ADVERTISEMENT

ಇತಿಹಾಸ ಬರೆದ ಕಪೂರ್

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 20:04 IST
Last Updated 25 ಡಿಸೆಂಬರ್ 2012, 20:04 IST

ಹುಬ್ಬಳ್ಳಿ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ 78 ವರ್ಷಗಳ ಇತಿಹಾಸದಲ್ಲಿ ಒಂದೇ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಕರ್ನಾಟಕದ ಮೊದಲ ಬ್ಯಾಟ್ಸ್‌ಮನ್      ಕುನಾಲ್ ಕಪೂರ್ ಸಾಧನೆಗೆ ಹುಬ್ಬಳ್ಳಿ ಸಾಕ್ಷಿಯಾಯಿತು.

ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಬಿ ಗುಂಪಿನ ಪಂದ್ಯದಲ್ಲಿ ಹರಿಯಾಣ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 106 ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 100 ಗಳಿಸಿದ ಕುನಾಲ್ ಹೊಸ ದಾಖಲೆ ಬರೆದರು.

ಈ ಋತುವಿನ ಐದನೇ ಪಂದ್ಯದಲ್ಲಿ ದೆಹಲಿ ವಿರುದ್ಧ ಪದಾರ್ಪಣೆ ಮಾಡಿದ್ದ ಕುನಾಲ್ ರಾಜನ್ ಕಪೂರ್‌ಗೆ ಹುಬ್ಬಳ್ಳಿಯದ್ದು ಮೂರನೇ ಪಂದ್ಯ ಮಾತ್ರ. ಆದರೆ ಅವರ ಆತ್ಮವಿಶ್ವಾಸದ ಆಟ ಎಲ್ಲರ ಗಮನ ಸೆಳೆಯಿತು.

ಮೊದಲ ಇನಿಂಗ್ಸ್‌ನಲ್ಲಿ ಅನುಭವಿ ಬ್ಯಾಟ್ಸ್‌ಮನ್‌ಗಳು ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸುತ್ತಿದ್ದರೆ, ಇನ್ನೊಂದೆಡೆ ಗಟ್ಟಿಯಾಗಿ ನಿಂತ ಕಲಾತ್ಮಕ ಆಟ ತೋರಿದ ಕುನಾಲ್, ಹುಬ್ಬಳ್ಳಿಯಲ್ಲಿ ಮೂರನೇ ಶತಕ ಗಳಿಸಿದ ಕರ್ನಾಟಕದ ಆಟಗಾರರಾದರು. ಈ ಮೊದಲು 1971-72ನೇ ಋತುವಿನಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ಕೇರಳ ವಿರುದ್ಧದ ರಣಜಿ ಪಂದ್ಯದಲ್ಲಿ ಜಿ.ಆರ್. ವಿಶ್ವನಾಥ್ (159) ಮತ್ತು 1992ರಲ್ಲಿ ನಡೆದ ಪಂದ್ಯದಲ್ಲಿ ಆಂಧ್ರಪ್ರದೇಶ ವಿರುದ್ಧ ಕರ್ನಾಟಕದ ಕೆ. ಶ್ರೀನಾಥ್ (125) ಶತಕ ಗಳಿಸಿದ್ದರು. ರಾಜನಗರ ಮೈದಾನದಲ್ಲಿ ಶತಕ ಗಳಿಸಿದ ಕರ್ನಾಟಕದ ಮೊದಲ ಆಟಗಾರನಾಗಿದ್ದ ಕುನಾಲ್, ಎರಡನೇ ಇನಿಂಗ್ಸ್‌ನಲ್ಲಿಯೂ ಭರ್ಜರಿ ಆಟ ಪ್ರದರ್ಶಿಸಿ ಶತಕ ಸಾಧನೆ ಮಾಡಿದರು.

ಹರಿಯಾಣದ ಮಧ್ಯಮವೇಗಿಗಳಾದ ಹರ್ಷಲ್ ಪಟೇಲ್, ಮೋಹಿತ್ ಶರ್ಮಾ, ಸ್ಪಿನ್ನರ್ ಅಮಿತ್ ಮಿಶ್ರಾ ಅವರ ಎಸೆತಗಳನ್ನು ಯಾವುದೇ ಎಗ್ಗಿಲ್ಲದೇ ಬೌಂಡರಿಗೆರೆ ದಾಟಿಸಿದರು.

`ಈ ಸಾಧನೆ ಮಾಡಿದ್ದಕ್ಕೆ ಖುಷಿಯಾಗುತ್ತಿದೆ. ಆದರೆ ತಂಡವು ಗೆಲುವು ಸಾಧಿಸದೇ ಇರುವುದರಿಂದ ಬೇಸರವಾಗಿದೆ. ನಾವು ಚೆನ್ನಾಗಿ ಆಡಿದ್ದು ತಂಡದ ಗೆಲುವಿಗೆ ಕಾರಣವಾಗಬೇಕು. ಆಗಲೇ ಅದು ಸಾರ್ಥಕ ಆದರೂ ಒಂದು ಹೊಸ ದಾಖಲೆಯಾಗಿರುವುದು ಸಮಾಧಾನದ ವಿಷಯ' ಎಂದು ಕುನಾಲ್ ಪ್ರತಿಕ್ರಿಯಿಸಿದರು.

ಕುನಾಲ್ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ 59ನೇ ಆಟಗಾರ. ಗುಜರಾತ್‌ನ ಮುಕುಂದ್ ಪರಮಾರ್ ಒಂದೇ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಸಾಧನೆಯನ್ನು ನಾಲ್ಕು ಪಂದ್ಯಗಳಲ್ಲಿ ಮಾಡಿರುವ ಏಕೈಕ ಆಟಗಾರ.   

`ಈ ಪಂದ್ಯದಲ್ಲಿ ನಮ್ಮ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಆದರೆ ಕುನಾಲ್ ಕಪೂರ್ ಅವರಂತಹ ಒಬ್ಬ ಬ್ಯಾಟ್ಸ್‌ಮನ್ ತಂಡಕ್ಕೆ ಸಿಕ್ಕಂತಾಗಿದೆ' ಎಂದು ನಾಯಕ ಸ್ಟುವರ್ಟ್ ಬಿನ್ನಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.