ADVERTISEMENT

ವಿಶ್ವವನ್ನೇ ಬದಲಿಸಬಹುದು...

​ಪ್ರಜಾವಾಣಿ ವಾರ್ತೆ
Published 5 ಜನವರಿ 2011, 10:35 IST
Last Updated 5 ಜನವರಿ 2011, 10:35 IST

ಇಂದಿನ ಯುವಕರೇ ನಾಳಿನ ಪ್ರಜೆಗಳು. ಯುವಕರು ಇಂದು ಪ್ರಜೆಗಳಾದರೆ ಸಾಲದು, ಅವರು ದೇಶದ ನಾಗರಿಕರಾಗಬೇಕು. ನಾಗರಿಕರೆಂದರೆ ರಾಷ್ಟ್ರೀಯ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿಯುಳ್ಳ ವ್ಯಕ್ತಿಗಳಾಗಬೇಕು.  ಯುವಕರಲ್ಲಿ ಇಚ್ಛಾಶಕ್ತಿ, ಕಾರ್ಯಸಾಮರ್ಥ್ಯ ಆವಿರ್ಭವಿಸಿಕೊಂಡಿದೆ. ಅದಕ್ಕೆ ಉತ್ತಮ ತರಬೇತಿ ನೀಡುತ್ತಾ ಸರಿಯಾದ ದಾರಿಯಲ್ಲಿ  ಯುವಕರನ್ನು ರಚನಾತ್ಮಕವಾಗಿ ಬೆಳೆಸಿಕೊಳ್ಳಬೇಕು.  ಅದಕ್ಕಾಗಿ ದಾರಿದೀಪದಂತಿರುವ ಕೆಲವು ನಿಯಮಗಳನ್ನು  ಪಾಲಿಸಬೇಕು.

ವಿದ್ಯಾಭ್ಯಾಸ: ವಿದ್ಯಾನಾಮ ನರಸ್ಯ ರೂಪಮಧಿಕಮ್ ಎಂಬ ಸಂಸ್ಕೃತೋಕ್ತಿಯ ಪ್ರಕಾರ ವಿದ್ಯೆಯು ನಮ್ಮ ವರ್ಚಸ್ಸನ್ನು ಹೆಚ್ಚಿಸುತ್ತದೆ. ಆದುದರಿಂದ ಯುವಕರಿಂದ ಜ್ಞಾನವನ್ನು ಪ್ರೀತಿಸಬೇಕು ಹಾಗೂ ಸಾಗರದಷ್ಟು ಜ್ಞಾನದಾಹಿಗಳಾಗಬೇಕು.  ಅಂದರೆ ಯುವಕರು ಇಂದು ವಿದ್ಯಾವಂತರಾದರೆ ಸಾಲದು ತಮ್ಮ ವಿದ್ಯೆಯನ್ನು ಇತರರಿಗೆ ಧಾರೆಯೆರೆಯಬೇಕು.  ಶಿಕ್ಷಣ ಜೀವನಕ್ಕಾಗಿ, ಕೇವಲ ಜೀವನೋಪಾಯಕ್ಕಾಗಿ ಅಲ್ಲ ಎಂಬುದನ್ನು ಯುವಕರು ಇಂದು ಅರ್ಥೈಸಿಕೊಳ್ಳಬೇಕಾಗಿದೆ.

ನಮ್ರತೆ: ವಿದ್ಯಾದದಾತಿ ವಿನಯಮ್! ವಿದ್ಯೆಯು ವಿನಯವನ್ನು ತಂದುಕೊಡುತ್ತದೆ.  ವಿನಯ ಇಲ್ಲದಿರುವ ವಿದ್ಯೆ, ವಿದ್ಯೆಯೇ ಅಲ್ಲ.  ಗುರು-ಹಿರಿಯರಿಗೆ ಗೌರವ, ಸಮುದಾಯದಲ್ಲಿನ ಜನತೆಯೊಂದಿಗೆ ನಮ್ರತೆಯಿಂದ  ವ್ಯವಹರಿಸಬೇಕು.  ವಿನಯವೆಂದರೆ ನಮ್ಮ ಬಗ್ಗೆ ಯಥಾರ್ಥ ತಿಳಿವಳಿಕೆ.  ತಮ್ಮ ಲೋಪದೋಷಗಳು, ಯೋಗ್ಯತೆ, ಸಾಮರ್ಥ್ಯಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಅದಕ್ಕೆ ಅನುಗುಣವಾಗಿ ಯುವಕರು ಇಂದು ವರ್ತಿಸಬೇಕಾಗಿದೆ.

ADVERTISEMENT

ಆತ್ಮವಿಶ್ವಾಸ:  ಆತ್ಮವಿಶ್ವಾಸದಿಂದ ವ್ಯಕ್ತಿ ಸ್ವಾವಲಂಬಿಯಾಗುತ್ತಾನೆ. ತನ್ನ ವ್ಯಕ್ತಿತ್ವವನ್ನು ತಾನೇ ರೂಪಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾನೆ.  ಆತ್ಮವಿಶ್ವಾಸ ನಮ್ಮೊಳಗಿನ ಶಕ್ತಿಯನ್ನು ಕೆರಳಿಸುತ್ತದೆ.  ಈ ಜಗತ್ತಿನಲ್ಲಿ ಯಾರಾದರೂ ಏನನ್ನಾದರೂ ಸಾಧಿಸಿದರೆ ಅದು ಆತ್ಮವಿಶ್ವಾಸದಿಂದ.  ಜಗತ್ತಿನ ಇತಿಹಾಸವೆಂದರೆ ಆತ್ಮವಿಶ್ವಾಸವುಳ್ಳ ಕೆಲವೇ ಮಂದಿ ವ್ಯಕ್ತಿಗಳ ಚರಿತ್ರೆ. ಆದ್ದರಿಂದ ಯುವಕರು ಇಂದು ಆತ್ಮವಿಶ್ವಾಸವನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ.

ಕ್ರಮಬದ್ಧ ಕೆಲಸ: ಯುವಕರು ಪಾದರಸದಂತಿರಬೇಕು.  ಇಂದು ನಾನು ಇಷ್ಟು ಕೆಲಸ ಮಾಡುವೆ ಎಂದು ನಿರ್ಧರಿಸಿ ಅದರಂತೆಯೇ ನಡೆಯಬೇಕು.  ಒಂದು ಕೆಲಸದ ನಂತರ ಮತ್ತೊಂದು, ಹೀಗೆ ಸರಣಿಯಂತಿರಬೇಕು. ಆಗ ಕೆಲಸದ ಒತ್ತಡವಿಲ್ಲದೆ ದೇಹ ಮತ್ತು ಮನಸ್ಸುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬ ತಿಳಿವಳಿಕೆ ಯುವಕರಿಗಿರಬೇಕು.

ಸತ್ಯಪಾಲನೆ: ಸತ್ಯಮೇವ ಜಯತೇ ನ ಅಮೃತಮ್! ಇದರ ಪ್ರಕಾರ ಸತ್ಯವೊಂದೆ ಜಯಿಸುತ್ತದೆ.  ಅಸತ್ಯವಲ್ಲ ಎಂಬ ಅರ್ಥ ನೀಡುತ್ತದೆ. ಸತ್ಯದ ದಾರಿ ಕಷ್ಟವಾದರೂ ಅಂತ್ಯದಲ್ಲಿ ಬಹಳ ಮಧುರವಾಗಿರುತ್ತದೆ.  ಜಯಶೀಲತೆಗಾಗಿ ಇದೊಂದು ಸತ್ಪಥ; ತಡವಾದರೂ ಖಂಡಿತ ಜಯ ಖಚಿತ.  ಆಂತರಿಕ ಶಾಂತಿ ನೆಮ್ಮದಿ ಮತ್ತು ಮಾನವತ್ವವನ್ನು ಸತ್ಯಪಾಲನೆಯಿಂದ ಪಡೆಯಬಹುದಾಗಿದೆ.  ಸತ್ಯವನ್ನು ಹೇಳುತ್ತಾ, ಸನ್ಮಾರ್ಗದಲ್ಲಿ ನಡೆಯುವ ಕಡೆ ಯುವಕರು ಚಿಂತಿಸಿ ಹೆಜ್ಜೆಯಿಡಬೇಕಾಗಿದೆ.

ಕಲ್ಲಾಗಬೇಕು ಕಷ್ಟಗಳು ಬಂದಾಗ:  ಕಷ್ಟಗಳನ್ನು ಎದುರಿಸಬೇಕಾದರೆ ಧೈರ್ಯಬೇಕು.  ಧೈರ್ಯವಂತನಿಗೆ ಅದೃಷ್ಟ ಒಲಿಯುತ್ತದೆ.  ಕಷ್ಟಗಳು ನಾವು ಜೀವನದಲ್ಲಿ ಎದುರಿಸಬೇಕಾದ ಸವಾಲುಗಳು.  ಒಂದು ಸಾಮಾನ್ಯಶಿಲೆಯು ಶಿಲ್ಪಿಯ ಸಾವಿರಾರು ಪೆಟ್ಟುಗಳನ್ನು ತಿಂದು ಸುಂದರ ಪೂಜನೀಯ ವಿಗ್ರಹವಾಗುತ್ತದೆ.  ಆದುದರಿಂದ ನಮ್ಮಲ್ಲಿಯ ಶಕ್ತಿಯ ಬಗ್ಗೆ ನಂಬಿಕೆಯಿರಬೇಕು.  ನಾವು ಶಕ್ತಿಯನ್ನು ಬೆಳೆಸಿಕೊಂಡು ಕಷ್ಟಗಳನ್ನು ಎದುರಿಸುವುದು ಸಾಧ್ಯವಾಗುತ್ತದೆ.  ಚಾರಿತ್ರ್ಯವು ಕಷ್ಟಗಳ ಅಭೇದ್ಯವಾದ ಗೋಡೆಯನ್ನು ತೂರಿಕೊಂಡು ಹೋಗಬಲ್ಲದು. ಏಕೆಂದರೆ ಚಾರಿತ್ರ್ಯವು ಶಕ್ತಿಗಳಲ್ಲಿ ಪ್ರಾಧಾನ್ಯತೆಯನ್ನು ಪಡೆದಿದೆ.

ಒಳ್ಳೆಯ ಆದರ್ಶ:  ಆದರ್ಶದಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು.  ಆದರ್ಶವು ಒಂದು ಬೆಳಕಿನಂತೆ.  ಅದು ನಮ್ಮ ಮಾತು, ಕೃತಿ ಮತ್ತು ಆಲೋಚನೆಯ ಮೇಲೆ ಪ್ರಭಾವ ಬೀರುತ್ತದೆ. 

ಸಮಾಜದಲ್ಲಿ ಪ್ರಗತಿ ಹೊಂದಬೇಕಾದರೆ ಆದರ್ಶವ್ಯಕ್ತಿ ಗಳ ಜೀವನ ಚರಿತ್ರೆ, ಆತ್ಮ ಚರಿತ್ರೆಗಳ ಅಧ್ಯಯನವನ್ನು ಯುವಕರು ಮಾಡಿಕೊಂಡು ತಮ್ಮದೇ ಆದಂತಹ ಧನಾತ್ಮಕ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.