ಕಳೆದ ಒಂದು ವರ್ಷದಲ್ಲಿ ಬಹಳಷ್ಟು ಯುವಜನರು ಸೇವೆ ಹಾಗೂ ರಾಷ್ಟ್ರ ಪುನರ್‌ನಿರ್ಮಾಣ ಕಾರ್ಯದಲ್ಲಿ ತೊಡಗುವ ಬಗ್ಗೆ ಮಾತನಾಡುವುದನ್ನು ಕಂಡಿದ್ದೇವೆ.
ನಾನು ವೇದಿಕೆಗಳಲ್ಲಿ ವಿಚಾರ ಹಂಚಿಕೊಂಡ ಹಲವೆಡೆ `ಸಮಾಜ ಸೇವೆಯಲ್ಲಿ ನಾವು ತೊಡಗುವ ಬಗೆ ಹೇಗೆ?~ `ಫಲಪ್ರದ ರೀತಿಯಲ್ಲಿ ನಾವು ತೊಡಗಬಹುದಾದ ಕ್ಷೇತ್ರಗಳು ಯಾವುವು?~ ಎಂಬಂತಹ ನಿರ್ದಿಷ್ಟ ಪ್ರಶ್ನೆಗಳನ್ನು ಅವರು ಕೇಳುತ್ತಾರೆ.
ಇಂದಿನ ಯುವಜನ ಫಲಿತಾಂಶದ ಬಗ್ಗೆ ಅತ್ಯಾಸಕ್ತಿ ಹೊಂದಿದವರಾಗಿದ್ದು, ತಾವು ಮಾಡಬೇಕಾದ ಪ್ರತಿ ಕೆಲಸಕ್ಕೂ ವಿವರ ತಿಳಿಯಬಯಸುತ್ತಾರೆ. ಇಂತಹವರಿಗಾಗಿಯೇ ಸ್ವಾಮಿ ವಿವೇಕಾನಂದರ ಬಳಿ ಸರಳ ಸೂತ್ರವೊಂದಿದೆ. ಯಾರೇ ಆಗಲಿ ಮಾಡಬಹುದಾದ ಸುಲಭ ಹಾಗೂ ಸ್ಪಷ್ಟವಾದ ಮೂರು ಹಂತಗಳ ಸೂತ್ರವೊಂದನ್ನು ಅವರು ರೂಪಿಸಿದ್ದಾರೆ.
ಮೊದಲನೆಯ ಹಂತ ದೈಹಿಕವಾದದ್ದು. ಅದೆಂದರೆ, ಮಾನವ ದೇಹದ ಬಗ್ಗೆ ಕಾಳಜಿ ವಹಿಸಿ, ದೈಹಿಕ ನೋವು ನಿವಾರಣೆಗೆ ಅಗತ್ಯವಾದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು. ಅದಕ್ಕಾಗಿ ಆಸ್ಪತ್ರೆಗಳನ್ನು ನಡೆಸುವುದು, ಅನಾಥಾಲಯ, ವೃದ್ಧಾಶ್ರಮಗಳ ನಿರ್ವಹಣೆ ಜೊತೆಗೆ ಆದಾಯ ಸೃಷ್ಟಿಸುವ ಕಾರ್ಯಕ್ರಮಗಳು ಈ ಶ್ರೇಣಿಗೆ ಸೇರುತ್ತವೆ. ಮುಂದಿನ ಉನ್ನತ ಹಂತವು ಬೌದ್ಧಿಕ ಸೇವೆ. ಶಾಲಾ ಕಾಲೇಜುಗಳನ್ನು ನಡೆಸುವುದು, ಜಾಗೃತಿ ಮತ್ತು ಸಬಲೀಕರಣ ಕಾರ್ಯಕ್ರಮಗಳು ಇದರ ಅಡಿ ಬರುತ್ತವೆ. ನಂತರದ ಅತ್ಯುನ್ನತ ಹಂತವೆಂದರೆ ಆಧ್ಯಾತ್ಮಿಕ ಸೇವೆ.
ಇಂತಹ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಎದುರಾಗಬಹುದಾದ ಅಡೆತಡೆಗಳ ಬಗ್ಗೆ ಎಚ್ಚರಿಕೆ ನೀಡುವುದನ್ನೂ ವಿವೇಕಾನಂದರು ಮರೆತಿಲ್ಲ. ಮಾನವನ ಅಹಂ ಮತ್ತು ಸಮಸ್ಯೆಗಳನ್ನು ತಂದೊಡ್ಡಬಲ್ಲ ಅದರ ವಿಶೇಷ ಸಾಮರ್ಥ್ಯವನ್ನೂ ಅವರು ಚೆನ್ನಾಗಿಯೇ ಗ್ರಹಿಸಿದ್ದರು. ನಾವು ಇರುವುದಕ್ಕಿಂತ ಮೇಲ್ಮಟ್ಟದ ಸ್ಥಾನವನ್ನು ನಮಗೆ ನಾವೇ ಕೊಟ್ಟುಕೊಳ್ಳುವುದರ ಬಗ್ಗೆಯೂ ಅವರು ನಮ್ಮನ್ನು ಪದೇ ಪದೇ ಎಚ್ಚರಿಸಿದ್ದಾರೆ.
ಪೀಠದ ಮೇಲೆ ನಿಂತು, ಬಡವರತ್ತ ಪುಡಿಗಾಸು ಬಿಸಾಡುವ ಧೋರಣೆ ಸರಿಯಲ್ಲ ಎಂಬ ಅವರ ಉಕ್ತಿಯಂತೂ ದಂತಕತೆಯೇ ಆಗಿದೆ. ಇಂತಹ ಚಟುವಟಿಕೆಗಳನ್ನು ಕೇವಲ ಸಮಾಜದ ಉದ್ಧಾರಕ್ಕಾಗಿ ಮಾತ್ರವಲ್ಲದೆ ಸ್ವಯಂ ವ್ಯಕ್ತಿತ್ವ ವಿಕಸನ ಮತ್ತು ಅಭ್ಯುದಯಕ್ಕಾಗಿಯೂ ಕೈಗೊಳ್ಳಬೇಕು ಎಂದು ಅವರು ಪ್ರತಿಪಾದಿಸಿದ್ದರು.
ಆಧ್ಯಾತ್ಮಿಕ ಬೆಳವಣಿಗೆಯ ಅಂತಿಮ ಹಂತ ಮುಟ್ಟಲು ಸಮಾಜ ಸೇವೆಯೂ ಒಂದು ಮಾರ್ಗ ಎಂಬುದನ್ನು ಅವರು ಕಂಡುಕೊಂಡಿದ್ದರು. ಸರಳ ಮತ್ತು ಸುಂದರವಾದ ಕೇವಲ ಒಂದೇ ವಾಕ್ಯದಲ್ಲಿ, ಸೇವೆಯೆಡೆಗಿನ ತಮ್ಮ ಎಲ್ಲ ತತ್ವವನ್ನೂ ವಿವೇಕಾನಂದರು ಹಿಡಿದಿಟ್ಟಿದ್ದರು. ಅವರ ಈ ಆದರ್ಶ ಪ್ರತಿಯೊಬ್ಬರ ಕೈಗೆಟಕುವುದಷ್ಟೇ ಅಲ್ಲ ಭಾವನಾತ್ಮಕವಾಗಿಯೂ ಸೆಳೆಯುವಂತಾದ್ದು ಹಾಗೂ ಸಮಾಜ ಸೇವೆಯಲ್ಲಿ ತೊಡಗಲು ಪ್ರೇರೇಪಿಸುವಂತಾದ್ದು.
ಎಲ್ಲ ಲೌಕಿಕ ಜವಾಬ್ದಾರಿಗಳನ್ನೂ ತೊರೆದು ಸರಳ ಉಡುಗೆ ತೊಟ್ಟು, ಯಾವುದೋ ಕುಗ್ರಾಮಕ್ಕೆ ತೆರಳಿ ಉಪವಾಸ ಕೂರುವುದೇ ಸಮಾಜ ಸೇವೆಯಲ್ಲ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು.
ಅದು ವ್ಯಕ್ತಿಯ ಸಾಮಾಜಿಕ ಅಂತಃಕರಣದ ಜಾಗೃತಿಯಿಂದ ಆರಂಭಗೊಂಡು ಅಂತಿಮವಾಗಿ ಸಾಮಾಜಿಕ ಕ್ರಿಯೆಯಾಗಿ ಪರಿವರ್ತನೆಯಾಗಬೇಕು. ಯಾವುದೇ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗುವ ಮುನ್ನ ವ್ಯಕ್ತಿ ಅತ್ಯಂತ ಪ್ರಾಯೋಗಿಕವಾಗಿ ಯೋಚಿಸಿ ತನ್ನ ಅಗತ್ಯಗಳು ಮತ್ತು ಮಿತಿಗಳೇನು ಎಂಬುದನ್ನು ಅರಿತಿರಬೇಕು. ಮೊದಲು ಸ್ವಯಂ ಬದಲಾವಣೆ ಕಂಡುಕೊಂಡು ಕ್ರಮೇಣ ಅದು ಹೆಚ್ಚು ಜನರಿಗೆ ಪಸರಿಸುವಂತೆ ಮಾಡಬೇಕು. ಪ್ರತಿ ಯುವಕ/ ಯುವತಿಯೂ ಎಂಜಿನಿಯರ್, ವೈದ್ಯ, ವಿಜ್ಞಾನಿಯಂತಹ ಯಾವುದೇ ವೃತ್ತಿಯಲ್ಲಿರಲಿ ಅದರಲ್ಲೇ ಮುಂದುವರಿಯಬಹುದು. ನಾವಿರುವ ನಮ್ಮದೇ ಪುಟ್ಟ ವೃತ್ತದಲ್ಲೇ ಏನನ್ನಾದರೂ ಮಾಡುವಂತಹ ಅವಕಾಶ ಇದ್ದೇ ಇರುತ್ತದೆ.
ಇಂತಹ ಸಣ್ಣ ಬದಲಾವಣೆಗಳೇ ದೊಡ್ಡ ಪರಿವರ್ತನೆಗಳಿಗೆ ಬುನಾದಿ. ತಮ್ಮ ವೈದ್ಯಕೀಯ, ಎಂಜಿನಿಯರಿಂಗ್, ವಿಜ್ಞಾನಿ ವೃತ್ತಿಯಲ್ಲಿ ಪ್ರಾಮಾಣಿಕರಾಗಿದ್ದು ಒಳ್ಳೆಯ ಹೆಸರು ಗಳಿಸಲು ಯತ್ನಿಸುವುದೇ ಈ ಪ್ರಕ್ರಿಯೆಯ ಆರಂಭ. ಆ ನಂತರ ದಿನನಿತ್ಯದ ನಮ್ಮ ಆಗುಹೋಗುಗಳಲ್ಲಿ ಭಾಗಿಯಾಗುವ ಇತರರನ್ನೂ ಈ ವ್ಯಾಪ್ತಿಗೆ ತರಲು ಯತ್ನಿಸಬಹುದು.
ಸಮಾಜ ಸೇವೆಯಲ್ಲಿ ಭಾಗಿಯಾಗುವುದು ನಮ್ಮ ಸುತ್ತಲಿನ ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವುದಕ್ಕಷ್ಟೇ ಅಲ್ಲ; ನಮ್ಮಳಗಿನ ನಮ್ಮದೇ ಸಮಸ್ಯೆಗಳು ಮತ್ತು ದ್ವಂದ್ವಗಳಿಗೂ ಈ ಮೂಲಕ ಉತ್ತರ ಕಂಡುಕೊಳ್ಳಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂಬುದು ವಿವೇಕಾನಂದರ ಅಂತಿಮ ಗುರಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.