ನ್ಯೂಯಾರ್ಕ್ (ಎಎಫ್‌ಪಿ): ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪಂದ್ಯಗಳಿಗೆ ಸತತ ಎರಡನೇ ದಿನವೂ ಮಳೆ ಅಡ್ಡಿಪಡಿಸಿದೆ. ಈ ಕಾರಣ ಬುಧವಾರ ಯಾವುದೇ ಪಂದ್ಯಗಳು ನಡೆಯಲಿಲ್ಲ. ಮಂಗಳವಾರ ಕೂಡಾ ಇಂತಹದೇ ಪರಿಸ್ಥಿತಿ ತಲೆದೋರಿತ್ತು.
ಬುಧವಾರ ಕೆಲವೊಂದು ಪಂದ್ಯಗಳು ಆರಂಭವಾದರೂ ಮಳೆಯ ಕಾರಣ ಅರ್ಧದಲ್ಲೇ ಮೊಟಕುಗೊಂಡವು. ರಫೆಲ್ ನಡಾಲ್ ಒಳಗೊಂಡಂತೆ ಪ್ರಮುಖ ಆಟಗಾರರು ಮಳೆ ನೀರಿನಿಂದ ಒದ್ದೆಯಾಗಿದ್ದ ಅಂಗಳದಲ್ಲಿ ಆಟ ಮುಂದುವರಿಸಲು ನಿರಾಕರಿಸಿದರು.
`ಅಪಾಯಕಾರಿ ಪರಿಸ್ಥಿತಿ~ಯಲ್ಲಿ ಆಡುವಂತೆ ಸಂಘಟಕರು ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದು ನಡಾಲ್ ಆರೋಪಿಸಿದ್ದಾರೆ. ಇತರ ಆಟಗಾರರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಘಟಕರು ಗುರುವಾರ ಬೆಳಿಗ್ಗೆಯೇ ಆಟ ಆರಂಭಿಸಲು ನಿರ್ಧರಿಸಿದ್ದಾರೆ.
ಲಕ್ಸೆಂಬರ್ಗ್‌ನ ಜೈಲ್ಸ್ ಮುಲ್ಲೆರ್ ವಿರುದ್ಧದ ಪುರುಷರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯ ಮಳೆಯಿಂದ ಅರ್ಧದಲ್ಲೇ ಮೊಟಕುಗೊಂಡಾಗ ನಡಾಲ್ 0-3 ರಲ್ಲಿ ಹಿನ್ನಡೆಯಲ್ಲಿದ್ದರು.
`ಮಳೆ ಸುರಿಯುತ್ತಿದ್ದ ಸಂದರ್ಭ ನಾವು ಕಣಕ್ಕಿಳಿಯಲು ಬಯಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಡುವಂತೆ ಒತ್ತಡ ಹೇರುವುದು ಸರಿಯಲ್ಲ~ ಎಂದು ನಡಾಲ್ ಹೇಳಿದ್ದಾರೆ.
ಇಂಗ್ಲೆಂಡ್‌ನ ಆ್ಯಂಡಿ ಮರ‌್ರೆ ಮತ್ತು ಅಮೆರಿಕದ ಡೊನಾಲ್ಡ್ ಯಂಗ್ ನಡುವಿನ ಪಂದ್ಯವೂ ಬುಧವಾರ ಅರ್ಧದಲ್ಲೇ ಮೊಟಕುಗೊಂಡಿತು. ಈ ವೇಳೆ ಮರ‌್ರೆ 1-2 ರಲ್ಲಿ ಹಿನ್ನಡೆ ಅನುಭವಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.