ADVERTISEMENT

ಕಾಸ್ಮೆಟಿಕ್‌ ಕಲಿಗಾಲ

ವಿಶಾಖ ಎನ್.
Published 9 ಏಪ್ರಿಲ್ 2014, 19:30 IST
Last Updated 9 ಏಪ್ರಿಲ್ 2014, 19:30 IST

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆವರಣ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗ. ವರ್ಷಗಳ ಹಿಂದೆ ಅಲ್ಲೊಂದು ಮಳಿಗೆ ಆಗಿನ್ನೂ ತಲೆಎತ್ತಿತ್ತು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಅಂತರರಾಷ್ಟ್ರೀಯ ಕ್ರಿಕೆಟಿಗರಿಗೂ ಸಾಣೆಗೆ ಒಡ್ಡಿಕೊಳ್ಳುವ ತಾಣವಾಗಿ ಬದಲಾಗುತ್ತಿದ್ದ ಕಾಲಘಟ್ಟ. ಅಲ್ಲಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಕಿಟ್ ಸಮೇತ ಬಂದ ಹುಡುಗ ಸೀದಾ ಮಳಿಗೆಯೊಳಗೆ ಹೋದ. ಅವನು ಹುಡುಕಾಡಿದ್ದು ಒಂದು ಸನ್‌ಸ್ಕ್ರೀನ್‌ಗೆ. ಅದರ ಒಂದು ಬೆಳ್ಳಗಿನ ದಪ್ಪ ಪದರವನ್ನು ಕಣ್ಣಿನ ಭಾಗ ಹೊರತುಪಡಿಸಿ ಮಿಕ್ಕೆಲ್ಲಾ ಕಡೆ ಲೇಪಿಸಿಕೊಂಡು, ಹುಡುಗ ಬೌಲಿಂಗ್ ಮಾಡಲು ಹೊರಟ.

ಅಲ್ಲಿಯೇ ನಿಂತಿದ್ದ ಹಿರಿಯ ಸುದ್ದಿಮಿತ್ರರೊಬ್ಬರು ‘ಇದು ಕಾಸ್ಮೆಟಿಕ್ ಕ್ರಿಕೆಟ್ ಕಲಿಗಾಲ’ ಎಂದರು. ಆಟವಾಡುವುದು ಎಂದರೆ ದೇಹ ಸೌಂದರ್ಯದ ಪ್ರಜ್ಞೆಯನ್ನೇ ಮರೆಯುವುದು ಎಂಬಂಥ ಕಾಲವನ್ನು ಕಂಡ ಅವರ ಅಭಿಪ್ರಾಯದಲ್ಲಿ ತಥ್ಯವಿತ್ತು. ಈ ಕಾಲದಲ್ಲಿ ಗಲ್ಲಿ ಕ್ರಿಕೆಟ್ ಆಡುವ ಹುಡುಗರೂ ಮುಖ, ಕೈಗಳಿಗೆ ಕ್ರೀಮು ಲೇಪಿಸಿಕೊಳ್ಳುತ್ತಾರೆ. ಅದರಲ್ಲೂ ಹಲವು ಬಗೆಗಳಿವೆ ಎಂಬಿತ್ಯಾದಿ ವಿಚಾರ ಮಂಡನೆ ಅಲ್ಲಿ ನಡೆಯಿತು. ‘ಕಾಲಾಯ ತಸ್ಮೈ ನಮಃ’ ಎಂಬ ಮಾತಿನೊಟ್ಟಿಗೆ ನಿಟ್ಟುಸಿರೂ ಹೊರಬಂದು, ಮಾತು ಕ್ರಿಕೆಟ್‌ನತ್ತ ಮರಳಿತು.

*
ನಗರದ ಹೊರವಲಯದ ಹಳ್ಳಿಯೂ ಅಲ್ಲದ, ಪಟ್ಟಣವೂ ಅಲ್ಲದ ಊರು. ಅಲ್ಲೊಂದು ಜಿಮ್ ಶುರುವಾಗಿ ಎರಡು ವರ್ಷಗಳಾಗಿವೆ. ಅದರ ತರಬೇತುದಾರನಿಗೂ, ಅವನ ಬಳಿ ಇರುವ ಅಂಗೈ ಅಗಲದ ಮೊಬೈಲ್‌ಗೂ ಬಲು ನಂಟು. ‘ಭಲಾ’ ಎನ್ನುವಂಥ ಮೈಕಟ್ಟು ಇರುವ ಅವನಿಗೆ ಒಂಚೂರು ಬೆಳ್ಳಗಾಗುವ ಹುಕಿ. ಅದಕ್ಕೆ ಅಗತ್ಯವಾದ ಸಂಶೋಧನೆಯಲ್ಲಿ ಸದಾ ನಿರತ.

ಅಷ್ಟೇ ಅಲ್ಲ, ಸುತ್ತಮುತ್ತ ಯಾವುದೇ ದೇಹದಾರ್ಢ್ಯ ಸ್ಪರ್ಧೆ ನಡೆದರೂ ಒಂದು ತಿಂಗಳು ಮೊದಲೇ ಅವನ ತಾಲೀಮು ಪ್ರಾರಂಭವಾಗುತ್ತದೆ. ಯೂಟ್ಯೂಬ್‌ನಲ್ಲಿ ಬಗೆಬಗೆಯ ನಟರು ದೇಹವನ್ನು ಹುರಿಗಟ್ಟಿಸಿಕೊಳ್ಳುವ ಪರಿಯ ವಿಡಿಯೊಗಳನ್ನು ನೋಡುವುದು ಅವನ ಅಭ್ಯಾಸ. ಅವರು ಹೇಗೆ ನಿಲ್ಲುತ್ತಾರೆ, ದೇಹಭಾಷೆ ಹೇಗಿದೆ, ಹಾಕುವ ಟಿ-ಶರ್ಟ್‌ಗಳು ಎಂಥವು, ಲೋ ವೇಯ್ಸ್ಟ್ ಪ್ಯಾಂಟ್ ಉತ್ತಮವೋ, ಗಾಳಿ ಆಡುವಂಥ ತುಸು ದೊಗಲೆ ಪ್ಯಾಂಟೇ ಬೆಸ್ಟೋ ಎಂಬಿತ್ಯಾದಿ ಜಿಜ್ಞಾಸೆಗೆ ಆನ್‌ಲೈನ್‌ನಲ್ಲೇ ಉತ್ತರ ಕಂಡುಕೊಳ್ಳುವ ಹವಣಿಕೆ ಅವನದ್ದು.

ಎಲ್ಲವನ್ನೂ ಆಪ್ತೇಷ್ಟರ ಜೊತೆ ಹಂಚಿಕೊಳ್ಳಲೂ ಆಗದ, ಕಂಡು, ಕೇಳಿದ ಕೆಲವು ವಿಚಾರಗಳನ್ನು ಚರ್ಚೆಗೆ ಒಡ್ಡಲೇಬೇಕಾದ ಅನಿವಾರ್ಯದಲ್ಲಿ ಸಿಲುಕಿದ್ದಾನೆ. ನಿಲುವುಗನ್ನಡಿಯ ಎದುರು ನಿಂತಾಗ ಅವನ ಮುಖದ ಗೆರೆಗಳು ಏನೇನೋ ಹೇಳುತ್ತವೆ. ಕಾಸ್ಮೆಟಿಕ್ ಅವನಿಗೂ ಬೇಕು, ಹೇಗಾದರೂ ಮಾಡಿ ಚೆನ್ನಾಗಿ ಕಾಣಲೇಬೇಕು. ಆನ್‌ಲೈನ್‌ನಲ್ಲಷ್ಟೇ ಅಲ್ಲದೆ ಆಫ್‌ಲೈನ್‌ನಲ್ಲೂ ಅವನ ಹುಡುಕಾಟ ಮುಂದುವರಿದಿದೆ.

ತನ್ನಿಷ್ಟದ ನಟರು ಹಾಕುವಂಥದ್ದೇ ವಿನ್ಯಾಸದ ಬಟ್ಟೆಗಳು ತನ್ನ ಬಜೆಟ್‌ನ ಮಿತಿಯಲ್ಲಿ ಎಲ್ಲಿ ಸಿಗಬಹುದು ಎಂಬುದರ ಅರಿವು ಅವನಿಗಿದೆ. ತನ್ನ ‘ಬೇಕು’ಗಳನ್ನು ಪೂರೈಸುವ ಆಸಕ್ತಿಕರವಾದ ನೆಟ್‌ವರ್ಕ್ ರೂಪುಗೊಂಡಿದ್ದು, ಅವನೂ ಅದರ ಭಾಗವಷ್ಟೇ. ‘ಇದು ಜಿಮ್ ಹುಡುಗರ ಕಾಸ್ಮೆಟಿಕ್ ಕಲಿಗಾಲ’ ಎಂದು ಯಾರಾದರೂ ನುಡಿಗಟ್ಟು ತೇಲಿಬಿಟ್ಟರೆ ಅದು ಸ್ವೀಕಾರಾರ್ಹ.

*
ಸ್ನೇಹಿತನಿಗೆ ತನ್ನ ವಾರ್ಡ್‌ರೋಬ್‌ನಲ್ಲಿ ತಾತನ ನಿಲುವಂಗಿಯೊಂದು ಸಿಕ್ಕಿತು. ಅತ್ತ ಜುಬ್ಬವೂ ಅಲ್ಲದ, ಇತ್ತ ಅಂಗಿಯೂ ಅಲ್ಲದ ವಿನ್ಯಾಸದ್ದು. ಮೇಲ್ಭಾಗದಲ್ಲಿ ನಾಲ್ಕೇ ಗುಂಡಿ. ಅದರ ಕೆಳಗಿನಿಂದ ಟಕ್ ಮಾಡಿ, ಒಂದು ನೆರಿಗೆ ಮೂಡುವಂತೆ ಮಾಡಿ ಇಳಿಬಿಟ್ಟಿದ್ದ ಅದನ್ನು ನಿಲುವಂಗಿ ಎನ್ನುವುದೇ ಸೂಕ್ತ. ಪಠಾಣರು ತಮ್ಮ ಗತ್ತಿನ ಸಂಕೇತವಾಗಿ ಹಾಕಿಕೊಳ್ಳುತ್ತಾರಲ್ಲ ಅಂಥ ಅಂಗಿ ಅದೆನ್ನಬಹುದು.

ಜೀನ್ಸ್ ಮೇಲೆ ಅದನ್ನು ಹಾಕಿಕೊಂಡು ಅವನು ಕಾಲೇಜಿಗೆ ಹೋದ. ವೇಗವಾಗಿ ನುಗ್ಗುವ ಬೈಕ್ ಮೇಲೆ ಅವನು ಕೂತಾಗ, ನಿಲುವಂಗಿಗೆ ಗಾಳಿ ತುಂಬಿ ಅವನು ವಿಚಿತ್ರವಾಗಿ ಕಾಣುತ್ತಿದ್ದ. ಕಾಲೇಜು ಪ್ರವೇಶಿಸುತ್ತಿದ್ದಂತೆ ಎಲ್ಲರ ನೋಟ ಅವನತ್ತ. ಎಲ್ಲರೂ ಆ ನಿಲುವಂಗಿಯನ್ನು ಕಂಡು ಬೆರಗಾದವರೇ. ಒಂದು ವಾರ ಕಳೆದಿತ್ತಷ್ಟೇ, ಅದೇ ವಿನ್ಯಾಸ ಆರು ನಿಲುವಂಗಿಗಳನ್ನು ಹೊಲಿಯಲು ಅವನ ಸಹಪಾಠಿಗಳು ಹತ್ತಿರದ ದರ್ಜಿಗೆ ಆರ್ಡರ್ ಕೊಟ್ಟರು.

*
‘ಜೋಗಿ’ ಸಿನಿಮಾ ತೆರೆಕಂಡಿದ್ದ ಸಂದರ್ಭ. ಅದರಲ್ಲಿ ಶಿವರಾಜ್‌ಕುಮಾರ್ ಎದೆಭಾಗದ ಮೇಲೆ ತೇಪೆ ಹಾಕಿದಂಥ ಅಂಗೈನ ಚಿತ್ರ ಇರುವ ಟಿ–ಶರ್ಟ್ ಹಾಕಿಕೊಂಡಿದ್ದರು. ಸಿನಿಮಾ ಹಿಟ್ ಆದದ್ದೇ ಬೆಂಗಳೂರಿನ ಕಲಾಸಿಪಾಳ್ಯದ ಗಲ್ಲಿಗಳ ಅಂಗಡಿಗಳಲ್ಲಿ, ಮೆಜೆಸ್ಟಿಕ್‌ನ ಅಲಂಕಾರ್ ಪ್ಲಾಜಾದಲ್ಲಿ ಅಂಥದ್ದೇ ವಿನ್ಯಾಸದ ಟಿ–ಶರ್ಟ್‌ಗಳು ಯುವ ಗ್ರಾಹಕರನ್ನು ಆಕರ್ಷಿಸತೊಡಗಿದವು. ಇಲ್ಲಿಂದ ಒಂದಷ್ಟು ಟಿ–ಶರ್ಟ್‌ಗಳನ್ನು ಕೊಂಡುಕೊಂಡು, ನೂರೈವತ್ತು ಇನ್ನೂರು ಕಿಲೋಮೀಟರ್ ದೂರದ ತಮ್ಮೂರಿನಲ್ಲಿ ತುಸು ಲಾಭಕ್ಕೆ ಮಾರುವಂಥ ಯುವ ಉದ್ಯಮಿಗಳಿಗೂ ಈ ವಿನ್ಯಾಸದ ವಸ್ತ್ರ ವರದಾನವಾಯಿತು!

‘ಮುಂಗಾರು ಮಳೆ’ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ತೋಳಿಲ್ಲದ, ಬಣ್ಣಬಣ್ಣದ ಬನಿಯನ್ ತೊಟ್ಟು ಮಳೆಯಲ್ಲಿ ನೆಂದದ್ದನ್ನು ಕಂಡು ನೀರೆಯರೂ ಪುಳಕಿತರಾದರಲ್ಲ. ಅದರಿಂದ ಪ್ರೇರೇಪಿತರಾದ ಅಸಂಖ್ಯ ಯುವಕರು ಅಂಥವೇ ಬನಿಯನ್‌ಗಳನ್ನು ಕೊಂಡುಕೊಳ್ಳಲು ಮನಸ್ಸು ಮಾಡಲಾಗಿ, ಫುಟ್‌ಪಾತ್ ಮಾರುಕಟ್ಟೆಯಲ್ಲೂ ಮುಂಗಾರು ಮಳೆ ಸ್ಲೀವ್‌ಲೆಸ್ ಬನಿಯನ್‌ಗಳು ಬಣ್ಣದ ನಗು ಚೆಲ್ಲಲಾರಂಭಿಸಿದವು. ಅಷ್ಟೇ ಅಲ್ಲ, ‘ಗಾಳಿಪಟ’ ಸಿನಿಮಾದಲ್ಲಿ ಲಾಕೆಟ್ ಜಾಗದಲ್ಲಿ ಗಣೇಶ ಬ್ಲೇಡಿನಂಥ ಪೆಂಡೆಂಟನ್ನು ಹಾಕಿಕೊಂಡಿದ್ದು, ಅವುಗಳ ಪ್ರತಿಕೃತಿಗಳಿಗೂ ಮಾರುಕಟ್ಟೆ ಕುದುರಿತೆನ್ನಿ.

*
ಯುವಕರ ಫ್ಯಾಷನ್ ವಿವರಗಳಿರುವ ಇಂಗ್ಲಿಷ್ ನಿಯತಕಾಲಿಕೆಗಳಿಗೂ ಈಗ ಮಾರುಕಟ್ಟೆ ಇದೆ. ಜಗತ್ತಿನ ಹಲವು ದೇಶಗಳಿಂದ ಪ್ರಭಾವಿತವಾದ ಭಾರತದಲ್ಲಿ ಈ ಹೊತ್ತಿನಲ್ಲಿ ಫ್ಯಾಷನ್ ಟ್ರೆಂಡ್ ಹೇಗಿದೆ ಎಂಬುದನ್ನು ಅರಿಯುವ ದಾರಿ ಇದು. ಯಾವ ಕಾಲಕ್ಕೆ ಯಾವ ಕ್ರೀಮ್ ಬಳಸಬೇಕು, ಸ್ಲಿಮ್‌ಫಿಟ್ ಶರ್ಟ್ ಹಾಕುವವರ ದೇಹಾಕಾರ ಹೇಗಿರಬೇಕು, ನಡೆಯುವಾಗ ಸೆಟೆದಂತೆ ಇರುವುದು ಸೂಕ್ತವೋ;

ತುಸು ತಗ್ಗಿ ಬಗ್ಗಿ ಹೆಜ್ಜೆ ಇಡುವುದು ಒಳ್ಳೆಯದೋ, ಲೋವೇಯ್ಸ್ಟ್ ಪ್ಯಾಂಟ್ ಹಾಕಿದರೆ ಎಂಥ ಒಳಉಡುಪುಗಳನ್ನು ಧರಿಸಬೇಕು, ಟಿ–ಶರ್ಟ್ ಮೇಲೆ ಅಂಗಿ ಹಾಕಿ ಗುಂಡಿ ಬಿಚ್ಚಿಕೊಳ್ಳುವುದು ‘ಇನ್‌ಡೀಸೆನ್ಸಿ’ಯ ಸಂಕೇತವೋ, ‘ಇಂಡಿಪೆಂಡೆಂಟ್’ ಎಂಬುದರ ಬಿಂಬವೋ, ಸ್ನಾನ ಮಾಡಿ ಪೂರ್ತಿ ತಲೆ ಒಣಗಿದ ಮೇಲೆ ಜೆಲ್ ಹಾಕಬೇಕೋ, ಸ್ವಲ್ಪ ತೇವ ಇರುವಾಗಲೇ ಅದನ್ನು ಲೇಪಿಸುವುದು ಒಳ್ಳೆಯದೋ, ವಿ–ನೆಕ್‌, ರೌಂಡ್‌ ನೆಕ್‌ ಟಿ–ಶರ್ಟ್‌ಗಳನ್ನು ಯಾವ ದೇಹಾಕಾರದವರು ತೊಡಬೇಕು...

ಹೀಗೆ ‘ಬಹು ಯುವಜನ ಹಿತಾಯ ಬಹು ಯುವಜನ ಸುಖಾಯ’ ಎನ್ನಬಹುದಾದ ಹಲವು ಟಿಪ್ಸ್ ನಿಯತಕಾಲಿಕೆಗಳಲ್ಲಿ ಸಿಗುತ್ತವೆ. ಅವನ್ನು ಅಗತ್ಯಕ್ಕಿಂತ ಹೆಚ್ಚೇ ಗಂಭೀರವಾಗಿ ಪರಿಗಣಿಸಿರುವ ಜೀವಗಳು ನಮ್ಮ ನಡುವೆ ಓಡಾಡಿಕೊಂಡಿವೆ, ಫ್ಯಾಷನ್ ರಾಯಭಾರಿಗಳಂತೆ.

‘ಗಂಡು ಮಾಡೆಲ್‌’ ಎಂಬೊಂದು ಪ್ರಭೇದಕ್ಕೆ ಫ್ಯಾಷನ್‌ ಜಗತ್ತಿನಲ್ಲಿ ಈಗ ಬೇಡಿಕೆ ಇದೆ. ದಿಗ್ಗಜ ವಿನ್ಯಾಸಕಾರರ ಉಡುಪುಗಳಿಗೆ ಅವರು ಪ್ರಚಾರ ರಾಯಭಾರಿಗಳಂತೆ. ಸಿನಿಮಾ ನಟರು ಅಂಥ ಉಡುಗೆಗಳನ್ನು ತೊಟ್ಟು ಕಾಣಿಸಿಕೊಂಡ ಮೇಲೆ ಆ ವಸ್ತ್ರಗಳ ಮಾರುಕಟ್ಟೆ ಇನ್ನೂ ವಿಸ್ತಾರಗೊಳ್ಳುತ್ತದೆ. ಇಷ್ಟಕ್ಕೂ ಇದು ಕಾಸ್ಮೆಟಿಕ್ ಕ್ರಿಕೆಟ್ ಕಲಿಗಾಲ ಹೌದಲ್ಲವೇ?

ಅದು ಚರ್ಚೆಯ ಫಲ

ಗಣೇಶ್, ನಟ

‘ಮುಂಗಾರು ಮಳೆ’ ಚಿತ್ರ ಮಾಡುತ್ತಿದ್ದಾಗ ಏನಾದರೂ ಭಿನ್ನವಾದ ಡ್ರೆಸ್‌ ಹಾಕಿಕೊಳ್ಳೋಣ ಎಂದು ನಾನು, ನಿರ್ದೇಶಕ ಯೋಗರಾಜ್‌ ಭಟ್‌, ನೃತ್ಯ ನಿರ್ದೇಶಕ ಹರ್ಷ ಚರ್ಚಿಸಿದೆವು. ಆಗ ಹೊಳೆದದ್ದು ಸ್ಲೀವ್‌ಲೆಸ್‌ ಬನಿಯನ್‌ ಹಾಗೂ ಕಾರ್ಗೊ. ಹಾಡಿನಲ್ಲಿ ಅಷ್ಟೇ ಅದನ್ನು ಬಳಸದೆ ಚಿತ್ರದ ಬೇರೆ ದೃಶ್ಯಗಳಲ್ಲೂ ಆ ಕಾಸ್ಟ್ಯೂಮ್‌ ಕಾಣುವಂತೆ ನೋಡಿಕೊಂಡೆವು. ಪ್ರೇಮ ನಿವೇದನೆ ಮಾಡುವ ಹುಡುಗನ ಭಾವಕ್ಕೂ ಆ ಉಡುಗೆಗೂ ಹೊಂದಾಣಿಕೆ ಆಯಿತು. ಬಜೆಟ್‌ ಉಳಿಸೋಣ ಎಂದು ಬನಿಯನ್‌ ಹಾಕಿಕೊಂಡೆ ಎಂದು ಆಗಾಗ ನಾನು ತಮಾಷೆ ಮಾಡುತ್ತಿದ್ದೆ.

ಅದೇನೋ ಆ ಬನಿಯನ್‌ ಫ್ಯಾಷನ್‌ ಟ್ರೆಂಡ್‌ ಆಗಿಬಿಟ್ಟಿತು. ‘ಮುಂಗಾರು ಮಳೆ’ ಚಿತ್ರದಲ್ಲಿ ನಾನು ಹೆಬ್ಬರಳಿಗೆ ಒಂದು ರಿಂಗ್‌ ಹಾಕಿಕೊಂಡಿದ್ದೆ. ಅದು ಕೂಡ ಆ ಕಾಲಘಟ್ಟದ ಫ್ಯಾಷನ್‌ ಆಗಿತ್ತು. ‘ಗಾಳಿಪಟ’ ಚಿತ್ರದಲ್ಲಿ ಬ್ಲೇಡಿನ ಆಕಾರದ ಪೆಂಡೆಂಟ್‌ ಹಾಕಿಕೊಂಡೆ. ಅದೂ ಹಿಟ್‌ ಆಯಿತು. ಚೆನ್ನಾಗಿ ಕಾಣಬೇಕು ಎಂಬ ಬಯಕೆ ಎಲ್ಲಾ ಕಾಲಕ್ಕೂ ಇರುತ್ತದೆ. ಹುಡುಗಿಯರು ಸ್ವಲ್ಪ ಹೆಚ್ಚು ಮೇಕಪ್‌ ಮಾಡಬಹುದು.

ಹುಡುಗರು ಕೂಡ ಈಗ ಏನೂ ಕಡಿಮೆ ಇಲ್ಲ. ನಾವು ಸಿನಿಮಾಗಳಿಗೆ ಕಾಸ್ಟ್ಯೂಮ್‌ಗಳನ್ನು ಆರಿಸುವಾಗ ಸದಾ ಹೊಸತೇನನ್ನಾದರೂ ಯೋಚಿಸುತ್ತಲೇ ಇರುತ್ತೇವೆ. ಮೊದಲು ಪಿಂಕ್‌ ತರಹದ ಬಣ್ಣ ಹುಡುಗಿಯರಿಗಷ್ಟೇ ಹೊಂದುತ್ತದೆ ಎಂಬ ಭಾವನೆ ಇತ್ತು. ಈಗ ಪಿಂಕ್‌ ಬಣ್ಣದ ಪ್ಯಾಂಟು, ಅಂಗಿ ಹಾಕುವುದು ಫ್ಯಾಷನ್‌ ಆಗಿದೆ. ಗ್ರೇ ಬಣ್ಣದ ವಿವಿಧ ಶೇಡ್‌ಗಳು ಕೂಡ ಸಮಕಾಲೀನವಾದಂಥವು. ಫ್ಯಾಷನ್‌ ಹಾಗೂ ಬಟ್ಟೆಗಳ ಬಣ್ಣದ ವಿಷಯದಲ್ಲಿ ನಾವು ಅಪ್‌ಡೇಟ್‌ ಆಗುತ್ತಲೇ ಇರುತ್ತೇವೆ.       
–ಗಣೇಶ್, ನಟ

ಓವರ್‌ ಟು ಬಾಲಿವುಡ್‌

ADVERTISEMENT

ಹಿಂದಿ ನಟ ರಣವೀರ್‌ ಸಿಂಗ್‌ ಸಹಾಯಕ ಸದಾ ಒಂದು ಚೀಲ ಹಿಡಿದು ನಿಂತಿರುತ್ತಾರಂತೆ. ಅದರಲ್ಲಿ ತರಹೇವಾರಿ ಪ್ರಸಾಧನಗಳು. ಲಿಪ್‌ಬಾಮ್‌ನಿಂದ ಹಿಡಿದು ಹೇರ್‌ ಜೆಲ್‌ವರೆಗೆ ಎಲ್ಲವೂ ಅದರಲ್ಲಿ ಇರುತ್ತವೆ. ಯಾರೇ ಕ್ಯಾಮೆರಾ ಹಿಡಿದು ಪೋಸ್‌ ಕೊಡುವಂತೆ ಕೇಳಿದರೂ ರಣವೀರ್‌ ಪ್ರಜ್ಞಾಪೂರ್ವಕವಾಗಿ ಅಲಂಕಾರ ಮಾಡಿಕೊಂಡೇ ಪೋಸ್‌ ಕೊಡುವುದು. ಕಟ್ಟುಮಸ್ತು ದೇಹದ ನಟನ ಈ ಪರಿಯ ಪ್ರಸಾಧನ ಪ್ರಜ್ಞೆ ಕಂಡು ನಾಯಕಿ ದೀಪಿಕಾ ಪಡುಕೋಣೆ ಕೂಡ ದಂಗಾಗಿದ್ದರು.

‘ಹುಡುಗಿಯರೂ ಸೌಂದರ್ಯದ ಇಷ್ಟೊಂದು ಕಾಳಜಿ ವಹಿಸುತ್ತಾರೋ ಇಲ್ಲವೋ’ ಎಂದು ಅವರು ರಣವೀರ್‌ ಕಾಲೆಳೆದಿದ್ದರು. ಶಾರುಖ್‌ ಖಾನ್‌ ಬಳಸುವ ವಿದೇಶಿ ಪರ್ಫ್ಯೂಮ್‌ಗಳ ಸಂಗ್ರಹವನ್ನು ಕತ್ರಿನಾ, ಕರೀನಾ, ಪ್ರಿಯಾಂಕಾ ಚೋಪ್ರಾ ಎಲ್ಲರೂ ಕೊಂಡಾಡಿದವರೇ. ಹೃತಿಕ್‌ ರೋಷನ್‌ ಹಸಿರು ಬಣ್ಣದ ಕುರುಚಲು ಗಡ್ಡ ದೀರ್ಘ ಕಾಲ ಯುವಕ–ಯುವತಿಯರ ಮೆಚ್ಚುಗೆ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.