ಗುಜರಾತ್ ಮೂಲದ ಎಲೆಕ್ಟ್ರೋಥರ್ಮ್ ಕಂಪೆನಿಯು 1983ರಿಂದಲೇ ವಿದ್ಯುಚ್ಚಾಲಿತ ಉಪಕರಣಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತವಾಗಿದ್ದು, ಕೆಲವು ವರ್ಷಗಳಿಂದೀಚೆಗೆ ವಿದ್ಯುಚ್ಚಾಲಿತ ಸ್ಕೂಟರ್‌ಗಳ ನಿರ್ಮಾಣಕ್ಕಿಳಿದಿದೆ. ರೇವಾ ಕಾರ್ ನಂತರ, ಸ್ಕೂಟರ್ ಕ್ಷೇತ್ರದಲ್ಲಿ ಯಶಸ್ಸು ಕಂಡ ಏಕೈಕ ಸ್ಕೂಟರ್ ಇದು.
ಯೋ ಹೆಸರಿನ ಜಪಾನ್ ತಂತ್ರಜ್ಞಾನ ಒಳಗೊಂಡ, ಯೋ ಎಲೆಕ್ಟ್ರಾನ್, ಯೋ ಸ್ಪಾರ್ಕ್, ಯೋ ಸ್ಟೈಲ್, ಯೋ ಎಕ್ಸ್‌ಪ್ಲೋರ್ ವಿದ್ಯುಚ್ಚಾಲಿತ ಸ್ಕೂಟರ್‌ಗಳನ್ನು ತಯಾರಿಸುತ್ತದೆ. ಅದರ ನಡುವೆ ಈಗ ಹೊಸತಾಗಿ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಯೋ ಎಕ್ಸೆಲ್ ಅತ್ಯುತ್ತಮ ಎಂದೇ ಹೇಳಬಹುದು. ಇದನ್ನು ಭಾರತದ ಮೊಟ್ಟ ಮೊದಲ ವಿದ್ಯುಚ್ಚಾಲಿತ ಸ್ಕೂಟರ್ ಎನ್ನಬಹುದು.
ಈವರೆಗೆ ಸ್ಕೂಟರೆಟ್ ವಿಭಾಗಕ್ಕೆ ಸೇರುವ, ಅಂದರೆ ಪ್ರಸಿದ್ಧ ಸ್ಕೂಟಿ ಮಾದರಿಯ ವಿದ್ಯುಚ್ಚಾಲಿತ ದ್ವಿಚಕ್ರವಾಹನಗಳೇ ಇದ್ದದ್ದು. ಈಗ ಈ ಮಿತಿಯನ್ನು ಮೀರಿ ಪರಿಪೂರ್ಣ ಸ್ಕೂಟರ್ ವಿಭಾಗದ ವಾಹನವನ್ನು ಎಕ್ಸೆಲ್ ಮೂಲಕ ಎಲೆಕ್ಟ್ರೋ ಥರ್ಮ್ ಹೊರಬಿಟ್ಟಿದೆ. ಹೋಂಡಾ ಆಕ್ಟಿವಾ, ಡಿಯೋ, ಸುಜುಕಿ ಆಕ್ಸೆಸ್, ಹೀರೋ ಪ್ಲೆಷರ್ ವಿಭಾಗಕ್ಕೆ ಸೇರುವ, ಅಷ್ಟೇ ಗಾತ್ರ, ಎಂಜಿನ್ ಸಾಮರ್ಥ್ಯ ಇರುವ ಸ್ಕೂಟರ್ ಇದು.
ಯೋ ಎಕ್ಸೆಲ್ ಸ್ಕೂಟರ್‌ನಲ್ಲಿ ಬಲಶಾಲಿ 1800 ವ್ಯಾಟ್ ಮೋಟಾರ್ (110 ಸಿಸಿ ಎಂಜಿನ್‌ನ ಶಕ್ತಿಗೆ ಸಮಾನ) ಅಳವಡಿಸಲಾಗಿದೆ. ಇಲ್ಲಿ ಇಂಧನ ಬಳಕೆಯೇ ಇಲ್ಲವಾದ್ದರಿಂದ ವಾಯುಮಾಲಿನ್ಯದಂತಹ ಸಮಸ್ಯೆ ಇಲ್ಲ.
ಆದರೆ ಗ್ರಾಹಕನ ಆಸಕ್ತಿ ಮಾಲಿನ್ಯದ ಮೇಲೆ ಖಂಡಿತಾ ಇರುವುದಿಲ್ಲ. ಕಾಳಜಿ ಇರಬಹುದಷ್ಟೇ. ಆತ ನೋಡುವುದು ಕೊಡುವ ಹಣಕ್ಕೆ ಮೌಲ್ಯ ಇದೆಯೇ ಇಲ್ಲವೇ ಎಂದು. ಆದರೆ ಇಲ್ಲಿ ನಿಜಕ್ಕೂ ಮೌಲ್ಯ ಅಡಗಿರುವುದೇ ವಿಶೇಷ. ಹೇಗೆಂದರೆ, ವೇಗ, ಮೈಲೇಜ್ ಹಾಗೂ ಸದೃಢತೆಗಳಲ್ಲಿ ಇದು ಮುಂಚೂಣಿಯಲ್ಲೇ ಇದೆ.
1800 ವ್ಯಾಟ್ ಎಂಜಿನ್ ಇರುವ ಈ ಸ್ಕೂಟರ್ ಗರಿಷ್ಟ 55 ಕಿಲೋ ಮೀಟರ್ ವೇಗ ತಲುಪಬಲ್ಲದು. 100 ಸಿಸಿಯ ಸ್ಕೂಟರ್ ಗರಿಷ್ಟ 80 ಕಿಲೋ ಮೀಟರ್ ವೇಗ ಮುಟ್ಟುತ್ತದೆ. ಆದರೆ ನಗರದ ಸಂಚಾರ ದಟ್ಟಣೆಯ ರಸ್ತೆಗಳಲ್ಲಿ 40 ಕಿಲೋ ಮೀಟರ್ ವೇಗ ತಲುಪುವುದೇ ಕಷ್ಟ. ಹಾಗಾಗಿ 55 ಕಿಲೋ ಮೀಟರ್ ಉತ್ತಮ ವೇಗವೇ. ಆದರೆ ಮೈಲೇಜ್‌ನಲ್ಲಿ ಇದು ತುಂಬಾ ಮುಂದಿದೆ.
ಒಂದು ಬಾರಿಯ ಚಾರ್ಜ್ (6 ರಿಂದ 8 ಗಂಟೆ) ನಲ್ಲಿ 2.25 ಯೂನಿಟ್ ವಿದ್ಯುತ್ ಬಳಸಿಕೊಂಡು ಇದು ಗರಿಷ್ಟ 75 ಕಿಲೋ ಮೀಟರ್ ಕ್ರಮಿಸಬಲ್ಲದು ಎಂದು ಕಂಪೆನಿ ಹೇಳುತ್ತದೆ. ಆದರೆ ರಸ್ತೆಯ ನಿಜ ಸ್ಥಿತಿಗಳಲ್ಲಿ 50 ಕಿಲೋ ಮೀಟರ್ ಮೈಲೇಜ್ ನೀಡಿದರೂ ಗ್ರಾಹಕನಿಗೆ ಲಾಭವೇ. ಇಬ್ಬರು ದೃಢಕಾಯರನ್ನು ಎಳೆಯುವ ಸಾಮರ್ಥ್ಯವೂ ಇದೆ. (130 ಕೆಜಿ). ಸ್ಕೂಟರ್‌ನ ಒಟ್ಟು ತೂಕ 115 ಕೆಜಿ.
ಸ್ಕೂಟರ್‌ನಲ್ಲಿ ನಿಕ್ಕಲ್ ಕ್ಯಾಡ್‌ಮಿಯಂ ಬ್ಯಾಟರಿ ಬದಲಿಗೆ, ಲೆಡ್ ಆಸಿಡ್ ಬ್ಯಾಟರಿಗಳನ್ನು ಜೋಡಿಸಲಾಗಿದೆ. 40 ಎಎಚ್ ಸಾಮರ್ಥ್ಯದ ಎರಡು ಬ್ಯಾಟರಿಗಳು ಕಡಿಮೆ ತೂಕ, ಹೆಚ್ಚು ಸಾಮರ್ಥ್ಯ ಹೊಂದಿವೆ.
ಲಿಥಿಯಂ ಅಯಾನ್ ಬ್ಯಾಟರಿಗಳಿಗೆ ಹೋಲಿಸಲು ಸಾಧ್ಯವಿಲ್ಲದೇ ಇದ್ದರೂ, ಸಾಮರ್ಥ್ಯದ ಮಟ್ಟಿಗೆ ಎರಡನೇ ಸ್ಥಾನದಲ್ಲಿರುವುದು ಈ ಬ್ಯಾಟರಿಗಳೇ. ಹಾಗಾಗಿ ನಗರ ಪ್ರಯಾಣಕ್ಕೆ ನಿಲುಗಡೆ ರಹಿತ ಚಾಲನೆಯನ್ನು ಈ ಸ್ಕೂಟರ್ ನೀಡುತ್ತದೆ.
ಸಾಧಾರಣ ಗಾತ್ರದ ಚಾರ್ಜರ್ ಹಾಗೂ ಅಡಾಪ್ಟರ್ ಇದ್ದು, ಸ್ಕೂಟರ್‌ನ ಡಿಕ್ಕಿಯಲ್ಲಿ ಕೊಂಡೊಯ್ಯಬಹುದು. 6 ರಿಂದ 8 ಗಂಟೆಗಳ ಕಾಲ ಚಾರ್ಜ್ ಆಗುತ್ತದೆ. ವೇಗದ 30 ನಿಮಿಷದ ಚಾರ್ಜ್ ವ್ಯವಸ್ಥೆಯಿದೆ. ಆದರೆ ಅದರಿಂದ ಬ್ಯಾಟರಿ ಆಯಸ್ಸು ಕಡಿಮೆಯಾಗುತ್ತದೆ. ಆದರೆ ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳಬಹುದು.
ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಶಾಕ್ಸ್ ಇದ್ದರೂ ಹಿಂಬದಿಯ ಶಾಕ್ಸ್ ಸದ್ದು ಮಾಡುವುದು ಕಿರಿಕಿರಿ ಎನಿಸುತ್ತದೆ. ವಾಹನ ಚ್ಯಾಸಿ ಉತ್ತಮ ಗುಣಮಟ್ಟದ್ದಾಗಿದ್ದರೂ, ಇದರ ಇತರ ಭಾಗಗಳಲ್ಲಿ ಬಳಸಲಾಗಿರುವ ಪ್ಲಾಸ್ಟಿಕ್ ಗುಣಮಟ್ಟ ಹೇಳಿಕೊಳ್ಳುವಂತಿಲ್ಲ. ಆಸನದ ಕೆಳಗೆ ಉತ್ತಮ ಶೇಖರಣಾ ಸಾಮರ್ಥ್ಯ ಹೊಂದಿದೆ. ಆದರೆ ಎರಡು ವರ್ಷ ಪೂರ್ಣಗೊಳಿಸಿದ ನಂತರ ಬ್ಯಾಟರಿ ಬದಲಿಸಬೇಕು.
ಅದು 14 ಸಾವಿರ ರೂಪಾಯಿ ಮೀರಬಹುದು ಎಂಬ ಸಂಗತಿ ಆಘಾತಕಾರಿ. ಎಲ್ಲಾ ನಗರಗಳಲ್ಲೂ ಇದರ ಸೇವಾ ಕೇಂದ್ರಗಳು ಇಲ್ಲದಿರುವುದೂ ಇದರ ಖರೀದಿಯತ್ತ ಹೆಚ್ಚು ಮಂದಿ ಆಸಕ್ತರಾಗದಿರುವುದು ಕಾರಣವಿರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.