ಯಾವ ಪಾತ್ರವಾದರೂ ಸರಿ ಅಚ್ಯುತ್‌ಕುಮಾರ್‌ಗೆ ವಿಮರ್ಶಕರು, ಪ್ರೇಕ್ಷಕರು ಪೂರ್ಣ ಅಂಕ ನೀಡುತ್ತಾರೆ. ಚಂದನವನದಲ್ಲಿ ತೆರೆ ಕಾಣುವ ಸಿನಿಮಾಗಳಲ್ಲಿ ಮುಕ್ಕಾಲು ಪಾಲು ಚಿತ್ರಗಳಲ್ಲಿ ಅಚ್ಯುತ್ ಇರುತ್ತಾರೆ. ಇದು ಅವರ ನಟನೆಯ ಹೆಚ್ಚುಗಾರಿಕೆ. ಮುಖಭಾವ ನೋಡಿದರೆ ಗಂಭೀರ ವ್ಯಕ್ತಿತ್ವದವರು ಎನಿಸುತ್ತದೆ. ಆದರೆ ಇದಕ್ಕೆ ಪಕ್ಕಾ ಉಲ್ಟಾ ಅಚ್ಯುತ್.
ತಿಪಟೂರಿನ ಕಲ್ಪತರು ಕಾಲೇಜು ಅಂಗಳದಲ್ಲಿ ತರ್ಲೆ– ತುಂಟಾಟಗಳಿಂದ ತಮ್ಮೊಳಗಿನ ನಟನನ್ನು ಚಿಗುರಿಸಿದವರು ಅವರು. ಗಿರೀಶ್ ಕಾಸರವಳ್ಳಿ ಅವರ ‘ಗೃಹಭಂಗ’ ಧಾರಾವಾಹಿಯ ಚೆನ್ನಿಗರಾಯನ ಪಾತ್ರ ಅವರ ನಿಜ ವ್ಯಕ್ತಿತ್ವದ ಪ್ರತಿಬಿಂಬದಂತಿದೆ. ಅವರ ವ್ಯಕ್ತಿತ್ವದ ಭಾಗವಾದ ಉಡಾಫೆ, ಸೋಮಾರಿತನವೂ ಅವರ ನಟನೆಗೆ ಒಂದು ಶಕ್ತಿ ತಂದುಕೊಟ್ಟಿದೆ. ಅವರ ಪತ್ನಿ ನಂದಿನಿ ಸಹ ನಟಿ. ಅಚ್ಯುತ್ ಕಾಲೇಜು ದಿನಗಳೇ ಕಚಗುಳಿಯಂಥವು. ಮುಂದೆ ಓದಿ...
* ಗಾಂಧಿನಗರದ ಜನ ನಿಮಗೆ ಅಪ್ಪನ ಪಾತ್ರಗಳನ್ನೇ ಹೆಚ್ಚು ಕೊಡುತ್ತಿದ್ದಾರೆ?
ಗಾಂಧಿನಗರದ ಜನರನ್ನೇ ಈ ಬಗ್ಗೆ ಕೇಳಬೇಕು ನೀವು. ಯಂಗ್ ಅಪ್ಪಂದಿರಿಗೆ ಡಿಮ್ಯಾಂಡ್ ಇದೆ ಅನ್ನಿಸುತ್ತದೆ ಅದಕ್ಕೆ ಆ ಪಾತ್ರಗಳು.
* ‘ಗೃಹಭಂಗ’ದ ಚೆನ್ನಿಗರಾಯನ ಪಾತ್ರ ನಿಮ್ಮ ನಿಜ ಜೀವನಕ್ಕೆ ಎಷ್ಟು ಹೋಲಿಕೆಯಾಗುತ್ತದೆ?
ಅದೇ ನನ್ನ ಜೀವನದ ನಿಜವಾದ ಪಾತ್ರ. ಉಡಾಫೆ, ಸೋಮಾರಿತನದಲ್ಲಿಯೇ ಇದ್ದೇನೆ. ಚೆನ್ನಿಗರಾಯನ ಪಾತ್ರ ಏಕೆ ಕೊಟ್ಟರು ಎಂದು ಕಾಸರವಳ್ಳಿ ಅವರನ್ನೇ ಕೇಳಬೇಕು. ಅವರಿಗೆ ಆ ಪಾತ್ರದ ಆಲೋಚನೆ ಬಂದಾಗ ನನ್ನಲ್ಲಿ ಏನೋ ಸ್ವಲ್ಪ ಸಾಮ್ಯತೆ ಕಂಡಿರಬೇಕು. ಇಲ್ಲದಿದ್ದರೆ ನನಗೆ ಏಕೆ ಆ ಪಾತ್ರ ಕೊಡುತ್ತಿದ್ದರು.
*ನಾಟಕಗಳಲ್ಲಿ ಅಭಿನಯಿಸಿದರೆ ಚಪ್ಪಾಳೆ ಸಿಕ್ಕುತ್ತದೆ ಎನ್ನುವ ಆಸೆಯಿಂದ ಕಾಲೇಜು ದಿನಗಳಿಂದಲೇ ಬಣ್ಣ ಹಚ್ಚಿದೆ ಎಂದು ಹಿಂದೊಮ್ಮೆ ಹೇಳಿದ್ದೀರಿ. ಚಪ್ಪಾಳೆ ನಂತರ ಕಂಡಿದ್ದೇನು?
ಚಪ್ಪಾಳೆಯ ಆಚೆ ಕಂಡಿದ್ದು ನಾನು ನಿರ್ವಹಿಸುತ್ತಿರುವ ಭಿನ್ನ ಭಿನ್ನ ಪಾತ್ರಗಳು. ಬರೀ ಚಪ್ಪಾಳೆಗಳೇ ಸಿಕ್ಕಿದ್ದರೆ ಮಾಡಿದ್ದೇ ಮಾಡು ಎನ್ನುವಂತೆ ಆಗುತ್ತಿತ್ತು. ಸಣ್ಣ ಚಪ್ಪಾಳೆ ಇದ್ದಿದ್ದು ಈಗ ಮಹಾ ಚಪ್ಪಾಳೆ. ಈಗ ನಮ್ಮದು ಮಹಾ ಚಪ್ಪಾಳೆಯ ಕಡೆಗೆ ಪಯಣ.
*ಸಿನಿಮಾದಲ್ಲಿ ಇದ್ದರೂ ರಂಗಭೂಮಿ ಜತೆ ಜತೆ ಕಳ್ಳು–ಬಳ್ಳಿ ನಂಟು ಉಳಿಸಿಕೊಂಡವರು ನೀವು. ಸಿನಿಮಾ–ರಂಗಭೂಮಿ ಇದರಲ್ಲಿ ನಿಮ್ಮ ಮೊದಲನೇ ಹೆಂಡತಿ ಎಂದು ಪ್ರೀತಿಯಿಂದ ಪರಿಗಣಿಸುವುದಾದರೆ...
ಏ... ನನಗೆ ಒಬ್ಬಳೇ ಹೆಂಡತಿ ಕಣ್ರಿ. ಅದು ನಂದಿನಿ ಮಾತ್ರ. ಪಕ್ಕದಲ್ಲಿಯೇ ಕೂತಿದ್ದಾಳೆ. ಬೇರೆ ಹೆಂಡತಿ ಬಗ್ಗೆ ಮಾತನಾಡಿದರೆ ಒದೆಗಳು ಬೀಳ್ತಾವೆ.
*‘ದೇವರ ನಾಡು’ ಸೇರಿದಂತೆ ಕೆಲವು ಚಿತ್ರಗಳಲ್ಲಿ ರಾಜಕಾರಣಿ ಪಾತ್ರ ಮಾಡಿದ್ದೀರಿ. ಭವಿಷ್ಯದಲ್ಲಿ ಖಾದಿ ತೊಡುವ ಮನಸ್ಸೇನಾದರೂ ಇದೆಯೇ?
ನಾನು ವಿಫಲ ರಾಜಕಾರಣಿ. ಪಿಯುಸಿಯಲ್ಲಿ ಒಮ್ಮೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ಮತ್ತು ಹೈಸ್ಕೂಲಿನಲ್ಲಿ ಒಮ್ಮೆ ಶಾಲಾ ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೆ ಈ ಜನ (ವಿದ್ಯಾರ್ಥಿಗಳು) ಓಟು ಹಾಕಲಿಲ್ಲ. ಅಂದೇ ತೀರ್ಮಾನಿಸಿದೆ ಇನ್ನು ಮುಂದೆ ಯಾವುದೇ ಚುನಾವಣೆಗಳಲ್ಲೂ ಸ್ಪರ್ಧೆ ಮಾಡುವುದಿಲ್ಲ ಎಂದು. ರಾಜಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ. ಭವಿಷ್ಯದಲ್ಲಿ ರಾಜಕಾರಣ ಮಾಡುವುದಿಲ್ಲ, ಆ ಬಗ್ಗೆ ಆಲೋಚಿಸುವುದಿಲ್ಲ ಎಂದು ಪ್ರಮಾಣೀಕರಿಸುತ್ತೇನೆ! ನನಗೆ ಓಟು ಪಡೆಯುವಂಥ ಆಕರ್ಷಕ ಗುಣ ಇರಲಿಲ್ಲ. ಸೀರಿಯಸ್‌ನೆಸ್ ಸಹ. ಇವನಿಗೆ ಓಟು ಹಾಕಿದರೆ ಏನು ಪ್ರಯೋಜನ ಎಂದು ಮತದಾರರು ಮುದ್ರೆ ಒತ್ತಲಿಲ್ಲ. ನಾನು ವಿಫಲ ರಾಜಕಾರಣಿ... ವಿಫಲ ರಾಜಕಾರಣಿ...
*ಕಾಲೇಜು ದಿನಗಳಲ್ಲಿ ಯಾವ ಹುಡುಗಿ ಮೇಲಾದರೂ ಮನಸ್ಸು ಅರಳಿದ್ದು–ಕೆರಳಿದ್ದು...
ನನಗೆ ಲೈನ್ ಹೊಡೆದವರು ಯಾರೂ ಇಲ್ಲ. ನಾನೇ ತುಂಬಾ ಜನರಿಗೆ ಲೈನ್ ಹೊಡೆಯುತ್ತಿದ್ದೆ. ಆದರೆ ಯಾರೂ ನಮ್ಮ ಕಡೆ ತಿರುಗಿ ನೋಡುತ್ತಿರಲಿಲ್ಲ ಅಷ್ಟೇ. ನನ್ನ ಅವತಾರಗಳು ಹಾಗಿದ್ದವು. ಪ್ರಪೋಸ್ ಮಾಡುವುದಿರಲಿ ನನ್ನನ್ನು ನೋಡಿಯೇ ಭಯ ಬೀಳುತ್ತಿದ್ದರು. ಒಂದು ಹುಡುಗಿ ಹಿಂದೆ ಸುತ್ತಿದರೆ ತಕ್ಷಣಕ್ಕೆ ಅವಳಿಗೆ ಗೊತ್ತಾಗಿ ಬಿಡುತ್ತಿತ್ತು ಇವನು ಲವ್‌ಗಾಗಿ ಬೆನ್ನುಬಿದ್ದಿದ್ದಾನೆ ಎಂದು. ಕಾಲೇಜಿನಲ್ಲಿ ಜೂನಿಯರ್ ಹುಡುಗಿಯೊಬ್ಬಳಿಗೆ ಲೈನ್ ಹಾಕಿದೆ. ಮರು ದಿನ ಆಕೆಯ ಅಕ್ಕಂದಿರು, ಮನೆಮಂದಿಯನ್ನೆಲ್ಲ ಕರೆದುಕೊಂಡು ಬಂದಿದ್ದಳು. ರೌಡಿಗಳನ್ನು ವಿಚಾರಣೆ ನಡೆಸಿದಂತೆ ನನ್ನ ವಿಚಾರಣೆ! ದೂರದಲ್ಲಿ ನಿಂತುಕೊಂಡು ಪ್ರೀತಿಸುತ್ತಿದ್ದೆ. ನನ್ನೊಳಗೆ ಪ್ರೀತಿ–ಪ್ರೇಮ ಉಕ್ಕಿ ಹರಿದು ಪ್ರವಾಹವಾಗಲೇ ಇಲ್ಲ! ನಾನು ವಿಫಲ ಪ್ರೇಮಿ...
* ಮನೆಯವರು ಪಕ್ಕದಲ್ಲಿ ಇದ್ದಾರೆ ಎಂದು ಎಲ್ಲ ನಿಜಗಳನ್ನು ಹೇಳುತ್ತಿಲ್ಲ ಅನ್ನಿಸುತ್ತೆ?
ಎಲ್ಲವೂ ಅವರಿಗೆ ಗೊತ್ತು, ಬೇಕಿದ್ದರೆ ಫೋನ್ ಮಾಡಿ. ಮಗದಷ್ಟು ಮತ್ತಷ್ಟು ವಿಷಯಗಳನ್ನು ಹೇಳ್ತಾರೆ. ಅವರಿಗೆ ಎಲ್ಲ ಹೇಳಿದ್ದೇನೆ.
*ತಕ್ಷಣಕ್ಕೆ ನೆನಪಾಗುವ ನೀವು ಮಾಡಿದ ತರ್ಲೆ–ತುಂಟಾಟಗಳು ಯಾವುದು?
ಒಂದು– ಎರಡು ಆಗಿದ್ದರೆ ನೆನಪು ಇಟ್ಟುಕೊಳ್ಳಬಹುದಿತ್ತು, ನಿರ್ದಿಷ್ಟವಾಗಿ ಹೇಳಬಹುದಿತ್ತು. ದಿನನಿತ್ಯವೂ ಅದೇ ಕೆಲಸವೇ. ಓದಿದ್ದಕ್ಕಿಂತ ಬೇರೆ ಕೆಲಸ ಮಾಡಿದ್ದೇ ಹೆಚ್ಚು. ವಿಪರೀತ ತುಂಟಾಟ, ತರ್ಲೆ.
*ಹಾಗಿದ್ದರೆ ಕಾಲೇಜಿನ ಅಂಗಳಕ್ಕೆ ಹೋಗಿದ್ದು ಕಡಿಮೆ?
ಇಲ್ಲ ಕಾಲೇಜಿಗೆ ಹೋಗುತ್ತಿದ್ದೆವು. ತರಗತಿ ಒಳಗೆ ಹೋಗುತ್ತಿರಲಿಲ್ಲ ಅಷ್ಟೇ. ಕಾರಿಡಾರಿನಲ್ಲಿ ಸುತ್ತಾಡಿ ವಾಪಸ್ಸಾಗುತ್ತಿದ್ದೆವು. ಇದೆಲ್ಲ ನಮ್ಮ ಮೇಷ್ಟ್ರುಗಳಿಗೂ ಗೊತ್ತಿತ್ತು. ಸಹಿಸಿಕೊಳ್ಳುತ್ತಿದ್ದರು ಅಷ್ಟೆ.
*ಕಾಲೇಜಿಗೆ ಚಕ್ಕರ್ ಅಂದಮೇಲೆ ರ್‍ಯಾಗ್ ಮಾಡಿದ್ದು ಇತ್ಯಾದಿ ಜೀವನದ ಪುಟದಲ್ಲಿ ದಾಖಲಾಗಿದೆ ಅನ್ನಿಸುತ್ತದೆ?
ನಮಗೆ ಪಾಠ ಮಾಡುತ್ತಿದ್ದ ಅಧ್ಯಾಪಕರನ್ನೇ ರ್‍ಯಾಗ್ ಮಾಡುತ್ತಿದ್ದೆವು. ಹೊಸ ಅಧ್ಯಾಪಕರನ್ನು ಗೋಳು ಹೊಯ್ದುಕೊಳ್ಳುತ್ತಿದ್ದೆವು. ಆಗತಾನೇ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಪಾಠ ಮಾಡುವುದಕ್ಕೆ ಕೆಲವರು ಬಂದಿದ್ದರು. ನೋಡುವುದಕ್ಕೆ ನಮಗಿಂತ ಚಿಕ್ಕ ಹುಡುಗರ ರೀತಿ ಇದ್ದರು. ಅವರು ಕಾಲೇಜಿನ ಕಾರಿಡಾರ್‌ನಲ್ಲಿ ಹೋಗುವಾಗ ಕೈ ಹಿಡಿದುಕೊಂಡು ಸ್ನೇಹಿತರನ್ನು ಎತ್ತಿಕೊಂಡು ಹೋದಂತೆ ಹೋಗುತ್ತಿದ್ದೆವು. ಕಲ್ಪತರು ಕಾಲೇಜಿನಲ್ಲಿ ಉದಯರವಿ, ಶ್ರೀನಿವಾಸಮೂರ್ತಿ, ಚಿತ್ತರಂಜನ ಪೈ ಮತ್ತಿತರ ಅಧ್ಯಾಪಕರನ್ನು ತುಂಬಾ ಗೋಳು ಹೊಯ್ದುಕೊಂಡಿದ್ದೇವೆ.
*ನಿಮ್ಮದು ಪ್ರೇಮ ವಿವಾಹವೋ–ಹಿರಿಯರು ನಿಶ್ಚಯಿಸಿದ ವಿವಾಹವೋ?
ನಾನು ಮತ್ತು ನಂದಿನಿ ಲವ್ ಮಾಡಿದ್ದೆವು. ಮನೆಯವರು ಸೇರಿ ಮದುವೆ ಮಾಡಿದರು. ಅದು ಪ್ರೇಮ ಅಂತ ಏನೂ ಇಲ್ಲ! ಫೋನಿನಲ್ಲಿ ತುಂಬಾ ಮಾತನಾಡುತ್ತಿದ್ದೆವು. ಮನೆಯವರು ಇವರು ಲವ್ ಮಾಡುತ್ತಿದ್ದಾರೆ ಎಂದುಕೊಂಡರು. ಮುಂದಿನದ್ದು ಮದುವೆ. ನನ್ನ ಪ್ರೇಮದಲ್ಲಿ ಗುಲಾಬಿ ಹೂವು ಕೊಡಲಿಲ್ಲ, ಪ್ರೇಮ ಪತ್ರ ಬರೆಯಲಿಲ್ಲ, ಬರೀ ಹರಟೆ ಹರಟೆ ಅಷ್ಟೇ.
*ಒಂದು ವೇಳೆ ನಟನಾಗದಿದ್ದರೆ...
ತಿಪಟೂರು ಕೊಬ್ಬರಿ ಅಂಗಡಿಯಲ್ಲಿ ಲೆಕ್ಕ ಬರೆದುಕೊಂಡು ಇರುತ್ತಿದ್ದೆ ಅನ್ನಿಸುತ್ತದೆ. ಅಕೌಂಟ್ಸ್ ಚೆನ್ನಾಗಿ ಬರುತ್ತಿತ್ತು. ಆದರೆ ಕೆಲಸದ ಬಗ್ಗೆ ಯೋಚನೆ ಮಾಡಲೇ ಇಲ್ಲ. ಅಷ್ಟರಲ್ಲಿ ನೀನಾಸಂ ಸೇರಿದ್ದೆ.
ಹೈಸ್ಕೂಲ್‌ವರೆಗೂ ನಾನು ಅತ್ಯುತ್ತಮ ವಿದ್ಯಾರ್ಥಿ. ಚೆನ್ನಾಗಿ ಓದುತ್ತಿದ್ದೆ. ಎಸ್ಸೆಸ್ಸೆಲ್ಸಿಯಲ್ಲಿ ಶೇಕಡಾ 73 ಅಂಕ. ನಂತರ ಪ್ರಥಮ ಪಿಯುಸಿಯಲ್ಲಿ ಹಾಜರಾತಿ ಕೊರತೆಯಿಂದ ಪರೀಕ್ಷೆಗೆ ಕೂರಿಸಲಿಲ್ಲ. ನಮ್ಮ ಊರಲ್ಲಿ ಮರ್ಯಾದೆ ಹೋಗಿಬಿಡುತ್ತದೆ ಎಂದು ದ್ವಿತೀಯ ಪಿಯುವನ್ನು ಒಂದೇ ಸಲ ಪಾಸ್ ಮಾಡಿದೆ. ಮುಂದಿನದ್ದು ಚೆಂದ. ಡಿಗ್ರಿಯಲ್ಲಿ ಕ್ಯಾರಿ ಓವರ್ ವ್ಯವಸ್ಥೆ ಇತ್ತು. ಫೇಲ್ ಆದರೂ ಮುಂದಕ್ಕೆ ಹೋಗುತ್ತಿದ್ದೆವು. ಆದ್ದರಿಂದ ಪಾಸು–ಫೇಲ್ ಎನ್ನುವುದೇ ಗೊತ್ತಾಗಲಿಲ್ಲ. ಕಾಲೇಜಿಗೆ ಹೋದೆ, ಆದರೆ ಡಿಗ್ರಿ ಮುಗಿಯಲಿಲ್ಲ. ಆಮೇಲೆ ನೀನಾಸಂ. ಅಂತಿಮ ವರ್ಷದ ಪದವಿ ಫಲಿತಾಂಶ ನೋಡಿದ್ದು ಎರಡು ವರ್ಷದ ತರುವಾಯ. ನೀನಾಸಂನಲ್ಲಿ ಮಾತ್ರ ನೀಟಾಗಿ ಓದಿದೆ. ಡಿಗ್ರಿ ಮುಗಿಸಿ ಮುಂದೆ ಓದಿದ್ದರೆ ನನ್ನ ಶಿಕ್ಷಣದ ಗತಿ ಏನಾಗುತ್ತದೆ ಎನ್ನುವ ಭವಿಷ್ಯ ಗೊತ್ತಿದ್ದ ಕಾರಣಕ್ಕೆ ಇರಬಹುದು ನೀನಾಸಂ ಸೇರಿದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.