ADVERTISEMENT

ವಿದ್ಯಾರ್ಥಿಗಳಿಂದ ಸಮಾಜಮುಖಿ ಕಾರ್ಯ...

​ಪ್ರಜಾವಾಣಿ ವಾರ್ತೆ
Published 3 ಮೇ 2011, 19:30 IST
Last Updated 3 ಮೇ 2011, 19:30 IST
ವಿದ್ಯಾರ್ಥಿಗಳಿಂದ ಸಮಾಜಮುಖಿ ಕಾರ್ಯ...
ವಿದ್ಯಾರ್ಥಿಗಳಿಂದ ಸಮಾಜಮುಖಿ ಕಾರ್ಯ...   

ಅದು ಮೈಸೂರು ಜಿಲ್ಲೆಯ ಜಟ್ಟಿಹುಂಡಿ ಗ್ರಾಮ. ಊರಿನ ಹೊರಭಾಗದಲ್ಲಿ ಸುಮಾರು ಅರ್ಧ ಎಕರೆ ಜಾಗ ಕಲ್ಲು, ಕಸಕಡ್ಡಿ, ಗಾಜು, ಮುಳ್ಳಿನ ಗಿಡಗಳಿಂದ ತುಂಬಿ ಹೋಗಿತ್ತು.

50ಕ್ಕೂ ಹೆಚ್ಚು ಸ್ವಯಂ ಸೇವಕರು ಒಟ್ಟುಗೂಡಿ  ‘ಗ್ರಾಮಗಳ ಉದ್ಧಾರ ನಮ್ಮ ಉದ್ದೇಶ.. ಗ್ರಾಮಗಳು ಬೆಳೆಯೆ ಬೆಳೆಯುವುದು ದೇಶ... ಸೇವೆಯ ಮಾಡೋಣ ಬನ್ನಿ....’ ಎಂದು ಹಾಡುತ್ತ ಆ ಜಾಗವನ್ನು ಸ್ವಚ್ಛಗೊಳಿಸಿದರು. ಕೆಲಸ ಸಂಪೂರ್ಣವಾಗಿ ಮುಗಿದ ಮೇಲೆ ಗೊತ್ತಾಯಿತು. ಅದು ಆ ಗ್ರಾಮದ ಪ್ರಾಚೀನ ದೇವರಕೊಳ.

ಕಾನನದಂತಿದ್ದ ಆ ಪ್ರದೇಶವನ್ನು ಸ್ವಚ್ಛಗೊಳಿಸಿದ್ದು, ಮೈಸೂರಿನ ಕುವೆಂಪುನಗರ ಪ್ರಥಮ ದರ್ಜೆಯ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು. ಪ್ರಾಚೀನ ಇತಿಹಾಸ ಸಾರಿ ಹೇಳುವ ಹೂಳು ತುಂಬಿದ್ದ ದೇವರಕೊಳ ಪತ್ತೆಹಚ್ಚಿ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಟ್ಟರು.

ಒಂದು ಕಾಲದಲ್ಲಿ ಇಡೀ ಗ್ರಾಮದ ಜನರಿಗೆ ಆಧಾರವಾಗಿದ್ದ ಈ ಕೆರೆ, ಮಳೆ ಇಲ್ಲದೇ ಬತ್ತಿ ಹೋಗಿತ್ತು. ಬತ್ತಿಹೋದ ಕೆರೆಯನ್ನು ಯಾರು ಗಮನಿಸದ ಕಾರಣ ಅಲ್ಲಿ ಗಿಡಗಂಟಿಗಳು ಬೆಳೆದವು. ಕಸ ಕಡ್ಡಿ ತುಂಬಿಕೊಂಡು ಇಡೀ ಪ್ರದೇಶ ಕಾಡಿನಂತಾಗಿತ್ತು. ಇದು ನಮ್ಮೂರಿನ ಪ್ರಾಚೀನ ದೇವರಕೊಳ ಎಂದು ಗ್ರಾಮದ ಮುಖಂಡ ಪಿ.ಚಲುವರಾಜು ನೆನಪಿಸಿಕೊಳ್ಳುತ್ತಾರೆ.

ಯಾರು ತಿರುಗಿ ನೋಡದ ದುರ್ಗಮವಾಗಿದ್ದ ಈ ದೇವರಕೊಳವನ್ನು ಸ್ವಚ್ಛಮಾಡಿದ್ದೀರಿ, ನಮ್ಮೂರಿನ ಜನತೆಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಪ್ರಾಚೀನ ಸ್ಮಾರಕವನ್ನು ಸಂರಕ್ಷಿಸಿದ್ದೀರಿ ಎಂದು ವಿದ್ಯಾರ್ಥಿಗಳನ್ನು ಅವರು ಪ್ರಶಸಿಂಸಿದರು.

ಚರಂಡಿ ನಿರ್ಮಾಣ: ಇವರ ಮತ್ತೊಂದು ಕಾರ್ಯವೆಂದರೆ ದೇವಾಲಯದ ಹೊರಭಾಗದಲ್ಲಿ ಚರಂಡಿ ನಿರ್ಮಾಣ ಮಾಡಿದ್ದು, ಗ್ರಾಮದಲ್ಲಿ ಸಾಯಿಬಾಬಾ ಮಂದಿರವಿದೆ. ಅಲ್ಲಿ ಪ್ರತಿನಿತ್ಯ ಕೊಳಚೆ ನೀರು ಹರಿಯುತ್ತಿತ್ತು. ಗ್ರಾಮಸ್ಥರಿಗೆಲ್ಲಾ ಇದು ಕಿರಿಕಿರಿಯಾಗಿತ್ತು. ಚರಂಡಿ ನಿರ್ಮಿಸುವಂತೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಇದಕ್ಕೆ ಇತಿಶ್ರೀ ಹಾಡಿದರು. ದೇವಸ್ಥಾನದ ಮುಂದೆ ಒಂದು ಸಾವಿರ ಅಡಿ ವಿಸ್ತೀರ್ಣದ ಚರಂಡಿ ತೆಗೆದು 4ಗಿ4 ವಿಸ್ತೀರ್ಣದ ಗುಂಡಿ ತೆಗೆದು ಕೊಳಚೆ ನೀರನ್ನು ಹೊರ ಬಿಡಲಾಯಿತು.

ಶೌಚಾಲಯಗಳ ನಿರ್ಮಾಣ: ಗ್ರಾಮದ ಫಲಾನುಭವಿಗಳಿಗೆ ಶೌಚಾಲಯ ನಿರ್ಮಿಸಲು ಸಹಕಾರ ನೀಡಿದ್ದು ಮತ್ತೊಂದು ಕಾರ್ಯ. ಗ್ರಾಮದಲ್ಲಿ 25 ಶೌಚಾಲಯಗಳ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ಮೈಸೂರಿನ ಕಾರ್ಯನಿರ್ವಾಹಕ ಅಧಿಕಾರಿ ಮಹಾಲಿಂಗಪ್ಪ ಅವರಿಂದ ಪಡೆದು ಗ್ರಾಮ ಪಂಚಾಯಿತಿ ಅಧ್ಯಕ್ಷರ ಸದಸ್ಯರ ಸಹಕಾರ ಪಡೆದು ಫಲಾನುಭವಿಗಳಿಗೆ ವಿತರಿಸಲು ಸಹಕಾರಿಯಾದರು. ಜೊತೆಗೆ 10 ಶೌಚಾಲಯಗಳ ಗುಂಡಿಗಳಿಗೆ ಶೌಚಾಲಯ ನಿರ್ಮಿಸಲು ರಿಂಗ್‌ಗಳನ್ನು ಅಳವಡಿಸಿದರು.

ಅಜೋಲಾ ಗುಂಡಿಗಳು: ಎನ್‌ಎಸ್‌ಎಸ್ ಸ್ವಯಂ ಸೇವಕರು ಗ್ರಾಮದಲ್ಲಿ ರೈತರಿಗೆ ಸಹಕಾರಿ ಕೆಲಸವನ್ನು ಮಾಡಿಕೊಟ್ಟರು. ಮೈಸೂರಿನ ಕೃಷಿ ಅಧಿಕಾರಿ ಶರತ್‌ಕುಮಾರ್ ಗ್ರಾಮ ಸಹಾಯಕರ ನೆರವು ಪಡೆದು ರೈತರನ್ನು ಗುರುತಿಸಿದ್ದರು. ಆ ರೈತರಿಗೆ ಸ್ವಯಂ ಸೇವಕರು ಫಲಾನುಭವಿಗಳ ತೋಟದಲ್ಲಿ ಅಜೋಲಾ ಗುಂಡಿಗಳನ್ನು ತೆಗೆದುಕೊಟ್ಟರು. ಇದು ಹಸುಗಳಿಗೆ ಪೌಷ್ಟಿಕ ಆಹಾರ ಉತ್ಪಾದಿಸಲು ಅನುಕೂಲವಾಯಿತು.

ಎನ್‌ಎಸ್‌ಎಸ್ ಶಿಬಿರಾಧಿಕಾರಿ ಡಾ.ಎಸ್.ಜಿ.ರಾಮದಾಸರೆಡ್ಡಿ ನೇತೃತ್ವದಲ್ಲಿ ಗ್ರಾಮದಲ್ಲಿ ಬಂದಿಳಿದ ತಂಡ ಗ್ರಾಮದಲ್ಲಿ ಹಲವು ಉಪಯೋಗಿ ಕಾರ್ಯ ಮಾಡಿದರು. ಶಾಲಾ ಆವರಣದ ಸುತ್ತ ತಂತಿಬೇಲಿ ನಿರ್ಮಿಸಿದರು. ಮಳೆ ನೀರು ಸಂಗ್ರಹಕ್ಕಾಗಿ ನೆಲಮಾಳಿಗೆ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿದರು.

ರಾಸುಗಳು ಕುಡಿಯುವ ನೀರಿನ ಸ್ವಚ್ಛತೆ. 2ಸಾವಿರ ಮೀಟರ್ ಉದ್ದದ ರಸ್ತೆಯನ್ನು ಸ್ವಚ್ಛಗೊಳಿಸಿದರು. ‘ಶ್ರಮಯೇವ ಜಯತೆ ಹಾಡೋಣ ಬನ್ನಿ...ಸೇವೆಯ ಮಾಡೋಣ ಬನ್ನಿ’ ಎಂದು ಹಾಡುತ್ತ ಎನ್‌ಎಸ್‌ಎಸ್ ಯುವತಂಡ ಮಾಡಿದ ಸೇವೆ ಅನುಕರಣೀಯವೂ ಅನುಪಮವೂ ಆದುದು. ನಮ್ಮ ಗ್ರಾಮಗಳನ್ನು ಉಳಿಸಲು ಬೆಳೆಸಲು  ಎನ್‌ಎಸ್‌ಎಸ್ ಸ್ವಯಂ ಸೇವಕರಂತೆ ನಾವೆಲ್ಲ ಎಚ್ಚರಗೊಳ್ಳಬೇಕು ಅಲ್ಲವೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.