ADVERTISEMENT

ಆತಿಥೇಯ ಬೌಲರ್‌ಗಳ ಕೈಚಳಕ

ಮೊದಲ ಟಿ–20 ಪಂದ್ಯ; ಬೂಮ್ರಾ, ಕುಲದೀಪ್‌ಗೆ ತಲಾ ಎರಡು ವಿಕೆಟ್‌; ‌ಭಾರತಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 19:35 IST
Last Updated 7 ಅಕ್ಟೋಬರ್ 2017, 19:35 IST
ರಾಂಚಿಯಲ್ಲಿ ಶನಿವಾರ ನಡೆದ ಮೊದಲ ಟಿ–20 ಪಂದ್ಯದಲ್ಲಿ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಔಟಾದಾಗ ಭಾರತ ತಂಡದ ಆಟಗಾರರು ಸಂಭ್ರಮಿಸಿದರು  ಎಎಫ್‌ಪಿ ಚಿತ್ರ
ರಾಂಚಿಯಲ್ಲಿ ಶನಿವಾರ ನಡೆದ ಮೊದಲ ಟಿ–20 ಪಂದ್ಯದಲ್ಲಿ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಔಟಾದಾಗ ಭಾರತ ತಂಡದ ಆಟಗಾರರು ಸಂಭ್ರಮಿಸಿದರು ಎಎಫ್‌ಪಿ ಚಿತ್ರ   

ರಾಂಚಿ : ವೇಗಿ ಜಸ್‌ಪ್ರೀತ್‌ ಬೂಮ್ರಾ (17ಕ್ಕೆ2) ಮತ್ತು ಕುಲ ದೀಪ್‌ ಯಾದವ್‌ (16ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಭಾರತ ತಂಡ ಮೊದಲ ಟಿ–20 ಪಂದ್ಯ ದಲ್ಲಿ 9 ವಿಕೆಟ್‌ಗಳಿಂದ ಆಸ್ಟ್ರೇಲಿಯಾದ ಸವಾಲು ಮೀರಿ ನಿಂತಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1–0ರ ಮುನ್ನಡೆ ತನ್ನದಾಗಿಸಿಕೊಂಡಿತು.

ಜೆ.ಎಸ್‌.ಸಿ.ಎ ಕ್ರೀಡಾಂಗಣದಲ್ಲಿ ಶನಿವಾರ ಮೊದಲು ಬ್ಯಾಟ್‌ ಮಾಡಿದ ಕಾಂಗರೂಗಳ ನಾಡಿನ ತಂಡ 18.4 ಓವರ್‌ಗಳಲ್ಲಿ 8 ವಿಕೆಟ್‌ಗೆ 118ರನ್‌ ಕಲೆಹಾಕಿತ್ತು. ಈ ವೇಳೆ ಧಾರಾಕಾರ ಮಳೆ ಸುರಿದಿದ್ದರಿಂದ ಗಂಟೆಗೂ ಹೆಚ್ಚು ಸಮಯ ಆಟ ಸ್ಥಗಿತಗೊಳಿಸಲಾಗಿತ್ತು.

ಮಳೆ ನಿಂತ ಬಳಿಕ ಭಾರತದ ಗೆಲುವಿಗೆ ಡಕ್ವರ್ಥ್‌ ಲೂಯಿಸ್‌ ನಿಯ ಮದ ಅನ್ವಯ 6 ಓವರ್‌ಗಳಲ್ಲಿ 48ರನ್‌ ಗಳ ಪರಿಷ್ಕೃತ ಗುರಿ ನೀಡಲಾಯಿತು. ಇದನ್ನು ಕೊಹ್ಲಿ ಪಡೆ 5.3 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ADVERTISEMENT

ಆರಂಭಿಕ ಸಂಕಷ್ಟ: ಗುರಿ ಬೆನ್ನಟ್ಟಿದ ಆತಿಥೇಯರಿಗೆ ಆರಂಭಿಕ ಸಂಕಷ್ಟ ಎದುರಾಯಿತು. ರೋಹಿತ್‌ ಶರ್ಮಾ (11;7ಎ, 1ಬೌಂ, 1ಸಿ) ಎರಡನೇ ಓವರ್‌ನಲ್ಲಿ ನೇಥನ್‌ ಕೌಲ್ಟರ್‌ ನೈಲ್‌ಗೆ ವಿಕೆಟ್‌ ನೀಡಿದರು.

ಬಳಿಕ ಒಂದಾದ ಶಿಖರ್‌ ಧವನ್‌ (ಔಟಾಗದೆ 15; 12ಎ, 3ಬೌಂ) ಮತ್ತು ನಾಯಕ ಕೊಹ್ಲಿ (ಔಟಾಗದೆ 22; 14ಎ, 3ಬೌಂ) ಮುರಿಯದ ಎರಡನೇ ವಿಕೆಟ್‌ಗೆ 38ರನ್‌ ಗಳಿಸಿ ತವರಿನ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು.

ನಡೆಯದ ವಾರ್ನರ್‌ ಆಟ: ಬ್ಯಾಟಿಂಗ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡ ಆರಂಭಿಕ ಸಂಕಷ್ಟ ಎದುರಿಸಿತು. 5 ಎಸೆತಗಳಲ್ಲಿ ಎರಡು ಬೌಂಡರಿ ಸಹಿತ 8ರನ್‌ ಗಳಿಸಿದ್ದ ವಾರ್ನರ್ ಮೊದಲ ಓವರ್‌ನಲ್ಲಿ ಭುವನೇಶ್ವರ್‌ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದರು. ಭುವಿ ಹಾಕಿದ ಮೂರು ಮತ್ತು ನಾಲ್ಕನೇ ಎಸೆತಗಳನ್ನು ಕ್ರಮವಾಗಿ ಪಾಯಿಂಟ್‌ ಮತ್ತು ಥರ್ಡ್‌ ಮ್ಯಾನ್‌ನತ್ತ ಬೌಂಡರಿ ಗಳಿಸಿದ ವಾರ್ನರ್ ಮರು ಎಸೆತದಲ್ಲಿ ಬೌಲ್ಡ್‌ ಆದರು.

ಬಳಿಕ ಆ್ಯರನ್‌ ಫಿಂಚ್‌ (42; 30ಎ, 4ಬೌಂ, 1ಸಿ) ಗುಡುಗಿದರು. ಏಕದಿನ ಸರಣಿಯಲ್ಲಿ ಮಿಂಚಿದ್ದ ಅವರು ಹಾರ್ದಿಕ್‌ ಪಾಂಡ್ಯ ಹಾಕಿದ ಮೂರನೇ ಓವರ್‌ನ ಐದು ಮತ್ತು ಆರನೇ ಎಸೆತಗಳನ್ನು ಬೌಂಡರಿಗಟ್ಟಿ ಕಳೆ ಗುಂದಿದ್ದ ಪ್ರವಾಸಿ ಪಡೆಯ ಇನಿಂಗ್ಸ್‌ಗೆ ರಂಗು ತುಂಬಿದರು. ಹೀಗಾಗಿ ಆರನೇ ಓವರ್‌ನ ಅಂತ್ಯಕ್ಕೆ ಆಸ್ಟ್ರೇಲಿಯಾ 1ವಿಕೆಟ್‌ಗೆ 49ರನ್‌ ಕಲೆಹಾಕಿತ್ತು.

ಮರು ಓವರ್‌ನಲ್ಲಿ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಮೋಡಿ ಮಾಡಿದರು. ಏಕದಿನ ಸರಣಿಯಲ್ಲಿ ಅವರು ಗ್ಲೆನ್‌ ಮ್ಯಾಕ್ಸ್‌ವೆಲ್‌ (17; 16ಎ, 2ಬೌಂ) ಅವರನ್ನು ಮೂರು ಬಾರಿ ಔಟ್‌ ಮಾಡಿದ್ದರು. ಹೀಗಾಗಿ ಕೊಹ್ಲಿ ಚಾಹಲ್‌ ಕೈಗೆ ಚೆಂಡು ನೀಡಿದರು. ಅವರ ತಂತ್ರ ಫಲಿಸಿತು.

ಮೊದಲ ಎಸೆತದಲ್ಲಿ ಎರಡು ರನ್‌ ಗಳಿಸಿದ ಮ್ಯಾಕ್ಸ್‌ವೆಲ್, ಮರು ಎಸೆತದಲ್ಲಿ ಬೌಂಡರಿ ಗಳಿಸಿ ಅಪಾಯಕಾರಿ ಯಾಗುವ ಲಕ್ಷಣ ತೋರಿದ್ದರು. ಆದರೆ ಮೂರನೇ ಎಸೆತದಲ್ಲಿ ಚಾಹಲ್‌ ಪ್ರಯೋಗಿಸಿದ ಸ್ಪಿನ್‌ ಅಸ್ತ್ರಕ್ಕೆ ಗ್ಲೆನ್‌ ತಲೆಬಾಗಿದರು. ಅವರು ಶಾರ್ಟ್‌ ಮಿಡ್‌ವಿಕೆಟ್‌ನತ್ತ ಬಾರಿಸಿದ ಚೆಂಡನ್ನು ಜಸ್‌ಪ್ರೀತ್‌ ಬೂಮ್ರಾ ಸುಲಭವಾಗಿ ಹಿಡಿತಕ್ಕೆ ಪಡೆದರು.

ಇದರ ಬೆನ್ನಲ್ಲೇ ಫಿಂಚ್‌ ಕೂಡ ಪೆವಿಲಿಯನ್‌ ಸೇರಿಕೊಂಡರು. 10ನೇ ಓವರ್‌ನಲ್ಲಿ ಅವರು ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ಗೆ ವಿಕೆಟ್‌ ನೀಡಿದರು.

ಆ ನಂತರ ಬಂದ ಟ್ರಾವಿಸ್‌ ಹೆಡ್‌ (9; 16ಎ) ಮತ್ತು ಮೊಯಿಸಸ್‌ ಹೆನ್ರಿಕ್ಸ್‌ (8; 9ಎ, 1ಬೌಂ) ಅವರಿಗೆ ಕ್ರಮವಾಗಿ ಹಾರ್ದಿಕ್‌ ಪಾಂಡ್ಯ ಹಾಗೂ ಕುಲದೀಪ್‌ ಯಾದವ್‌ ರಟ್ಟೆ ಅರಳಿಸಲು ಅವಕಾಶ ನೀಡಲಿಲ್ಲ. ಇವರು ಔಟಾದಾಗ ವಾರ್ನರ್‌ ಪಡೆಯ ಖಾತೆಯಲ್ಲಿ 89 ರನ್‌ಗಳು ಇದ್ದವು.

ಆ ನಂತರ ತಂಡ ಕುಸಿತದ ಹಾದಿ ಹಿಡಿಯಿತು. ಡೇನಿಯಲ್‌ ಕ್ರಿಸ್ಟಿಯನ್‌ (9;13ಎ) ರನ್‌ಔಟ್‌ ಆದರೆ ನೇಥನ್ ಕೌಲ್ಟರ್‌ ನೈಲ್‌ (1) ಅವರನ್ನು ಜಸ್‌ಪ್ರೀತ್‌ ಬೂಮ್ರಾ ಬೌಲ್ಡ್‌ ಮಾಡಿದರು.

ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಟಿಮ್‌ ಪೇನ್‌ (17; 16ಎ, 1ಬೌಂ, 1ಸಿ) ತುಂಬು ವಿಶ್ವಾಸದಿಂದ ಬ್ಯಾಟ್‌ ಬೀಸಿದರು. ಭಾರತದ ಬೌಲರ್‌ಗಳನ್ನು ಕೆಲ ಕಾಲ ದಿಟ್ಟವಾಗಿ ಎದುರಿಸಿದ ಅವರು ಆಸ್ಟ್ರೇಲಿಯಾ ತಂಡ ಶತಕದ ಗಡಿ ದಾಟುವಂತೆ ನೋಡಿಕೊಂಡರು.

ಭಾರತದ ಪರ ಬೂಮ್ರಾ ಮತ್ತು ಕುಲದೀಪ್‌ ಯಾದವ್‌ ಯಶಸ್ವಿ ಬೌಲರ್‌ ಎನಿಸಿದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: 18.4 ಓವರ್‌ಗಳಲ್ಲಿ 8 ವಿಕೆಟ್‌ಗೆ 118 (ಡೇವಿಡ್‌ ವಾರ್ನರ್ 8, ಆ್ಯರನ್‌ ಫಿಂಚ್‌ 42, ಗ್ಲೆನ್‌ ಮ್ಯಾಕ್ಸ್‌ವೆಲ್‌ 17, ಟ್ರಾವಿಸ್‌ ಹೆಡ್‌ 9, ಮೊಯಿಸಸ್‌ ಹೆನ್ರಿಕ್ಸ್‌ 8, ಡೇನಿಯಲ್‌ ಕ್ರಿಸ್ಟಿಯನ್‌ 9, ಟಿಮ್‌ ಪೇನ್‌ 17, ಆ್ಯಡಮ್‌ ಜಂಪಾ ಔಟಾಗದೆ 4; ಭುವನೇಶ್ವರ್ ಕುಮಾರ್‌ 28ಕ್ಕೆ1, ಜಸ್‌ಪ್ರೀತ್‌ ಬೂಮ್ರಾ 17ಕ್ಕೆ2, ಹಾರ್ದಿಕ್‌ ಪಾಂಡ್ಯ 33ಕ್ಕೆ1, ಯಜುವೇಂದ್ರ ಚಾಹಲ್‌ 23ಕ್ಕೆ1, ಕುಲದೀಪ್‌ ಯಾದವ್‌ 16ಕ್ಕೆ2); ಭಾರತ: 5.3 ಓವರ್‌ಗಳಲ್ಲಿ 1 ವಿಕೆಟ್‌ಗೆ 49 (ರೋಹಿತ್‌ ಶರ್ಮಾ 11, ಶಿಖರ್‌ ಧವನ್‌ ಔಟಾಗದೆ 15, ವಿರಾಟ್‌ ಕೊಹ್ಲಿ ಔಟಾಗದೆ 22; ನೇಥನ್ ಕೌಲ್ಟರ್‌ ನೈಲ್ 20ಕ್ಕೆ1).

ಫಲಿತಾಂಶ: ಡಕ್ವರ್ಥ್ ಲೂಯಿಸ್‌ ನಿಯಮದ ಅನ್ವಯ ಭಾರತಕ್ಕೆ 9 ವಿಕೆಟ್‌ ಗೆಲುವು. ಹಾಗೂ 3 ಪಂದ್ಯಗಳ ಸರಣಿಯಲ್ಲಿ 1–0ರ ಮುನ್ನಡೆ. 

ಪಂದ್ಯಶ್ರೇಷ್ಠ: ಕುಲದೀಪ್‌ ಯಾದವ್‌.

ಸ್ಕೋರ್‌ ವಿವರ

ಆಸ್ಟ್ರೇಲಿಯಾ 8ಕ್ಕೆ118 (18.4 ಓವರ್‌ಗಳಲ್ಲಿ)

ಭಾರತ 1ಕ್ಕೆ49 (5.3 ಓವರ್‌ಗಳಲ್ಲಿ)

ಫಲಿತಾಂಶ: ಭಾರತಕ್ಕೆ ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ 9 ವಿಕೆಟ್‌ಗಳ ಗೆಲುವು.

3 ಪಂದ್ಯಗಳ ಸರಣಿಯಲ್ಲಿ 1–0ರಲ್ಲಿ ಮುನ್ನಡೆ.

ಕುಲದೀಪ್‌ ಬೌಲಿಂಗ್‌

ಓವರ್‌ 4

ರನ್‌ 16

ವಿಕೆಟ್‌ 2

ಎಕಾನಮಿ 4.00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.