ADVERTISEMENT

ಗುಪ್ತಗಾಮಿನಿಯಾಗಿದ್ದ ರಾಜಕೀಯ

ಪ್ರಿಯಾಂಕ ಖರ್ಗೆ/ ನಿರೂಪಣೆ : ಸುದೇಶ ದೊಡ್ಡಪಾಳ್ಯ
Published 10 ಜುಲೈ 2013, 19:59 IST
Last Updated 10 ಜುಲೈ 2013, 19:59 IST

ನನ್ನ ಕತೆಗೆ ಆರಂಭ, ಮಧ್ಯಂತರ, ಅಂತ್ಯ ಎನ್ನುವುದು ಇಲ್ಲ. ಏಕೆಂದರೆ ನಾನು ನನ್ನ ಕತೆಯನ್ನು ಹೇಳಿಕೊಳ್ಳುವಷ್ಟು ಸಾಧನೆಯನ್ನು ಇನ್ನೂ ಮಾಡಿಲ್ಲ. ಆದರೆ ನನ್ನ ಮೂವತ್ತೈದು ವರ್ಷದ ಬದುಕಿನ ಯಾನವನ್ನು ಹಿಂದಿರುಗಿ ನೋಡಿದಾಗ ಏನೇನೋ ಸಂಗತಿಗಳು ಆಗಿಹೋಗಿವೆ!

ನನ್ನದು ರಾಜಕೀಯ ಕುಟುಂಬ. ತಂದೆ ಮಲ್ಲಿಕಾರ್ಜುನ ಖರ್ಗೆ 1972ರಿಂದ ಸತತವಾಗಿ 10 ಚುನಾವಣೆಗಳಲ್ಲಿ ಗೆದ್ದಿದ್ದಾರೆ. ಈಗ ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದಾರೆ. ನಾನು ಹುಟ್ಟಿದ್ದು 1978ರಲ್ಲಿ. ಇಷ್ಟರಲ್ಲಿ ತಂದೆಯವರು ಶಾಸಕರಾಗಿ, ಸಚಿವರಾಗಿದ್ದರು.
ನಿಜ ಹೇಳಬೇಕು ಅಂದರೆ ನನಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಆದರೆ ರಾಜಕೀಯ ಗುಪ್ತಗಾಮಿನಿಯಾಗಿ ನನ್ನೊಳಗೆ ಹರಿಯುತ್ತಿತ್ತು ಅನಿಸುತ್ತಿದೆ. ಆದ್ದರಿಂದಲೇ ಗುಲ್ಬರ್ಗ ಜಿಲ್ಲೆ ಚಿತ್ತಾಪುರ ಕ್ಷೇತ್ರದ ಶಾಸಕನಾಗಿದ್ದೇನೆ.

ನನ್ನ ಮತ್ತು ರಾಜಕೀಯದ ನಡುವಿನ ನಂಟು ಹೇಗೆ ಶುರುವಾಯಿತು?! ಸುಮ್ಮನೆ ಈ ಕುರಿತು ಯೋಚಿಸಿತ್ತಾ ಹೋದರೆ ನೆನಪಿಗೆ ದಕ್ಕಿದ್ದು ಇಷ್ಟು. ನಾನು ಆಗ ಬೆಂಗಳೂರಿನ ಸದಾಶಿವನಗರದ ಪೂರ್ಣಪ್ರಜ್ಞಾ ಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದೆ. ಬಹುಶಃ ಮನೆಯಲ್ಲಿ ಗಲಾಟೆ ಮಾಡುತ್ತಿದ್ದೆನೋ, ಅಮ್ಮನೇ ಕಳುಹಿಸುತ್ತಿದ್ದರೋ, ಅಪ್ಪನೇ ಕರೆದುಕೊಂಡು ಹೋಗುತ್ತಿದ್ದರೋ ಅಥವಾ ನಾನೇ ಹಟ ಹಿಡಿದು ಹೋಗುತ್ತಿದ್ದೆನೋ, ಖಂಡಿತ ಗೊತ್ತಿಲ್ಲ. ಗುರುಮಠಕಲ್ ಕ್ಷೇತ್ರಕ್ಕೆ ಅಪ್ಪನೊಂದಿಗೆ ಹೋಗುತ್ತಿದ್ದೆ. ಅಪ್ಪ ಯಾವುದೋ ಹಳ್ಳಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುತ್ತಿದ್ದರೆ ನಾನು ಮೂಲೆಯಲ್ಲಿ ಕುಳಿತು ಆಲಿಸುತ್ತಿದ್ದೆ. ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಗಳ ಸಭೆ ನಡೆಯುತ್ತಿದ್ದರೆ ಅದನ್ನೂ ನೋಡುತ್ತಿದ್ದೆ. ಹೀಗೆ ನನಗೇ ಗೊತ್ತಿಲ್ಲದಂತೆ ರಾಜಕೀಯ ನನ್ನನ್ನು ಆವರಿಸಿಕೊಳ್ಳುತ್ತಾ ಹೋಗಿತ್ತು!

ಮಲ್ಲೇಶ್ವರಂನ ಎಂಇಎಸ್ ಕಾಲೇಜಿನಲ್ಲಿ ವಿಜ್ಞಾನ ವಿಷಯ ಕಲಿಯಲು ಪಿಯುಸಿಗೆ ಸೇರಿಕೊಂಡೆ. ಆಗಲೂ ಅಷ್ಟೆ; ತಂದೆ ಜೊತೆ ಗುರುಮಠಕಲ್ ಕ್ಷೇತ್ರಕ್ಕೆ ಹೋಗುವುದು ತಪ್ಪಿಸಿರಲಿಲ್ಲ. ಆಗ ಜನರು ದೊಡ್ಡ ಸಾಹೇಬರ ಜೊತೆ ಚಿಕ್ಕ ಸಾಹೇಬರು ಬಂದಿದ್ದಾರೆ ಎಂದು ಖುಷಿಪಡುತ್ತಿದ್ದರು. ಸ್ವಲ್ಪ ದಿನಗಳ ಕಳೆದ ಮೇಲೆ ಅಪ್ಪನಿಗೆ ಕೊಡಬೇಕಾದ ಮನವಿ ಪತ್ರಗಳನ್ನು ನನ್ನ ಕೈಗೇ ಕೊಡುತ್ತಿದ್ದರು! ಚಿಕ್ಕ ಸಾಹೇಬರೇ ನಮ್ಮೂರಿಗೆ ಈ ಕೆಲಸ ಮಾಡಿಸಿಕೊಡಿ ಎನ್ನುತ್ತಿದ್ದರು.

ಪಿಯುಸಿ ಮುಗಿಸಿ ಅಪ್ಪನಂತೆ ಕಾನೂನು (ಎಲ್‌ಎಲ್‌ಬಿ) ಕಲಿಯಬೇಕು ಎನ್ನುವ ಆಸೆ ಇತ್ತು. ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ  ಪಡೆದೆ. ಇಷ್ಟರಲ್ಲಿ ಐಟಿ ಎನ್ನುವ ಮಾಯಾಂಗನೆ ನನ್ನನ್ನು ಚಂಚಲಗೊಳಿಸಿದಳು. ಎಲ್ಲಿಗೆ ಹೋದರೂ ಐಟಿ ಮಾತು.

ಅದೇ, ಐಟಿ ಮಾಯಾಂಗನೆ ಅಂದೆನಲ್ಲ, ಅದರ ಸೆಳೆತಕ್ಕೆ ಸಿಲುಕಿ ಅನಿಮೇಷನ್ ಕೋರ್ಸ್ ಸೇರಿಕೊಂಡೆ. ಅದು ನನಗೆ ಇಷ್ಟವಾಗಿಬಿಟ್ಟಿತ್ತು. ಬೆಂಗಳೂರಿನಲ್ಲಿ ಐದಾರು ವರ್ಷ ಯೂರೋಪಿಯನ್ ಕಂಪೆನಿಯಲ್ಲಿ ಕೆಲಸ ಮಾಡಿದೆ. ಈಗಲೂ ಎರಡು ಕಂಪೆನಿಗಳಿಗೆ ಕನ್ಸಲ್ಟೆಂಟ್ ಆಗಿದ್ದೇನೆ. ಮಹಾಕಾವ್ಯಗಳಲ್ಲಿ ಬರುವ ಪ್ರತಿನಾಯಕರ ಕುರಿತಾದ ಅನಿಮೇಷನ್ ಕೆಲಸ ನಡೆಯುತ್ತಿದೆ.

ಮತ್ತೆ ಹಿಂದಕ್ಕೆ ಹೋಗುತ್ತೇನೆ, ಅಪ್ಪನ ಜೊತೆ ಗುರುಮಠಕಲ್ ಕ್ಷೇತ್ರಕ್ಕೆ ಹೋಗುವ ನಂಟನ್ನು ಉಳಿಸಿಕೊಂಡಿದ್ದೆ. ಅಪ್ಪ ಕ್ಷೇತ್ರದ ಜನರನ್ನು ಭೇಟಿ ಮಾಡುವುದು, ಎಲ್ಲ  ಊರುಗಳಿಗೆ ಹೋಗುವುದು, ಅಹವಾಲು ಸ್ವೀಕರಿಸುವುದು ಕಷ್ಟವಾಗಿತ್ತು. ಆಗ ಜನರು ನನ್ನ ಬಳಿ ಬರಲು ಶುರು ಮಾಡಿದರು. ನಾನು ಅಪ್ಪನ ಜಾಗದಲ್ಲಿ ನಿಂತು ಅವರ ಕಷ್ಟ ಸುಖಗಳು, ಸಮಸ್ಯೆಗಳಿಗೆ ಕಿವಿಯಾಗುತ್ತಿದ್ದೆ. ಕ್ಷೇತ್ರದ ಕೆಲಸಗಳನ್ನು ಮಾಡಿಸಲು ಮುಂದಾದೆ. ಏನಿಲ್ಲವೆಂದರೂ ಹದಿನೈದು ವರ್ಷಗಳಿಂದ ಹೀಗೆ ಕೆಲಸ ಮಾಡುತ್ತಲೇ ಇದ್ದೆ.

ಇಲ್ಲಿ ಇನ್ನೊಂದು ಕತೆ ಹೇಳಬೇಕು. 2009ರಲ್ಲಿ ತಂದೆ ಚಿತ್ತಾಪುರ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ತೆರವಾದ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಆಯಿತು. ಯಾರನ್ನು ಕಣಕ್ಕೆ ಇಳಿಸಬೇಕು ಎನ್ನುವ ಚರ್ಚೆ ಪಕ್ಷದಲ್ಲಿ ಶುರುವಾಯಿತು. ಆಗ ನನ್ನ ಹೆಸರು ಬಂದಿತು. ನನ್ನನ್ನು ಕಣಕ್ಕೆ ಇಳಿಸಿದರು. 1600 ಮತಗಳ ಅಂತರದಿಂದ ಮೊದಲ ಚುನಾವಣೆಯಲ್ಲಿಯೇ ಸೋತೆ.

ಸೋತ ಮರು ದಿನದಿಂದ ಸತತವಾಗಿ 15 ದಿನ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದೆ. ಒಂದು ಬೂತ್‌ನಲ್ಲಿ ನನಗೆ ಕೇವಲ 13 ಮತಗಳು ಬಂದಿದ್ದವು. ನಾನು ಆ ಗ್ರಾಮಕ್ಕೆ ಭೇಟಿ ಕೊಟ್ಟಾಗ ಅಲ್ಲಿ ನೂರಕ್ಕೂ ಹೆಚ್ಚು ಮಂದಿ ಸೇರಿದ್ದರು. ನಾನು ಅವರಿಗೆ ತಮಾಷೆ ಮಾಡಿದೆ; ನೀವಿಷ್ಟು ಮಂದಿ ಮತ ಹಾಕಿದ್ದರೆ ನಾನು ಗೆದ್ದೇಬಿಡುತ್ತಿದ್ದೆ ಎಂದು.

2013ರ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿದೆ. ಅಲ್ಲಿನ ಜನರು 32,000 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಇದೇ ನನಗೆ ದೊಡ್ಡ ಭಾರವಾಗಿದೆ. ಕಾರಣ ಸ್ಪಷ್ಟ. ಜನರು ನನ್ನ ಮೇಲೆ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆದ್ದರಿಂದಲೇ ತಾನೆ ಇಷ್ಟೊಂದು ದೊಡ್ಡ ಅಂತರದಿಂದ ಗೆಲ್ಲಿಸಿರುವುದು.

ನನಗೆ ಸೋಲು, ಗೆಲುವು ತಲೆಗೆ ಏರುವುದಿಲ್ಲ. ಏಕೆಂದರೆ ನನ್ನ ಮನೆಯಲ್ಲಿ ಕೊಟ್ಟ ಸಂಸ್ಕಾರವೇ ಹಾಗಿದೆ. ತಂದೆ, ತಾಯಿ ಇಬ್ಬರೂ ಮಕ್ಕಳನ್ನು ಶಿಸ್ತಿನಿಂದ ಬೆಳೆಸಿದ್ದಾರೆ. ದೊಡ್ಡವರ ಮಕ್ಕಳು ಎನ್ನುವ ಅಹಂ ಇಲ್ಲದೇ ಸಾಮಾನ್ಯರಂತೆ ಬದುಕುವುದನ್ನು ಹೇಳಿಕೊಟ್ಟಿದ್ದಾರೆ. ಆದ್ದರಿಂದಲೇ ಈಗಲೂ ನನ್ನದು ಸಾಮಾನ್ಯ ಬದುಕು.

ಅಕ್ಕಂದಿರು, ಅಣ್ಣ, ತಮ್ಮ ಎಲ್ಲರೂ ರ‍್ಯಾಂಕ್ಪಡೆಯುತ್ತಿದ್ದರು. ಹೀಗಾಗಿ ಅಣ್ಣ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ವಿಜ್ಞಾನಿ, ಇಬ್ಬರು ಅಕ್ಕಂದಿರು ಎಂ.ಡಿ (ಕಾರ್ಡಿಯಾಲಜಿ), ತಮ್ಮ ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸ ಮಾಡಿದ್ದಾರೆ. ನಾನು ಮಾತ್ರ ಅತ್ತ ದಡ್ಡನೂ ಅಲ್ಲ, ಇತ್ತ ಜಾಣನೂ ಅಲ್ಲ ಎನ್ನುವಂತಹ ಹುಡುಗ.

ಬಾಲ್ಯ ಅಂದರೆ  ಬಾಲ್ಯವೇ. ಯಾವುದೇ ತಾರತಮ್ಯವಿಲ್ಲದೆ ಎಲ್ಲರೊಂದಿಗೂ ಬೆರೆಯುತ್ತಿದ್ದೆ. ನನಗೆ ಕ್ರಿಕೆಟ್, ಫುಟ್‌ಬಾಲ್ ಇಷ್ಟವಾದ ಆಟ. ಕ್ರಿಕೆಟ್‌ನಲ್ಲಿ ಡಿವಿಜನಲ್‌ವರೆಗೂ ಆಡಿದ್ದೆ. ಗುಂಪು ಕಟ್ಟಿಕೊಂಡು ಓಡಾಡುವುದು ಎಂದರೆ ಇಷ್ಟವಿತ್ತು. ಇದಕ್ಕೆ ಕಾರಣವಿದೆ, ನಾನು ಕ್ಲಾಸ್ ಲೀಡರ್, ಸ್ಕೂಲ್ ಲೀಡರ್ ಆಗಿರುತ್ತಿದ್ದೆ. ಕಾಲೇಜಿನಲ್ಲಿ ಎನ್‌ಎಸ್‌ಯುಐ ವಿಂಗ್ ಸೇರಿಕೊಂಡೆ. ಅಲ್ಲಿಯೂ ಲೀಡರ್ ಆಗಿದ್ದೆ. ನಾಲ್ಕು ಮಂದಿ ಯುವ ಕಾಂಗ್ರೆಸ್ ಅಧ್ಯಕ್ಷರ ಜೊತೆಗೆ ಪದಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಈಗ ನಾನು ಉಪಾಧ್ಯಕ್ಷನಾಗಿದ್ದೇನೆ. ಆದರೂ ನನ್ನನ್ನು ನಾಯಕರ ಮಗ ಎನ್ನುತ್ತಾರೆ, ಏನು ಮಾಡಲಿ.

ಅಜ್ಜಿ ಊರು ಗುಂಡುಗುರ್ತಿ. ಬಾಲ್ಯದಲ್ಲಿ ಅಲ್ಲಿಗೆ ಹೋಗುತ್ತಿದ್ದೆ. ಅಜ್ಜಿ ಆಗಷ್ಟೆ ಹಿಂಡಿದ ಆಕಳ ಹಾಲನ್ನು ಕುಡಿಯಲು ಕೊಡುತ್ತಿದ್ದರು. ಈಗಲೂ ಅದರ ರುಚಿ ನನ್ನ ನಾಲಗೆ ಮೇಲಿದೆ. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಮೌಲ್ಯಗಳನ್ನು ಬಿಟ್ಟುಕೊಟ್ಟಿಲ್ಲ.

ನಮಗೆ ಅಪ್ಪ ಮಲ್ಲಿಕಾರ್ಜುನ ಖರ್ಗೆ, ಅಮ್ಮ ರಾಧಾಬಾಯಿ ಅವರೇ ಆದರ್ಶ. ಓದು ವಿನಯವನ್ನು ಕೊಡುತ್ತದೆ. ಅಧಿಕಾರವನ್ನು ಯಾರು ಬೇಕಾದರೂ ಕಸಿದುಕೊಳ್ಳಬಹುದು, ಆದರೆ ವಿದ್ಯೆಯನ್ನು ಕಸಿದುಕೊಳ್ಳಲು ಆಗುವುದಿಲ್ಲ. ಒಳ್ಳೆಯ ಮನುಷ್ಯನಾದರೆ ಸೋತರೂ ಜನ ಸುತ್ತಮುತ್ತ ಇರುತ್ತಾರೆ ಎನ್ನುವ ಪಾಠವನ್ನು ಹೇಳಿಕೊಟ್ಟಿದ್ದಾರೆ. ಅದನ್ನು ಪಾಲಿಸುತ್ತಿದ್ದೇನೆ.

ನನಗೆ ಬಾಲ್ಯದಿಂದಲೂ ಓದುವ ಹುಚ್ಚು. ನೂರಾರು ಕಾಮಿಕ್ಸ್‌ಗಳನ್ನು ಓದಿದ್ದೇನೆ. ಮೊದಲು ಫಿಕ್ಷನ್‌ಗಳನ್ನು ಓದುತ್ತಿದ್ದೆ. ಈಗ ನಾನ್‌ಫಿಕ್ಷನ್‌ಗಳನ್ನು ಹೆಚ್ಚಾಗಿ ಓದುತ್ತಿದ್ದೇನೆ. ಶಾಸಕನಾದ ಮೇಲೆ ವಿಧಾನಸೌಧದ ಗ್ರಂಥಾಲಯಕ್ಕೆ ಹೋಗಿ ಲೋಹಿಯಾ ಕುರಿತಾದ ಪುಸ್ತಕಗಳನ್ನು ತಂದು ಓದುತ್ತಿದ್ದೇನೆ. ಬುದ್ಧ, ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಹಲವರ ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಪುರಾಣ, ಮಹಾಕಾವ್ಯಗಳನ್ನು ಅಭ್ಯಾಸ ಮಾಡಿದ್ದೇನೆ. ಮಹಾಭಾರತ ಅತ್ಯುತ್ತಮ ರಾಜಕೀಯ ಗ್ರಂಥವಾಗಿ ಕಾಣಿಸುತ್ತದೆ! ನನಗೆ ಓದಲು ಸಮಯ ಸಿಗುವುದಿಲ್ಲ. ಆದರೂ ಕಾರು, ಬಸ್ಸು, ರೈಲು, ವಿಮಾನ ಪ್ರಯಾಣದ ಸಮಯದಲ್ಲಿ ಓದುತ್ತೇನೆ.
ಪತ್ನಿ ಶ್ರುತಿ ನ್ಯೂಟ್ರಿಷಿಯನ್. ಆರು ವರ್ಷದ ಅಮಿತವ್, ಮೂರು ವರ್ಷದ ಆಕ್ಷಾಂಕ್ಷ ಇದ್ದಾರೆ.

ನನ್ನ ಕತೆಯನ್ನು ನಿಲ್ಲಿಸುವ ಮುನ್ನ ಇದನ್ನು ಹೇಳಲೇಬೇಕು. ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಲು ವಿಧಾನಸೌಧಕ್ಕೆ ಹೋದೆ. ಅಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಹಿರಿಯರು ಎದುರಿಗೆ ಸಿಕ್ಕಿ ನಿಮ್ಮ ತಂದೆ 1972ರಲ್ಲಿ ವಿಧಾನಸೌಧಕ್ಕೆ ಮೊದಲು ಬಂದಾಗ ನಿಮ್ಮಂತೆಯೇ ಇದ್ದರು ಎಂದು ನೆನಪಿಸಿದರು. ಆಗ ನನಗೆ ರೋಮಾಂಚನವಾಯಿತು. ನನಗೆ ಇರುವುದು ಒಂದೇ ಆಸೆ; ಅಪ್ಪನಂತೆ ದೊಡ್ಡ ರಾಜಕಾರಣಿಯಾಗಿ ನನ್ನ ಜನರ ಋಣವನ್ನು ತೀರಿಸಬೇಕು.

ಕೊನೆಯದಾಗಿ: ನನ್ನ ಹೆಸರಿನ ಬಗ್ಗೆ ಹೇಳಬೇಕಿದೆ. ಅಪ್ಪ ಕಟ್ಟಾ ಕಾಂಗ್ರೆಸ್ಸಿಗ. ಆದ್ದರಿಂದ ನೆಹರು ಕುಟುಂಬದ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟಿದ್ದಾರೆ ಎಂದುಕೊಳ್ಳಲಾಗಿದೆ. ನಮ್ಮ ಮನೆಯ ಎಲ್ಲರ ಹೆಸರೂ ಬೌದ್ಧ ಧರ್ಮಕ್ಕೆ ಸಂಬಂಧಿಸಿದಂತೆಯೇ ಇವೆ. ಪ್ರಿಯಾಂಕ್, ಪ್ರಿಯದರ್ಶಿನಿ, ರಾಹುಲ್ ಹೆಸರು ಆ ಹಿನ್ನೆಲೆಯಿಂದ ಇಡಲಾಗಿದೆ.

ಆಮೇಲೆ ಇದನ್ನು ಹೇಳುವುದು ಮರೆತಿದ್ದೆ. ಪ್ರಿಯಾಂಕ್ ಎಂದರೆ ಒಬ್ಬನನ್ನು ಎಲ್ಲರೂ ಪ್ರೀತಿಸುವುದು ಎಂದರ್ಥ. ನನ್ನ ಜೀವನದ ಆಸೆ ಎಂದರೆ ನನ್ನ ಹೆಸರಿಗೆ ತಕ್ಕಂತೆ ಬದುಕುವುದು.

ಚಿತ್ರಗಳು: ಕೃಷ್ಣಕುಮಾರ್ ಪಿ.ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.