ADVERTISEMENT

ಸಮಸ್ಯೆಗಳನ್ನು ಮೆಟ್ಟಿ ಸಾಧಿಸಿದ ಮಹಿಳಾ ಕ್ರೀಡಾಪಟುಗಳು

ಕೆ.ಓಂಕಾರ ಮೂರ್ತಿ
Published 18 ಜುಲೈ 2012, 19:30 IST
Last Updated 18 ಜುಲೈ 2012, 19:30 IST

ಲಾಂಗ್ ಜಂಪ್: ಅಂಜು ಜಾರ್ಜ್
ಭಾರತದ ಅಥ್ಲೆಟಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆಗೆ ಕಾರಣರಾದವರು ಅಂಜು ಜಾರ್ಜ್. ಲಾಂಗ್ ಜಂಪ್ ಸ್ಪರ್ಧಿ ಅಂಜು 2010ರಲ್ಲಿ ತಮ್ಮ ಕೋಚ್ ಕೂಡ ಆಗಿರುವ ರಾಬರ್ಟ್ ಬಾಬಿ ಜಾರ್ಜ್ ಅವರನ್ನು ವಿವಾಹವಾದರು. ವಿಶೇಷವೆಂದರೆ ವಿವಾಹವೇ ಅವರ ಅಥ್ಲೆಟಿಕ್ಸ್ ಜೀವನದ ಟರ್ನಿಂಗ್ ಪಾಯಿಂಟ್‌ಗೆ ಕಾರಣವಾಯಿತು.

ಪತಿರಾಬರ್ಟ್ ಟ್ರಿಪಲ್ ಜಂಪ್‌ನಲ್ಲಿ ರಾಷ್ಟ್ರೀಯ ಮಾಜಿ ಚಾಂಪಿಯನ್ ಕೂಡ. ಮೆಕಾನಿಕಲ್ ಎಂಜಿನಿಯರ್ ಆಗ್ದ್ದಿದ ಅವರು ಪತ್ನಿ ಅಂಜು ಏಳಿಗೆಗಾಗಿ ತಮ್ಮ ಹುದ್ದೆಯನ್ನೇ ತೊರೆದರು. ಕೇರಳ ಮೂಲದ ಅಂಜು ಈಗ ಬೆಂಗಳೂರಿನಲ್ಲಿ ನೆಲೆಸಿದ್ದು, ತರಬೇತಿ ಪಡೆಯುತ್ತಿದ್ದಾರೆ.

ಅವರೀಗ ಗಂಡು ಮಗುವಿನ ತಾಯಿ. ಆತನ ಹೆಸರು ಆ್ಯರನ್. ಕಳೆದ ತಿಂಗಳು ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಿದ್ದರಾದರೂ ಅನಾರೋಗ್ಯದ ಕಾರಣ ಹಿಂದೆ ಸರಿದರು.

35 ವರ್ಷ ವಯಸ್ಸಿನ ಅಂಜು 2003ರ ಪ್ಯಾರಿಸ್ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಭಾರತದ ಮಟ್ಟಿಗೆ ಇದೊಂದು ಐತಿಹಾಸಿಕ ಸಾಧನೆ. ಏಕೆಂದರೆ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳೆ.

ಅವರು 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ 6.83 ಮೀಟರ್ ದೂರ ಜಿಗಿದು ಆರನೇ ಸ್ಥಾನ ಪಡೆದರು. ರಾಷ್ಟ್ರೀಯ ದಾಖಲೆ ಕೂಡ ಅವರ ಹೆಸರಿನಲ್ಲಿದೆ. ಅರ್ಜುನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕೂಡ.

ಹಲವು ಬಾರಿ ಅವರು ಗಾಯ ಹಾಗೂ ಫಿಟ್‌ನೆಸ್ ಸಮಸ್ಯೆಗೆ ಒಳಗಾಗಿದ್ದಿದೆ. ಇಷ್ಟೆಲ್ಲದರ ನಡುವೆ ಅವರು ಯಶಸ್ಸಿನ ಹಾದಿ ಹಿಡಿದರು. ಪತ್ನಿಯಾಗಿಯೂ ಅಥ್ಲೆಟಿಕ್ಸ್‌ನಲ್ಲಿ ಯಶಸ್ಸು ಕಂಡರು. ಮಗುವಿನ ತಾಯಿ ಆಗಿಯೂ ಯಶಸ್ಸು ಕಾಣಲು ಅಭ್ಯಾಸ ನಡೆಸುತ್ತಿದ್ದಾರೆ.
......

ಬಾಕ್ಸಿಂಗ್: ಮೇರಿ ಕೋಮ್

`ಮದುವೆಯಾಗಬೇಡ. ನಿನ್ನ ಬಾಕ್ಸಿಂಗ್ ಜೀವನಕ್ಕೆ ಕುತ್ತು ಬರುತ್ತದೆ, ಗೃಹಿಣಿಯಾಗಿ ಮನೆಯಲ್ಲಿ ಕಾಲ ಕಳೆಯಬೇಕಾಗುತ್ತದೆ ಎಂದು ಕೆಲವರು ನನ್ನನ್ನು ಹೆದರಿಸಿದರು. ಆದರೆ ವೈಯಕ್ತಿಕ ಭದ್ರತಾ ದೃಷ್ಟಿಯಿಂದ ನಾನು ವಿವಾಹವಾಗಬೇಕಾಯಿತು.
 
ಆದರೆ ಅದು ಯಾವತ್ತೂ ನನ್ನ ಸಾಧನೆಗೆ ಅಡ್ಡಿಯಾಗಿಲ್ಲ~ ಎನ್ನುತ್ತಾರೆ ಐದು ಬಾರಿಯ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್29 ವರ್ಷ ವಯಸ್ಸಿನ ಮೇರಿ ಈಗ ಅವಳಿ ಮಕ್ಕಳ ತಾಯಿ. 2007ರಲ್ಲಿ ಸಿಸೇರಿಯನ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು ಒಂದು ವರ್ಷ ಬಾಕ್ಸಿಂಗ್‌ನಿಂದ ದೂರ ಉಳಿದಿದ್ದರು.

ಆದರೆ ಮತ್ತೆ ಬಂದು ಚಾಂಪಿಯನ್ ಆಗಿದ್ದು ಅಚ್ಚರಿ ಮೂಡಿಸುವ ವಿಷಯ. ತರಬೇತಿ ಹಾಗೂ ಸ್ಪರ್ಧೆಗಾಗಿ ಹೆಚ್ಚಿನ ದಿನ ಮನೆಯಿಂದ ದೂರ ಇರಬೇಕಾಗುತ್ತದೆ. ಎಷ್ಟೊ ಬಾರಿ ಈ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದು ಇದೆ. ಇಷ್ಟೆಲ್ಲದರ ನಡುವೆಯೂ ಮೇರಿ ಹೋರಾಡುತ್ತಿದ್ದಾರೆ. ಇವರ ಪತಿ ಅನ್ಲೆರ್ ಕೋಮ್ ಮಕ್ಕಳನ್ನು ಸಾಕುತ್ತಿದ್ದಾರೆ.

ಇಂಫಾಲ್‌ನ ಮೇರಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜೊತೆಗೆ ಪದಕದ ಭರವಸೆಯನ್ನೂ ಮೂಡಿಸಿದ್ದಾರೆ. ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯಿಂದ `ಮೆಗ್ನಿಫಿಶೆಂಟ್ ಮೇರಿ~ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕೋಮ್‌ಗೆ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಒಲಿದಿದೆ. ಅಷ್ಟೇ ಅಲ್ಲ, ಅವರಿಗೆ ಲೆಫ್ಟಿನೆಂಟ್ ಕರ್ನಲ್ ಗೌರವ ನೀಡಲು ಸೇನಾಪಡೆ ಮುಂದಾಗಿದೆ.
 
ಈ ಗೌರವಕ್ಕೆ ಪಾತ್ರರಾಗಲಿರುವ ಭಾರತದ ಮೊದಲ ಮಹಿಳೆ ಎನಿಸಲಿದ್ದಾರೆ. ಅವರ ಬಾಕ್ಸಿಂಗ್ ಜೀವನ ಶುರುವಾಗಿದ್ದು 2000ರಲ್ಲಿ. ಅಲ್ಲಿಂದ ಯಶಸ್ಸಿನ ಪಯಣ ನಿರಂತವಾಗಿ ಸಾಗಿದೆ. ಆದರೆ ಅವಳಿ ಮಕ್ಕಳ ತಾಯಿ ಮೇರಿ ರಿಂಗ್‌ನಲ್ಲಿ ಮುಷ್ಟಿ ಪ್ರಹಾರ ನಡೆಸಿ ಚಾಂಪಿಯನ್ ಆಗಿದ್ದು ಅದ್ಭುತ ಸಾಧನೆ.
......

ಹೈಜಂಪ್: ಸಹನಾ ಕುಮಾರಿ

ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಒತ್ತಡ ಸಹಿಸಿಕೊಂಡು ಸ್ಪರ್ಧಿಸುವುದು ಎಷ್ಟು ಕಷ್ಟ ಎಂಬುದು ಅಥ್ಲೀಟ್‌ಗಳಿಗೆ ಮಾತ್ರ ಗೊತ್ತು. ಅದರಲ್ಲಿಯೂ ಮಕ್ಕಳನ್ನು ಹೊಂದಿರುವ ಅಥ್ಲೀಟ್‌ಗಳಿಗೆ ಇದು ಇನ್ನೂ ಕಷ್ಟ.

ADVERTISEMENT

ಸ್ಪರ್ಧೆಗಳಿಗಾಗಿ ವಿದೇಶಕ್ಕೆ ತೆರಳುತ್ತಿರಬೇಕಾಗುತ್ತದೆ. ಅಲ್ಲಿಯೇ ತರಬೇತಿಗೆಂದು ತಿಂಗಳುಗಟ್ಟಲೇ ಇರಬೇಕಾಗುತ್ತದೆ. ಇಂತಹ ಹಲವು ಸಮಸ್ಯೆಗಳನ್ನು ಮೆಟ್ಟಿ ನಿಂತು ಯಶಸ್ಸು ಕಾಣುತ್ತಿರುವವರಲ್ಲಿ ಮಂಗಳೂರಿನ ಸೋಮೇಶ್ವರದ ಸಹನಾ ಕುಮಾರಿ ಕೂಡ ಒಬ್ಬರು.

ಸಹನಾ ಅವರ ಪತಿ ಖ್ಯಾತ ಅಥ್ಲೀಟ್ ಕೂಡ ಆಗಿರುವ ಬಿ.ಜಿ.ನಾಗರಾಜ್. ಅವರಿಗೆ ಏಳು ವರ್ಷದ ಮಗಳು (ಪಾವನಾ) ಇದ್ದಾಳೆ. ಆದರೆ ಸಹನಾ ಈಗ ತಮ್ಮ ಸ್ಪರ್ಧೆಯ ಉತ್ತುಂಗದಲ್ಲಿದ್ದಾರೆ. ಅಮ್ಮನಾಗಿ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಯಶಸ್ಸು ಕಾಣುತ್ತಿದ್ದಾರೆ.

ಹೈದರಾಬಾದ್‌ನಲ್ಲಿ ಕಳೆದ ತಿಂಗಳು ನಡೆದ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಕೂಟದ ಹೈಜಂಪ್‌ನಲ್ಲಿ 1.92 ಮೀಟರ್ ಎತ್ತರ ಜಿಗಿದು ರಾಷ್ಟ್ರೀಯ ನೂತನ ದಾಖಲೆ ನಿರ್ಮಿಸಿದರು. ಅವರು ಎಂಟು ವರ್ಷಗಳ ಹಿಂದೆ ಕೇರಳದ ಬಾಬಿ ಅಲೋಷಿಯಸ್ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು.

ಜೊತೆಗೆ ಬಹುದಿನಗಳ ಕನಸಾದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಆಸೆಯೂ ಈಡೇರಿತು. `ಪತಿ ನಾಗರಾಜ್ ಕ್ರೀಡಾಪಟುವಾಗಿರುವುದು ನನಗೆ ನೆರವಾಯಿತು. ಅವರಿಗೆ ನನ್ನ ಅಗತ್ಯ, ನಿರೀಕ್ಷೆ, ಒತ್ತಡ  ಎಲ್ಲವೂ ಗೊತ್ತಿರುತ್ತದೆ~ ಎಂದು ಹೇಳುತ್ತಾರೆ ನೈರುತ್ಯ ರೈಲ್ವೆಯಲ್ಲಿ ಉದ್ಯೋಗದಲ್ಲಿರುವ ಸಹನಾ.
.....

ಟೆನಿಸ್: ಕಿಮ್ ಕ್ಲೈಸ್ಟರ್ಸ್
 

ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ ಸಾಧನೆ ನೋಡುತ್ತಿದ್ದರೆ ಇವರು ಒಂದು ಮಗುವಿನ ತಾಯಿಯೇ ಎಂಬ ಅಚ್ಚರಿ ಮೂಡಬೇಕು. ಏಕೆಂದರೆ ಟೆನಿಸ್‌ನಲ್ಲಿ 25 ವರ್ಷ ಎಂದರೆ ವಿದಾಯ ಹೇಳುವ ವಯಸ್ಸು.
 
ಈ ಕ್ರೀಡೆಯಲ್ಲಿ ಅಷ್ಟೊಂದು ಗಟ್ಟಿಮುಟ್ಟಾಗಿ ಇರಬೇಕಾಗುತ್ತದೆ. ಸದಾ ಫಿಟ್‌ನೆಸ್ ಕಾಪಾಡಿಕೊಂಡು ಹೋಗಬೇಕಾಗುತ್ತದೆ. ಆದರೆ ಈ ಕ್ಲೈಸ್ಟರ್ಸ್ ಒಂದು ಮಗುವಾದ ಮೇಲೂ ಚಾಂಪಿಯನ್ ಆದ ಆಟಗಾರ್ತಿ.
 
ಟೆನಿಸ್ ಲೋಕದಲ್ಲಿ ತಾಯಿಯಾಗಿ ಇಂತಹ ಸಾಧನೆ ಮಾಡಲು 1980ರಿಂದ ಯಾರಿಗೂ ಸಾಧ್ಯವಾಗಿರಲಿಲ್ಲ. ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಚಾಂಪಿಯನ್ ಆದಾಗ ಕ್ಲೈಸ್ಟರ್ಸ್ ಎರಡು ವರ್ಷದ ತಮ್ಮ ಪುತ್ರಿ ಜೊತೆಯಲ್ಲಿ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದ್ದರು.

29 ವರ್ಷ ವಯಸ್ಸಿನ ಅವರು ನಾಲ್ಕು ಬಾರಿ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದಾರೆ. ಒಮ್ಮೆ ವಿಶ್ವ ಮಹಿಳಾ ಟೆನಿಸ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ತಲುಪಿದ್ದರು. ಅಷ್ಟು ಮಾತ್ರವಲ್ಲದೇ, ಅತಿ ಹೆಚ್ಚು ಹಣ ಗಳಿಸಿದ ಕ್ರೀಡಾಪಟುಗಳಲ್ಲಿ ಕ್ಲೈಸ್ಟರ್ಸ್ ಕೂಡ ಒಬ್ಬರು.
 
ಕಿಮ್ 2007ರಲ್ಲಿ ವಿವಾಹವಾಗಿದ್ದು ಅಮೆರಿಕದ ಬ್ಯಾಸ್ಕೆಟ್‌ಬಾಲ್ ಆಟಗಾರ ಬ್ರಯಾನ್ ಲಿಂಗ್ ಅವರನ್ನು. ಪತಿ ಕೂಡ ಒಬ್ಬ ಕ್ರೀಡಾಪಟುವಾಗಿದ್ದರಿಂದ ಕ್ಲೈಸ್ಟರ್ಸ್‌ಗೆ ಸೂಕ್ತ ಬೆಂಬಲ ದೊರಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.