ADVERTISEMENT

ಇಸ್ರೇಲ್‌, ಈಜಿಪ್ಟ್‌ ‘ಮುನಿಸು’

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2016, 22:30 IST
Last Updated 13 ಆಗಸ್ಟ್ 2016, 22:30 IST
ಜುಡೊ ಸ್ಪರ್ಧೆಯಲ್ಲಿ  ಇಸ್ರೇಲ್‌ನ ಒರ್ ಸಾಸನ್ (ಎಡ) ಅವರ ಕೈಕುಲಕಲು ನಿರಾಕರಿಸಿದ ಈಜಿಪ್ಟ್ ದೇಶದ ಇಸ್ಲಾಮ್ ಎಲ್ ಶೆಹಬಿ
ಜುಡೊ ಸ್ಪರ್ಧೆಯಲ್ಲಿ ಇಸ್ರೇಲ್‌ನ ಒರ್ ಸಾಸನ್ (ಎಡ) ಅವರ ಕೈಕುಲಕಲು ನಿರಾಕರಿಸಿದ ಈಜಿಪ್ಟ್ ದೇಶದ ಇಸ್ಲಾಮ್ ಎಲ್ ಶೆಹಬಿ   

ರಿಯೊ ಡಿ ಜನೈರೊ (ಎಪಿ): ಮಧ್ಯ ಪ್ರಾಚ್ಯದ ರಾಜಕೀಯ ಹಗೆತನದ ಕರಿನೆರಳು ರಿಯೊ ಒಲಿಂಪಿಕ್ಸ್‌ನ ಜೂಡೊ ಸ್ಪರ್ಧೆಯ  ಮೇಲೂ ಆವರಿಸಿದೆ. ಈಜಿಪ್ಟ್‌ನ ಜೂಡೊ ಸ್ಪರ್ಧಿಯೊ ಬ್ಬರು ತನ್ನ ಎದುರಾಳಿಯಾಗಿದ್ದ ಇಸ್ರೇಲ್‌ ದೇಶದ ಸ್ಪರ್ಧಿಯ ಕೈಕುಲುಕಲು ನಿರಾಕರಿಸಿದ ಘಟನೆ ನಡೆದಿದೆ.

ಇಸ್ರೇಲ್‌ನ ಒರ್‌ ಸಾಸನ್‌ ಪುರುಷರ ಹೆವಿವೇಟ್‌ ವಿಭಾಗದ ಸ್ಪರ್ಧೆಯಲ್ಲಿ ಈಜಿಪ್ಟ್‌ನ ಇಸ್ಲಾಮ್‌ ಎಲ್‌ ಶೆಹಬಿ ವಿರುದ್ಧ ಗೆಲುವು ಪಡೆದರು. ಎದುರಾಳಿಯನ್ನು ಎರಡು ಸಲ ನೆಲಕ್ಕೆ ಬೀಳಿಸಿದ ಸಾಸನ್‌ ಸ್ಪರ್ಧೆ ಕೊನೆಗೊಳ್ಳಲು ಒಂದೂವರೆ ನಿಮಿಷ ಇದ್ದಾಗಲೇ ಜಯ ಸಾಧಿಸಿದರು.

ಕೆಲ ಕ್ಷಣ ನೆಲದಲ್ಲೇ ಬಿದ್ದಿದ್ದ ಶೆಹಬಿ ಎದ್ದುನಿಂತರು. ಈ ವೇಳೆ ಸಾಸನ್‌ ಅವರು ಎದುರಾಳಿಯ ಕೈಕುಲುಕಲು ಮುಂದಾಗಿದ್ದಾರೆ. ಆದರೆ ಆಗುವುದಿಲ್ಲ ಎಂಬ ಸಂಕೇತದ ರೀತಿಯಲ್ಲಿ ತಲೆ ಅಲ್ಲಾಡಿಸಿದ ಎಲ್‌ ಶೆಹಬಿ ಹೊರಟುಹೋದರು. ರೆಫರಿ ಈಜಿಪ್ಟ್‌  ಸ್ಪರ್ಧಿಯನ್ನು ಮತ್ತೆ ಕರೆಸಿ ತಲೆಬಾಗುವಂತೆ ಸೂಚಿಸಿದ್ದಾರೆ. ಒಲ್ಲದ ಮನಸ್ಸಿನಿಂದ ತಲೆಬಾಗಿದ ಶೆಹಬಿ ಸ್ಥಳದಿಂದ ನಿರ್ಗಮಿಸಿದ್ದಾರೆ.

ಜಪಾನಿನ ಸಮರ ಕಲೆ ಜೂಡೊ ಸ್ಪರ್ಧೆಯ ಆರಂಭಕ್ಕೆ ಮುನ್ನ ಹಾಗೂ ಪೈಪೋಟಿ ಕೊನೆಗೊಂಡ ಬಳಿಕ ಸ್ಪರ್ಧಿ ಗಳು ಪರಸ್ಪರ ಗೌರವ ಸೂಚಿಸಲು ತಲೆ ಬಾಗುವುದು ಮತ್ತು ಕೈಕುಲುಕುವುದು ಸಾಮಾನ್ಯ.

ಸಾಸನ್‌ ಆ ಬಳಿಕ ಸೆಮಿಫೈನಲ್‌ನಲ್ಲಿ ಸೋತರೂ ‘ರೆಪೆಚೇಜ್‌’ ನಲ್ಲಿ ಗೆದ್ದು ಕಂಚು ತಮ್ಮದಾಗಿಸಿಕೊಂಡರು. ಅಚ್ಚರಿಯಾಗಿಲ್ಲ: ಶೆಹಬಿ ಕೈಕುಲುಕಲು ನಿರಾಕರಿ ಸಬಹುದು ಎಂದು ಕೋಚ್‌ ಗಳು  ಮುಂಚೆಯೇ ಎಚ್ಚರಿಸಿದ್ದಾಗಿ ಸಾಸನ್‌ ಹೇಳಿದ್ದಾರೆ. ‘ಈಜಿಪ್ಟ್‌ನ ಸ್ಪರ್ಧಿ ಕೈಕುಲುಕಲು ನಿರಾಕರಿಸಬಹುದು ಎಂದು ಮೊದಲೇ ಊಹಿಸಿದ್ದೆ. ಆದ್ದರಿಂದ ನನಗೆ ಅಚ್ಚರಿಯಾಗಲಿಲ್ಲ. ಎದುರಾಳಿಯ ನಿರ್ಧಾರದ ಬಗ್ಗೆ ಏನೂ ಹೇಳಲಾರೆ’ ಎಂದಿದ್ದಾರೆ. 

ಸಮಿತಿ ನೇಮಕ:  ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಶಿಸ್ತು ಸಮಿತಿಯನ್ನು ನೇಮಿಸಿದೆ.
‘ಒಲಿಂಪಿಕ್‌ ಚಳವಳಿಯು ದೇಶಗಳ ನಡುವೆ ಸ್ನೇಹವನ್ನು ಬೆಸೆಯಬೇಕೇ ಹೊರತು ಗೋಡೆಗಳನ್ನು ನಿರ್ಮಿಸಬಾರದು ಎಂಬುದು ನಮ್ಮ ನಂಬಿಕೆ. ಈ  ಘಟನೆ ದುರದೃಷ್ಟಕರ’ ಎಂದು ಐಒಸಿ ವಕ್ತಾರ ಮಾರ್ಕ್‌ ಆ್ಯಡಮ್ಸ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.