ADVERTISEMENT

ಶರಧಿಯ ಮೊರೆತ ಬಂಡೆಗಲ್ಲಿನ ಸೆಳೆತ

ಡಾ.ಆರ್.ಬಾಲ ಸುಬ್ರಹ್ಮಣ್ಯಂ
Published 15 ಆಗಸ್ಟ್ 2012, 19:30 IST
Last Updated 15 ಆಗಸ್ಟ್ 2012, 19:30 IST

ನಮ್ಮ ರಾಷ್ಟ್ರದ ದಕ್ಷಿಣದ ತುತ್ತ ತುದಿ ತಮಿಳುನಾಡಿನ ಕನ್ಯಾಕುಮಾರಿ. ಇದು ಕೇರಳದ ರಾಜಧಾನಿ ತಿರುವನಂತಪುರದಿಂದ 90 ಕಿ.ಮೀ ದೂರದಲ್ಲಿದೆ. ತಮಿಳುನಾಡಿನ ಮತ್ತೊಂದು ಹೆಸರಾಂತ ದೇಗುಲಗಳ ಪಟ್ಟಣವಾದ ನಾಗರಕೋಯಿಲ್‌ನಿಂದ ಇಲ್ಲಿಗಿರುವ ಅಂತರ 20 ಕಿ.ಮೀ. ಆಕರ್ಷಕ ಪ್ರವಾಸಿ ತಾಣವಾಗಿ ರೂಪುಗೊಂಡಿರುವ ಕನ್ಯಾಕುಮಾರಿಗೆ ಭೇಟಿ ನೀಡಿದವರು, ಅಲ್ಲಿನ ವಿವೇಕಾನಂದ ಸ್ಮಾರಕ ಬಂಡೆಗೆ (ವಿವೇಕಾನಂದ ರಾಕ್ ಮೆಮೋರಿಯಲ್) ತೆರಳದೇ ವಾಪಸಾಗುವುದಿಲ್ಲ.

ವಿವೇಕಾನಂದರು ಕನ್ಯಾಕುಮಾರಿಗೆ ಭೇಟಿ ನೀಡಿದ್ದು 1892ರ ಡಿಸೆಂಬರ್‌ನಲ್ಲಿ. ಅದಕ್ಕೆ ಮುನ್ನ ತಿರುವನಂತಪುರಕ್ಕೆ ತೆರಳಿದ್ದ ಅವರು ಅಲ್ಲಿ ಕೆಲವು ದಿನಗಳನ್ನು ಕಳೆದಿದ್ದರು. 1892ರ ಡಿಸೆಂಬರ್ 22ರಂದು ಮನ್ಮಥಬಾಬು ಎಂಬುವವರೊಂದಿಗೆ ನಾಗರಕೋಯಿಲ್‌ಗೆ ಹೋಗಿದ್ದರು. ಅಲ್ಲಿ ಎರಡು-ಮೂರು ದಿನ ತಂಗಿದ್ದ ಅವರು, ಅದೇ 24 ಅಥವಾ 25ರಂದು ಕನ್ಯಾಕುಮಾರಿ ತಲುಪಿದರು ಎನ್ನಲಾಗಿದೆ. ಸ್ವಾಮೀಜಿ ಕನ್ಯಾಕುಮಾರಿಗೆ ಹೋದಾಗ ಅಲ್ಲಿ ಅವರ ಮನಸ್ಸಿನೊಳಗೆ ಮೂಡಿದ ಭಾವನೆಗಳೇನು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು.

ವಿವೇಕಾನಂದರು ಕನ್ಯಾಕುಮಾರಿಗೆ ಭೇಟಿ ನೀಡುವ ವೇಳೆಗಾಗಲೇ ರಾಷ್ಟ್ರದ ಉದ್ದಗಲವನ್ನು ಸುತ್ತಿದ್ದರು; ಕಾಡು ಮೇಡು, ಹಿಮಾಲಯ, ದೊಡ್ಡ ಪಟ್ಟಣಗಳು, ನಗರಗಳನ್ನೆಲ್ಲಾ ಹಾದು ಹೋಗಿದ್ದರು. ಮಹಾರಾಜರಿಂದ ಹಿಡಿದು ಬೀದಿಗೆ ಬಿದ್ದವರ ತನಕ ಎಲ್ಲ ವರ್ಗದ ಜನರನ್ನೂ ಭೇಟಿಯಾಗಿ ಅವರೊಡನೆ ಮಾತುಕತೆ ನಡೆಸಿದ್ದರು. ಭಾರತ ಮಾತೆ ಹಾಗೂ ಆಕೆಯ ಪರಿವಾರದ ಬಗ್ಗೆ ಅಪರಿಮಿತ ಪ್ರೀತಿ ಹೊಂದಿದ್ದ ಅವರು, ಎರಡೂವರೆ ವರ್ಷಗಳ ಕಾಲ ಕಾಲ್ನಡಿಗೆ, ಎತ್ತಿನ ಬಂಡಿ ಹಾಗೂ ರೈಲಿನ ನೆರವಿನಿಂದ ರಾಷ್ಟ್ರ ಪರ್ಯಟನೆ ಮಾಡಿದ್ದರು.

ಅವರು ಮೊದಲು ಕನ್ಯಾಕುಮಾರಿಯಲ್ಲಿನ ದೇವಸ್ಥಾನಕ್ಕೆ ಹೋಗಿ, ಸ್ವಲ್ಪ ಹೊತ್ತು ಪ್ರಾರ್ಥನೆ ಮತ್ತು ಧ್ಯಾನ ಮಗ್ನರಾದರು. ತಾಯಿ ಪಾರ್ವತಿಯ ದರ್ಶನದ ನಂತರ ಹೊರಬಂದು ಸಮೀಪದ ಕಡಲ ತಡಿಯಲ್ಲಿ ನಿಂತರು. ಸಾಗರವನ್ನು ದಿಟ್ಟಿಸಿ ನೋಡುತ್ತಾ ನಿಂತ ಅವರಿಗೆ ಎರಡು ಫರ್ಲಾಂಗುಗಳಷ್ಟು ದೂರದಲ್ಲಿ ಎರಡು ದೊಡ್ಡ ಬಂಡೆಗಳು ಕಣ್ಣಿಗೆ ಬಿದ್ದವು.

ಪುರಾಣಗಳ ಪ್ರಕಾರ, ಈ ಬಂಡೆಗಳ ಪೈಕಿ ದೊಡ್ಡದಾದ, ದೂರದಲ್ಲಿರುವ ಬಂಡೆಯು ದಿವ್ಯ ಪಾರ್ವತಿ ಮಾತೆಯ `ಶ್ರೀಪಾದ~ವಾಗಿದ್ದು, ಇದು ಪಾರ್ವತಿ ತಪಸ್ಸು ಮಾಡಿದ ತಾಣವೆಂದೇ ಪ್ರತೀತಿ ಇದೆ.

ಈ ಬಂಡೆಗಳನ್ನು ನೋಡುತ್ತಿದ್ದಂತೆಯೇ, ಸ್ವಾಮೀಜಿಗೆ ಅಲ್ಲಿಗೆ ತೆರಳಬೇಕೆಂಬ ಅದಮ್ಯ ಬಯಕೆ ಮೂಡಿತು. ಅಲ್ಲಿಗೆ ತನ್ನನ್ನು ಕರೆದುಕೊಂಡು ಹೋಗುವಿರಾ ಎಂದು ಕೆಲವು ಅಂಬಿಗರನ್ನು ಕೇಳಿದರು. ಅವರು ಸ್ವಾಮೀಜಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಲು ಸಿದ್ಧರಿದ್ದರಾದರೂ, ಅದಕ್ಕಾಗಿ ಹಣ ಕೇಳಿದರು. ಆದರೆ ಆಗ ಸ್ವಾಮೀಜಿಯ ಬಳಿ ಒಂದು ನಯಾ ಪೈಸೆಯೂ ಇರಲಿಲ್ಲ. ಆಮೇಲೆ ಏನು ಸಂಭವಿಸಿತೋ ಅದು ಚಿರಸ್ಮರಣೀಯ. ಹೆಚ್ಚು ಯೋಚಿಸುತ್ತಾ ಕೂರದ ಸ್ವಾಮೀಜಿ, ಅಲೆಗಳು ಭೋರ್ಗರೆಯುತ್ತಿದ್ದ ಸಾಗರಕ್ಕೆ ಧುಮುಕಿಯೇ ಬಿಟ್ಟರು. ಅಲ್ಲೇ ಇದ್ದ ಅನುಭವಿ ಅಂಬಿಗರು ಇದನ್ನು ನೋಡಿ ಹೌಹಾರಿದರು. ದಡಕ್ಕೆ ವಾಪಸು ಬರುವಂತೆ ಜೋರಾಗಿ ಕೂಗಿಕೊಂಡರು. ಪ್ರಚಂಡ ಅಲೆಗಳು ಹಾಗೂ ಅಪಾಯಕಾರಿ ಶಾರ್ಕ್ ಮೀನುಗಳು ಇರುವ ಬಗ್ಗೆ ಎಚ್ಚರಿಸಿದರು. ಆದರೆ ಅದಕ್ಕೆಲ್ಲಾ ಎದೆಗುಂದದ ಸ್ವಾಮೀಜಿ ಯಶಸ್ವಿಯಾಗಿ ನಿಗದಿತ ಜಾಗ ಸೇರಿ, ಬಂಡೆ ಏರಿದರು.

ಸ್ವಾಮೀಜಿ ಅಲ್ಲಿ ಮೂರು ಹಗಲು ಹಾಗೂ ಮೂರು ರಾತ್ರಿಗಳನ್ನು ಕಳೆದರು. ಆಗ ಅವರ ಜತೆ ಇದ್ದುದು ಮೊರೆಯುತ್ತಿದ್ದ ಸಮುದ್ರ ಮಾತ್ರ. ಭಾರತದ ಕಟ್ಟಕಡೆಯ ಆ ಕಲ್ಲಿನ ಮೇಲೆ ಕುಳಿತ ಅವರು ರಾಷ್ಟ್ರದ ವರ್ತಮಾನ ಹಾಗೂ ಭವಿಷ್ಯಗಳ ಬಗ್ಗೆ ತೀವ್ರ ಧ್ಯಾನಸ್ಥರಾದರು. ಭಾರತ ಮಾತೆಯ ಅಧೋಗತಿಗೆ ಮೂಲ ಕಾರಣವೇನೆಂಬುದನ್ನು ಶೋಧಿಸಿದರು.

ತಮ್ಮಲ್ಲಿದ್ದ ಋಷಿಯ ದರ್ಶನ ಶಕ್ತಿಯ ನೆರವಿನಿಂದ, ರಾಷ್ಟ್ರವು ಭವ್ಯತೆಯ ಉತ್ತುಂಗದಿಂದ ಅಧೋಗತಿಯ ಪ್ರಪಾತಕ್ಕೆ ಕುಸಿಯಲು ಕಾರಣವೇನೆಂಬುದನ್ನು ಅರ್ಥೈಸಿಕೊಂಡರು. ಗಾಳಿ ಮತ್ತು ಅಲೆಯ ಬಡಿತದ ಶಬ್ದ ಮಾತ್ರ ಕೇಳುತ್ತಿದ್ದ ಆ ತಾಣದಲ್ಲಿ, ಭಾರತದ ಉದ್ದೇಶ ಮತ್ತು ಸಾಧನೆಯ ಕುರಿತು ಅವಲೋಕಿಸಿದರು. ಭಾರತೀಯ ಸಂಸ್ಕೃತಿಯ ವಾಸ್ತವ ಮತ್ತು ಸಾಮರ್ಥ್ಯಗಳನ್ನು ಗ್ರಹಿಸಿದರು. ಇಡೀ ಭಾರತವನ್ನು ಸಮಷ್ಟಿ ಪ್ರಜ್ಞೆಯಿಂದ ನೋಡಿದರು.

ಧರ್ಮವೆಂಬುದು ಭಾರತದ ಲಕ್ಷಾಂತರ ಜನರ ಜೀವನಾಡಿ ಎಂಬುದು ಅವರಿಗೆ ಗೋಚರವಾಯಿತು. `ಭಾರತವನ್ನು ಸರ್ವಕಾಲಕ್ಕೂ ಸಲ್ಲುವ, ನಂಬಿಕೆಯ ತೊಟ್ಟಿಲು ಮಾಡಿರುವ ಪರಮೋಚ್ಚ ಆಧ್ಯಾತ್ಮಿಕ ಪ್ರಜ್ಞೆಯ ಪುನಶ್ಚೇತನ ಹಾಗೂ ಪುನರುತ್ಥಾನದಿಂದ ಮಾತ್ರ ದೇಶ ಪುನಃ ಮೇಲೆದ್ದು ನಿಲ್ಲಲು ಸಾಧ್ಯ~ ಎಂದು ಆ ಏಕಾಂತದಲ್ಲಿ ಅವರ ಹೃದಯಕ್ಕೆ ಭಾಸವಾಯಿತು. ಭಾರತ ಮಾತೆಯ ಹಿರಿಮೆಯನ್ನು ಅವರು ಕಂಡರು; ಆಕೆಯ ದೌರ್ಬಲ್ಯಗಳನ್ನು ಕಂಡರು; ಜತೆಗೆ ಪ್ರಸ್ತುತ ರಾಷ್ಟ್ರವು ತನ್ನತನವೆಂಬುದನ್ನು ಕಳೆದುಕೊಂಡಿದೆ ಎಂಬ ಪ್ರಮುಖ ಅಂಶವನ್ನೂ ಅವರು ಮನಗಂಡರು.

ಆ ಕ್ಷಣದಲ್ಲಿ, ಏಕಾಗ್ರಚಿತ್ತದ ಸನ್ಯಾಸಿಯು ಒಬ್ಬ ಸುಧಾರಕನಾಗಿ, ರಾಷ್ಟ್ರ ನಿರ್ಮಾತೃವಾಗಿ, ಜಗತ್ತಿನ ವಾಸ್ತುಶಿಲ್ಪಿಯಾಗಿ ಪರಿವರ್ತನೆಗೊಂಡಿದ್ದರು. ಭಾರತದ ಬಡತನದ ಬಗ್ಗೆ ಅವರಲ್ಲಿ ದಿಗಿಲು ಮೂಡಿತು. ಜನಸಮೂಹದಿಂದ ಹೊರತಾದ ಧರ್ಮದಿಂದ ಏನು ಪ್ರಯೋಜನ ಎಂಬ ಚಿಂತೆ ಅವರಲ್ಲಿ ಮೂಡಿತು. ಎಲ್ಲೆಡೆಯೂ, ಎಲ್ಲ ಕಾಲದಲ್ಲೂ ಬಡವರನ್ನು ದಮನಿಸಲಾಗಿದೆ. ಪುರೋಹಿತಶಾಹಿಯ ಪ್ರಾಬಲ್ಯ, ಜಾತಿಯ ದಬ್ಬಾಳಿಕೆ, ಸಾಮಾಜಿಕ ವ್ಯವಸ್ಥೆಯಲ್ಲಿ ಇವು ಸೃಷ್ಟಿಸಿದ ಕ್ರೂರ ವಿಭಜನೆ- ಇವು ರಾಷ್ಟ್ರದ ಪ್ರಗತಿಗೆ ಅಡ್ಡಿಯಾಗಿರುವ ಬಲು ದೊಡ್ಡ ತೊಡಕುಗಳು ಎಂದು ಅವರಿಗೆ ಅನ್ನಿಸಿತು. ಮಹಾನ್ ಸಹಿಷ್ಣುಗಳಾದ ಜನಸಾಮಾನ್ಯರಿಗಾಗಿ ಅವರ ಹೃದಯ ಮಿಡಿಯಿತು. ಅವರ ಬೇಗುದಿಯನ್ನು ತಾನು ಹಂಚಿಕೊಳ್ಳುತ್ತಿದ್ದೇನೆಂಬ ಭಾವನೆ ಮೂಡಿತು; ಅವರ ಅವನತಿ ತನಗಾದ ಅಪಮಾನ ಅನ್ನಿಸಿತು. ಧರ್ಮದ ವಾರಸುದಾರರು ಎಂದು ಬೀಗುವವರು ಶತ ಶತಮಾನಗಳ ಕಾಲ ಅದು ಹೇಗೆ ಜನಸಮೂಹವನ್ನುಶೋಷಿಸಿದ್ದಾರೆ ಎಂಬುದನ್ನು ಯೋಚಿಸಿದಾಗ ಅವರ ಹೃದಯ ನೋವಿನ ಮಡುವಾಯಿತು.

ಸ್ವಾಮೀಜಿ 1894ರ ಮಾರ್ಚ್ 19ರಂದು ಷಿಕಾಗೊದಿಂದ ಸ್ವಾಮಿ ರಾಮಕೃಷ್ಣಾನಂದರಿಗೆ ಬರೆದ ಪತ್ರದಿಂದ, ಅವರ ಕನ್ಯಾಕುಮಾರಿಯ ಬಂಡೆಯ ಮೇಲಿನ ಧ್ಯಾನದ ಮಹತ್ವವನ್ನು ಅರಿಯಬಹುದು. ಅದರ ಒಕ್ಕಣೆ ಹೀಗಿದೆ: `ಮನಸ್ಸನ್ನು ಮುತ್ತಿದ ಇವೆಲ್ಲಾ ಚಿಂತನೆಗಳಿಂದಾಗಿ, ಮುಖ್ಯವಾಗಿ ಬಡತನ ಮತ್ತು ಅಜ್ಞಾನದ ಬಗೆಗೆ ಯೋಚಿಸಿದಾಗ, ನನಗೆ ನಿದ್ದೆಯೇ ಬರಲಿಲ್ಲ. ತಾಯಿ ಕುಮಾರಿಯ ದೇವಸ್ಥಾನದಲ್ಲಿ, ಭಾರತ ಮಾತೆಯ ಕಟ್ಟಕಡೆಯ ಬಂಡೆಯ ಮೇಲೆ ಕುಳಿತಿದ್ದಾಗ ನನ್ನಲ್ಲಿ ಯೋಜನೆಯೊಂದು ಹೊಳೆಯಿತು: ನಾವು ಇಷ್ಟೊಂದು ಸನ್ಯಾಸಿಗಳು ಅಲೆದಾಡುತ್ತಾ, ಜನರಿಗೆ ತಾತ್ವಿಕ ಮೀಮಾಂಸೆ ಬೋಧಿಸುವುದೆಲ್ಲಾ ಹುಚ್ಚಾಟವೇ ಸರಿ. ಹಸಿದ ಹೊಟ್ಟೆಯು ಧರ್ಮ ಬೋಧನೆಗೆ ಸೂಕ್ತವಲ್ಲ ಎಂದು ನಮ್ಮ ಗುರು ಹೇಳುತ್ತಿರಲಿಲ್ಲವೇ? ಆ ಬಡವರು ಹೀನಾಯವಾಗಿ ಬದುಕು ಸಾಗಿಸುತ್ತಿರುವುದಕ್ಕೆ ಅಜ್ಞಾನವೇ ಕಾರಣ. ನಾವು ಇಷ್ಟೊಂದು ವರ್ಷಗಳ ಕಾಲ ಅವರ ರಕ್ತವನ್ನು ಹೀರುತ್ತಾ, ನಮ್ಮ ಕಾಲ ಅಡಿ ಹೊಸಕಿ ಹಾಕಿದ್ದೇವೆ~.

ಆದರೆ, ಇದಕ್ಕೆ ಪರಿಹಾರ ಏನು? ತ್ಯಾಗ ಮತ್ತು ಸೇವೆಗಳೇ ಭಾರತದ ಅವಳಿ ಆದರ್ಶಗಳಾಗಬೇಕೆಂದು ಕಾಂತಿಯುತ ಕಣ್ಣುಗಳ ಸ್ವಾಮೀಜಿಗೆ ಅನ್ನಿಸಿತು. ರಾಷ್ಟ್ರದ ಜನಜೀವನವನ್ನು ಈ ಆದರ್ಶಗಳ ಬುನಾದಿಯ ಮೇಲೆ ಕಟ್ಟಲು ಸಾಧ್ಯವಾಗಿದ್ದೇ ಆದರೆ ಉಳಿದೆಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು ಎಂದುಕೊಂಡರು. ಮೂರು ದಿನಗಳ ನಿರಂತರ ಹಾಗೂ ತೀವ್ರ ಧ್ಯಾನದ ನಂತರ ಸ್ವಾಮೀಜಿ ಮುಂದಿನ ದಶಕದಲ್ಲಿ ತಾವು ಸಾಧಿಸಿದ ಕಾರ್ಯ ಯೋಜನೆಯನ್ನು ಮನದಾಳದಲ್ಲಿ ಪಡಿಮೂಡಿಸಿಕೊಂಡಿದ್ದು ಇದೇ ತಾಣದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.