ಸಾಮಾಜಿಕ ಕಾರ್ಯದಲ್ಲಿ ತೊಡಗಿದವರಿಗೆ ತಮ್ಮ ಅರಿವಿಗೇ ಬಾರದಂತೆ ಕ್ರಮೇಣವಾಗಿ ಅಹಂಕಾರ ಬೆಳೆಯುವ ಅಪಾಯ ಇರುತ್ತದೆ. ಈ ಕ್ಷೇತ್ರಕ್ಕೆ ಇಳಿಯುವ ಬಹುತೇಕರು ಉನ್ನತ ಆದರ್ಶಗಳೊಂದಿಗೆ ತಾವು ಕೈಗೊಳ್ಳುವ ಕಾರ್ಯದ ಮೂಲಕ ಆತ್ಮಶೋಧನೆಯಲ್ಲಿ ತೊಡಗುವ ಉದ್ದೇಶ ಹೊಂದಿರುತ್ತಾರೆ.
ಆದರೆ ಈ ಹಾದಿಯಲ್ಲಿ ತಮಗೇ ಅರಿಯದಂತೆ ತಮ್ಮನ್ನು ತಾವೇ ಕಳೆದುಕೊಳ್ಳುವ ಅಪಾಯ ಇರುತ್ತದೆ.ಆದರೆ, ವಿವೇಕಾನಂದರ ಬಳಿ ಇದಕ್ಕೂ ಉತ್ತರವಿದೆ. ಈ ಸವಾಲಿನ ಬಗ್ಗೆ ಅವರು ಸಮಗ್ರವಾಗಿ ಚಿಂತಿಸಿದ್ದರು.
ವೇದಿಕೆಯ ಮೇಲೆ ನಿಂತು, ಬಡಜನರೇ ನನ್ನ ಮಾತನ್ನು ಆಲಿಸಿರಿ, ನಾನು ನೀಡುವ ಈ ಐದು ಕಾಸುಗಳನ್ನು ತೆಗೆದುಕೊಳ್ಳಿ ಎಂದು ಯಾವತ್ತೂ ಹೇಳಬೇಡಿ. ಅದಕ್ಕೆ ಬದಲಾಗಿ, ಬಡಜನರು ಇರುವುದರಿಂದಲೇ ಅವರ ಸೇವೆ ಮಾಡಲು ನನಗೊಂದು ಅವಕಾಶ ಸಿಕ್ಕಿದೆ ಎಂದೇ ಭಾವಿಸಿರಿ ಎಂದು ಅವರು ಹೇಳಿದ್ದರು.
ಸಮಾಜದೊಂದಿಗೆ ನಾವು ಹೆಚ್ಚು ಹೆಚ್ಚು ಭಾಗಿಯಾಗುತ್ತಾ, ಅದಕ್ಕೆ ನಮಗೆ ಮನ್ನಣೆ ಹೆಚ್ಚಾಗುತ್ತಾ ಹೋದಂತೆ, ನಮ್ಮ ಗಮನ `ನಮ್ಮಿಂದ ಏನು ಕಾರ್ಯ ಆಗುತ್ತಿದೆ~ ಎಂಬುದಕ್ಕಿಂತ ಹೆಚ್ಚಾಗಿ `ನಾವು ಕೆಲಸ ಮಾಡುತ್ತಿದ್ದೇವೆ~ ಎಂದು ಅಂದುಕೊಳ್ಳುವುದರತ್ತಲೇ ಕೇಂದ್ರೀಕೃತವಾಗುತ್ತದೆ.
ನಮ್ಮ ಕೆಲಸ, ನಮಗೆ ಬಂದ ಪ್ರಶಸ್ತಿ ಇತ್ಯಾದಿಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಸಿಕ್ಕಿ, ಮನ್ನಣೆ ಇನ್ನಷ್ಟು ಹೆಚ್ಚಾದಾಗ ನಾವು ದಿಕ್ಕುತಪ್ಪುವ ಸಾಧ್ಯತೆ ಇರುತ್ತದೆ. ನಾವು ಅಗಾಧವಾದ ರಚನಾತ್ಮಕ ಕಾರ್ಯ ಮಾಡುತ್ತಿದ್ದೇವೆ ಎಂಬ ಭ್ರಮೆ ನಮ್ಮಲ್ಲಿ ಮೊಳೆಯತೊಡಗುತ್ತದೆ.
ಸಾಮಾಜಿಕ ಕಾರ್ಯದಲ್ಲಿ ತೊಡಗುವ ನಿಜವಾದ ಉದ್ದೇಶವನ್ನು ಎಷ್ಟು ಬೇಗ ಮರೆತೇಬಿಡುತ್ತೇವೆ ಎಂಬುದಕ್ಕೆ ನನ್ನ ಸ್ವಂತ ಅನುಭವವನ್ನೇ ಇಲ್ಲಿ ಹೇಳುತ್ತೇನೆ.
ಸ್ವಾಮಿ ವಿವೇಕಾನಂದ ಯುವ ಆಂದೋಲನ ಸ್ಥಾಪಿಸಿ ಹಲವು ರೀತಿಯ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ನನ್ನ ಅಂತರಂಗದ ಪ್ರಯಾಣವೂ ಆರಂಭವಾಗಿತ್ತು.
ಹಲವು ವರ್ಷಗಳ ಕಾಲ ಈ ಸೇವಾ ಕಾರ್ಯ ನನ್ನೊಳಗಿನ ಆಧ್ಯಾತ್ಮಿಕ ವಿಕಸನದ ಬಾಹ್ಯ ಅಭಿವ್ಯಕ್ತಿಗೆ ಒಂದು ವೇದಿಕೆ ಎಂದೇ ನಾನು ಭಾವಿಸಿದ್ದೆ. ನಮ್ಮ ಚಟುವಟಿಕೆಗಳು ಹೆಚ್ಚಾಗುತ್ತಿದ್ದಂತೆಯೇ ನಮ್ಮ ಸಂಸ್ಥೆಗೆ ಒಳ್ಳೆಯ ಹೆಸರು ಬಂದು, ಅದರಲ್ಲಿ ತೊಡಗಿಸಿಕೊಂಡಿದ್ದ ನಮ್ಮೆಲ್ಲರಿಗೂ ಮನ್ನಣೆಯೂ ಹೆಚ್ಚಾಗುತ್ತಾ ಹೋಯಿತು.
ನಮ್ಮ ಶಾಲೆಗಳಲ್ಲಿ ನೂರಾರು ಆದಿವಾಸಿ ಮಕ್ಕಳು ಹಾಗೂ ಗ್ರಾಮೀಣ ಮಕ್ಕಳು ಓದುತ್ತಿದ್ದಾರೆಂಬ ಹಾಗೂ ನಮ್ಮ ಆಸ್ಪತ್ರೆಗಳಿಂದ ಸಾವಿರಾರು ರೋಗಿಗಳಿಗೆ ಪ್ರಯೋಜನವಾಗುತ್ತಿದೆ ಎಂಬ ಕಾರಣಕ್ಕೆ ಸಮಾಜದಿಂದ ಶ್ಲಾಘನೆ ಜಾಸ್ತಿಯಾಗುತ್ತಿದ್ದಂತೆಯೇ ನನ್ನ ಆಂತರಿಕ ವಿಕಸನಕ್ಕೆ ಕತ್ತಲು ಕವಿಯಿತು.
ನಮ್ಮ ಕಾರ್ಯದ ಬಗ್ಗೆ ದಿನಪತ್ರಿಕೆಗಳಲ್ಲಿ, ಟಿ.ವಿಗಳಲ್ಲಿ ಲೇಖನಗಳು/ ವರದಿಗಳು ಪ್ರಕಟವಾದಾಗ ಪ್ರಸಿದ್ಧಿ ಇನ್ನಷ್ಟು ಹೆಚ್ಚಾಯಿತು. ಇದೇ ಸಂದರ್ಭದಲ್ಲಿ, ರಾಜ್ಯದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಜೇನುಕುರುಬ ಹುಡುಗನೊಬ್ಬನ ಬಗ್ಗೆ ಹಾಗೂ ನಮ್ಮ ಎಸ್‌ವಿಎಂಎಂ ಚಟುವಟಿಕೆಗಳ ಬಗ್ಗೆ ಪುಸ್ತಕವೊಂದನ್ನು ಬರೆದರು. ಈ ಕೃತಿಯಲ್ಲಿ ನನ್ನನ್ನು ಕೇಂದ್ರ ಪಾತ್ರದ ಪರಿವರ್ತನೆಯ ಹರಿಕಾರನೆಂಬಂತೆ ಚಿತ್ರಿಸಿದರು.
ಇವೆಲ್ಲಾ ನನ್ನ ತಲೆಯನ್ನು ಹೊಕ್ಕುತ್ತಿದ್ದಂತೆ ನಾನು ನಿಧಾನವಾಗಿ, ವಿವೇಕಾನಂದರು ಪ್ರತಿಪಾದಿಸಿದ ನಿರ್ಲಿಪ್ತ ಹಾಗೂ ನಿಷ್ಕಾಮ ಸೇವಾ ತತ್ವವನ್ನು ಮರೆತೇಬಿಟ್ಟೆ.
ಅಂತಹ ಸಂದರ್ಭದಲ್ಲಿ ಅದೇ ವಿವೇಕಾನಂದರು ಆಡಿದ ಬೇರೊಂದು ಮಾತು ನೆನಪಾಯಿತು. `ಕರುವಿಗೆ ಜನ್ಮ ನೀಡುವ ಹಸುವಿಗೆ ಅದಕ್ಕೆ ಹೇಗೆ ಹಾಲೂಡಿಸಬೇಕೆಂಬುದೂ ಗೊತ್ತಿರುತ್ತದೆ.
ತಾನು ಸೃಷ್ಟಿಸಿದ್ದನ್ನು ಹೇಗೆ ಪೋಷಿಸಬೇಕೆಂಬುದು ದೇವರಿಗೆ ಗೊತ್ತಿರುತ್ತದೆ. ಸುತ್ತಮುತ್ತ ಏನೇನು ಆಗುತ್ತಿದೆಯೋ ಅದಕ್ಕೆಲ್ಲಾ ನೀವೇ ಕಾರಣ ಎಂದು ಭಾವಿಸಬೇಡಿ. ಅದಕ್ಕೆ ಬದಲಾಗಿ, ದೇವರು ನಿಮ್ಮನ್ನು ತನ್ನ ಒಂದು ಸಾಧನವನ್ನಾಗಿ ಆಯ್ದುಕೊಂಡು ಅವಕಾಶ ನೀಡಿರುವುದಕ್ಕಾಗಿ ಸಂತಸಪಡಿ~ ಎಂದು ಅವರು ಹೇಳುತ್ತಿದ್ದರು.
ನೀವು ನಿರ್ಮಿಸಿದ ಆಸ್ಪತ್ರೆಗಳು, ಶಾಲೆಗಳು ಪ್ರವಾಹ ಬಂದು ಒಂದೇ ಕ್ಷಣದಲ್ಲಿ ಕೊಚ್ಚಿಹೋಗಿಬಿಡಬಹುದು ಅಥವಾ ಭೂಕಂಪನವಾಗಿ ನೆಲಸಮವಾಗಬಹುದು. ಆದ್ದರಿಂದ ನಿಮ್ಮ ಬಗ್ಗೆ ನೀವೇ ಅತಿಯಾಗಿ ಪ್ರಶಂಸಿಸಿಕೊಳ್ಳಬೇಡಿ. ನೀವು ಏನನ್ನು ಮಾಡುತ್ತೀರೋ ಅದು ಮುಖ್ಯವಲ್ಲ, ಅದನ್ನು ಮಾಡುವ ರೀತಿ ಮುಖ್ಯ.
ಯಾವುದೇ ಉತ್ತೇಜನ ಇಲ್ಲದಿದ್ದರೂ ಸೇವೆಯಲ್ಲಿ ತೊಡಗುವುದು ಶ್ರೇಷ್ಠ ಆಧ್ಯಾತ್ಮಿಕ ಚಟುವಟಿಕೆಯ ಸ್ವರೂಪ. ಇಂತಹ ಕಾರ್ಯ ಅಪೇಕ್ಷಿಸುವ ನಿರ್ಲಿಪ್ತತೆ ಹಾಗೂ ರಾಗದ್ವೇಷ ರಾಹಿತ್ಯ ಸದಾ ನೆನಪಿನಲ್ಲಿರಲಿ ಎಂದೂ ಅವರು ಹೇಳಿದ್ದಾರೆ.
ನಾನು ನನ್ನ ವಿಕಸನದ ಸಂದಿಗ್ಧ ಕಾಲಘಟ್ಟದಲ್ಲಿ ಇದ್ದಾಗ, ಈ ಹೇಳಿಕೆಗಳನ್ನು ನನಗಾಗಿಯೇ ಬರೆಯಲಾಗಿದೆಯೇನೋ ಎಂದು ಭಾಸವಾಯಿತು. ಸಾಮಾಜಿಕ ಸೇವೆಯಲ್ಲಿ ತೊಡಗಿದವರಿಗೆ ಇವು ಪ್ರಬಲ ಸಂದೇಶಗಳು. ಈ ಸ್ಫೂರ್ತಿಯೊಂದಿಗೆ ನಾವು ಸೇವಾ ಕಾರ್ಯ ಮಾಡಿದಾಗ ಮಾತ್ರ, ಅದು ನಮ್ಮನ್ನು ಹಾಗೂ ನಮ್ಮಂದಿಗೆ ತೊಡಗಿದವರನ್ನು ಸಶಕ್ತಗೊಳಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.