಹಾಕಲು ಸಾಧ್ಯ. ಅಲ್ಲವೇ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.