ADVERTISEMENT

ಆಸ್ಟ್ರೇಲಿಯಾಕ್ಕೆ ಗೆಲುವಿನ ಹಂಬಲ

ಇಂದು ಬಾಂಗ್ಲಾದೇಶ ವಿರುದ್ಧ ಹೋರಾಟ

ಪಿಟಿಐ
Published 4 ಜೂನ್ 2017, 19:30 IST
Last Updated 4 ಜೂನ್ 2017, 19:30 IST
ಅಭ್ಯಾಸನಿರತ ಸ್ಟೀವನ್ ಸ್ಮಿತ್ (ಬಲ)
ಅಭ್ಯಾಸನಿರತ ಸ್ಟೀವನ್ ಸ್ಮಿತ್ (ಬಲ)   

ಲಂಡನ್‌: ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿರುವ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ತಂಡ ಈ ಹಾದಿಯಲ್ಲಿ ಮತ್ತೊಂದು ಸವಾಲಿಗೆ ಸನ್ನದ್ಧವಾಗಿದೆ. ಸೋಮವಾರ ನಡೆಯುವ ‘ಎ’ ಗುಂಪಿನ ಹೋರಾಟದಲ್ಲಿ ಸ್ಟೀವನ್‌ ಸ್ಮಿತ್‌ ಪಡೆ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ.

ಟೂರ್ನಿಯ ತನ್ನ ಮೊದಲ ಪಂದ್ಯ ದಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್‌ ವಿರುದ್ಧ ಸೆಣಸಿತ್ತು. ಮಳೆಯ ಕಾರಣ 45 ಓವರ್‌ಗಳಿಗೆ ಸೀಮಿತಗೊಳಿಸಿದ್ದ ಪಂದ್ಯ ದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಕಿವೀಸ್‌ ನಾಡಿನ ತಂಡ 291ರನ್‌ ಗಳಿಸಿ ಆಲ್‌ಔಟ್‌ ಆಗಿತ್ತು.

ಗೆಲುವಿಗೆ 33 ಓವರ್‌ಗಳಲ್ಲಿ 235ರನ್‌ಗಳ ಪರಿಷ್ಕೃತ ಗುರಿ ಪಡೆದಿದ್ದ ಕಾಂಗರೂಗಳ ನಾಡಿನ ಬಳಗ 9 ಓವರ್‌ಗಳಲ್ಲಿ 53 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟ ಅನುಭವಿಸಿತ್ತು. ಈ ಹಂತದಲ್ಲಿ ಮಳೆಯ ಆಟ ನಡೆದಿದ್ದರಿಂದ ಸ್ಮಿತ್‌ ಪಡೆ ಸೋಲಿನಿಂದ ಪಾರಾಗಿತ್ತು.

ADVERTISEMENT

ಘಟಾನುಘಟಿಗಳ ಕಣಜದಂತಿರುವ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ಐಪಿಎಲ್‌ನಲ್ಲಿ ‘ರನ್‌  ಶಿಖರ’ ನಿರ್ಮಿಸಿದ್ದ ಡೇವಿಡ್‌ ವಾರ್ನರ್‌ ಮತ್ತು ಆ್ಯರನ್‌ ಫಿಂಚ್‌ ತಂಡಕ್ಕೆ ಅಬ್ಬರದ ಆರಂಭ ಒದಗಿಸಬಲ್ಲರು.

ಕ್ರಿಸ್‌ ಲಿನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ನಾಯಕ ಸ್ಮಿತ್‌ ಮತ್ತು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಮ್ಯಾಥ್ಯೂ ವೇಡ್‌ ಅವರು ಮಧ್ಯಮ ಕ್ರಮಾಂಕದಲ್ಲಿ ತಂಡದ ಆಧಾರಸ್ತಂಭಗಳಾಗಿದ್ದಾರೆ. ಮೊಸಸ್‌ ಹೆನ್ರಿಕ್ಸ್‌, ಮಿಷೆಲ್‌ ಸ್ಟಾರ್ಕ್‌ ಮತ್ತು ಟ್ರಾವಿಸ್‌ ಹೆಡ್‌ ಅವರೂ ಬಾಂಗ್ಲಾ ಬೌಲರ್‌ಗಳನ್ನು ಕಾಡುವಷ್ಟು  ಸಮರ್ಥರಾಗಿದ್ದಾರೆ. ಆದರೆ ಬೌಲಿಂಗ್‌ನಲ್ಲಿ ತಂಡ ಸುಧಾರಿತ ಸಾಮರ್ಥ್ಯ ತೋರುವುದು ಅಗತ್ಯವಾಗಿದೆ.

ವೇಗಿಗಳಾದ ಮಿಷೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಜಲ್‌ವುಡ್‌ ಮತ್ತು ಜಾನ್‌ ಹಾಸ್ಟಿಂಗ್ಸ್‌ ಅವರು ನ್ಯೂಜಿಲೆಂಡ್‌ ವಿರುದ್ಧ ದುಬಾರಿಯಾಗಿದ್ದರು. ಇವರು ಜವಾಬ್ದಾರಿ ಅರಿತು ಆಡಬೇಕಿದೆ.

ಬೇಟೆಗೆ ಕಾದಿರುವ ಹುಲಿಗಳು: ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತು ಹಸಿದ ಹುಲಿಗಳಂತಾಗಿರುವ ಬಾಂಗ್ಲಾ ದೇಶದವರು ಕಾಂಗರೂಗಳ ಬೇಟೆಗೆ ಕಾದಿದ್ದಾರೆ. ಸೆಮಿಫೈನಲ್‌ ಆಸೆ ಜೀವಂತವಾಗಿಟ್ಟುಕೊಳ್ಳಬೇಕಾದರೆ ಬಾಂಗ್ಲಾ ತಂಡ ಈ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯ ವಾಗಿದೆ.

ಆಂಗ್ಲರ ನಾಡಿನ ವಿರುದ್ಧದ ಪಂದ್ಯದಲ್ಲಿ ಮಷ್ರಫೆ ಮೊರ್ತಜ ಪಡೆ 305ರನ್‌ ಗಳಿಸಿಯೂ ನಿರಾಸೆ ಕಂಡಿತ್ತು. ಆರಂಭಿಕ ಆಟಗಾರ ತಮಿಮ್‌ ಇಕ್ಬಾಲ್‌ ಶತಕ ದಾಖಲಿಸಿ ಮಿಂಚಿದ್ದರು. ಉತ್ತಮ ಲಯದಲ್ಲಿರುವ ಅವರು ಆಸ್ಟ್ರೇಲಿಯಾ ತಂಡದ ಬೌಲಿಂಗ್‌ ಶಕ್ತಿಗೂ ಪೆಟ್ಟು ನೀಡುವ ಉತ್ಸಾಹದಲ್ಲಿದ್ದಾರೆ.

ಮಹಮೂದುಲ್ಲಾ, ಶಕೀಬ್‌ ಅಲ್‌ ಹಸನ್‌, ಮುಷ್ಫಿಕರ್‌ ರಹೀಮ್‌, ಸೌಮ್ಯ ಸರ್ಕಾರ್‌ ಅವರೂ ಅಬ್ಬರಿಸಬೇಕಿದೆ. ಹಾಗಾದಲ್ಲಿ ಮಾತ್ರ ಕೆನ್ನಿಂಗ್‌ಟನ್‌ ಓವಲ್‌ ಅಂಗಳದಲ್ಲಿ ರನ್‌ ಮಳೆ ಸುರಿಯಲಿದೆ.

ಬೌಲಿಂಗ್‌ನಲ್ಲಿ ಬಾಂಗ್ಲಾ ತಂಡ ಗುಣಮಟ್ಟದ ಸಾಮರ್ಥ್ಯ ತೋರ ಬೇಕಿದೆ. ಹೊಸ ಚೆಂಡಿನೊಂದಿಗೆ ದಾಳಿಗಿಳಿಯಲಿ ರುವ ಮುಸ್ತಾಫಿಜುರ್‌ ರಹಮಾನ್‌, ಮೊಸಾದೆಕ್‌ ಹೊಸೇನ್‌, ಸುಂಜಮಲ್‌ ಇಸ್ಲಾಂ ಮತ್ತು ಮೆಹದಿ ಹಸನ್‌ ಅವರು ಕಾಂಗರೂಗಳ ನಾಡಿನ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಕಡಿವಾಣ ಹಾಕಬೇಕಿದೆ. ಆಗ ಮಾತ್ರ  ಬಾಂಗ್ಲಾ ತಂಡ ಗೆಲುವಿನ ಕನಸು ಕಾಣಬಹುದು.
ಆರಂಭ: ಸಂಜೆ 6ಕ್ಕೆ.
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.