ADVERTISEMENT

ಆಟದ ಅಂಗಳಕ್ಕೆ ಮರಳಿದ ಅಜಯ್‌ ಜಯರಾಮ್‌

ಚೀನಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸ್ಪರ್ಧೆ

ಪಿಟಿಐ
Published 9 ಏಪ್ರಿಲ್ 2018, 20:22 IST
Last Updated 9 ಏಪ್ರಿಲ್ 2018, 20:22 IST
ಅಜಯ್‌ ಜಯರಾಮ್‌
ಅಜಯ್‌ ಜಯರಾಮ್‌   

ಹೈನಾನ್‌, ಚೀನಾ: ಗಾಯದಿಂದ ಚೇತರಿಸಿಕೊಂಡಿರುವ ಭಾರತದ ಬ್ಯಾಡ್ಮಿಂಟನ್‌ ಆಟಗಾರ ಅಜಯ್‌ ಜಯರಾಮ್‌ ಅವರು  ಮಂಗಳವಾರದಿಂದ ಆರಂಭವಾಗುವ ಚೀನಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ.

ತೊಡೆ ಸ್ನಾಯು ನೋವಿನಿಂದಾಗಿ ಅಜಯ್‌ ಅವರು ಸುಮಾರು ಎಂಟು ತಿಂಗಳ ಕಾಲ ಆಟದಿಂದ ದೂರವಿದ್ದರು.

ಕಳೆದ ಆಗಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ ನಂತರ ಹಲವು ರೀತಿಯ ಗಾಯಗಳಿಗೆ ಅವರು ಒಳಗಾಗಿದ್ದರು. ಇದರಿಂದಾಗಿ, ಕೊರಿಯಾ ಹಾಗೂ ಜಪಾನ್‌ಗಳಲ್ಲಿ ನಡೆದ ಬ್ಯಾಡ್ಮಿಂಟನ್‌ ಟೂರ್ನಿಗಳಲ್ಲಿ ಸ್ಪರ್ಧಿಸಿರಲಿಲ್ಲ. ಹಾಗೆಯೇ, ಮಂಡಿ ನೋವಿನಿಂದಾಗಿ ಡೆನ್ಮಾರ್ಕ್‌ ಹಾಗೂ ಫ್ರ್ಯಾನ್ಸ್‌ ಓಪನ್‌ ಟೂರ್ನಿಗಳಿಂದಲೂ ತಪ್ಪಿಸಿಕೊಂಡಿದ್ದರು.

ADVERTISEMENT

‘ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಪರ್ಧಿಸಿ ಎಂಡು ತಿಂಗಳಾಗಿವೆ. ಈ ಎಂಟು ತಿಂಗಳು ನನ್ನ ಕಷ್ಟದ ಸಮಯವಾಗಿತ್ತು. ಸೋಮವಾರ ರಾತ್ರಿ ಚೀನಾಗೆ ಹೊರಟಿದ್ದೇನೆ. ದೀರ್ಘ ಅವಧಿಯ ನಂತರ ಜಾಗತಿಕ ಮಟ್ಟದ ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಏನು ನಿರೀಕ್ಷೆ ಮಾಡಬೇಕು ಎಂಬುದು ಅಸ್ಪಷ್ಟವಾಗಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. 

‘ಎದುರಾಳಿಯ ಸವಾಲು ಮೆಟ್ಟಿ ನಿಲ್ಲುವುದೇ ನನ್ನ ದೈಹಿಕ ಸಾಮರ್ಥ್ಯದ ಪರೀಕ್ಷೆಯಾಗಲಿದೆ. ನೋವು ತೀವ್ರವಾಗಿದ್ದ ಕಾರಣ ಚೇತರಿಕೆಗೆ ಸಮಯ ಹಿಡಿಯಿತು. ಆದರೆ, ಕೆಲವು ತಿಂಗಳಿಂದ ನನ್ನ ಕಾಲು ಚಿಕಿತ್ಸೆಗೆ ಸ್ಪಂದಿಸಿದೆ. ನನ್ನ ಫಿಸಿಯೋ ಅನುಜಾ ಅವರ ಪ್ರಯತ್ನ ಮತ್ತು ತಾಳ್ಮೆಗೆ ನಾನು ಕೃತಜ್ಞ’ ಎಂದು ತಿಳಿಸಿದ್ದಾರೆ.

ಅಜಯ್‌ ಅವರು ಇಂದು ನಡೆಯುವ ತಮ್ಮ ಮೊದಲ ಪಂದ್ಯದಲ್ಲಿ ಚೀನಾದ ಸುನ್‌ ಕ್ಸಿಯಾಂಗ್‌ ಅವರನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.