ADVERTISEMENT

ಎಂಟರ ಘಟ್ಟಕ್ಕೆ ಸೈನಾ ನೆಹ್ವಾಲ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 19:35 IST
Last Updated 1 ಆಗಸ್ಟ್ 2012, 19:35 IST

ಲಂಡನ್ (ಪಿಟಿಐ): ಅದ್ಭುತ ಫಾರ್ಮ್‌ನಲ್ಲಿರುವ `ಸೂಪರ್~ ಸೈನಾ ನೆಹ್ವಾಲ್ ಅವರ ಅಮೋಘ ಪ್ರದರ್ಶನ ಮುಂದುವರಿದಿದೆ. ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಎದುರಾಳಿಯನ್ನು ಮಣಿಸಿದ ರೀತಿಯೇ ಅದಕ್ಕೆ ಸಾಕ್ಷಿ.

ವೆಂಬ್ಲಿ ಅರೆನಾ ಕೋರ್ಟ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತದ ಆಟಗಾರ್ತಿ 21-14, 21-16ರಲ್ಲಿ ಹಾಲೆಂಡ್‌ನ ಯಾವೊ ಜೀ ಎದುರು ಗೆದ್ದು ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟರು.

22 ವರ್ಷ ವಯಸ್ಸಿನ ಸೈನಾ ಚುರುಕಿನ ಆಟದಿಂದ ಗಮನ ಸೆಳೆದರು. 20ನೇ ರ‌್ಯಾಂಕ್‌ನ ಯೋ ಜಿ ಚೀನಾ ಮೂಲದವರು. ಈಗ ಹಾಲೆಂಡ್ ದೇಶವನ್ನು ಪ್ರತಿನಿಧಿಸುತ್ತಿರುವ ಅವರು ಯಾವುದೇ ಸಂದರ್ಭದಲ್ಲೂ ಈ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಲಕ್ಷಣ ತೋರಿಸಲಿಲ್ಲ. ಒಟ್ಟು 38 ನಿಮಿಷಗಳಲ್ಲಿ ಈ ಪಂದ್ಯ ಮುಗಿದು ಹೋಯಿತು.

5ನೇ ರ‌್ಯಾಂಕ್‌ನ ಆಟಗಾರ್ತಿ ಸೈನಾ ಮೊದಲ ಗೇಮ್‌ನ ವಿರಾಮದ ವೇಳೆಗೆ 11-5ರಲ್ಲಿ ಮುನ್ನಡೆದರು. ಕೆಲವೊಂದು ಹೊಡೆತಗಳು ನೆಟ್‌ಗೆ ತಾಗಿದವು. ನಂತರ ಆಕರ್ಷಕ ಸ್ಮ್ಯಾಷ್‌ಗಳ ಮೂಲಕ ಎದುರಾಳಿಗೆ ಪೆಟ್ಟು ನೀಡಿದರು. ಕ್ರಾಸ್ ಕೋರ್ಟ್ ಹೊಡೆತಗಳು ಕೂಡ ಅದ್ಭುತವಾಗಿದ್ದವು. ಎದುರಾಳಿಯನ್ನು ಕೋರ್ಟ್ ತುಂಬಾ ಓಡಾಡಿಸಿ ಸುಸ್ತು ಮಾಡಿದರು.

 ಮೊದಲ ಗೇಮ್ 18 ನಿಮಿಷಗಳಲ್ಲಿ ಕೊನೆಗೊಂಡಿತು. ಎರಡನೇ ಗೇಮ್‌ನಲ್ಲಿ ಸೈನಾ 5-1ರಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ ಯಾವೊ ಜೀ ಆಕರ್ಷಕ ಡ್ರಾಪ್ ಶಾಟ್‌ಗಳ ಮೂಲಕ ಒಂದು ಹಂತದಲ್ಲಿ 6-5ರಿಂದ ಮುನ್ನಡೆ ಸಾಧಿಸಿದರು. ತಕ್ಷಣ ಕ್ರಾಸ್ ಕೋರ್ಟ್ ಹೊಡೆತದ ಮೂಲಕ ಹೈದರಾಬಾದ್‌ನ ಆಟಗಾರ್ತಿ 7-6ರಲ್ಲಿ  ಮುನ್ನಡೆದರು. ಸೈನಾ ಜಿಗಿದು ಸ್ಮ್ಯಾಷ್ ಮಾಡುತ್ತಿದ್ದ ರೀತಿ ಮನಮೋಹಕವಾಗಿತ್ತು. ಈ ಗೇಮ್‌ನಲ್ಲಿ ವಿರಾಮದ ವೇಳೆಗೆ 11-7ರಲ್ಲಿ ಮುನ್ನಡೆ ಸಾಧಿಸಿದ್ದರು.

ಈ ಪಂದ್ಯದಲ್ಲಿ ತೀವ್ರ ಪೈಪೋಟಿ ಕಂಡುಬಂತು. ಆದರೆ ಎದುರಾಳಿ ಆಟಗಾರ್ತಿ ಶಟಲ್‌ಅನ್ನು ಕೋರ್ಟ್‌ನಿಂದ ಹೊರಗೆ ಕಳುಹಿಸುತ್ತಿದ್ದಂತೆ ಸೈನಾ ಅವರಿಗೆ ಗೆಲುವು ಒಲಿಯಿತು. ಸರ್ವೀಸ್‌ನಲ್ಲಿಯೇ ಅವರು 10 ಪಾಯಿಂಟ್ಸ್ ಗಳಿಸಿದರು. ಎರಡನೇ ಗೇಮ್ 20 ನಿಮಿಷಗಳಲ್ಲಿ ಕೊನೆಗೊಂಡಿತು.

ಅವರೀಗ ಕ್ವಾರ್ಟರ್ ಫೈನಲ್‌ನಲ್ಲಿ ಕಠಿಣ ಪೈಪೋಟಿ ಎದುರಿಸಬೇಕಾಗಿದೆ. ಮುಂದಿನ ಸುತ್ತಿನಲ್ಲಿ ಎರಡು ಬಾರಿಯ ಆಲ್ ಇಂಗ್ಲೆಂಡ್ ಚಾಂಪಿಯನ್ ಡೆನ್ಮಾರ್ಕ್‌ನ ಟೈನ್ ಬಾನ್ ಅಥವಾ ಜಪಾನ್‌ನ ಸಯಾಕಾ ಸ್ಯಾಟೊ ಅವರು ಎದುರಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.