ADVERTISEMENT

ನಿಮಗ್ಯಾವ ಸೈಕಲ್ ಬೇಕು?;ಸೈಕಲ್ ಖರೀದಿ ಗೈಡ್

ನೇಸರ ಕಾಡನಕುಪ್ಪೆ
Published 11 ಜುಲೈ 2012, 19:30 IST
Last Updated 11 ಜುಲೈ 2012, 19:30 IST
ನಿಮಗ್ಯಾವ ಸೈಕಲ್ ಬೇಕು?;ಸೈಕಲ್ ಖರೀದಿ ಗೈಡ್
ನಿಮಗ್ಯಾವ ಸೈಕಲ್ ಬೇಕು?;ಸೈಕಲ್ ಖರೀದಿ ಗೈಡ್   

ಸೈಕಲ್ ಓಡಿಸುವುದು ಪ್ರತಿಯೊಬ್ಬ ವಾಹನ ಸವಾರನ ಮೊದಲ ಹೆಜ್ಜೆ. ಬಾಲ್ಯದಲ್ಲಿ ಸೈಕಲ್ ಓಡಿಸಲು ಬೇಕಾದ ಬ್ಯಾಲೆನ್ಸಿಂಗ್ ಕಲಿಯುವ ಸಾಹಸ ಅತ್ಯದ್ಭುತ ರೋಮಾಂಚನಕಾರಿ ಅನುಭವವೇ ಸರಿ.
 
ಸೈಕಲ್ ಬ್ಯಾಲೆನ್ಸಿಂಗ್ ಒಮ್ಮೆ  ಕಲಿತರೆ ಜೀವನದ ಕೊನೆಯವರೆಗೂ ಮರೆಯಲಾಗದ ವಿದ್ಯೆ. ಆದರೆ ಸೈಕಲ್‌ನ್ನು ಬಾಲ್ಯದಲ್ಲಿ ಮಾತ್ರ ಓಡಿಸುವ ಪ್ರವೃತ್ತಿ ಭಾರತದಲ್ಲೇ ಮಾತ್ರ ಹೆಚ್ಚು. ದೊಡ್ಡವರಾದಂತೆ ಬೈಕ್ ಅಥವಾ ಸ್ಕೂಟರ್ ಓಡಿಸುವುದೇ ಇಲ್ಲಿ ಕಾಣುವುದು. ಸೈಕಲ್ ಓಡಿಸುವುದು ಪ್ರತಿಷ್ಠೆಗೆ  ಧಕ್ಕೆ ತರುತ್ತದೆ ಎಂಬ ಕೀಳರಿಮೆಯೂ ಇದಕ್ಕೆ ಕಾರಣ ಇರಬಹುದು.

ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರವೃತ್ತಿ ಬದಲಾಗಿ ಸೈಕಲ್ ಹೊಂದುವುದು ಪ್ರತಿಷ್ಠೆಯ ಸಂಗತಿಯಾಗಿ ರೂಪಗೊಳ್ಳುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಮಾದರಿ ಸೈಕಲ್‌ಗಳಿಗೆ ಬದಲಾಗಿ ಆಧುನಿಕ ಮಾದರಿಯ ಮೌಂಟೇನ್ ಬೈಕ್, ರೋಡ್ ಬೈಕ್ ಹಾಗೂ ಹೈಬ್ರಿಡ್ ಬೈಕ್ ಕೊಳ್ಳುವವರು ಹೆಚ್ಚುತ್ತಿದ್ದಾರೆ.

ಪ್ರತಿನಿತ್ಯ ಸೈಕಲ್‌ನ್ನೇ ಸಂಚಾರದ ವಾಹನವನ್ನಾಗಿ ಬಳಸದೇ ಇದ್ದರೂ, ವ್ಯಾಯಾಮಕ್ಕಾಗಿ, ಪ್ರವಾಸಕ್ಕಾಗಿ ಕೊಂಡು ಓಡಿಸುವವರೂ ಹೆಚ್ಚುತ್ತಿದ್ದಾರೆ. ಸೈಕಲ್ ಓಡಿಸುವ ಮೂಲಕ ಪರಿಸರ ಮಾಲಿನ್ಯವನ್ನು ಕೊಂಚವಾದರೂ ಕಡಿಮೆಗೊಳಿಸುವ ಕಾಳಜಿಯುಳ್ಳ ಯುವಕರೂ ಈಗ ಹೆಚ್ಚುತ್ತಿದ್ದಾರೆ.

ಆದರೆ ಸೈಕಲ್ ಓಡಿಸುವವರಿಗೆ ಈಗ ಯಾವ ಬಗೆಯ ಸೈಕಲ್‌ಗಳನ್ನು ಕೊಳ್ಳಬೇಕು ಎಂಬುದನ್ನು ನಿರ್ಧರಿಸುವುದೇ ಕಷ್ಟವಾಗಿದೆ. ವಿವಿಧ ವಿಧದ, ವಿವಿಧ ಕಂಪೆನಿಗಳ ಸೈಕಲ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ. ಭಾರತೀಯ ಸೈಕಲ್ ಮಾರಾಟ ಕಂಪೆನಿಗಳಾದ ಅಟ್ಲಾಸ್, ಹೀರೋ ಹಾಗೂ ಹರ್ಕ್ಯುಲೆಸ್ ಸೈಕಲ್‌ಗಳು ಕೊನೆಗೂ ಮೈಚಳಿ ಬಿಟ್ಟು ಆಧುನಿಕ ಮಾದರಿ ಸೈಕಲ್‌ಗಳನ್ನು ತಯಾರಿಸಲು ಆರಂಭಿಸಿವೆ.

ಆದರೆ ಈ ಸೈಕಲ್‌ಗಳ ಗುಣಮಟ್ಟ ಅಷ್ಟಕ್ಕಷ್ಟೇ. ಸುಮಾರು 100 ವರ್ಷಗಳಿಗೂ ಹೆಚ್ಚಿನ ಕಾಲದಿಂದ ಸೈಕಲ್ ನಿರ್ಮಾಣದಲ್ಲಿ ತೊಡಗಿಸಿಕೊಂಡ ವಿದೇಶಿ ಸೈಕಲ್ ಮಾದರಿ ಹಾಗೂ ವಿಧಗಳ ಸೈಕಲ್‌ಗಳ ಅನುಕರಣೆಯೇ ಇಲ್ಲಿ ಹೆಚ್ಚಿದೆ. ಹಾಗಾಗಿ ಗುಣಮಟ್ಟ ಉತ್ತಮವಿಲ್ಲದೇ, ಹೆಚ್ಚು ಭಾರವಿರುವ, ಕೂರಲು ಆರಾಮದಾಯಕವಲ್ಲದ ಸೈಕಲ್‌ಗಳೇ ಹೆಚ್ಚಿವೆ.

ಬೆಲೆಯಲ್ಲಿ ಕೊಂಚ ಕಡಿಮೆ ಎಂಬುದನ್ನು ಬಿಟ್ಟರೆ ಕೊಳ್ಳಲು ಬೇಕಾದ ಅಗತ್ಯ ಅನುಕೂಲ, ಸೌಲಭ್ಯಗಳಾವುವೂ ಇಲ್ಲ.ಆದರೂ ಸೈಕಲ್ ಕೊಳ್ಳುವವರಿಗೆ ಯಾವ ವಿಧದ ಸೈಕಲ್‌ಗಳು ಬೈಸಿಕಲ್ ಪ್ರಪಂಚದಲ್ಲಿವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಈಗ ಮುಖ್ಯವಾಗಿ ಮೂರು ವಿಭಜನೆಗಳಿವೆ.

ರೋಡ್ ಬೈಕ್, ಮೌಂಟೇನ್ ಬೈಕ್ ಹಾಗೂ ಹೈಬ್ರಿಡ್ ಬೈಕ್. ರೋಡ್ ಬೈಕ್‌ಗಳೆಂದರೆ ಇವು ನಯವಾದ ರಸ್ತೆಗಳಲ್ಲಿ ಸಂಚರಿಸಲು, ಹೆಚ್ಚು ತ್ರಾಸವಿಲ್ಲದ, ಕಡಿಮೆ ತೂಕ ಇರುವ, ತೆಳ್ಳನೆ ಗಾಳಿಯನ್ನು ಸೀಳಿಕೊಂಡು ಹೋಗುವ ಸೈಕಲ್‌ಗಳು. ಮೌಂಟೇನ್ ಬೈಕ್‌ಗಳೆಂದರೆ ಹೆಸರೇ ಹೇಳುವಂತೆ ಇವು ಆಫ್ ರೋಡ್ ಸೈಕಲ್‌ಗಳು.
 
ನಯವಾದ ರಸ್ತೆಯ ಜತೆಗೆ ಕಚ್ಚಾ ರಸ್ತೆಗಳಲ್ಲಿ, ಕಲ್ಲು ಮಣ್ಣು ತುಂಬಿದ ರಸ್ತೆಗಳಲ್ಲಿ ಸಂಚರಿಸಬಹುದು. ಇವಕ್ಕೆ ಬಲಿಷ್ಠವಾದ ಫ್ರೇಂ, ಗಟ್ಟಿಯಾದ ವೆಲ್ಡಿಂಗ್, ದಪ್ಪ ಟಯರ್ ಇರುತ್ತದೆ. ಹೆಚ್ಚು ವೇಗದಲ್ಲಿ ಸಂಚರಿಸಲು ಸಾಧ್ಯವಿಲ್ಲ. ಆದರೆ ಇವು ಬಲಶಾಲಿ. ಜತೆಗೆ ಹೆಚ್ಚು ಬಾಳಿಕೆ ಬರುತ್ತವೆ. ಮತ್ತೊಂದು ವಿಭಾ ಹೈಬ್ರಿಡ್. ಈ ಸೈಕಲ್‌ಗಳು ರೋಡ್ ಹಾಗೂ ಮೌಂಟೇನ್ ಬೈಕ್‌ಗಳೆರಡರ ಸಮ್ಮಿಶ್ರಣ. ಇವು ಹೆಚ್ಚು ಬಲಶಾಲಿಯೂ ಹೌದು, ತೂಕದಲ್ಲಿ ಕಡಿಮೆಯೂ ಇರುತ್ತವೆ. ತೆಳ್ಳಗೂ ಇರುತ್ತವೆ. ಹಾಗಾಗಿ ಹೆಚ್ಚು ವೇಗ ಸಾಧ್ಯ. ಚಾಲನೆಯೂ ಸುಲಭ.

ಹಾಗಾಗಿ ಸೈಕಲ್ ಕೊಳ್ಳುವವರು ತಾವು ಯಾವ ವಿಭಾಗಕ್ಕೆ ಸೇರುತ್ತೇವೆ, ತಮ್ಮ ಬಳಕೆ ಏನು ಎಂಬುದನ್ನು ತಿಳಿದು ಸೈಕಲ್ ಕೊಳ್ಳಬೇಕು. ಕೇವಲ ಮೋಜಿನ ಪಯಣಕ್ಕಾಗಿ, ವ್ಯಾಯಾಮಕ್ಕಾಗಿ ಸೈಕಲ್ ಓಡಿಸುವವರಾದರೆ ಮೌಂಟೇನ್‌ಬೈಕ್ ಕೊಳ್ಳುವುದು ಒಳಿತು. ನೋಡಲು ಅಂದವಾಗೂ ಇರುವ ಈ ಬೈಕ್‌ಗಳು ಹೆಚ್ಚು ಬಾಳಿಕೆ ಬರುತ್ತವೆ.

ರೇಸಿಂಗ್ ಹುಚ್ಚಿದ್ದು, ನೂರಾರು ಕಿಲೋ ಮೀಟರ್ ಸಂಚರಿಸುವ ಸಾಹಸಿಗಳು ರೋಡ್ ಬೈಕ್ ಕೊಳ್ಳುವುದು ಒಳಿತು. ಆಗಾಗ ಸಾಹಸ ಯಾತ್ರೆ ಮಾಡುವವರು, ಹೆಚ್ಚು ಆರ್ಥಿಕ ಚೈತನ್ಯ ಇರುವವರು ಹೈಬ್ರಿಡ್ ಬೈಕ್ ಕೊಳ್ಳಬಹುದು.

ಈ ಎಲ್ಲ ಬೈಕ್‌ಗಳಲ್ಲೂ ಸಾಮಾನ್ಯವಾದ ಮೂರು ಮುಖ್ಯ ಭಾಗಗಳಿಗೆ ಕೊಳ್ಳುವವರು ಗಮನ ಹರಿಸಲೇಬೇಕು. ಸೈಕಲ್‌ನ ಫ್ರೇಂ, ಸೈಕಲ್‌ನ ಗಿಯರ್ ಸಿಸ್ಟಂ ಹಾಗೂ ಸಸ್ಪೆನ್ಷನ್ ಸಿಸ್ಟಂ. ಫ್ರೇ ಸಾಮಾನ್ಯವಾಗಿ ಕಬ್ಬಿಣದ್ದೇ ಆಗಿರುತ್ತದೆ. ಆಧುನಿಕ ಬೈಕ್‌ಗಳಲ್ಲಿ ಅಲ್ಯೂಮಿನಿಯಂ ಅಲಾಯ್, ಕಾರ್ಬನ್ ಫೈಬರ್, ಟೈಟಾನಿಯಂನಿಂದ ತಯಾರಾದ ಬೈಕ್‌ಗಳೂ ಇರುತ್ತವೆ. ಕಬ್ಬಿಣದ ಫ್ರೇಂ ಹೆಚ್ಚು ತೂಕ, ಆದರೆ ಬಾಳಿಕೆ ಹೆಚ್ಚು.

ಅಲ್ಯೂಮಿನಿಯಂ ಫ್ರೇ ತೂಕ ಕಡಿವೆು, ಜತೆಗೆ ಬಾಳಿಕೆ ಕಡಿಮೆ. ಆದರೆ ಕಾರ್ಬನ್ ಫೈಬರ್ ಹಾಗೂ ಟೈಟಾನಿಯಂ ಫ್ರೇಂಗಳು ಕಡಿವೆು ತೂಕ, ಹೆಚ್ಚು ಗಡಸು, ಬಾಳಿಕೆಯೂ ಹೆಚ್ಚು. ಹೆಚ್ಚು ಹಣ ಖರ್ಚು ಮಾಡಲು ಆಗದೇ ಇರುವವರು ಅಲ್ಯೂಮಿನಿಯಂ ಫ್ರೇಂ ಕೊಳ್ಳುವುದು ಸೂಕ್ತ.
 
ಇವು ಕಡಿಮೆ ತೂಕ. ಬಾಳಿಕೆ ಕಡಿಮೆಯೇ ಆದರೂ, ತೀರಾ ನಿಕೃಷ್ಟವೇನಲ್ಲ. ಆದರೆ ರೋಡ್ ಬೈಕ್ ಕೊಳ್ಳುವವರು ಕಾರ್ಬನ್ ಫೈಬರ್ ಅಥವಾ ಟೈಟಾನಿಯಂ ಫ್ರೇಂ ಇರುವ ಬೈಕ್ ಕೊಳ್ಳಬೇಕು. ಏಕೆಂದರೆ ಇದು ಕಡಿವೆು ತೂಕ ಇರುವ ಕಾರಣ, ತುಳಿಯಲು ಸುಲಭ. ದೂರದ ಸಂಚಾರಕ್ಕೆ ಹೇಳಿ ಮಾಡಿಸಿದವು.

ತರಾವರಿ ಗಿಯರ್ ಸಿಸ್ಟಂ
ಸೈಕಲ್‌ಗಳಲ್ಲಿ ಗಿಯರ್ ಸಿಸ್ಟಂ ಜೋಡಿತಗೊಂಡಿದ್ದು ಭಾರತದಲ್ಲಿ ತೀರ ಇತ್ತೀಚೆಗೆ. ಆದರೆ ಅಮೆರಿಕಾದಲ್ಲಿ ಬಿಎಂಎಕ್ಸ್ ಹಾಗೂ ಮೌಂಟೇನ್ ಬೈಕ್ ತಯಾರಿಕೆಯಲ್ಲಿ ಮುಂದಿರುವ ಮಂಗೂಸ್, ಕೆನಾನ್‌ಡೇಲ್, ಡೆಕೆತ್ಲಾನ್, ಟ್ರ್ಯಾಕ್ಸ್ ಕಂಪೆನಿ ಬೈಕ್‌ಗಳಲ್ಲಿ ಸರಿ ಸುಮಾರು 20 ವರ್ಷಗಳಿಂದಲೇ ಗಿಯರ್ ಸಿಸ್ಟಂ ಬಳಕೆಯಲ್ಲಿದೆ.

ಇಂದು ವಿಶ್ವದ ಬಹುತೇಕ ಎಲ್ಲ ಬ್ರಾಂಡ್‌ನ ಸೈಕಲ್‌ಗಳಲ್ಲಿ ಶಿಮಾನೋ ಬ್ರಾಂಡ್‌ನ ಗಿಯರ್ ಸಿಸ್ಟಂಗಳು ಬಳಕೆಯಲ್ಲಿ ಇವೆ. ಸೈಕಲ್‌ನ ಹಿಂಬದಿ ಚಕ್ರ, ಮುಂಭಾಗದ ಕ್ರಾಂಕ್ ಬಳಿ ಹಲವು ಹಲ್ಲಿನ ಚಕ್ರಗಳ ಕಾಂಬಿನೇಷನ್‌ನಲ್ಲಿ ಕನಿಷ್ಠ 21 ಗಿಯರ್‌ಗಳಿಂದ 30 ಗಿಯರ್‌ಗಳವರೆಗಿನ ಆಯ್ಕೆ ಈಗಿನ ಸೈಕಲ್‌ಗಳಲ್ಲಿ ಲಭ್ಯ.
 
ಸೈಕಲ್ ಸವಾರರಿಗೆ ತಾವು ಚಲಿಸುವ ರಸ್ತೆಯ ಸ್ಥಿತಿಗತಿಯ ಬಗ್ಗೆ ತಿಳಿದೇ ಇರುತ್ತದೆ. ಅದಕ್ಕೆ ಅನುಗುಣವಾಗಿ ಅಗತ್ಯ ಗುಣಮಟ್ಟದ ಗಿಯರ್ ಇರುವ ಸೈಕಲ್ ಕೊಂಡರೆ ಆಯಿತು. ಗಿಯರ್ ಸಿಸ್ಟಂ ಇಲ್ಲದ ಏಕ ಕ್ರಾಂಕ್ ಹಾಗೂ ಹಿಂಬದಿಯ ಏಕ ಹಲ್ಲಿನ ಚಕ್ರ ಇರುವ ಸೈಕಲ್‌ಗಳೂ ಲಭ್ಯ. ಸಮತಟ್ಟಾದ ರಸ್ತೆಗಳಿದ್ದಲ್ಲಿ ಈ ರೀತಿಯ ಸೈಕಲ್‌ಗಳು ಸಾಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.