ಈ ಜಗತ್ತು ಮತ್ತು ನಮ್ಮ ಜೀವನವನ್ನು ಬದಲಾಯಿಸಿದ ವಸ್ತುಗಳಲ್ಲಿ ಮೊಳೆಯೂ ಒಂದು. ಮೊಳೆ ರಹಿತ ಆಧುನಿಕ ಜಗತ್ತನ್ನು ಈಗ ಊಹಿಸುವುದು ಕಷ್ಟ. ಎಂಜಿನಿಯರಿಂಗ್, ಮರಗೆಲಸ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಗಟ್ಟಿ ಲೋಹ ಅಥವಾ ಮಿಶ್ರಲೋಹದಿಂದ ಮಾಡಿದ, ಎರಡು ರಿಂದ 20 ಸೆಂ.ಮೀವರೆಗೆ ಉದ್ದದ, ವಿವಿಧ ಆಕಾರಗಳಲ್ಲಿ ಲಭ್ಯವಿರುವ ಮೊಳೆಯ ಐತಿಹ್ಯವನ್ನು ಕೆದಕುತ್ತಾ ಹೋದರೆ ಕುತೂಹಲಕಾರಿ ಸಂಗತಿಗಳೇ ಬಿಚ್ಚಿಕೊಳ್ಳುತ್ತವೆ.
ಕ್ರಿ.ಪೂ 3,400ರಲ್ಲೇ, ಅಂದರೆ ಪುರಾತನ ಈಜಿಪ್ಟ್‌ನಲ್ಲಿ ಮೊಳೆಗಳು ಬಳಕೆಯಲ್ಲಿದ್ದವು ಎಂಬುದಕ್ಕೆ ಪುರಾವೆಗಳಿವೆ. ಕಂಚಿನಿಂದ ತಯಾರಿಸಿದ ಮೊಳೆಗಳನ್ನು ನೈಲ್ ನಾಗರಿಕತೆ ಜನರು ಉಪಯೋಗಿಸುತ್ತಿದ್ದರು.
ಪುರಾತನ ರೋಮ್‌ನಲ್ಲಿ (ಕ್ರಿ.ಪೂ 8ನೇ ಶತಮಾನ) ಇವುಗಳ ಬಳಕೆ ಹೆಚ್ಚಾಗಿತ್ತು. ಏಸುಕ್ರಿಸ್ತನ ಜೀವಿತಾವಧಿಯಲ್ಲೂ ಮೊಳೆಗಳು ಬಳಕೆಯಲ್ಲಿದ್ದವು ಎಂಬುದಕ್ಕೆ ಬೈಬಲ್‌ನಲ್ಲಿ ಉಲ್ಲೇಖಗಳಿವೆ.
ಆಧುನಿಕ ಜಗತ್ತಿನಲ್ಲಿ ಮೊಳೆಗಳ ಉತ್ಪಾದನೆ, ಬಳಕೆ ಹೆಚ್ಚಿದ್ದು 1,800ರ ನಂತರ. ಅಲ್ಲಿವರೆಗೂ ಇವುಗಳನ್ನು ಮೆದು ಕಬ್ಬಿಣದಿಂದ ಮಾಡುತ್ತಿದ್ದರು. ಅದೂ ಕೈಯಲ್ಲಿ. ಆ ಕಾಲದಲ್ಲಿ ಮೊಳೆಯ ಸೃಷ್ಟಿಕರ್ತನನ್ನು ‘ಮೊಳೆಗಾರ’ ಎಂದೇ ಕರೆಯುತ್ತಿದ್ದರು. ಮೊಳೆಗಾರರ ಸಹಾಯಕ್ಕೆ ‘ಸೀಳುಗಾರರು’ ಎಂಬ ಮತ್ತೊಂದು ಕಾರ್ಮಿಕ ವರ್ಗ ಇತ್ತು. ದೊಡ್ಡ ದೊಡ್ಡ ಕಬ್ಬಿಣದ ತುಂಡುಗಳನ್ನು ಕತ್ತರಿಸುವ ಜವಾಬ್ದಾರಿ ಇವರದ್ದಾಗಿತ್ತು.
ಆದರೆ, 16ನೇ ಶತಮಾನದ ಅಂತ್ಯದಲ್ಲಿ ಕಬ್ಬಿಣ ಸೀಳುವ ಕಾರ್ಖಾನೆ (ಸ್ಲಿಟ್ಟಿಂಗ್ ಮಿಲ್) ಸ್ಥಾಪನೆಗೊಂಡಿದ್ದರಿಂದ ‘ಸೀಳುಗಾರರು’ ನೇಪಥ್ಯಕ್ಕೆ ಸರಿದರು. 1590ರಲ್ಲಿ ಇಂಗ್ಲೆಂಡ್ನಲ್ಲಿ ಮೊದಲ ಕಬ್ಬಿಣ ಸೀಳು ಕಾರ್ಖಾನೆ ಆರಂಭವಾಯಿತು. 19ನೇ ಶತಮಾನದಲ್ಲಿ ಈ ಉದ್ದೇಶಕ್ಕಾಗಿಯೇ ಯಂತ್ರಗಳು ಬಂದ ನಂತರ ಸ್ಲಿಟ್ಟಿಂಗ್ ಮಿಲ್‌ಗಳ ಸಂಖ್ಯೆ ಕಡಿಮೆಯಾಯಿತು.
ಅಮೆರಿಕ ಕ್ರಾಂತಿಗೂ (1765–1783,) ಮೊಳೆಗೂ ಸಂಬಂಧವಿದೆ. ಕ್ರಾಂತಿಯ ಅವಧಿಯಲ್ಲಿ ಇಂಗ್ಲೆಂಡ್, ಮೊಳೆಯ ಅತಿ ದೊಡ್ಡ ಉತ್ಪಾದಕ ರಾಷ್ಟ್ರವಾಗಿತ್ತು. ಆ ವೇಳೆ ಅಮೆರಿಕ ಕಾಲೋನಿಗಳಲ್ಲಿ ಮೊಳೆ ಖರೀದಿ ದುಬಾರಿಯಾಗಿತ್ತು. ಅದಕ್ಕಾಗಿ ಯಾರೂ ವಾಸವಿಲ್ಲದ ಮನೆಗಳಿಗೆ ಉದ್ದೇಶಪೂರ್ವಕವಾಗಿ ಬೆಂಕಿಹಚ್ಚಿ ಮನೆಗಳ ನಿರ್ಮಾಣಕ್ಕೆ ಬಳಸಿದ ಮೊಳೆಗಳನ್ನು ಸಂಗ್ರಹಿಸಲಾಗುತ್ತಿತ್ತು. ಕೆಲವು ಕುಟುಂಬಗಳು ತಮ್ಮ ಮನೆಯಲ್ಲಿ ಮೊಳೆ ನಿರ್ಮಾಣ ಘಟಕಗಳನ್ನೂ ನಡೆಸುತ್ತಿದ್ದವು. ಅಮೆರಿಕದ ವ್ಯಾಪಾರ ಪ್ರಗತಿಯನ್ನು ತಡೆಯುವುದಕ್ಕಾಗಿ ಸ್ಲಿಟ್ಟಿಂಗ್ ಮಿಲ್‌ಗಳ ಸ್ಥಾಪನೆಯನ್ನು ನಿರ್ಬಂಧಿಸುವ ಕಬ್ಬಿಣ ಕಾಯ್ದೆಯನ್ನು ಸಿದ್ಧಪಡಿಸಲಾಗಿತ್ತು.
ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಮೊಳೆಗಳು ಲಭ್ಯವಿವೆ. ನಾವು ಸಾಮಾನ್ಯವಾಗಿ ಬಳಸುವ ಮೊಳೆಯನ್ನು ‘ತಂತಿ ಮೊಳೆ’ (ವೈರ್ ನೇಲ್) ಎಂದು ಕರೆಯಲಾಗುತ್ತದೆ. ಇದಕ್ಕೆ ‘ಫ್ರೆಂಚ್ ಮೊಳೆ’ ಎಂಬ ಹೆಸರೂ ಉಂಟು. ಇದರ ಮೂಲ ಫ್ರಾನ್ಸ್. ಬೆಲ್ಜಿಯಂನಲ್ಲಿ ತಯಾರಾಗುತ್ತಿದ್ದ ತಂತಿ ಮೊಳೆಗಳು 1863ರ ವೇಳೆಗೆ ಇಂಗ್ಲೆಂಡ್‌ನ ಮೊಳೆಗಳೊಂದಿಗೆ ಪೈಪೋಟಿಗೆ ಇಳಿದಿದ್ದವು.
‘ಕತ್ತರಿಸಿದ ಮೊಳೆ’ (ಕಟ್ ನೇಲ್) ಮತ್ತೊಂದು ಪ್ರಮುಖ ಮೊಳೆ ಪ್ರಕಾರ. ಮೊದಲಿಗೆ ಇದು ತಯಾರಾಗಿದ್ದು ಅಮೆರಿಕದಲ್ಲಿ. ಈ ಮೊಳೆಯ ಮೇಲ್ಭಾಗದ ತುದಿ ಚೌಕ ಇಲ್ಲವೇ ಆಯತ ಆಕಾರದಲ್ಲಿ ಇದ್ದುದರಿಂದ ಇವುಗಳಿಗೆ ಈ ಹೆಸರು ಬಂತು. ತೀರಾ ನಿಧಾನವಾಗಿ ರೂಪುಗೊಳ್ಳುತ್ತಿದ್ದ ಈ ಮೊಳೆಗಳು ತುಂಬಾ ದುಬಾರಿಯಾಗಿದ್ದವು. ಈಗಲೂ ಐತಿಹಾಸಿಕ ಕಟ್ಟಡಗಳ ಪುನರ್ನಿರ್ಮಾಣಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ.
19ನೇ ಶತಮಾನದ ಅಂತ್ಯಕ್ಕೆ ಅಂದರೆ, 1880ರ ದಶಕದಲ್ಲಿ ತಂತಿ ಮೊಳೆಗಳ ತಯಾರಿಕೆ ಪ್ರಕ್ರಿಯೆ ಬಹುಪಾಲು ಸ್ವಯಂಚಾಲಿತವಾಗಿತ್ತು. ಕಡಿಮೆ ಅವಧಿಯಲ್ಲಿ ಹೆಚ್ಚು ಮೊಳೆಗಳು ತಯಾರಾಗುತ್ತಿದ್ದವು. ಮಾನವರ ಶ್ರಮವೂ ಅಗತ್ಯವಿರಲಿಲ್ಲ. ಹಾಗಾಗಿ ಅಗ್ಗದಲ್ಲಿ ಗ್ರಾಹಕರಿಗೆ ದೊರಕಲು ಆರಂಭವಾಯಿತು.
ಇದರಿಂದಾಗಿ ಮೊಳೆ ತಯಾರಿಕೆಗೆ ಮೆದು ಕಬ್ಬಿಣದ ಬಳಕೆ ಕ್ಷಿಪ್ರವಾಗಿ ಕುಗ್ಗಿತು. ಅಮೆರಿಕದಲ್ಲಿ 1892ರಲ್ಲಿ ಉಕ್ಕಿನ ತಂತಿ ಮೊಳೆಗಳು ಚಾಲ್ತಿಗೆ ಬಂದವು. 1913ರ ವೇಳೆಗೆ ಮಾರುಕಟ್ಟೆಯಲ್ಲಿ ತಂತಿ ಮೊಳೆಗಳೇ ಪಾರಮ್ಯ ಮೆರೆದವು (ಒಟ್ಟು ಉತ್ಪಾದನೆಯ ಶೇ 90 ಪಾಲು).
ಇತಿಹಾಸ ಬದಿಗಿಟ್ಟು, ನಮ್ಮ ಜನಜೀವನನ್ನೇ ಪರಿಗಣಿಸುವುದಾದರೆ ಅಲ್ಲೂ ಮೊಳೆಗೆ ವಿಶಿಷ್ಟ ಸ್ಥಾನ ಇದೆ. ಹಳ್ಳಿ ಜನರ ಪಾಲಿಗೆ ಕಬ್ಬಿಣ (ಸಾಮಾನ್ಯವಾಗಿ ಇದು ಮೊಳೆಯೇ ಆಗಿರುತ್ತದೆ) ಎಂದರೆ ಅನಿಷ್ಟಗಳ ನಿವಾರಕ.
ಹಿರಿಯರು ಮಲಗುವ ಚಾಪೆ ಕೆಳಗೆ ಕಣ್ಣಾಡಿಸಿದರೆ ಅಲ್ಲಿಯೂ ಮೊಳೆ ಕಣ್ಣಿಗೆ ಬೀಳುತ್ತದೆ. ಕಬ್ಬಿಣ ಜೊತೆಯಲ್ಲಿದ್ದರೆ ಕೆಟ್ಟ ಕನಸುಗಳು ಬೀಳುವುದಿಲ್ಲ ಎಂಬ ನಂಬಿಕೆ ಅವರದ್ದು.
ಕ್ರೌರ್ಯದ ಸಂಕೇತ
ಮೊಳೆಯ ಜೊತೆ ಕ್ರೌರ್ಯವೂ ತಳಕು ಹಾಕಿಕೊಂಡಿದೆ. ಜಗತ್ತಿಗೇ ಶಾಂತಿ ಸಂದೇಶ ಸಾರಿದ್ದ ಏಸುಕ್ರಿಸ್ತನನ್ನು ಶಿಲುಬೆಗೇರಿಸುವಾಗ ಬಳಕೆಯಾಗಿದ್ದು ಮೊಳೆಗಳೇ. ಏಸು ಕ್ರಿಸ್ತನ ಕೈಗಳನ್ನು ಶಿಲುಬೆಗೆ ಕಟ್ಟಿ ಅಂಗೈಗಳಿಗೆ ಹಾಗೂ ಕಾಲುಗಳಿಗೆ ಮೊಳೆಗಳನ್ನು ಬಡಿದು ಶಿಕ್ಷೆ ನೀಡಲಾಗಿತ್ತು.
ಮರದ ಮೊಳೆ!
ಕಬ್ಬಿಣ, ಮಿಶ್ರ ಲೋಹದ ಮೊಳೆಗೆ ಪರ್ಯಾಯವಾಗಿ ಅದೇ ರೂಪದ ಮರದಿಂದ ಮಾಡಿದ ಮೊಳೆಯನ್ನು (ಟ್ರನೆಲ್) ಮರಗೆಲಸಗಳಲ್ಲಿ ಬಳಸುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ. ಈಗಲೂ ಬಡಗಿಗಳು ತಮ್ಮ ಕೆಲಸಗಳಲ್ಲಿ ಮರದ ಮೊಳೆಯನ್ನು ಬಳಸುತ್ತಾರೆ. ಕಟ್ಟಡ ನಿರ್ಮಾಣಗಳಲ್ಲಿಯೂ ಇವುಗಳನ್ನು ಉಪಯೋಗಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.