ADVERTISEMENT

ಇಳಿ ವಯಸ್ಸಿನಲ್ಲಿಯೂ ಕುಗ್ಗದ ಉತ್ಸಾಹ

ಮೂಲವ್ಯಾಧಿ ಶಸ್ತ್ರ ಚಿಕಿತ್ಸೆ ನಡುವೆಯೂ ಸಾಧನೆಯತ್ತ ಬಾಲಕೃಷ್ಣ ಅಲಾಯಿ

ಮಹೇಶ ಕನ್ನೇಶ್ವರ
Published 12 ಏಪ್ರಿಲ್ 2018, 19:11 IST
Last Updated 12 ಏಪ್ರಿಲ್ 2018, 19:11 IST
ಬಾಲಕೃಷ್ಣ ನಾರಾಯಣ ಅಲಾಯಿ
ಬಾಲಕೃಷ್ಣ ನಾರಾಯಣ ಅಲಾಯಿ   

ಮಂಗಳೂರು: ಮೂಲವ್ಯಾಧಿಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಇನ್ನೂ ವಾರವೂ ಕಳೆದಿಲ್ಲ. ಆದರೆ, ನೋವಿನ ನಡುವೆಯೂ ಉಸಿರು ಬಿಗಿ ಹಿಡಿದು, ಎಲ್ಲರಂತೆ ಓಡಿ ಗುರಿ ಮುಟ್ಟುವ ಹುಮ್ಮಸ್ಸಿಗೆ ಕೊರತೆ ಇಲ್ಲ.

ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಬಾಲಕೃಷ್ಣ ನಾರಾಯಣ ಅಲಾಯಿ ಅವರು ಮಂಗಳೂರಿನಲ್ಲಿ ನಡೆಯುತ್ತಿರುವ ಮಾಸ್ಟ್‌ರ್ಸ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 5000 ಮೀ. ಓಟದಲ್ಲಿ ನಾಲ್ಕನೇ ಸ್ಥಾನ ಗೆಲ್ಲುವ ಮೂಲಕ ಎದುರಾಳಿ ಸ್ಪರ್ಧಿಗಳಿಗೆ ದಿಟ್ಟ ಉತ್ತರ ನೀಡಿದ್ದಾರೆ.

ಬಾಲಕೃಷ್ಣ ಅಲಾಯಿ ತಮ್ಮ 50ನೇ ವಯಸ್ಸಿನಲ್ಲಿ ಕ್ರೀಡೆಯತ್ತ ಮುಖ ಮಾಡಿದರು. ನಾಸಿಕ್‌ದಲ್ಲಿ ನಡೆದ ಹಿರಿಯರ ರಾಷ್ಟ್ರಮಟ್ಟದ ಮಾಸ್ಟರ್ಸ್‌ನ ನಡಿಗೆ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು. ಓಟ, ನಡಿಗೆ, ಓದುವ ಹವ್ಯಾಸವನ್ನು ಬೆಳೆಸಿಕೊಂಡಿರುವ ಅವರು ಪ್ರಾಥಮಿಕ ಶಿಕ್ಷಣವನ್ನು ನಾಸಿಕ್‌ ಜಿಲ್ಲೆ ಶಟಾಣಾ ತಾಲ್ಲೂಕಿನ ದೇವಲಾ ಗ್ರಾಮದ ವಿವೇಕಾನಂದ ಶಾಲೆಯಲ್ಲಿ ಮುಗಿಸಿದ್ದಾರೆ.

ADVERTISEMENT

ಲೊಹಣೇರ್‌ ಗ್ರಾಮ ಇವರ ಹುಟ್ಟೂರು. ದೇವಲಾದಲ್ಲಿರುವ ಶಾಲೆಗೆ ಲೊಹಣೇರ್‌ನಿಂದ 6 ಕಿಲೋ ಮೀಟರ್‌ ದಿನವೂ ನಡೆದು ಹೋಗಬೇಕಿತ್ತು. ಪ್ರತಿದಿನ ನಡೆಯುವ ಅಭ್ಯಾಸವೂ ಒಬ್ಬ ಅಥ್ಲೀಟ್‌ ಆಗುವಂತೆ ಮಾಡಿದೆ’ ಎನ್ನುವುದು ಅವರ ಅಭಿಪ್ರಾಯ.

ದ್ವಿತೀಯ ಪಿಯುಸಿ ಶಿಕ್ಷಣ ಮುಗಿಸಿದ ನಂತರ ಓದು ನಿಲ್ಲಿಸಿದ ಅವರು, ಊರಿನಲ್ಲಿಯೇ ಸ್ಟೇಷನರಿ ಅಂಗಡಿ ನಡೆಸಿಕೊಂಡಿದ್ದರು. ಅವರಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಮಗ ನಾಸಿಕ್‌ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್‌. ಮೂವರು ಹೆಣ್ಣುಮಕ್ಕಳನ್ನು ಮದುವೆಯಾಗಿದ್ದಾರೆ. ಸದ್ಯ ನಾಸಿಕ್‌ನಲ್ಲಿಯೇ ಮಗನೊಂದಿಗೆ ವಾಸವಿರುವ ಬಾಲಕೃಷ್ಣ, ದಿನವೂ ಬೆಳಿಗ್ಗೆ ಮೂರು ಕಿಲೋ ಮೀಟರ್‌ ವಾಕಿಂಗ್‌ ಟ್ರ್ಯಾಕ್‌ನಲ್ಲಿ ಸುತ್ತು ಹಾಕುತ್ತಾರೆ.

ಮೊದಲ ಯತ್ನದಲ್ಲಿಯೇ ವಾಕಿಂಗ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿರುವ ಇವರು, ಲಖನೌ, ಮುಂಬೈ, ನಾಸಿಕ್‌ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆದಿರುವ ರಾಷ್ಟ್ರಮಟ್ಟದ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ ಷಿಪ್‌ನಲ್ಲಿ 12ಕ್ಕೂ ಹೆಚ್ಚು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

5000, 1500, 800 ಮೀಟರ್‌ ಓಟ, 3000 ಮೀಟರ್‌ ನಡಿಗೆ(ವಾಕ್‌) ಸ್ಪರ್ಧೆಗಳಲ್ಲಿ ಪದಕ ಗಳಿಸಿದ್ದಾರೆ. ‘ನಡಿತಾ, ನಡಿತಾ ನಡಿಗೆ, ಓಡ್ತಾ, ಓಡ್ತಾ ಓಟ, ಸದೃಢವಾಗಿ ಬದುಕಬೇಕಾದರೆ ಓಟ ಮುಖ್ಯ’ ಎಂದು ಹೇಳುವ ಅವರು ಜೀವನೋತ್ಸಾಹ ತುಂಬಿಕೊಂಡು ಸಾಗುತ್ತಿದ್ದಾರೆ.

**

‘ಭಗವದ್ಗೀತೆಯ ಸಾರ ಕಲಿಸುತ್ತೇನೆ’

‘ನನಗೆ ಮೂಲ ಪ್ರೇರಕರೂ ಪಾಂಡುರಂಗ ಶಾಸ್ತ್ರಿ ಅಠಾವಳೆ. ಅವರು ಶ್ರದ್ಧಾಯ ಪರಿವಾರ ಫೌಂಡೇಶನ್‌ ಸ್ಥಾಪಕರು. ಬಿಡುವಿನ ವೇಳೆ ಶಾಲಾ ಮಕ್ಕಳಿಗೆ ಭಗವದ್ಗೀತೆ ಸಂದೇಶ ಸಾರಿ ತಿಳಿಸುವ ಕಾಯಕ ಮಾಡುತ್ತಿದ್ದೇನೆ. ಈಗಲೂ ತಣ್ಣೀರಿನಲ್ಲಿಯೇ ಸ್ನಾನ ಮಾಡುವ ಅಭ್ಯಾಸ ಇಟ್ಟುಕೊಂಡಿರುವೆ. ಓದು, ನಡಿಗೆ ಸೇರಿದಂತೆ ಹಲವು ಹವ್ಯಾಸ ರೂಢಿಸಿಕೊಂಡಿದ್ದೇನೆ. ಕ್ರೀಡೆ ನನ್ನ ಆರೋಗ್ಯದ ಗುಟ್ಟು’ ಎಂದು ತಮ್ಮ ಉತ್ಸಾಹದ ಜೀವನದ ಬಗ್ಗೆ ಹೆಮ್ಮೆಯಿಂದ ಅವರು ಮಾತನಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.