ADVERTISEMENT

ಹೆಣ್ಣು ಮಿಡತೆಯ ಸಮಸ್ಯೆಗಳು...

ನಿಶ್ಶಬ್ದ ನಡಿಗೆಯಲ್ಲೂ ಅಪಾಯ – (ಗುಲ್‌ಮೊಹರು)

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2015, 19:30 IST
Last Updated 18 ಮಾರ್ಚ್ 2015, 19:30 IST
ಹೆಣ್ಣು ಮಿಡತೆಯ ಸಮಸ್ಯೆಗಳು...
ಹೆಣ್ಣು ಮಿಡತೆಯ ಸಮಸ್ಯೆಗಳು...   

ಪ್ರಾಣಿ-ಪಕ್ಷಿ-ಕೀಟ ಸಂಕುಲದಲ್ಲಿ, ಸಾಮಾನ್ಯವಾಗಿ ಗಂಡು ಜೀವಿಗಳು ಸುಂದರವಾಗಿರುತ್ತವೆ. ಗಂಡು ನವಿಲಿಗೆ ಬಣ್ಣಗಳಿರುವ ಗರಿ ಇರುವುದು, ಗಂಡು ಆನೆಗಳಿಗೆ ಮಾತ್ರ ದಂತವಿರುವುದು, ಗಂಡು ಕಪ್ಪೆಗಳು ವಿಶೇಷ ಸ್ವರಗಳನ್ನು ಹೊರಡಿಸುವುದು ಹೀಗೆ ಹಲವು ಉದಾಹರಣೆಗಳನ್ನು ಗಮನಿಸಬಹುದು.

ಸುಂದರ, ಬಲಶಾಲಿ, ಶ್ರೇಷ್ಠ ಗಂಡನ್ನು ಆಯ್ಕೆ ಮಾಡುವ ಹೆಣ್ಣು ಜೀವಿಯು, ಸಂತಾನಾಭಿವೃದ್ಧಿಯಲ್ಲಿ ತೊಡಗುವುದು ಸಹಜ ನಿಯಮ. ಇದೇಕೆ ಹೀಗೆ? ಅಂತ ಪ್ರಶ್ನಿಸುತ್ತಾ ಹೊರಟವರಲ್ಲಿ ಡಾರ್ವಿನ್ ಮೊದಲಿಗರು. ಇದನ್ನು ಬೇರೆ ಬೇರೆ ವಾದ- ಊಹೆಗಳ ಮೂಲಕ ಅನೇಕ ವಿಜ್ಞಾನಿಗಳು ವಿವರಿಸಿದ್ದಾರೆ. ‘ಗಂಡು ಜೀವಿಗೆ ಸಂತಾನಾಭಿವೃದ್ಧಿಯ ಅವಕಾಶವಿರುವ ಜೊತೆಗೆ, ಒಂದು ಅಪಾಯ ಕೂಡಾ ಇದೆ. ಹೆಣ್ಣನ್ನು ಆಕರ್ಷಿಸು ವಲ್ಲಿ ತೊಡಗಿದ ಗಂಡು, ತನಗೆ ಗೊತ್ತಿಲ್ಲದೇ ತನ್ನ ಶತ್ರುಗಳಿಗೂ ಆಹ್ವಾನವಿತ್ತಿರುತ್ತದೆ.

ಅತಿ ಉದ್ದ ಬಾಲವಿರುವ ಗರಿಬಿಚ್ಚಿ ನರ್ತಿಸುವ ಗಂಡು ನವಿಲು, ಹೆಣ್ಣನ್ನು ಆಕರ್ಷಿಸುವ ಭರದಲ್ಲಿ ಶತ್ರುವಿನ ನೋಟಕ್ಕೆ ಬೇಗ ತುತ್ತಾಗುತ್ತದೆ. ಹಾಗಾಗಿ, ಅತಿ ಆಕರ್ಷಕವಾದ ಗಂಡಿಗೆ ಅನಿವಾರ್ಯ ಅಪಾಯವೂ ಇದೆ’ ಅನ್ನುವ ಒಂದು ವಾದ ಇದೆ. ಆದರೆ ಇದನ್ನು ಪ್ರಾಯೋಗಿಕ ವಾಗಿ ಒರೆಗೆ ಹಚ್ಚಿ ನೋಡಿದವರು ಕಡಿಮೆ. ಇತ್ತೀಚೆಗೆ​ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ರೋಹಿಣಿ ಬಾಲಕೃಷ್ಣನ್ ನೇತೃತ್ವದ ತಂಡ ಈ ಕುರಿತ ವಾದಕ್ಕೆ ಹೊಸ ಆಯಾಮ ಕೊಟ್ಟಿದೆ. ಮಿಡತೆ ಮತ್ತು ಅದರ ಪರಭಕ್ಷಕ ಪ್ರಾಣಿಯಾದ ಬಾವಲಿಯ ನಡು ವಿನ ಸಂಬಂಧವನ್ನು ಪ್ರಯೋಗಕ್ಕೆ ಒಳಪಡಿಸಿದ್ದಾರೆ.

ರಾತ್ರಿ ಹೊತ್ತಲ್ಲಿ ಮಿಡತೆಗಳು ಮಾಡುವ ‘ಗೆಜ್ಜೆ’ ಯಂಥ ಶಬ್ದ ಕೇಳಿರಬಹುದು. ಅದರ ಎಡ-ಬಲಗಳ ರೆಕ್ಕೆಗಳನ್ನು ಪರಸ್ಪರ ಉಜ್ಜಿದಾಗ ಈ ರೀತಿ ಶಬ್ದ ಉಂಟಾಗುತ್ತದೆ. ‘ಜೋರು ಶಬ್ದ ಮಾಡುವ ಗಂಡು ಮಿಡತೆ ತಾನಿರುವ ಸ್ಥಳವನ್ನು ಹೆಣ್ಣಿಗೆ ತಿಳಿಸುವ ಪ್ರಯತ್ನವಿದು. ಮಿಡತೆ ತಿನ್ನುವ ಬಾವುಲಿಗಳಿಗೂ ಈ ಸದ್ದನ್ನು ಸುಲಭವಾಗಿ ಗುರುತಿಸಿ, ಅವುಗಳಿಗೆ ಆಹಾರವಾಗುವ ಸಾಧ್ಯತೆ  ಹೆಚ್ಚಿರ ಬಹುದು ಅನ್ನುವುದು ಸುಲಭವಾಗಿ ಊಹಿಸಬಹುದಾದ ವಾದ. ಇದನ್ನು ಪ್ರಾಯೋಗಿಕವಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಯಾದ ರೋಹಿಣಿ ರಾಮಕೃಷ್ಣನ್ ಅವರ ತಂಡ ಅಧ್ಯಯನ ನಡೆಸಿದೆ.

ಮೆಗಾಡರ್ಮಾ ಸ್ಪಾಸ್ಮ ಎನ್ನುವ ಬಾವಲಿಯ ಪ್ರಭೇದದ ಸಾಮಾನ್ಯ ಆಹಾರ ಮಿಡತೆಗಳು. ಆದರೆ ಮಿಡತೆಗಳ ರೆಕ್ಕೆಗಳು ಬಾವಲಿಯ ಹೊಟ್ಟೆಯಲ್ಲಿ ರೆಕ್ಕೆಗಳು ಜೀರ್ಣವಾಗದೆ ಉಳಿದುಬಿಡುತ್ತವೆ. ಈ ಹಿಕ್ಕೆಗಳಲ್ಲಿ ಅಳಿದುಳಿದ ರೆಕ್ಕೆಗಳ ಆಧಾರದ ಮೇಲೆ, ಬಾವಲಿಯು ಸುಮಾರು ಎಷ್ಟು ಮಿಡತೆಗಳನ್ನು ತಿಂದಿರಬಹುದೆಂದು ಅಂದಾಜು ಮಾಡಬಹುದು. ಗಂಡು ಹಾಗೂ ಹೆಣ್ಣು ಮಿಡತೆಗಳ ರೆಕ್ಕೆಗಳ ರಚನೆಯಲ್ಲಿ ವ್ಯತ್ಯಾಸವಿರುವುದರಿಂದ, ಅವುಗಳ ನಿಖರ ಸಂಖ್ಯೆಯನ್ನೂ ಊಹಿಸಬಹುದು. ‘ಶಬ್ದ ಮಾಡುವುದರಿಂದ ಗಂಡು ಮಿಡತೆಯು ಬಾವಲಿಗೆ ಆಹಾರವಾಗುವ ಸಾಧ್ಯತೆಗ​ಳಿದ್ದರೆ, ಬಾವಲಿಯ ಹಿಕ್ಕೆಯಲ್ಲಿ ಗಂಡು ಮಿಡತೆಗಳ ಸಂಖ್ಯೆ ಅಧಿಕವಿರ ಬಹುದು’ ಎಂದು ಊಹಿಸಬಹುದು.

ಪ್ರಯೋಗವನ್ನು ಇನ್ನೂ ಮುಂದುವರೆಸಿ, ಮೂರು ವಿಭಿನ್ನ ಪ್ರಬೇಧಗಳ ಗಂಡು ಮಿಡತೆಗಳು ಹೊರಡಿಸುವ ಶಬ್ದವನ್ನು ಮತ್ತು ಹಾರುವಾಗ ಉಂಟಾಗುವ ಶಬ್ದವನ್ನು ಮುದ್ರಿಸಿದರು. 18 ಬಾವಲಿಗಳಿಗೆ ಈ ಮುದ್ರಿತ ಧ್ವನಿಯನ್ನು ಕೇಳಿಸಿ, ಅವುಗಳ ಪ್ರತಿಕ್ರಿಯೆಯನ್ನು ಗಮನಿಸಿದರು.  ಒಂದಷ್ಟು ಹೆಣ್ಣು ಮಿಡತೆಗಳನ್ನು ಬಾವಲಿಗಳಿರುವ ಜಾಗದಲ್ಲಿ ಬಿಟ್ಟರು.  ಸದ್ದೇ ಮಾಡದ ಹೆಣ್ಣು ಮಿಡತೆ ಗಳು ಬಾವಲಿಗಳ ಆಹಾರಕ್ಕೆ ತುತ್ತಾಗುತ್ತವೆಯೇ ಎಂದು ಗಮನಿಸಿದರು.

ಈ ಎರಡು ಪ್ರಯೋಗಗಳಿಂದ ಅಚ್ಚರಿಯ ಫಲಿ ತಾಂಶ ಕಂಡುಬಂದಿತು.  ಬಾವಲಿಯ ಹಿಕ್ಕೆಗಳಲ್ಲಿ ಹೆಣ್ಣು ಮಿಡತೆಗಳ ಸಂಖ್ಯೆ ಮೂರು ಪಟ್ಟು ಅಧಿಕ ವಾಗಿತ್ತು, ಅಂದರೆ ಬಾವಲಿಯ ಆಹಾರಕ್ಕೆ ಹೆಣ್ಣು ಮಿಡತೆಗಳೇ ಬಲಿಯಾಗಿದ್ದವು. ಮಿಡತೆಗಳ ಮುದ್ರಿತ ಧ್ವನಿಗೆ ಬಾವಲಿಗಳ ಪ್ರತಿಕ್ರಿಯೆಗಳೂ ವಿರಳವಾಗಿ ದ್ದವು. ಆದರೆ, ಗಂಡು ಮಿಡತೆಗಳ ಧ್ವನಿಗೆ ಆಕರ್ಷಿತ ವಾಗಿ ಹಾರಿ ಬರುವ ಹೆಣ್ಣು ಮಿಡತೆಗಳನ್ನು ಬಾವಲಿಗಳು ತಿಂದಿದ್ದವು.

ಈ ಪ್ರಯೋಗಗಳ ಬಗ್ಗೆ ವಿಜ್ಞಾನಿ ರೋಹಿಣಿ ರಾಮಕೃಷ್ಣನ್ ಹೀಗೆ ಹೇಳುತ್ತಾರೆ ‘ಬಹುಶಃ, ಬಾವಲಿಗಳು ಮಿಡತೆಯ ಜಾಗ ವನ್ನು ಊಹಿಸುವುದು, ಅವುಗಳ ರೆಕ್ಕೆಗಳಿಂದ ಹೊರಡುವ ಶಬ್ದ ದಿಂದ ಅಲ್ಲ, ಬದಲಾಗಿ, ಅವುಗಳು ಹಾರುವಾಗ ಹೊರಡುವ ಪ್ರತಿಫಲಿತ ತರಂಗಗಳನ್ನು ಗುರುತಿಸುವ ಸಾಮರ್ಥ್ಯವನ್ನು ಬಾವಲಿಗಳು ಹೊಂದಿವೆ’.

'ಇದುವರೆಗೂ ನಾವು ತಿಳಿದಂತೆ, ಹೆಣ್ಣುಜೀವಿ ಯನ್ನು ಆಕರ್ಷಿಸುವ ಭರದಲ್ಲಿ ಗಂಡು ಜೀವಿಯು ತನ್ನ ಶತ್ರುವಿಗೂ ಆಹ್ವಾನವಿತ್ತಿರುತ್ತದೆ ಅನ್ನುವ ವಾದ ಸಂಪೂರ್ಣ ಸರಿಯಲ್ಲ. ಈ ಅಧ್ಯಯನ ಪ್ರಯೋಗಾಲಯಕ್ಕೆ ಮಾತ್ರ ಸೀಮಿತವಾಗಿದ್ದು, ಇದನ್ನು ನೈಸರ್ಗಿಕ ಪರಿಸರದಲ್ಲಿಯೂ ನಡೆಸ ಬೇಕಾದ ಅಗತ್ಯವಿದೆ. ನಮಗೆ ತಿಳಿದದ್ದು ಅತ್ಯಲ್ಪ ಅಷ್ಟೇ’ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.