ADVERTISEMENT

ಅಮೆರಿಕ ತೆರಿಗೆ ನಿರ್ಬಂಧ ಪರಿಶೀಲನೆ

ಪಿಟಿಐ
Published 11 ಮಾರ್ಚ್ 2018, 19:30 IST
Last Updated 11 ಮಾರ್ಚ್ 2018, 19:30 IST

ನವದೆಹಲಿ: ಉಕ್ಕು ಮತ್ತು ಅಲ್ಯುಮಿನಿಯಂ ಆಮದು ನಿರ್ಬಂಧಿಸಲು ಗರಿಷ್ಠ ಪ್ರಮಾಣದ ತೆರಿಗೆ ವಿಧಿಸುವ ಅಮೆರಿಕದ ನಿರ್ಧಾರದಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಕೇಂದ್ರ ವಾಣಿಜ್ಯ ಸಚಿವಾಲಯ ಪರಿಶೀಲಿಸುತ್ತಿದೆ.

ಭಾರತದಿಂದ ವರ್ಷಕ್ಕೆ  ₹1.30 ಲಕ್ಷ ಕೋಟಿ ಮೌಲ್ಯದ ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪನ್ನಗಳನ್ನು ಅಮೆರಿಕಕ್ಕೆ ರಫ್ತು ಮಾಡಲಾಗುತ್ತಿದೆ. ಹೀಗಾಗಿ  ಈ ನಿರ್ಧಾರದಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.

ಗರಿಷ್ಠ ಪ್ರಮಾಣದ ತೆರಿಗೆ ವಿಧಿಸುವುದರಿಂದ ಅಮೆರಿಕ ಮಾರುಕಟ್ಟೆಯಲ್ಲಿ ಈ ಲೋಹಗಳ ದರ ದುಬಾರಿಯಾಗಲಿದೆ. ಇದು ದೇಶಿ ಮಾರುಕಟ್ಟೆಯ ಸರಕು, ಉತ್ಪನ್ನಗಳ ಮೇಲೂ ಪರಿಣಾಮ ಬೀರಲಿದೆ.

ADVERTISEMENT

ಅಮೆರಿಕದ ಈ ನಿರ್ಧಾರದ ಬಗ್ಗೆ ವಿಶ್ವ ವ್ಯಾಪಾರ ಸಂಘಟನೆಯಲ್ಲಿ (ಡಬ್ಲ್ಯುಟಿಒ) ಚರ್ಚಿಸಲು ಯಾವುದೇ ದೇಶ ಮುಂದಾದರೆ, ಭಾರತವೂ ಆ ರಾಷ್ಟ್ರದೊಂದಿಗೆ ಕೈ ಜೋಡಿಸಲು ಸಿದ್ಧವಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ವಿಶ್ವ ವ್ಯಾಪಾರ ಸಂಘಟನೆಯ ನಿಯಮಗಳ ಪ್ರಕಾರ, ಯಾವುದಾದರೂ ಒಂದು ರಾಷ್ಟ್ರ ಬಹುಪಕ್ಷೀಯ ವ್ಯಾಪಾರ ಒಪ್ಪಂದಗಳಿಗೆ ಧಕ್ಕೆಯಾಗುವಂತಹ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ನಿಯಮಗಳಿಗೆ ವಿರುದ್ಧವಾದ ನಿರ್ಧಾರಗಳನ್ನು ತೆಗೆದುಕೊಂಡರೆ ಅದನ್ನು ಸದಸ್ಯ ರಾಷ್ಟ್ರಗಳು ಪ್ರಶ್ನಿಸಲು ಅವಕಾಶವಿದೆ.

‘ವಿಶ್ವ ವ್ಯಾಪಾರ ಸಂಘಟನೆಯ ಒಪ್ಪಂದಗಳನ್ನೂ ಮೀರಿ ಟ್ರಂಪ್‌ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವು ಜಾಗತಿಕ ಕಳವಳಕ್ಕೆ ಎಡೆಮಾಡಿಕೊಡಲಿದೆ.

‘ಭಾರತವೂ ಈ ಹಿಂದೆ ಕೆಲವು ಸರಕು ಮತ್ತು  ಉತ್ಪನ್ನಗಳ ಮೇಲೆ ಅಧಿಕ ಪ್ರಮಾಣದ ತೆರಿಗೆ ವಿಧಿಸಿದೆ. ಆದರೆ ಎಂದೂ ನಿಯಮಗಳನ್ನು ಮೀರಿಲ್ಲ’ ಎಂದು ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರೀಟಾ ಟಿಯೊಟಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.