ADVERTISEMENT

ಏಷ್ಯನ್ ಗೇಮ್ಸ್‌ಗೆ ಈಕ್ವೆಸ್ಟ್ರಿಯನ್‌ ತಂಡ ಇಲ್ಲ

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST
ಈಕ್ವೆಸ್ಟ್ರಿಯನ್‌ ಕ್ರೀಡೆ
ಈಕ್ವೆಸ್ಟ್ರಿಯನ್‌ ಕ್ರೀಡೆ   

ಬೆಂಗಳೂರು: ಈ ಬಾರಿ ಏಷ್ಯನ್‌ ಕ್ರೀಡಾ ಕೂಟಕ್ಕೆ ಈಕ್ವೆಸ್ಟ್ರಿಯನ್ ತಂಡವನ್ನು ಕಳುಹಿಸದೇ ಇರಲು ಭಾರತ ಈಕ್ವೆಸ್ಟ್ರಿಯನ್‌ ಫೆಡರೇಷನ್ ನಿರ್ಧರಿಸಿದೆ.

ಬೆಂಗಳೂರಿನ ನಾಲ್ವರು ಒಳಗೊಂಡಂತೆ ಒಟ್ಟು ಏಳು ಮಂದಿ ಕ್ರೀಡಾಪಟುಗಳು ಜಕಾರ್ತದಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ತೆರಳಲು ಸಜ್ಜಾಗಿದ್ದರು. ಇವರನ್ನು ಜೂನ್‌ ನಾಲ್ಕರಂದು ಆಯ್ಕೆ ಮಾಡಲಾಗಿತ್ತು.

ಆದರೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನಿಗದಿ ಮಾಡಲಾದ ಸಾಮರ್ಥ್ಯ ತೋರಲು ಸಾಧ್ಯವಾಗಲಿಲ್ಲ ಎಂದು ಕಾರಣ ನೀಡಿ ತಂಡವನ್ನು ಕಳುಹಿಸದಿರಲು ಮಂಗಳವಾರ ನಿರ್ಧರಿಸಲಾಗಿತ್ತು.

ADVERTISEMENT

ಬೆಂಗಳೂರಿನ ಫವಾದ್ ಮಿರ್ಜಾ ಅವರು ಈ ಕ್ರೀಡಾಕೂಟಕ್ಕಾಗಿಯೇ ಇಂಗ್ಲೆಂಡ್‌ನಲ್ಲಿ ವಿಶೇಷ ತರಬೇತಿ ಪಡೆದುಕೊಂಡು ಬಂದಿದ್ದರು. ಆದರೆ ಫೆಡರೇಷನ್ ಅಧ್ಯಕ್ಷರ ಧೋರಣೆ ಯಿಂದಾಗಿ ಅವರ ಆಸೆಗೆ ತಣ್ಣೀರು ಹಾಕಿದಂತಾಗಿದೆ. ಭಾರತದ ಈಕ್ವೆಸ್ಟ್ರಿಯನ್ ಪಟುಗಳು ಉತ್ತಮ ಸಾಧನೆ ಮಾಡುವ ಭರವಸೆ ಇತ್ತು.

ಆದರೆ ಫೆಡರೇಷನ್ ನಿರ್ಧಾರ ದಿಂದಾಗಿ ಭಾರತ ಕೆಲವು ಪದಕಗಳನ್ನು ಕೈಚೆಲ್ಲಿದಂತಾಗಿದೆ ಎಂಬುದು ಫವಾದ್‌ ಅವರ ಅಭಿಪ್ರಾಯ.

ಚೇತನ್ ರೆಡ್ಡಿ, ಸಹೋದರರಾದ ಕೀವನ್‌ ಮತ್ತು ಜಹಾನ್‌ ಸೆಟಲ್ವಾಡ ಕೂಡ ಕ್ರೀಡಾಕೂಟಕ್ಕೆ ತೆರಳಲು ಸಜ್ಜಾಗಿದ್ದರು. ಇದು ದುಬಾರಿ ಕ್ರೀಡೆಯಾಗಿದ್ದು ಸಿದ್ಧತೆಗಳಿಗೆ ಸಾಕಷ್ಟು ವೆಚ್ಚವಾಗುತ್ತದೆ. ಆದ್ದರಿಂದ ದಿಢೀರ್ ಆಗಿ ತಂಡವನ್ನು ಕಳುಹಿಸದೇ ಇರಲು ನಿರ್ಧರಿಸಿರುವುದರಿಂದ ಭಾರಿ ನಷ್ಟವಾಗಿದೆ ಎಂದು ಕ್ರೀಡಾಪಟಗಳು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಆರ್‌.ಕೆ.ಸ್ವಾಯಿನ್‌ ‘ತಂಡವನ್ನು ಕಳುಹಿಸದೇ ಇರಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಅಷ್ಟೇ ಹೇಳಬಲ್ಲೆ’ ಎಂದರು.

ಐದು ಮಂದಿಯ ಸಮಿತಿ: ಏಷ್ಯನ್‌ ಕ್ರೀಡಾಕೂಟಕ್ಕಾಗಿ ಜಿಮ್ನಾಸ್ಟಿಕ್ಸ್ ತಂಡವನ್ನು ಆರಿಸಲು ಭಾರತ ಒಲಿಂಪಿಕ್ ಸಂಸ್ಥೆ ಐದು ಮಂದಿಯನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ. ಉಪಾಧ್ಯಕ್ಷೆ ಸುನಯನ ಕುಮಾರಿ ಸಮಿತಿಯ ಮುಖ್ಯಸ್ಥರಾಗಿದ್ದಾರೆ.

ದೆಹಲಿ ಒಲಿಂಪಿಕ್‌ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಶರ್ಮಾ, ರಾಜಿಂದರ್ ಪಠಾಣಿಯಾ, ಮಕರಂದ ಜೋಶಿ ಮತ್ತು ರಾಮ್ ಮಿಲನ್‌ ಅವರು ಸಮಿತಿಯಲ್ಲಿದ್ದು ಇದೇ ತಿಂಗಳ 24ರಂದು ದೆಹಲಿಯಲ್ಲಿ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲಿದ್ದಾರೆ.

ಈಕ್ವೆಸ್ಟ್ರಿಯನ್‌ ಕ್ರೀಡಾಪಟುಗಳ ಆಯ್ಕೆ ಪಟ್ಟಿಯನ್ನು ಫೆಡರೇಷನ್‌ನ ಅಧ್ಯಕ್ಷರು ತಡೆ ಹಿಡಿದ ಕಾರಣ ಆ ತಂಡವನ್ನು ಕಳುಹಿಸಲಾಗುತ್ತಿಲ್ಲ ಎಂದು ಕ್ರೀಡಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಫುಟ್‌ಬಾಲ್ ಮತ್ತು ಹ್ಯಾಂಡ್‌ಬಾಲ್‌ನಲ್ಲಿ ಭಾರತ ಪ್ರಗತಿ ಕಾಣುತ್ತಿದ್ದು ತಂಡವನ್ನು ಕಳುಹಿಸುವ ಸಾಧ್ಯತೆ ಇದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.