ADVERTISEMENT

ಅಭ್ಯಾಸಕ್ಕೆ ಕಳಪೆ ಪಿಚ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 19:30 IST
Last Updated 19 ಜೂನ್ 2011, 19:30 IST
ಅಭ್ಯಾಸಕ್ಕೆ ಕಳಪೆ ಪಿಚ್
ಅಭ್ಯಾಸಕ್ಕೆ ಕಳಪೆ ಪಿಚ್   

ಕಿಂಗ್‌ಸ್ಟನ್, ಜಮೈಕಾ (ಪಿಟಿಐ): ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕೆ ಮುನ್ನ ವಿವಾದವೊಂದು ಹುಟ್ಟಿಕೊಂಡಿದೆ. ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಸಿದ್ಧಪಡಿಸಿರುವ ಪಿಚ್‌ಗಳ ಗುಣಮಟ್ಟ ಕಳಪೆಯಾಗಿದೆ ಎಂದು ಭಾರತ ತಂಡದವರು ದೂರಿದ್ದಾರೆ.

ಈಗಾಗಲೇ ಆಟಗಾರರ ಗಾಯದ ಸಮಸ್ಯೆ ಎದುರಿಸುತ್ತಿರುವ ಮಹೇಂದ್ರ ಸಿಂಗ್ ದೋನಿ ಬಳಗ ಅಭ್ಯಾಸಕ್ಕಾಗಿ ಕಲ್ಪಿಸಿರುವ ಸೌಲಭ್ಯಗಳ ಬಗ್ಗೆ ಅತೃಪ್ತಿ ಹೊಂದಿದೆ. ಭಾರತದ ಆಟಗಾರರ ಅಭ್ಯಾಸಕ್ಕಾಗಿ ಮೂರು ಪಿಚ್‌ಗಳನ್ನು ಸಿದ್ಧಪಡಿಲಾಗಿತ್ತು.

ಆದರೆ ಇದರಲ್ಲಿ ಎರಡು ಪಿಚ್‌ಗಳು ಬ್ಯಾಟ್ಸ್‌ಮನ್‌ಗಳಿಗೆ ಅಪಾಯಕಾರಿ ಎನಿಸಿದೆ. ಈ ಕಾರಣ ಭಾರತ ಒಂದು ಪಿಚ್‌ನ್ನು ಮಾತ್ರ ತಾಲೀಮಿಗೆ ಬಳಸಿಕೊಂಡಿತು. ಎರಡು ಪಿಚ್‌ಗಳಲ್ಲಿ ಚೆಂಡು ಕೆಲವೊಮ್ಮೆ ತೀರಾ ಕೆಳಮಟ್ಟದಲ್ಲಿ ಬಂದರೆ, ಒಮ್ಮಮ್ಮೆ ಪುಟಿದೇಳುತ್ತಿತ್ತು.

ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ ಅವರು ಇದೇ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭ ಕೈಬೆರಳಿಗೆ ಗಾಯಮಾಡಿಕೊಂಡಿದ್ದಾರೆ. ಸ್ಥಳೀಯ ವೇಗದ ಬೌಲರ್‌ನ ಎಸೆತವೊಂದು ಅವರ ಬೆರಳಿಗೆ ಅಪ್ಪಳಿಸಿತ್ತು. ಆ ಬಳಿಕ ಭಾರತ ನೆಟ್ ಪ್ರಾಕ್ಟೀಸ್ ವೇಳೆ ಸ್ಥಳೀಯ ಬೌಲರ್‌ಗಳ ನೆರವು ಪಡೆಯಲಿಲ್ಲ. ಅಭಿನವ್ ಮುಕುಂದ್ ಅಭ್ಯಾಸ ನಡೆಸುತ್ತಿದ್ದ ವೇಳೆ ಚೆಂಡು ಎರಡು ಬಾರಿ ಭುಜಕ್ಕೆ ಬಡಿದಿತ್ತು.

ತಮ್ಮ ಬ್ಯಾಟ್ಸ್‌ಮನ್‌ಗಳಿಗೆ ಅಪಾಯ ಉಂಟಾಗಬಾರದು ಎಂಬ ಕಾರಣ ಶನಿವಾರ ಅಭ್ಯಾಸದ ವೇಳೆ ಭಾರತದ ವೇಗಿಗಳು ಬೌಲಿಂಗ್ ಮಾಡಲಿಲ್ಲ. ಸ್ಪಿನ್ನರ್‌ಗಳಾದ ಹರಭಜನ್ ಸಿಂಗ್, ಅಮಿತ್ ಮಿಶ್ರಾ ಮತ್ತು ಪ್ರಗ್ಯಾನ್ ಓಜಾ ಮಾತ್ರ ಬೌಲಿಂಗ್ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.