ADVERTISEMENT

ವಿದ್ಯಾರ್ಥಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 19:50 IST
Last Updated 24 ಜನವರಿ 2018, 19:50 IST
ಪ್ರಶ್ನೆಗಳನ್ನು ಆಲಿಸುವುದರಲ್ಲಿ ತಲ್ಲೀನರಾಗಿರುವ ವಿದ್ಯಾರ್ಥಿಗಳು
ಪ್ರಶ್ನೆಗಳನ್ನು ಆಲಿಸುವುದರಲ್ಲಿ ತಲ್ಲೀನರಾಗಿರುವ ವಿದ್ಯಾರ್ಥಿಗಳು   

ಬೆಂಗಳೂರು: ಪ್ರತಿ ಪ್ರಶ್ನೆಗೂ ಉತ್ತರಿಸುವ ತವಕ, ನೀಡಿದ ಉತ್ತರ ಸರಿಯೋ ತಪ್ಪೋ ಎಂದು ತಿಳಿಯುವ ಕೌತುಕ ವಿದ್ಯಾರ್ಥಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಕ್ವಿಜ್‌ ಮಾಸ್ಟರ್‌ ಪ್ರಶ್ನೆ ಮುಗಿಸುವ ಮುನ್ನವೇ ನೂರಾರು ಕೈಗಳು ಮೇಲೇರುತ್ತಿದ್ದವು. ತೀವ್ರ ಪೈಪೋಟಿಯ ವಾತಾವರಣ ಅಲ್ಲಿತ್ತು.

–ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ನಡೆದ ಬೆಂಗಳೂರು ವಲಯ ಮಟ್ಟ ಹಾಗೂ ರಾಜ್ಯ ಮಟ್ಟದ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌– 2018’ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯಗಳಿವು.

ಬೆಂಗಳೂರು ವಲಯದ ಲಿಖಿತ ಪರೀಕ್ಷೆ ಸುತ್ತು ಮುಗಿದ ಬಳಿಕ, ಅದರ ಪ್ರಶ್ನೆಗಳನ್ನು ಸಭಿಕರಿಗೂ ಕೇಳಲಾಯಿತು. ಕಠಿಣ ಪ್ರಶ್ನೆಗಳಿಗೂ ಸಲೀಸಾಗಿ ಉತ್ತರಿಸಿದ ವಿದ್ಯಾರ್ಥಿಗಳು, ನಗರದಲ್ಲಿ ಕೆಲವು ತಿಂಗಳ ಹಿಂದೆ ನಡೆದ ‘ಬೇಕು ಬೇಡ ಸಂತೆ ನಡೆದದ್ದು ಏಕೆ’ ಎಂಬ ಪ್ರಶ್ನೆಗೆ ಉತ್ತರ ಹೇಳಲು ತಡವರಿಸಿದರು. ಮೈಕ್‌ ಮೂರ್ನಾಲ್ಕು ಕೈಗಳನ್ನು ಬದಲಾಯಿಸಿದ ನಂತರ ಒಬ್ಬ ವಿದ್ಯಾರ್ಥಿ ಸರಿಯಾಗಿ ಉತ್ತರಿಸಿದ. ‘ಹಂಬಲ್‌ ಪೊಲಿಟಿಶಿಯನ್‌ ನೋಗ್ರಾಜ್‌’ ಟೀಸರ್ ತೋರಿಸಿ, ಈ ಸಿನಿಮಾ ಯಾವುದು ಎಂದು ಕೇಳಿದ ಪ್ರಶ್ನೆಗೆ ಸಭಾಂಗಣದಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು ಎದ್ದು ನಿಂತು ಒಕ್ಕೊರಲಿನಿಂದ ಸರಿಯಾದ ಉತ್ತರ ಕೂಗಿದರು.

ADVERTISEMENT

ಬೆಂಗಳೂರು ವಲಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳು ಕ್ಲಿಷ್ಟಕರ ಪ್ರಶ್ನೆಗಳಿಗೆ ಸಲೀಸಾಗಿ ಉತ್ತರಿಸಿ ಜಾಣ್ಮೆ ಪ್ರದರ್ಶಿಸಿದರು. ಆದರೆ, ಸ್ಥಳೀಯ ಜ್ಞಾನಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಲಾಗದೇ ತಲೆ ಕೆಡಿಸಿಕೊಂಡರು. ಈ ಪ್ರಶ್ನೆಗಳಿಗೆ ಪ್ರೇಕ್ಷಕರಿಂದ ಉತ್ತರ ಬಂದಾಗ, ‘ಅಯ್ಯೋ ಗೊತ್ತಿದ್ದರೂ ಹೇಳಲಾಗಲಿಲ್ಲವಲ್ಲಾ...’ ಎಂದು ಚಡಪಡಿಸಿದರು.

ಪ್ರಶ್ನೆ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಬಜರ್‌ ಒತ್ತಲು ವಿದ್ಯಾರ್ಥಿಗಳಲ್ಲಿ ಪೈಪೋಟಿ ಏರ್ಪಟ್ಟಿತ್ತು. ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಆತುರದಲ್ಲಿ ಬಜರ್‌ ಒತ್ತಿ ಕೆಲವರು ಅಂಕಗಳನ್ನೂ ಕಳೆದುಕೊಂಡರು. ಕಠಿಣ ಪ್ರಶ್ನೆಗಳು ಎದುರಾದಾಗ ಯಾರೊಬ್ಬರೂ ಬಜರ್‌ ಒತ್ತದೇ ಜಾಣತನ ಪ್ರದರ್ಶಿಸಿದರು.

ಸಭಿಕರ ಪೈಪೋಟಿ: ರಂಗಶಂಕರ ವೇದಿಕೆ ಯಾವ ಥಿಯೇಟರ್‌ನಿಂದ ಪ್ರೇರಣೆ ಪಡೆದಿದೆ ಎಂಬ ಪ್ರಶ್ನೆಗೆ ಸ್ಪರ್ಧಿಗಳು ‘ಲಂಡನ್‌’, ‘ಅಮೆರಿಕ’ ಹೀಗೆ ವಿವಿಧೆಡೆಯ ರಂಗಭೂಮಿಯ ಹೆಸರುಗಳನ್ನು ಹೇಳಿದರು. ಉತ್ತರ ಸರಿಯಿಲ್ಲದ ಕಾರಣ ಪ್ರಶ್ನೆ ಪ್ರೇಕ್ಷಕರ ಗ್ಯಾಲರಿಯತ್ತ ಹೋಯಿತು. ಆಗ ಅಲ್ಲಿಯೂ ಯಾವ ವಿದ್ಯಾರ್ಥಿಯೂ ಸರಿಯಾದ ಉತ್ತರ ನೀಡದಿದ್ದಾಗ, ಶಿಕ್ಷಕಿಯೊಬ್ಬರು ‘ಮುಂಬೈನ ಪ್ರಸಿದ್ಧ ಪೃಥ್ವಿ ಥಿಯೇಟರ್ ಪ್ರೇರಣೆಯಿಂದ’ ಎಂದು ಸರಿಯಾದ ಉತ್ತರ ನೀಡಿದರು.

ಟ್ವಿಟರ್‌ ಆರಂಭವಾಗುವುದಕ್ಕೂ ಮುನ್ನವೇ ಬೆಂಗಳೂರಿನಲ್ಲಿರುವ ಸಂಸ್ಥೆಯೊಂದು ತನ್ನ ನೋಟಿಸ್‌ ಬೋರ್ಡ್‌ನಲ್ಲಿ ದಿನದ ಪ್ರಮುಖ ಘಟನೆ ಕುರಿತ ಮಾಹಿತಿಯನ್ನು 140 ಪದಗಳಿಗೆ ಮೀರದಂತೆ ಪ್ರಕಟಿಸುತ್ತಿತ್ತು. ಆ ಸಂಸ್ಥೆ ಯಾವುದು? ಎಂಬ ಪ್ರಶ್ನೆಗೆ ಅನೇಕರು ಉತ್ತರ ಹೇಳಲು ಉತ್ಸಾಹ ತೋರಿದರು. ‘ಅದು ಪ್ರಜಾವಾಣಿ ಕಚೇರಿ’ ಎಂದು ಸರಿ ಉತ್ತರ ನೀಡುವ ಮೂಲಕ ಬಾಲಕನೊಬ್ಬ ಬಹುಮಾನ ಗಳಿಸಿದ.

ಭೋಪಾಲ್‌ ಅನಿಲ ದುರಂತ: ‘B'EAL PAL’ ಹೆಸರಿನಲ್ಲಿ ನೀರಿನ ಬಾಟಲಿಗಳನ್ನು ಪ್ರದರ್ಶಿಸಿ ನಡೆಸಲಾದ ಪ್ರತಿಭಟನೆ ಯಾವುದಕ್ಕೆ ಸಂಬಂಧಿಸಿದೆ ಎಂಬ ಪ್ರಶ್ನೆಗೆ ಸ್ಪರ್ಧಿಗಳು ಮಹದಾಯಿ, ಕಾವೇರಿ, ಕಳಸ–ಬಂಡೂರಿ ಹೋರಾಟ, ಗಂಗಾ ನದಿ ಶುದ್ಧೀಕರಣಕ್ಕಾಗಿ, ಯಮುನಾ, ಬ್ರಹ್ಮಪುತ್ರ... ಹೀಗೆ ಎಲ್ಲಾ ನದಿಗಳ ಹೆಸರನ್ನು ಹೇಳಿದರು. ನಂತರ ಈ ಪ್ರಶ್ನೆ ಪ್ರೇಕ್ಷಕರಿಗೆ ವರ್ಗವಾಯಿತು. ಭೋಪಾಲ್‌ ಅನಿಲ ದುರಂತದಿಂದ ಅಲ್ಲಿನ ನೀರಿನ ಆಕರಗಳು ಕಲುಷಿತಗೊಂಡಿದ್ದವು, ಅದಕ್ಕಾಗಿ ಈ ಪ್ರತಿಭಟನೆ ಮಾಡಲಾಯಿತು ಎಂದು ಉತ್ತರಿಸಿದ ವಿದ್ಯಾರ್ಥಿಗೆ ಚಪ್ಪಾಳೆಗಳ ಸುರಿಮಳೆ.

ಐಫೋನ್‌ 10: 2017ರಲ್ಲಿ ಐಫೋನ್‌ ಸಂಸ್ಥೆ ಐಫೋನ್‌ 8 ಮತ್ತು 10 ಸರಣಿಯನ್ನು ಬಿಡುಗಡೆ ಮಾಡಿತು. 9ನೇ ಸರಣಿಯನ್ನು ಏಕೆ ಬಿಡುಗಡೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಐವರು ಸ್ಪರ್ಧಿಗಳು ಉತ್ತರಿಸಿದರು. 2007ರಲ್ಲಿ ಐಫೋನ್‌ ಪ್ರಾರಂಭವಾಗಿದ್ದು, 2017ಕ್ಕೆ 10 ವರ್ಷವಾಗುವುದರಿಂದ 10ನೇ ಸರಣಿಯನ್ನು ಬಿಡುಗಡೆಗೊಳಿಸಿತು ಎಂದು ಸರಿ ಉತ್ತರ ಹೇಳಿದ ಐವರು ಅಂಕಗಳನ್ನು ಪಡೆದರು.

ಭತ್ತದ ತಳಿಗೆ ದೇವೇಗೌಡರ ಹೆಸರು: ಈ ಪ್ರಸಿದ್ಧ ರಾಜಕಾರಣಿಯ ಹೆಸರನ್ನು ಪಂಜಾಬಿನ ಒಂದು ಬಗೆಯ ಭತ್ತದ ತಳಿಗೆ ಇಡಲಾಗಿದೆ, ಆ ರಾಜಕಾರಣಿ ಯಾರು ಎಂಬ ಪ್ರಶ್ನೆಗೆ ‘ನರೇಂದ್ರ ಮೋದಿ, ನವಜೋತ್‌ ಸಿಂಗ್‌ ಸಿದು’ ಎಂಬ ಉತ್ತರಗಳು ಸ್ಪರ್ಧಿಗಳಿಂದ ಬಂದವು. ಈ ಉತ್ತರಗಳು ತಪ್ಪಾಗಿದ್ದ ಕಾರಣ ಪ್ರೇಕ್ಷಕರಿಗೆ ಈ ಪ್ರಶ್ನೆಯನ್ನು ಕೇಳಲಾಯಿತು. ‘ಎಚ್‌.ಡಿ. ದೇವೇಗೌಡ’ ಎಂದು ಸರಿ ಉತ್ತರ ನೀಡಿದ ವಿದ್ಯಾರ್ಥಿಗೆ ವಿಶೇಷ ಬಹುಮಾನ ನೀಡಲಾಯಿತು.

ವಿಜೇತರು ಏನನ್ನುತ್ತಾರೆ?

‘ಅಂತಿಮ ಸುತ್ತಿನಲ್ಲಿ ಭಯವಾಯಿತು’
ಸ್ಪರ್ಧೆ ಗುಣಮಟ್ಟ ನಮ್ಮ ನಿರೀಕ್ಷೆಗಿಂತಲೂ ಉತ್ತಮವಾಗಿತ್ತು. ಯೋಚಿಸಿ ಉತ್ತರ ನೀಡಬೇಕಾದ ಪ್ರಶ್ನೆಗಳೇ ಹೆಚ್ಚು ಇದ್ದವು. ಎದುರಾಳಿ ತಂಡಗಳೂ ಪೈಪೋಟಿ ನೀಡಿದವು. ಅಂತಿಮ ಸುತ್ತಿನಲ್ಲಿ ಭಯ ಸ್ವಲ್ಪ ಕಾಡಿತು. ಆದರೆ, ಉತ್ತರ ಗೊತ್ತಿದ್ದರಿಂದ ಗೆಲುವು ಒಲಿಯಿತು.
– ಧೀರೇಂದ್ರ ಭಂಡಾರಿ ಮತ್ತು ಚಂದನ್‌ ಪ್ರಕಾಶ್‌, ವಿದ್ಯೋದಯ ಪಬ್ಲಿಕ್‌ ಸ್ಕೂಲ್‌, ಉಡುಪಿ

‘ಕಳೆದ ಬಾರಿ ನಿರಾಸೆ, ಈಗ ಸಂತಸ’
ಕಳೆದ ಬಾರಿಯ ಕ್ವಿಜ್‌ನಲ್ಲಿ ವಲಯ ಮಟ್ಟದಲ್ಲಿಯೇ ನಿರಾಸೆ ಅನುಭವಿಸಿದೆ. ಈ ಬಾರಿ ರಾಜ ಮಟ್ಟದಲ್ಲಿ ದ್ವಿತೀಯ ಸ್ಥಾನ ಸಿಕ್ಕಿರುವುದು ಸಂತೋಷ ತಂದಿದೆ. ಒತ್ತಡರಹಿತವಾಗಿ ಸ್ಪರ್ಧೆಯಲ್ಲಿ ಭಾಗವಹಿಸಲು ಶಿಕ್ಷಕರು ತರಬೇತಿ ನೀಡಿದ್ದರು. ನಮ್ಮ ಯಶಸ್ಸಿಗೆ ಇದು ಕೂಡ ನೆರವಾಯಿತು
– ಇಷಾ ಮತ್ತು ಕೀರ್ತಿರಾಜ್‌, ನಿಟ್ಟೂರು ಸೆಂಟ್ರಲ್‌ ಸ್ಕೂಲ್‌, ರಾಣೆಬೆನ್ನೂರು

‘ಮೂರನೇ ಸ್ಥಾನ ತೃಪ್ತಿ ನೀಡಿಲ್ಲ’
ಕ್ವಿಜ್‌ಗೆ ಒಂದೇ ದಿನದಲ್ಲಿ ತಯಾರಾಗಲು ಆಗುವುದಿಲ್ಲ. ಪ್ರತಿ ದಿನ ಪತ್ರಿಕೆ ಓದುವುದರಿಂದ ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ಅದು ಇಂತಹ ಸ್ಪರ್ಧೆಗಳಿಗೆ ಸಹಾಯವಾಗುತ್ತದೆ. ಮೂರನೇ ಸ್ಥಾನ ತೃಪ್ತಿ ನೀಡಿಲ್ಲ
– ವಸಿಷ್ಠ ಎಲ್. ಸ್ವಾಮಿ ಮತ್ತು ಎನ್‌.ಅಭಯ್‌, ಮಹರ್ಷಿ ಪಬ್ಲಿಕ್‌ ಸ್ಕೂಲ್‌, ಮೈಸೂರು

ಐದು ಸುತ್ತುಗಳು

ಅಂತಿಮ ಸ್ಪರ್ಧೆಯಲ್ಲಿ ಮಿಶ್ರ ಪ್ರಶ್ನೆಗಳನ್ನು ಒಳಗೊಂಡ ‘ಪಾಟ್‌ ಪುರಿ’, ವಿವಿಧ ಸಂಬಂಧಗಳನ್ನು ಜೋಡಿಸುವ ‘ಕನೆಕ್ಟ್‌’, ವಿಷಯವನ್ನು ಆಯ್ಕೆ ಮಾಡಿ ಉತ್ತರಿಸುವುದು, ಮೂರು ಸುಳಿವುಗಳನ್ನು ಬಳಸಿ ಉತ್ತರ ಹೇಳುವುದು ಹಾಗೂ ಬಜರ್‌ ಸುತ್ತು ಸೇರಿ ಒಟ್ಟು ಐದು ಸುತ್ತುಗಳಿದ್ದವು. ಬಜರ್‌ ಒತ್ತಿ ಸರಿ ಉತ್ತರ ಹೇಳಿದ ತಂಡಕ್ಕೆ 10 ಅಂಕ ಪಡೆಯುವ ಅವಕಾಶ ಸಿಕ್ಕಿತು. ತಪ್ಪು ಉತ್ತರ ಹೇಳಿದ ತಂಡಕ್ಕೆ 5 ಅಂಕ ಕಡಿತ ಮಾಡಲಾಯಿತು.

**

ಕಠಿಣ ಪ್ರಶ್ನೆಗಳಿಗೂ ವಿದ್ಯಾರ್ಥಿಗಳು ಜಿದ್ದಿಗೆ ಬಿದ್ದು ಉತ್ತರಿಸಿದರು. ರಸಪ್ರಶ್ನೆಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಸಿಕ್ಕಿದೆ.
–ರಾಘವ ಚಕ್ರವರ್ತಿ, ಕ್ವಿಜ್‌ ಮಾಸ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.