ADVERTISEMENT

ಅಂಧರ ಚೆಸ್: ಮುನ್ನಡೆಯಲ್ಲಿ ಮಕ್ವಾನಾ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಬೆಂಗಳೂರು: ಹಾಲಿ ಚಾಂಪಿಯನ್ ಗುಜರಾತ್‌ನ ಅಶ್ವಿನ್ ಮಕ್ವಾನಾ ಹಾಗೂ ಮಹಾರಾಷ್ಟ್ರದ ಸ್ವಪ್ನಿಲ್ ಶಾ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಫಿಡೆ ರೇಟೆಡ್ ಅಂಧರ ಓಪನ್ ಚೆಸ್ ಟೂರ್ನಿಯಲ್ಲಿ ಜಂಟಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ಕುತೂಹಲ ಮೂಡಿಸಿದ್ದ ಏಳನೇ ಸುತ್ತಿನ ಪಂದ್ಯದಲ್ಲಿ ಅಶ್ವಿನ್ ಕರ್ನಾಟಕದ ಕಿಷನ್ ಗಂಗೊಳ್ಳಿ ಅವರೊಂದಿಗೆ ಡ್ರಾ ಮಾಡಿಕೊಂಡರು. ಈ ಮೂಲಕ ಉಭಯ ಆಟಗಾರರ ಪಾಯಿಂಟ್ ಹಂಚಿಕೊಂಡರು.

ಆದರೆ 6 ಪಾಯಿಂಟ್ ಹೊಂದಿರುವ ಮಕ್ವಾನ್ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ತಮ್ಮ ರಾಜ್ಯದವರೇ ಆದ ಅಮಿತ್ ದೇಶಪಾಂಡೆ ಜೊತೆ ಡ್ರಾ ಸಾಧಿಸಿದ ಸ್ವಪ್ನಿಲ್ ಕೂಡ ಆರು ಪಾಯಿಂಟ್ ಹೊಂದಿದ್ದಾರೆ. ಹಾಗಾಗಿ ಬುಧವಾರ ನಡೆಯಲಿರುವ ಕೊನೆಯ ಸುತ್ತಿನ ಪಂದ್ಯ ಕುತೂಹಲ ಮೂಡಿಸಿದೆ.

ಕಿಷನ್ 5.5 ಪಾಯಿಂಟ್‌ಗಳೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಒಡಿಶಾದ ಪ್ರಚೂರ್ಯ ಕುಮಾರ್ ಪ್ರಧಾನ್ ಕೂಡ ಇಷ್ಟೇ ಪಾಯಿಂಟ್ ಹೊಂದಿದ್ದಾರೆ. ಅವರು ಏಳನೇ ಸುತ್ತಿನ ಪಂದ್ಯದಲ್ಲಿ ನವದೆಹಲಿಯ ಅಖಿಲೇಶ್ ಶ್ರೀವಾತ್ಸವ ಅವರೊಂದಿಗೆ ಡ್ರಾ ಮಾಡಿಕೊಂಡರು.

ಕರ್ನಾಟಕದ ಮತ್ತೊಬ್ಬ ಆಟಗಾರ ಕೃಷ್ಣ ಉಡುಪ ಕೂಡ 5.5 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಒಡಿಶಾದ ಸೌಂದರ್ಯ ಕುಮಾರ್ ಪ್ರಧಾನ್ (4.5 ಪಾಯಿಂಟ್ಸ್) ಅವರನ್ನು ಮಣಿಸಿ ಪೂರ್ಣ ಪಾಯಿಂಟ್ ಗಿಟ್ಟಿಸಿಕೊಂಡರು. ಕರ್ನಾಟಕದ ಮತ್ತೊಬ್ಬ ಆಟಗಾರ ಎಸ್.ಶ್ರೀನಿವಾಸ್ ಏಳನೇ ಸುತ್ತಿನಲ್ಲಿ ಸೋಲು ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.