ADVERTISEMENT

ಆಯ್ಕೆ 22 ಆಟಗಾರರನ್ನು ಆಯ್ಕೆ ಮಾಡಲಾಗುವುದು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಗೆ ಭಾರತ ಹಾಕಿ ತಂಡ ಆಯ್ಕೆ ಮಾಡಲು ರಾಷ್ಟ್ರೀಯ ಆಯ್ಕೆದಾರರ ಉಪಸ್ಥಿತಿಯಲ್ಲಿ ಸೋಮವಾರ ಒಂದು ದಿನದ ಆಯ್ಕೆ ಟ್ರಯಲ್ಸ್ ನಡೆಯಿತು.

ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ನಡೆದ ಆಯ್ಕೆ ಟ್ರಯಲ್ಸ್ ವೇಳೆ ಆಯ್ಕೆದಾರರಾದ ಬಿ.ಪಿ.ಗೋವಿಂದ, ಎ.ಬಿ.ಸುಬ್ಬಯ್ಯ, ತೋಯಿಬಾ ಸಿಂಗ್, ಸೈಯದ್ ಅಲಿ ಹಾಗೂ ಸರ್ಕಾರದ ವೀಕ್ಷಕ ದಿಲಿಪ್ ಟರ್ಕಿ ಉಪಸ್ಥಿತರಿದ್ದರು.

ಅಕ್ಟೋಬರ್ 12ರಂದು ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಆರಂಭಿಸಲಿದೆ. ಪ್ರವಾಸದ ವೇಳೆ ಹೊಸದಾಗಿ ರೂಪಿಸಲಾಗಿರುವ ತಲಾ 9 ಆಟಗಾರರನ್ನೊಳಗೊಂಡ ಪಂದ್ಯಗಳ ಎರಡು ಟೂರ್ನಿ ಹಾಗೂ ಅಂತರರಾಷ್ಟ್ರೀಯ ಪ್ರದರ್ಶನ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ, ಆಸ್ಟ್ರೇಲಿಯಾ `ಎ~, ಪಾಕಿಸ್ತಾನ ಹಾಗೂ ಕೊರಿಯಾ ತಂಡಗಳು ಪಾಲ್ಗೊಳ್ಳಲಿವೆ.

`ಆಯ್ಕೆ ಟ್ರಯಲ್ಸ್ ಯಶಸ್ವಿಯಾಗಿ ನಡೆಯಿತು. ಕೆಲ ಆಟಗಾರರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ದೀರ್ಘ ಪ್ರವಾಸವಾಗಿರುವುದರಿಂದ ನಾವು 22 ಮಂದಿ ಆಟಗಾರರನ್ನು ಆಯ್ಕೆ ಮಾಡುತ್ತೇವೆ~ ಎಂದು ಹಾಕಿ ಇಂಡಿಯಾ ಕಾರ್ಯಕಾರಿ ನಿರ್ದೇಶಕ ಅನುಪಮ್ ಗುಲಟಿ ನುಡಿದರು.

ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಒಲಿಂಪಿಕ್ಸ್ ಅರ್ಹತಾ ಸುತ್ತಿಗೆ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ಪಾಕಿಸ್ತಾನ ಎದುರು ಟೆಸ್ಟ್ ಸರಣಿ ಆಯೋಜಿಸಲಾಗುವುದು ಎಂದು ಭಾನುವಾರ ಕೋಚ್ ಮೈಕಲ್ ನಾಬ್ಸ್ ತಿಳಿಸಿದ್ದರು. ಆದರೆ ಈ ಬಗ್ಗೆ ಹೆಚ್ಚು ಮಾತನಾಡಲು ಗುಲಟಿ ಇಷ್ಟಪಡಲಿಲ್ಲ.

`ಹಾಕಿ ಟೆಸ್ಟ್ ಸರಣಿ ಆಡಲು ಪಾಕಿಸ್ತಾನ ನಮ್ಮನ್ನು ಸಂಪರ್ಕಿಸಿರುವುದು ನಿಜ. ಆದರೆ ಈ ಸಂಬಂಧ ನಮಗೆ ಕೇಂದ್ರದಿಂದ ಒಪ್ಪಿಗೆಬೇಕು~ ಎಂದರು.ಬೆಂಗಳೂರಲ್ಲಿ

ತರಬೇತಿ ಕೇಂದ್ರ: ಬೆಂಗಳೂರಿನಲ್ಲಿ ಹಾಕಿ ತರಬೇತಿ ಕೇಂದ್ರ ಸ್ಥಾಪಿಸುವ ವಿಷಯವನ್ನು ಹಾಕಿ ಇಂಡಿಯಾ ಕಾರ್ಯಕಾರಿ ನಿರ್ದೇಶಕ ಅನುಪಮ್ ಗುಲಟಿ ಖಚಿತಪಡಿಸಿದ್ದಾರೆ. `ಬೆಂಗಳೂರಿನಲ್ಲಿ ಅಗತ್ಯ ಸೌಲಭ್ಯಗಳಿವೆ. ಭಾರತ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಪ್ರಧಾನ ನಿರ್ದೇಶಕ ದೇಶ್ ದೀಪಕ್ ವರ್ಮ ಕೂಡ ಇಲ್ಲಿಯೇ ಹಾಕಿ ಕೇಂದ್ರ ಸ್ಥಾಪಿಸಲು ಒಪ್ಪಿದ್ದಾರೆ~ ಎಂದು ಅವರು ನುಡಿದರು.

ಅಖ್ತರ್ ಕ್ಷಮೆಯಾಚಿಸಬೇಕು: ದೇಶಮುಖ್

ನವದೆಹಲಿ (ಐಎಎನ್‌ಎಸ್): ಸಲ್ಲದ ಟೀಕೆ ಮಾಡಿರುವ ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಖ್ತರ್ ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಅವರ ಕ್ಷಮೆಯಾಚಿಸಬೇಕು ಎಂದು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಅಧ್ಯಕ್ಷ ಹಾಗೂ ಕೇಂದ್ರ ಸಚಿವ ವಿಲಾಸರಾವ್ ದೇಶಮುಖ್ ಆಗ್ರಹಿಸಿದ್ದಾರೆ.

`ಅಖ್ತರ್ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಸಚಿನ್ ವಿಶ್ವ ದರ್ಜೆಯ ಬ್ಯಾಟ್ಸ್‌ಮನ್. ಅನೇಕ ದಾಖಲೆಗಳು ಅವರ ಹೆಸರಿನಲ್ಲಿವೆ. ಹಾಗಾಗಿ ಸಚಿನ್ ಅವರ ಕ್ಷಮೆಯಾಚಿಸಬೇಕು~ ಎಂದು ದೇಶಮುಖ್ ನುಡಿದಿದ್ದಾರೆ.

`ಪಂದ್ಯವನ್ನು ಗೆಲ್ಲಿಸಿಕೊಡುವಂತಹ ಕಲೆ ಸಚಿನ್ ಹಾಗೂ ದ್ರಾವಿಡ್ ಅವರ ಬಳಿ ಇಲ್ಲ. ಅಷ್ಟು ಮಾತ್ರವಲ್ಲದೇ, 2006ರಲ್ಲಿ ಫೈಸಲಾಬಾದ್‌ನಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ನನ್ನ ಎಸೆತಗಳನ್ನು ಎದುರಿಸಲು ಸಚಿನ್ ಪರದಾಡಿದ್ದರು~ ಎಂದು `ಕಾಂಟ್ರವರ್ಸಿಯಲಿ ಯುವರ್ಸ್‌~ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ರಾವಲ್ಪಿಂಡಿ   ಎಕ್ಸ್‌ಪ್ರೆಸ್ ಖ್ಯಾತಿಯ ಅಖ್ತರ್ ಟೀಕಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT