ADVERTISEMENT

ಅನಿರ್ಬನ್‌ಗೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 19:59 IST
Last Updated 3 ಜುಲೈ 2013, 19:59 IST
ಅನಿರ್ಬನ್ ಲಾಹಿರಿ ಆಟದ ವೈಖರಿ 	-ಪ್ರಜಾವಾಣಿ ಚಿತ್ರ
ಅನಿರ್ಬನ್ ಲಾಹಿರಿ ಆಟದ ವೈಖರಿ -ಪ್ರಜಾವಾಣಿ ಚಿತ್ರ   

ಬೆಂಗಳೂರು: ಮೊದಲ ಸುತ್ತಿನಲ್ಲಿ ಚುರುಕಿನ ಪ್ರದರ್ಶನ ತೋರಲು ಪರದಾಡಿದ್ದ ಸ್ಥಳೀಯ ಗಾಲ್ಫರ್ ಅನಿರ್ಬನ್ ಲಾಹಿರಿ ಬುಧವಾರ ನಿಖರ ಆಟವಾಡುವಲ್ಲಿ ಸಫಲರಾದರು. ಈ ಪರಿಣಾಮ ಅವರು ಪಿಜಿಟಿಐ ಈಗಲ್‌ಬರ್ಗ್ ಗಾಲ್ಫ್ ಟೂರ್ನಿಯ ಎರಡನೇ ಸುತ್ತಿನ ಅಂತ್ಯಕ್ಕೆ ಮುನ್ನಡೆ ಸಾಧಿಸಿದರು.

ಈಗಲ್ಟನ್ ಗಾಲ್ಫ್  ಕೋರ್ಸ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ 26 ವರ್ಷದ ಅನಿರ್ಬನ್ ಮೊದಲ ದಿನ 73 ಅವಕಾಶಗಳನ್ನು ಬಳಸಿಕೊಂಡಿದ್ದರು. ಆದರೆ, ಎರಡನೇ ದಿನ ಕೇವಲ 62 ಅವಕಾಶಗಳೊಂದಿಗೆ ಸ್ಪರ್ಧಿ ಕೊನೆಗೊಳಿಸಿ ಮೊದಲ ಸ್ಥಾನದಲ್ಲಿದ್ದಾರೆ.
`ಎರಡನೇ ದಿನ ಉತ್ತಮ ಪ್ರದರ್ಶನ ತೋರಬೇಕೆಂದು ಮೊದಲೇ ನಿಶ್ಚಯಿಸಿದ್ದೆ. ಆದ್ದರಿಂದ ಎಲ್ಲಾ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡೆ' ಎಂದು ಏಷ್ಯನ್ ಟೂರ್ ಟೂರ್ನಿಯಲ್ಲಿ ಮೂರು ಬಾರಿ ಪ್ರಶಸ್ತಿ ಎತ್ತಿ  ಹಿಡಿದಿರುವ ಅನಿರ್ಬನ್ ನುಡಿದರು.

ಮೊದಲ ದಿನದ ಅಂತ್ಯಕ್ಕೆ 69 ಅವಕಾಶಗಳನ್ನು ಬಳಸಿಕೊಂಡು ಎಂಟನೇ ಸ್ಥಾನದಲ್ಲಿದ್ದ ಲಖನೌನ ಸಂಜಯ್ ಕುಮಾರ್ ಎರಡನೇ ದಿನ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ತೋರಿದರು. 67 ಅವಕಾಶಗಳೊಂದಿಗೆ ಸ್ಪರ್ಧೆ ಮುಗಿಸಿದ ಸಂಜಯ್ ಎರಡನೇ ಸ್ಥಾನಕ್ಕೇರಿದರು. ಮೊದಲ ಸುತ್ತಿನ ಅಂತ್ಯಕ್ಕೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದ ಕೋಲ್ಕತ್ತದ ರಾಹಿಲ್ ಗಂಗ್ಜಿ (68 ಹಾಗೂ 71) ಗುಡಗಾಂವ್‌ನ ಅರ್ಷಪ್ರೀತ್ (68 ಹಾಗೂ 71ನೇ ನಿ.) ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡರೆ, ಶ್ರೀಲಂಕಾದ ಪ್ರಭಾಕರನ್ (68 ಮತ್ತು 69) ಮೂರನೇ ಸ್ಥಾನದಲ್ಲಿದ್ದಾರೆ.

ಮೊದಲ ಸುತ್ತಿನಲ್ಲಿ ನೀರಸ ಪ್ರದರ್ಶನ ತೋರಿ ನಿರಾಸೆಗೆ ಕಾರಣವಾಗಿದ್ದ ಬೆಂಗಳೂರಿನ  ಎಸ್. ಚಿಕ್ಕರಂಗಪ್ಪ ಎರಡನೇ ದಿನ ತಮ್ಮ ಪ್ರದರ್ಶನ ಮಟ್ಟ ಸುಧಾರಿಸಿಕೊಂಡರು. ಈ ಗಾಲ್ಫರ್ ಬುಧವಾರ 67 ಅವಕಾಶಗಳೊಂದಿಗೆ ಸ್ಪರ್ಧೆ ಕೊನೆಗೊಳಿಸಿ ನಾಲ್ಕನೇ ಸ್ಥಾನಕ್ಕೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.