ADVERTISEMENT

ಮಹಾನಗರಗಳಿಗೆ ದುಡಿಯಲು ಹೋಗುವವರನ್ನೇ ಧ್ಯಾನಿಸುತ್ತಾ...

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2014, 19:30 IST
Last Updated 30 ನವೆಂಬರ್ 2014, 19:30 IST

ಬಂಡೇಶನೆಂಬ 10 ನೇ ತರಗತಿ ಹುಡುಗ ಬಿಡಿಸಿದ ಚಿತ್ರವೊಂದು ಹೀಗಿದೆ: ವೃದ್ಧನ ಒಂದು ಕೈಯಲ್ಲಿ ಊರುಗೋಲು, ಮತ್ತೊಂದು ಕೈಯಲ್ಲಿ ಮೇಕೆ ಇದೆ. ಆತನ ಮಗನ ತಲೆ ಮೇಲೆ ಪೆಟ್ಟಿಗೆ ಇದೆ. ಸೊಸೆ ತಲೆ ಮೇಲೆ ಬುತ್ತಿ, ಮೊಮ್ಮಗನ ಕೈಯಲ್ಲಿ ನಾಯಿ ಇದೆ. ಹಿನ್ನೆಲೆಯಲ್ಲಿ ಪಾಳುಬಿದ್ದ ಮನೆ, ಒಣಗಿದ ಮರವಿದೆ. ಅವುಗಳ ಮೇಲೆ ಹಕ್ಕಿಗಳು, ಕಾಗೆಗಳು ಕುಳಿತಿವೆ. ಪಕ್ಕದಲ್ಲಿ ರೈಲುಬಂಡಿ ಇದೆ. ಅದು ರಾಯಚೂರು ರೈಲು ನಿಲ್ದಾಣ.

ಬಡತನ ಕಾರಣಕ್ಕಾಗಿ ಮಹಾನಗ­ರಗಳಿಗೆ ದುಡಿ­ಯಲು ಹೋಗುವವರ ಕುರಿತಾದ ಈ ಚಿತ್ರ ‘ರೂಪಕ’­ದಂತೆ ಭಾಸವಾಯಿತು. ಮನಸ್ಸು ಅಲ್ಲಿಯೇ ನೆಟ್ಟಿತ್ತು. ಅದ­ರಿಂದ ಬಿಡುಗಡೆ ಹೊಂದಬೇಕಿತ್ತು. ಬಂಡೇಶ­ನೊಂದಿಗೆ ಮಾತನಾಡಿದೆ. ‘ನಮ್ಮೂರಿನ ಸ್ಥಿತಿಯನ್ನೇ ಚಿತ್ರಿ­ಸಿದ್ದೇನೆ. ನನ್ನ ಚಿತ್ರ ನಿಮ್ಮನ್ನು ಹೇಗೆ ಕಾಡುತ್ತಿ­ದೆಯೋ, ಅದೇ ರೀತಿ ನಮ್ಮೂರ ಜನರ ಬದುಕು ನನ್ನನ್ನು ನೋವಿಗೆ ಅದ್ದಿತ್ತು’ ಎಂದು ಬಂಡೇಶ ಮೌನ­ವಾದ. ಆದರೆ ನಾನು ಸುಮ್ಮನಾಗಲಿಲ್ಲ.

ರಾಯಚೂರು ಜಿಲ್ಲೆಯ ಲಿಂಗಸಗೂರು, ದೇವ­ದುರ್ಗ, ಮಾನ್ವಿ, ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲ­ಬುರ್ಗಿ, ಯಾದಗಿರಿಯ ಶಹಾಪುರ, ಸುರಪುರ, ಯಾದ­ಗಿರಿ, ಕಲಬುರ್ಗಿ ಜಿಲ್ಲೆಯ ಚಿಂಚೋಳಿ, ಬೀದರ್‌ ಜಿಲ್ಲೆಯ ಔರಾದ್‌, ಭಾಲ್ಕಿ ಭಾಗದಲ್ಲಿ ಜನರು ಹೆಚ್ಚಾಗಿ ಮಳೆಯನ್ನೇ ನಂಬಿ ಬದುಕುತ್ತಾರೆ. ಮಳೆ ಕೈಕೊಟ್ಟರೆ ದುಡಿಯಲು ಕೆಲಸವೇ ಇರುವುದಿಲ್ಲ. ಬದುಕು ಸಾಗಿಸುವುದೇ ಕಷ್ಟವಾಗುತ್ತದೆ. ಊರಲ್ಲಿ ಇದ್ದರೆ ಸಾಲ ಮಾಡುವುದು ಅನಿವಾರ್ಯ. ಭೂ­ಮಾಲೀ­ಕರು ಸಾಲ ಕೊಡುತ್ತಾರೆ. ಆದರೆ, ಮಳೆಯೂ ಇಲ್ಲದೆ, ಕೂಲಿಯೂ ಇಲ್ಲದೆ ಸಮೃದ್ಧವಾಗಿ ಬೆಳೆಯು­ವುದು ಸಾಲದ ಮೇಲಿನ ಬಡ್ಡಿ ಮಾತ್ರ.
ಹೀಗಾದರೆ ಈ ಜನ ಬದುಕುವುದಾದರೂ ಹೇಗೆ? ಸಾಲ ತೀರಿಸುವುದು ಹೇಗೆ? ಹೊಲದಲ್ಲಿ ಕೊಳವೆಬಾವಿ ಕೊರೆಸುವುದು, ಜೋಪಡಿ ಸರಿಪಡಿಸುವುದು, ಅಜ್ಜಿಯ ತಿಥಿ, ಅಪ್ಪನ ಕಾಯಿಲೆ, ತಂಗಿಯ ಬಾಣಂತನ, ಮಗಳ ಮದುವೆ ಮಾಡುವುದು ಹೇಗೆ?

ಇವರಿಗೆ ಬೇರೆ ದಾರಿಯೇ ಇಲ್ಲ. ಅಸಹಾಯಕರನ್ನು ಮನೆ­ಯಲ್ಲೆ ಬಿಟ್ಟು ಹೆಂಡತಿ, ಮಕ್ಕಳೊಂದಿಗೆ ವಲಸೆ ಹೋಗ­ಲೇಬೇಕು. ಇವರು ಆರಿಸಿಕೊ­ಳ್ಳುವುದು ಬೆಂಗ­ಳೂರು, ಮಂಗಳೂರು, ಪುಣೆ, ಮುಂಬೈ, ಗೋವಾ, ಹೈದರಾಬಾದ್‌ನಂತಹ ಮಹಾನಗರಗಳನ್ನೇ. ಊರಿನಲ್ಲಿ ವರ್ಷಪೂರ್ತಿ ಕೆಲಸ ಸಿಗುವುದಿಲ್ಲ. ದಿನಕ್ಕೆ ನೂರಐವತ್ತು ರಿಂದ ಇನ್ನೂರು ರೂಪಾಯಿ ಕೂಲಿ ಸಿಕ್ಕರೆ ಹೆಚ್ಚು. ಮಹಾನಗರದಲ್ಲಿ ಮುನ್ನೂರ­ರಿಂದ ಐದುನೂರು ರೂಪಾಯಿ ಕೂಲಿ ಸಿಗುತ್ತದೆ. ಖಾಲಿ ಕೈಯಲ್ಲಿ ಹೋದವರು, ಊರಿಗೆ ಮರಳುವಾಗ ಕೈತುಂಬ ಹಣ ತರುತ್ತಾರೆ.

ಆದರೆ, ಇದ್ಯಾವುದನ್ನೂ ಅರಿಯದ ಸಚಿವ ಎಚ್‌.ಆಂಜನೇಯ ‘ಇಲ್ಲಿನ ಜನರು ಶೋಕಿಗಾಗಿ ಗುಳೆ ಹೋಗು­ತ್ತಾರೆ’ ಎಂದು ಈಚೆಗೆ ಕೊಪ್ಪಳದಲ್ಲಿ ಹೇಳಿಕೆ ಕೊಟ್ಟು ಜನರ ಆಕ್ರೋಶಕ್ಕೆ ಗುರಿಯಾದರು. ‘ನಮ್ಮ ತಾಲ್ಲೂಕಿನ ಜನರು ದುಡಿಯಲು ಪುಣೆಗೆ ಹೋಗುವುದನ್ನು ನೀವು ನೋಡಬೇಕು; ವಾರದ ಯಾವುದೇ ದಿನವಾದರೂ ನಮ್ಮೂರಿಗೆ ಬನ್ನಿ’ ಎಂದು ದೇವದುರ್ಗದ ಸ್ನೇಹಿತರು ಆಹ್ವಾನ ನೀಡಿದರು. ‘ಏಕೆ?’ ಎಂದು ಕೇಳಿದೆ.  ‘ದೇವದುರ್ಗದ ಮೂಲಕ ನಿತ್ಯ ಮೂರು ಬಸ್ಸುಗಳು ಪುಣೆಗೆ ಹೋಗುತ್ತವೆ. ಆ ಬಸ್ಸುಗಳಲ್ಲಿ ಕಾಲಿಡಲೂ ಜಾಗ ಇರುವುದಿಲ್ಲ’ ಎಂದು ತಿಳಿಸಿದರು.

ಕಾಲ ಬದಲಾಗುತ್ತಿದೆ. ದುಡಿಯುವ ಕೈಗಳನ್ನು ಗುರುತು ಮಾಡಿ, ಅವರನ್ನು ಮಹಾನಗರಗಳಿಗೆ ಕರೆದು­­ಕೊಂಡು ಹೋಗುವ ಏಜೆಂಟರು ಹುಟ್ಟು­ಕೊಂಡಿ­ದ್ದಾರೆ. ಈ ಏಜೆಂಟರು, ದುಡಿಯಲು ಹೋಗುವವರ ಮನೆ ಬಾಗಿಲಿಗೇ ವಾಹನವನ್ನು ತೆಗೆದುಕೊಂಡು ಹೋಗು­ತ್ತಾರೆ. ಬೆಂಗಳೂರಿನ ಯಾವುದೇ ಮೂಲೆಗೆ ಬೇಕಾ­ದರೂ ಬಿಡುತ್ತಾರೆ. ಮಹಾನಗರಗಳಿಗೆ ದುಡಿಯಲು ಹೋಗುವವರ ಸಂಖ್ಯೆ ನಿಖರವಾಗಿ ತಿಳಿಯುವುದಿಲ್ಲ. ಸಮೀಕ್ಷೆ ಮಾಡಿ­ದಂತೆ­ಯೂ ಇಲ್ಲ. ಕೆಲವು ಆಸಕ್ತರು ಅಧ್ಯಯನ ನಡೆಸಿ­ದ್ದಾರೆ. ಅವರ ಪ್ರಕಾರ ನಿರುದ್ಯೋಗ, ಕಡಿಮೆ ಕೂಲಿ, ಋಣಭಾರ, ಬರಗಾಲ, ಕುಡಿಯುವ ನೀರಿನ ಸಮಸ್ಯೆ, ಬದುಕು ನಿರ್ವಹಣೆ ಪ್ರಮುಖ ಕಾರಣಗಳಾಗಿವೆ.

ಕೂಲಿ ಕಾರ್ಮಿಕರ ವಲಸೆಯ ನೇರ ಪರಿಣಾಮ ಕೃಷಿ ಕ್ಷೇತ್ರದ ಮೇಲಾಗುತ್ತಿದೆ. ಕೂಲಿ ಕಾರ್ಮಿಕರು ಸಿಗದೆ ರೈತರು ಕಂಗಾಲಾಗಿದ್ದು, ಶಾಲೆಗೆ ಹೋಗುವ ಮಕ್ಕ­ಳನ್ನೇ ಕೂಲಿ ಕೆಲಸಕ್ಕೆ ಕರೆದುಕೊಳ್ಳುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ‘ದುಡಿಯಲು ವಲಸೆ ಹೋಗಬೇಡಿ. ಉದ್ಯೋಗ ಖಾತರಿ ಯೋಜನೆಯಡಿ ವರ್ಷಕ್ಕೆ 150 ದಿನ ಕೆಲಸ ಕೊಡು­ತ್ತೇವೆ’ ಎಂದು ಸರ್ಕಾರ ಜಾಗೃತಿ ಅಭಿಯಾನ ಆರಂಭಿಸಿದೆ. ಆದರೆ, ‘ಖಾತರಿ ಕಥೆ’ ಎಲ್ಲರಿಗೂ ಗೊತ್ತಿದೆ. ಭ್ರಷ್ಟಾಚಾರ ಕಾರಣದಿಂದ ‘ಖಾತರಿ’ ಯೋಜನೆ ಹಳ್ಳ ಹಿಡಿದಿದೆ. ಪೋಷಕರೊಂದಿಗೆ ಮಕ್ಕಳೂ ವಲಸೆ ಹೋಗುವುದರಿಂದ ಶಾಲಾ ದಾಖ­ಲಾತಿ ಆಂದೋಲನವೂ, ಶಾಲಾ ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿರುವುದರಿಂದ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನಾ ಕಾರ್ಯಕ್ರಮವೂ, ಹೆಣ್ಣು ಮಕ್ಕ­ಳಿಗೆ ಚಿಕ್ಕ ವಯಸ್ಸಿಗೆ ಮದುವೆ ಮಾಡುತ್ತಿರುವುದರಿಂದ ಬಾಲ್ಯ ವಿವಾಹ ತಡೆಗಟ್ಟುವ ಕಾಯ್ದೆಯೂ ನಿರೀಕ್ಷಿತ ಫಲ ಕೊಡುತ್ತಿಲ್ಲ.

ದೇಶವಾಸಿಗಳು ಯಾರು, ಎಲ್ಲಿಗೆ ಬೇಕಾದರೂ ಹೋಗಿ ದುಡಿಯಬಹುದು. ಇದನ್ನು ಯಾರೂ ಪ್ರಶ್ನಿ­ಸಲು ಆಗುವುದಿಲ್ಲ. ಆದರೆ, ಇದರಿಂದ ಸಾಮಾಜಿಕ, ಸಾಂಸ್ಕೃತಿಕ, ಕೃಷಿ ಹಾಗೂ ಶಿಕ್ಷಣ, ಆರೋಗ್ಯ ಕ್ಷೇತ್ರದ ಮೇಲೆ ಆಗುತ್ತಿರುವ ನೇರ ಮತ್ತು ಪರೋಕ್ಷ ಪರಿ­ಣಾ­ಮಗಳನ್ನು ಲಘುವಾಗಿ ಪರಿಗಣಿಸಬಾರದು. ಜತೆಗೆ ಮಹಾ­ನಗರಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಸರ್ಕಾರದ ಮೇಲೆ ಹೊರೆ ಬೀಳುತ್ತದೆ ಎನ್ನುವುದನ್ನೂ ಮರೆಯಬಾರದು.‘ಊರಲ್ಲೇ ಕೈತುಂಬ ಕೆಲಸ, ಕೂಲಿ ಸಿಕ್ಕರೆ ಸಾಕು. ನಾವು ವಲಸೆ ಹೋಗುವುದು, ಮಕ್ಕಳನ್ನು ಶಾಲೆ ಬಿಡಿ­ಸು­ವು­ದನ್ನು ಮಾಡುವುದಿಲ್ಲ’ ಎನ್ನುವವರ ಸಂಖ್ಯೆ ಹೆಚ್ಚಾಗಿದೆ.

ಮಹಾನಗರಗಳಿಗೆ ಜನರು ಸಂಪ್ರದಾಯ ಎನ್ನು­ವಂತೆ ವಲಸೆ ಹೋಗುವ ಪ್ರದೇಶಗಳನ್ನು ಸರ್ಕಾರ ಗುರು­­ತಿಸಬೇಕು. ಅಲ್ಲಿನ ಸನ್ನಿವೇಶಕ್ಕೆ ಸೂಕ್ತವಾದ ಕೈಗಾರಿಕೆ, ಉದ್ಯಮಗಳನ್ನು ಸ್ಥಾಪಿಸಬೇಕು. ಹೈನು­ಗಾರಿಕೆಯನ್ನು ಪ್ರೋತ್ಸಾಹಿಸಬೇಕು. ಮಹಿಳೆಯರಿಗಾಗಿ ಸಿದ್ಧ ಉಡುಪು ಉದ್ಯಮವನ್ನು ಆರಂಭಿಸಬೇಕು. ದುಡಿಯಲು ಹೋಗುವವರು ತಮ್ಮ ಮಕ್ಕಳ ಶಿಕ್ಷಣ­ವನ್ನೇ ಕಡೆಗಣಿಸುತ್ತಾರೆ. ಇದು ಭವಿಷ್ಯದ ಪೀಳಿಗೆ­ಯನ್ನು ಸ್ವಯಂ ಹಾಳು ಮಾಡಿದಂತೆ ಆಗುತ್ತದೆ. ಆದ್ದ­ರಿಂದ ಸರ್ಕಾರವು ಬೃಹತ್‌ ಕಟ್ಟಡಗಳ ನಿರ್ಮಾಣ ಸ್ಥಳ­ಗಳನ್ನು ಗುರುತಿಸಿ, ಅಲ್ಲಿ ದುಡಿಯುವವರ ಮಕ್ಕಳನ್ನು ಸಮೀ­ಪದ ಶಾಲೆಗೆ ದಾಖಲಿಸಲು ಕ್ರಮ ಕೈಗೊಳ್ಳ­ಬೇಕು. ಇಲ್ಲವೇ ಮೈಸೂರು ದಸರಾ ಸಂದರ್ಭದಲ್ಲಿ ಮಾವುತರ ಮಕ್ಕಳಿಗೆ ‘ಟೆಂಟ್‌ ಶಾಲೆ’ ತೆರೆಯುವಂತೆ, ಮಹಾನಗರಗಳಲ್ಲಿ ದುಡಿಯುವವರಮಕ್ಕಳಿಗೂ ಅದೇ ಮಾದರಿಯ ಶಾಲೆಗಳನ್ನು ತೆರೆಯಬೇಕು.

ಮಗನ ರಟ್ಟೆಗಳು ಇಟ್ಟಿಗೆಯನ್ನು ಎತ್ತಿಕೊಡುವಷ್ಟು ಬಲಿಷ್ಟವಾಗಿವೆ ಎನ್ನುವುದು ಗೊತ್ತಾದ ಅಪ್ಪ, ಅವ್ವ ಖುಷಿ ಪಡುತ್ತಾರೆ. ಏಕೆಂದರೆ ತಮ್ಮ ಆದಾಯಕ್ಕೆ ಹೆಚ್ಚುವರಿಯಾಗಿ ನೂರು ರೂಪಾಯಿ ಸೇರಿತು ಎಂದು. ಮಗಳು ‘ದೊಡ್ಡವಳು’ ಆದರೆ ಮದುವೆ ಮಾಡಿ ಭಾರ ಕಡಿಮೆ ಮಾಡಿಕೊಳ್ಳಲು ಸಕಾಲ ಎಂದು ಭಾವಿಸುತ್ತಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಗ್ರಾಮ­ವೊಂದರ ಅಮರೇಶನ (ಹೆಸರು ಬದಲಿಸಲಾಗಿದೆ) ಕಥೆಯೂ, ದುಡಿಯಲು ಹೋಗುವ ಬಹುತೇಕರ ಕಥೆಯೂ ಒಂದೇ.ಅಮರೇಶನು ಪತ್ನಿ, ಮೂವರು ಮಕ್ಕಳೊಂದಿಗೆ ಬೆಂಗ­ಳೂರಿನಲ್ಲಿ ದುಡಿಯುತ್ತಿದ್ದಾನೆ. ಮಗನಿಗೆ 8 ವರ್ಷ. ಅಮರೇಶನನ್ನು ಕೇಳಿದೆ. ‘ಮಗ ಎಷ್ಟನೇ ಇಯತ್ತು?’ ಆತ ಹೇಳಿದ. ‘3 ನೇ ಇಯತ್ತು’. ‘ಯಾವ ಶಾಲೆ?’ ಕೇಳಿದೆ. ‘ನಮ್ಮೂರ ಶಾಲೆ’ ಉತ್ತರಿಸಿದ. ‘ಮಗ ನಿಮ್ಮ ಜತೆ ಬೆಂಗಳೂರಿನಲ್ಲೇ ಇದ್ದಾನಲ್ಲಾ?’ ಪ್ರಶ್ನಿಸಿದೆ. ‘ಹೌದು, ನಾವು ಮೂರು ತಿಂಗಳಿಗೋ, ಆರು ತಿಂಗಳಿಗೋ ಊರಿಗೆ ಹೋದಾಗ ಶಾಲೆಗೆ ಹೋಗು­ತ್ತಾನೆ’ ಎಂದ!

ನಾನು ಒಂದು ದಿನ ರಾತ್ರಿ ಕನಸನೊಂದು ಕಂಡೆ. ಅದು ಬಂಡೇಶನ ಚಿತ್ರವೇ ಆಗಿತ್ತು. ಮರದ ಮೇಲೆ ಕುಳಿತಿದ್ದ ಹಕ್ಕಿಗಳು, ಕಾಗೆಗಳು ಹಾರುತ್ತಿದ್ದವು. ಪಾಳು ಬಿದ್ದ ಮನೆ ಸಿಂಗಾರಗೊಂಡಿತ್ತು. ರೈಲುಬಂಡಿ ಚಲಿಸುತ್ತಿತ್ತು. ವೃದ್ಧ, ಮೇಕೆ, ವೃದ್ಧನ ಮಗ, ಸೊಸೆ, ಮೊಮ್ಮಗ, ನಾಯಿ ಎಲ್ಲವೂ ಚಲನೆಯಲ್ಲಿದ್ದವು. ಇಷ್ಟರಲ್ಲಿ ಶಾಲೆಯ ಗಂಟೆ ಬಾರಿಸುವುದು ಕೇಳಿಸಿತು. ವೃದ್ಧನ ಮೊಮ್ಮಗ ಹಿಂದಿರುಗಿ ಶಾಲೆಯತ್ತ ಓಡುತ್ತಾ ಓಡುತ್ತಾ ಹೋದಂತೆ....!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.